ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಹಣದ ಸಂಬಂಧ

Last Updated 6 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನ ಮಗ ಬ್ರಹ್ಮದತ್ತಕುಮಾರನಾಗಿ ಬೋಧಿಸತ್ವ ಜನಿಸಿದ್ದ. ನಗರದ ಅತ್ಯಂತ ಶ್ರೀಮಂತ ಶ್ರೇಷ್ಠಿಯ ಮಗ ಮಹಾಧನಕುಮಾರ ಬ್ರಹ್ಮದತ್ತಕುಮಾರನ ಬಾಲ್ಯಸ್ನೇಹಿತನಾಗಿದ್ದ. ಇಬ್ಬರೂ ಒಂದೇ ಗುರುಕುಲಕ್ಕೆ ಹೋಗಿ ವಿದ್ಯೆ ಪಡೆದು ಬಂದರು. ತಂದೆ ತೀರಿದ ನಂತರ ಬ್ರಹ್ಮದತ್ತಕುಮಾರ ರಾಜನಾದ. ಆದರೂ ಮಹಾಧನಕುಮಾರನೊಂದಿಗಿನ ಅವನ ಸ್ನೇಹ ಮೊದಲಿನಂತೆಯೇ ಇತ್ತು.

ಶ್ರೇಷ್ಠಿ ಪುತ್ರನಿಗೆ ತುಂಬ ಸುಂದರಿಯಾದ ಪತ್ನಿ, ಮಕ್ಕಳು ಎಲ್ಲವೂ ಇದ್ದು ಪರಿವಾರ ತುಂಬ ಆನಂದದಲ್ಲಿತ್ತು. ಆದರೆ ಮಹಾಧನಕುಮಾರನಿಗೆ ಒಂದು ದುರ್ಬಲತೆ ಇತ್ತು. ನಗರದಲ್ಲಿ ಅತ್ಯಂತ ಸುಂದರಿಯಾದ, ವೈಯಾರಿಯಾದ ವೇಶ್ಯೆಯೊಬ್ಬಳಿದ್ದಳು. ಅದು ಹೇಗೋ ಶ್ರೇಷ್ಠಿ ಪುತ್ರನಿಗೆ ಆಕೆಯ ಸಂಪರ್ಕವಾಯಿತು. ಆನಂತರ ಅವನಿಗದು ಅಭ್ಯಾಸವೇ ಆಯಿತು. ತಂದೆ ತೀರಿದ ನಂತರ ತಾನೇ ಶ್ರೇಷ್ಠಿಯಾದ ಮೇಲೆ ಹಣಕ್ಕಾಗಿ ಯಾರನ್ನೂ ಕೇಳುವಂತಿರಲಿಲ್ಲ. ವೇಶ್ಯೆ ದಿನಕ್ಕೆ ಸಾವಿರ ಹಣವನ್ನು ವಸೂಲಿ ಮಾಡುತ್ತಿದ್ದಳು. ಪ್ರತಿದಿನ ಸಾವಿರ ಹಣ ಕೊಟ್ಟು ಅವಳೊಂದಿಗೆ ಶ್ರೇಷ್ಠಿ ಪುತ್ರ ರಮಿಸುತ್ತಿದ್ದ. ಆಕೆಯನ್ನು ಸದಾಕಾಲ ತನ್ನವಳನ್ನಾಗಿಯೇ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ.

ದಿನ ನಿತ್ಯದಂತೆ ಶ್ರೇಷ್ಠಿ ಅರಮನೆಗೆ ಹೋಗಿ ರಾಜನನ್ನು ಬೆಟ್ಟಿಯಾದ. ಮಾತನಾಡುತ್ತ ಕುಳಿತಾಗ ಸಮಯ ಹೋದದ್ದು ತಿಳಿಯಲಿಲ್ಲ. ಹೊರಬಂದು ನೇರವಾಗಿ ವೇಶ್ಯೆಯ ಮನೆಗೆ ಹೋದ. ಮನೆಗೆ ಹೋಗದೆ ಇದ್ದುದರಿಂದ ಸಾವಿರ ಹಣವನ್ನು ತೆಗೆದುಕೊಂಡು ಹೋಗಿರಲಿಲ್ಲ. ಒಳಗೆ ಹೋಗುತ್ತಿದ್ದಂತೆ ಶ್ರೇಷ್ಠಿ ಹೇಳಿದ, ‘ದೇವಿ, ಇಂದು ಅರಮನೆಯಿಂದ ನೇರವಾಗಿ ಇಲ್ಲಿಗೇ ಬಂದೆ. ಆದ್ದರಿಂದ ಸಾವಿರ ಹಣ ತರಲಿಲ್ಲ. ನಾಳೆ ಎರಡು ಸಾವಿರ ತಂದು ಕೊಡುತ್ತೇನೆ’. ಆಕೆ ಒಪ್ಪಲಿಲ್ಲ, ‘ಸ್ವಾಮಿ, ನಾವು ವೇಶ್ಯೆಯರು, ಹಣವಿಲ್ಲದೆ ಯಾವ ವ್ಯವಹಾರವನ್ನೂ ಮಾಡುವವರಲ್ಲ. ನಮಗೆ ಸಾವಿರ ಹಣ ಸಣ್ಣದಲ್ಲ. ದಯವಿಟ್ಟು ಮನೆಗೆ ಹೋಗಿ ಹಣ ಪಡೆದುಕೊಂಡು ನಂತರ ಬನ್ನಿ’ಎಂದಳು.

ಈತ ಪದೇ ಪದೇ, ‘ದಯವಿಟ್ಟು ಇಂದು ಅವಕಾಶ ಕೊಡು, ನಾಳೆ ಎರಡು ಸಾವಿರ ಖಂಡಿತ ಕೊಡುತ್ತೇನೆ’ ಎಂದಾಗ ಆಕೆ ಸಿಟ್ಟಿನಿಂದ ತನ್ನ ಸೇವಕರಿಗೆ ಕೂಗಿ ಹೇಳಿದಳು, ‘ಹಣವಿಲ್ಲದೆ ಬಂದು ನನ್ನನ್ನು ಪೀಡಿಸುವ ಈತನನ್ನು ಮನೆಯಿಂದ ಹೊರಗೆ ತಳ್ಳಿ’. ನಾಲ್ಕು ಜನ ಸೇವಕರು ಬಂದು ಇವನನ್ನು ಎತ್ತಿ ಹೊರಗೆ ಎಸೆದರು. ರಸ್ತೆಯ ಬದಿಗೆ ಕುಳಿತು ಶ್ರೇಷ್ಠಿ ಚಿಂತಿಸಿದ, ‘ದಿನನಿತ್ಯ ಸಾವಿರದಂತೆ ಅದೆಷ್ಟು ಲಕ್ಷ ಹಣ ಆಕೆಗೆ ಕೊಟ್ಟಿದ್ದೇನೆ. ಆದರೂ ಒಂದು ದಿನ ಬರಿಗೈಯಲ್ಲಿ ಬಂದರೆ ಹೊರಗೆ ತಳ್ಳಿಸಿಬಿಟ್ಟಳು. ಅಂದರೆ, ಆಕೆ ನನ್ನನ್ನು ಪ್ರೀತಿ ಮಾಡುವುದಿಲ್ಲ, ನನ್ನ ಹಣವನ್ನು ಪ್ರೀತಿ ಮಾಡುತ್ತಾಳೆ. ಆಕೆ ಮಾಡುವುದೆಲ್ಲ ನಾಟಕ’, ಹೀಗೆ ಚಿಂತಿಸುತ್ತಿರುವಾಗ ಅವನಿಗೆ ಬದುಕಿನ ಬಗ್ಗೆ ವೈರಾಗ್ಯ ಬಂದು ತಕ್ಷಣವೇ ಪ್ರವ್ರಜಿತನಾಗಿ ಹೊರಟು ಬಿಟ್ಟ.

ನಂತರ ತಿರುಗಾಡುತ್ತ ನದಿ ತೀರಕ್ಕೆ ಬಂದಾಗ ಬ್ರಹ್ಮದತ್ತಕುಮಾರ ಅವನನ್ನು ಕಂಡು ಹೇಳಿದ, ‘ಸ್ನೇಹಿತ, ನೀನು ದೊಡ್ಡ ತಪ್ಪು ಮಾಡಿದೆ. ವೇಶ್ಯೆಯದು ಹಣದ ಸಂಬಂಧ. ಅದಕ್ಕೆ ಬೆಲೆ ಕೊಟ್ಟು, ನಿನಗಾಗಿ ಹಾತೊರೆಯುತ್ತಿದ್ದ ಹೆಂಡತಿ, ಮಕ್ಕಳು, ಪರಿವಾರದವರನ್ನು ಮರೆತೆಯಲ್ಲ. ಯಾವಾಗಲೂ ಹಣದ ಸಂಬಂಧಕ್ಕಿಂತ ಕರುಳಿನ ಸಂಬಂಧ ಬಲವಾದದ್ದು’.

ಈ ಮಾತು ಎಂದೆಂದಿಗೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT