ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮನಸ್ಸಿನ ಧೃಡತೆ

Last Updated 11 ಏಪ್ರಿಲ್ 2020, 19:31 IST
ಅಕ್ಷರ ಗಾತ್ರ

ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ

ಚೆಲ್ಪುರೂಪಿಂ ಬಂದು ಕಣ್ಕುಕ್ಕುವನಕ ||
ವಲ್ಗುರೂಪೆ ಸುಭದ್ರೆ ಕಣ್ಮುಂದೆ ಸುಳಿವನಕ |
ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ || 276 ||

ಪದ-ಅರ್ಥ: ಜಿತಮನಸ್ಕರು=ಮನಸ್ಸನ್ನು ಗೆದ್ದವರು, ಚೆಲ್ಪುರೂಪಿಂ=ಸುಂದರವಾದ ರೂಪದಿಂದ, ವಲ್ಗುರೂಪೆ=ಸುಂದರವಾದ ರೂಪ ಉಳ್ಳವಳು, ಫಲ್ಗುಣ=ಅರ್ಜುನ.

ವಾಚ್ಯಾರ್ಥ: ಎಲ್ಲರೂ ಧೃಡ ಮನಸ್ಕರೆ. ಎಲ್ಲಿಯವರೆಗೆ? ದೈವವೋ, ವಿಧಿಯೋ, ಮಾಯೆಯೋ ಅತ್ಯಂತ ಸುಂದರವಾದ ರೂಪದಲ್ಲಿ ಬಂದು ಕಣ್ಣು ಕುಕ್ಕುವ ತನಕ. ಅತ್ಯಂತ ಸುಂದರಳಾದ ಸುಭದ್ರೆ ಕಣ್ಣ ಮುಂದೆ ಸುಳಿಯುವ ತನಕ ಮಾತ್ರ ಅರ್ಜುನ ಸನ್ಯಾಸಿಯಾಗಿದ್ದ.

ವಿವರಣೆ: ಒಂದು ತರಬೇತಿಯಲ್ಲಿ ಶಿಕ್ಷಕರು ಒಬ್ಬ ಶಿಬಿರಾರ್ಥಿಯನ್ನು ಕೇಳಿದರು, ‘ಅಲ್ಲೊಬ್ಬ ಭಿಕ್ಷುಕನಿದ್ದಾನೆ. ನಾಲ್ಕು ದಿನಗಳಿಂದ ಅವನಿಗೆ ಒಂದು ತುತ್ತು ಅನ್ನ ದೊರಕಿಲ್ಲ. ಇಂದು ಅವನಿಗೆ ಏನೂ ಸಿಗದೆ ಹೋದರೆ ಅವನು ಸತ್ತು ಹೋಗುತ್ತಾನೆ. ಆಗ ಒಬ್ಬ ಸೊಕ್ಕಿನ ಶ್ರೀಮಂತ ಅಲ್ಲಿಗೆ ಬಂದು, ‘‘ಏ ದರಿದ್ರದವನೆ ಇದನ್ನು ತೆಗೆದುಕೊಂಡು ಸಾಯಿ” ಎಂದು ನೂರು ರೂಪಾಯಿ ನೋಟನ್ನು ಅವನ ಮುಖದ ಮೇಲೆ ಎಸೆಯುತ್ತಾನೆ. ಅದನ್ನು ಆತ ತೆಗೆದುಕೊಳ್ಳುತ್ತಾನೋ, ಇಲ್ಲವೋ?’ ಶಿಬಿರಾರ್ಥಿ ಖಚಿತ ಧ್ವನಿಯಲ್ಲಿ ಹೇಳಿದರು, ‘ಇಲ್ಲ, ಅವನು ತೆಗೆದುಕೊಳ್ಳುವುದಿಲ್ಲ. ಈ ಅಪಮಾನವನ್ನು ಆತ ಸಹಿಸುವುದಿಲ್ಲ’. ಮತ್ತೊಬ್ಬರು ಯೋಚಿಸಿ ಹೇಳಿದರು, ‘ಸರ್, ಅವನು ತೆಗೆದುಕೊಳ್ಳುತ್ತಾನೆ. ಅವನ ಸ್ಥಿತಿ ಹಾಗಿದೆ. ಯಾರಾದರೂ ನೂರು ರೂಪಾಯಿ ಭಿಕ್ಷೆ ಕೊಡುತ್ತಾರೆಯೇ? ಅದರಲ್ಲಿ ಆತ ಎರಡು-ಮೂರು ದಿನ ಬದುಕು ನೂಕಬಹುದು’. ಶಿಕ್ಷಕರು ನಕ್ಕು ಹೇಳಿದರು, ‘ನಿಮ್ಮ ಹೊಟ್ಟೆ ತುಂಬಿದೆ. ನೂರು ರೂಪಾಯಿ ದೊಡ್ಡದಲ್ಲ. ಆದ್ದರಿಂದ ನೀವು ತೆಗೆದುಕೊಳ್ಳುವುದಿಲ್ಲ. ಆದರೆ ಯಾರಾದರೂ ನಿಮ್ಮನ್ನು ಕೋಣೆಯೊಳಗೆ ಕರೆದು, ನೂರು ಕೋಟಿ ಹಣವಿದೆ, ಕೆಲಸ ಮಾಡಿಕೊಡಿ ಎಂದರೆ ಏನು ಮಾಡುತ್ತೀರಿ? ಕೆಲವರು ನೂರು ರೂಪಾಯಿಗೆ ಮನಸೋತರೆ ಕೆಲವರು ನೂರು ಕೋಟಿಗೆ, ಮತ್ತೆ ಕೆಲವರು ಸಾವಿರ ಕೋಟಿಗೆ ಸೋಲುತ್ತಾರೆ. ದೊಡ್ಡವರ ಭ್ರಷ್ಟಾಚಾರ ಏನು ಹೇಳುತ್ತದೆ? ಯಾವ ಮಟ್ಟಕ್ಕೆ ಅವರ ಧೃಡತೆ ಕರಗುತ್ತದೋ ಅಲ್ಲಿಯೇ ಅವರು ಶರಣಾಗುತ್ತಾರೆ’. ಅಂದರೆ ಎಲ್ಲರೂ ಧೃಡ ಮನಸ್ಕರೆ. ಧೃಡತೆಗಿಂತ ಹೆಚ್ಚನ ಮಟ್ಟದ ಆಸೆ ಬಂದರೆ ಧೃಡತೆ ಉಳಿಯುವದಿಲ್ಲ.

ವಿಶ್ವಾಮಿತ್ರನ ಹಟ ಎಂಥದ್ದು? ತಾನು ಬ್ರಹ್ಮರ್ಷಿಯಾಗಬೇಕು ಎಂದು ಎಲ್ಲ ಆಕರ್ಷಣೆಗಳನ್ನು ದೂರವಿಟ್ಟು ಕಾಡಿನಲ್ಲಿ ಘನ ಘೋರ ತಪಸ್ಸು ಮಾಡಿದ ವಿಶ್ವಾಮಿತ್ರನ ಮನಸ್ಸೇನು ಕಡಿಮೆ ಧೃಡವೇ? ಆದರೆ ಮೇನಕೆ ಎದುರು ಬಂದ ತಕ್ಷಣ ಏನಾಯಿತು?. ತೀರ್ಥಯಾತ್ರೆಗೆಂದು ಹೊರಟ ಅರ್ಜುನ ಮಳೆಗಾಲದ ನಾಲ್ಕು ತಿಂಗಳನ್ನು ಕಳೆಯಲು ದ್ವಾರಕೆಗೆ ಬಂದು ಕೃಷ್ಣನ ಸಲಹೆಯಂತೆ ಸನ್ಯಾಸಿಯಾಗಿ ಅರಮನೆಯನ್ನು ಸೇರಿದ. ಅವನ ಸನ್ಯಾಸದ ಹುರಿ ಗಟ್ಟಿಯಾಗಿದ್ದುದು ಸುಂದರಿಯಾದ ಸುಭದ್ರೆ ಕಣ್ಣಿಗೆ ಬೀಳುವ ತನಕ. ನಂತರ ಅವನ ಸನ್ಯಾಸ ಮಂಜಿನಂತೆ ಕರಗಿ ಹೋಯಿತು.

ಈ ಚಿಂತನೆಯನ್ನು ಕಗ್ಗ ತುಂಬ ಸುಂದರವಾಗಿ ಚಿತ್ರಿಸುತ್ತದೆ. ದೈವ, ವಿಧಿ, ಮಾಯೆ, ನೀವು ಏನಾದರೂ ಎನ್ನಿ, ಅದು ಅಪೂರ್ವವಾದ ಆಕರ್ಷಣೆಯನ್ನು ನಿಮ್ಮ ಮುಂದೆ ಒಡ್ಡಿದಾಗ, ಗಟ್ಟಿಯಾದ ಮನಸ್ಸು ಕೂಡ ಅಲುಗಾಡಿ ಹೋಗುತ್ತದೆ. ನಾವು ಯಾವ ಮಟ್ಟದ ಮನಸ್ಸಿನ ಧೃಡತೆಯನ್ನು ಹೊಂದಿದ್ದೇವೆ ಎಂಬುದು ನಾವು ಯಾವ ಮಟ್ಟದ ಆಕರ್ಷಣೆಯನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT