ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ದಾರಿಯಿಲ್ಲದ ಓಟ

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು |
ಕೋಟಿ ಹೃದಯದ ಹೋಹೊ ಹೌಹಕಾರಗಳು ||
ಕೂಟ ಕೂಡಿಹುವಂತರೀಕ್ಷದಲಿ ನೀನದರಿನ್ |
ಓಟ ಓಡುವುದೆತ್ತ ? – ಮಂಕುತಿಮ್ಮ || 273 ||

ಪದ-ಅರ್ಥ: ದೆಸೆಯುಸಿರುಗಳು=ದೆಸೆಯ (ದಿಕ್ಕುಗಳ)+ಉಸಿರುಗಳು, ರಸದಾವಿ= ರಸದ+ ಆವಿ(ಉಗಿ, ಹಬೆ), ನೀನದರಿನ್ =ನೀನು + ಅದರಿನ್(ಅದರಿಂದ), ಕೂಡಿಹುವಂತ ರೀಕ್ಷದಲಿ= ಕೂಡಿಹವು(ಸೇರಿವೆ)+ಅಂತರೀಕ್ಷ ದಲಿ.

ವಾಚ್ಯಾರ್ಥ: ಕೋಟಿ ದಿಕ್ಕುಗಳ, ಕೋಟಿ ಅಂತರಂಗದ ಅನುಭವದ ಊಟೆಗಳು, ಕೋಟಿ ಹೃದಯಗಳ ಸಂತೋಷ, ಆಶ್ಚರ್ಯಗಳು ಈ ಪ್ರಪಂಚವನ್ನೆಲ್ಲ ತುಂಬಿವೆ. ನೀನು ಇದರಿಂದ ಪಾರಾಗಿ ಓಡಿಹೋಗುವುದು ಎಲ್ಲಿಗೆ?

ವಿವರಣೆ: ಒಬ್ಬ ಮನುಷ್ಯನಿಗೆ ಜೀವನದಲ್ಲಿ ಒಂದು ಬಾರಿ ಭಾರೀ ಕಷ್ಟಗಳು ಬಂದವು. ಇನ್ನು ಈ ಕಷ್ಟಗಳನ್ನು ತಡೆಯುವುದು ಸಾಧ್ಯವಿಲ್ಲ. ಈ ಪ್ರಪಂಚದ ಬದುಕೇ ವ್ಯರ್ಥ, ಇದನ್ನು ಬಿಟ್ಟು ದೂರ ಹೋಗಬೇಕೆಂದು ಹೊರಟ. ನೂರಾರು, ಸಾವಿರಾರು ಮೈಲು ದೂರ ಹೋದರೂ ಪ್ರಪಂಚ ಮುಗಿಯುತ್ತಲೇ ಇಲ್ಲ. ಅಲ್ಲಿ ಸಿಕ್ಕ ಸಂತೋಷದಿಂದ ಕುಣಿಯುತ್ತಿದ್ದ ಮನುಷ್ಯನೊಬ್ಬನನ್ನು ಕೇಳಿದ, ‘ನೀನಿಷ್ಟು ಸಂತೋಷವಾಗಿದ್ದೀಯಲ್ಲ, ನಿನಗೆ ಕಷ್ಟಗಳು ಇಲ್ಲವೇ?’.

ಆತ ಜೋರಾಗಿ ನಕ್ಕು ಹೇಳಿದ, ‘ಕಷ್ಟಗಳೇ, ನನ್ನಷ್ಟು ಕಷ್ಟ ಮತ್ತಾರಿಗೆ ಬಂದಾವು? ಎರಡು ವರ್ಷಗಳ ಹಿಂದೆ ನನ್ನ ಮನೆ ಸುಟ್ಟು ಹೋಯಿತು, ಅದರಲ್ಲಿ ನನ್ನ ತಾಯಿ, ನನ್ನ ಮಗ ಸತ್ತು ಹೋದರು. ಕಳೆದ ವರ್ಷ ನನ್ನ ಹೊಲ ಪ್ರವಾಹದಲ್ಲಿ ಕೊಚ್ಚಿ ಹೋಗಿ ಒಂದು ಕಾಳೂ ಮನೆ ಸೇರಲಿಲ್ಲ’, ಈ ಮನುಷ್ಯ ಕೇಳಿದ, ‘ಹಾಗಾದರೂ ನಗುತ್ತಲೇ ಇದ್ದೀಯಲ್ಲ?’. ಆಗ ಮತ್ತಷ್ಟು ಜೋರಾಗಿ ನಕ್ಕು ಹೇಳಿದ, ‘ಅದು ಹಿಂದೆ ಆದದ್ದು. ಇಂದು ನನ್ನ ಹಿರಿಯ ಮಗನಿಗೆ ದೊಡ್ಡ ಕೆಲಸ ಸಿಕ್ಕಿದೆ. ಅದಕ್ಕೇ ಈ ಸಂಭ್ರಮ. ಇನ್ನೂ ಅಳುತ್ತಾ ಕೂಡಲೇ ? ಅಳುವುದು ಮುಗಿಯಿತು, ಇದು ಸಂತೋಷದ ಕಾಲ’.

ಈ ಮನುಷ್ಯ ದಂಗಾದ. ತನ್ನದೇ ಕಷ್ಟ ಅತ್ಯಂತ ದೊಡ್ಡದು ಎಂದು ಓಡಿ ಬಂದಿದ್ದವನಿಗೆ ಈಗ ಅದೇನೂ ಅಷ್ಟು ಘೋರವಾದದ್ದಲ್ಲ ಎನ್ನಿಸಿತು. ಆತ ಮತ್ತೆ ಪ್ರಪಂಚದಲ್ಲಿ ಸುತ್ತಾಡುತ್ತ ಅದ್ಭುತ, ಆಶ್ಚರ್ಯಗಳನ್ನು ಕಂಡ. ಎಷ್ಟು ತರಹದ ಜನ! ಏನವರ ಆಸೆಗಳು, ಅಪೇಕ್ಷೆಗಳು, ನಿರಾಸೆಗಳು, ಸಂಭ್ರಮಗಳು! ಈ ಮನುಷ್ಯ ಮರಳಿ ಮನೆಗೆ ಬಂದ. ಅವನಿಗೀಗ ಖಚಿತವಾಗಿತ್ತು. ಈ ಪ್ರಪಂಚದಿಂದ ಪಾರಾಗಿ ಹೋಗುವುದು ಅಸಾಧ್ಯ. ಇಲ್ಲಿರುವವರೆಗೆ ಹೇಗಿದೆಯೋ ಹಾಗೆ ಸಂತೋಷದಿಂದ ಬದುಕಬೇಕು. ದುಃಖ, ಕಷ್ಟ ಬಂದಾವು, ಆ ಕ್ಷಣಗಳಲ್ಲಿ ದುಃಖಪಡೋಣ ಆದರೆ ಮುಂದೆ ಸಂತಸದ ಬುಗ್ಗೆ ಚಿಮ್ಮಿದಾಗ ಹಳೆಯದನ್ನೇ ನೆನೆಸುತ್ತ ಕೊರಗುವುದು ಬೇಡ.

ಈ ಕಗ್ಗದ ಸಾಲುಗಳು ಸಾರುವುದು ಈ ಸತ್ಯವನ್ನೇ. ಭಗವಂತ ತನ್ನ ಕೋಟಿ ಕೋಟಿ ರೂಪಗಳಿಂದ ಪ್ರಪಂಚವನ್ನು ಆವರಿಸಿಕೊಂಡಿದ್ದಾನೆ. ಆ ಕೋಟಿ ಜೀವರುಗಳ ಆಸೆ, ಅಪೇಕ್ಷೆಗಳ ಉಸಿರು, ಅವರ ಅನುಭವದ ರಸದ ಉಗಿ ಈ ಪ್ರಪಂಚವನ್ನೆಲ್ಲ ತುಂಬಿದೆ. ಈ ಕೋಟಿ ಹೃದಯಗಳಿಂದ ಆಗಾಗ ಏಳುವ ಸಂತೋಷದ, ಆಶ್ಚರ್ಯದ, ಸಂಕಟದ ಉದ್ಗಾರಗಳು ಬ್ರಹ್ಮಾಂಡವನ್ನೆಲ್ಲ ಆವರಿಸಿಕೊಂಡಿವೆ. ನಾನೂ ಅದರಲ್ಲಿ ಒಬ್ಬ ಎಂದು ತಿಳಿದು ಆ ರಸದಲ್ಲಿ ಭಾಗಿಯಾಗುವುದು ಬದುಕಿನ ಸಾರ್ಥಕ್ಯ. ಇದೆಲ್ಲ ನನಗೆ ಬೇಡ. ಅದನ್ನು ಬಿಟ್ಟು ಓಡಿ ಹೋಗುತ್ತೇನೆ ಎಂದರೆ ಹೋಗುವುದೆಲ್ಲಿಗೆ? ಪ್ರಪಂಚವನ್ನು ಬಿಟ್ಟು ಹೊರಗಿರುವ ಗಮ್ಯಸ್ಥಳ ಯಾವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT