ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಪಾಪಿಯ ಎದೆಯಾಳದ ತಲ್ಲಣ

Last Updated 23 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಪಾಪವೆಂಬುದದೇನು ಸುಲಭಸಾಧನೆಯಲ್ಲ |
ತಾಪದಿಂ ಬೇಯದವನ್ ಅದನೆಸಪನಲ್ಲ ||
ವಾಪಿಯಾಳವ ದಡದಿ ನಿಂತಾತನರಿವನೇ?|
ಪಾಪಿಯೆದೆಯೊಳಕಿಳಿಯೊ – ಮಂಕುತಿಮ್ಮ|| 282 ||

ಪದ-ಅರ್ಥ: ಪಾಪವೆಂಬುದದೇನು=ಪಾಪ+ಎಂಬುದು+ಅದೇನು, ಅದನೆಸಪನಲ್ಲ=ಅದನು+ಎಸಪನಲ್ಲ(ಮಾಡಲಾರ), ವಾಪಿ=ಬಾವಿ, ನಿಂತಾತನರಿವನೇ=ನಿಂತಾತನು(ನಿಂತವನು)+ಅರಿವನೇ(ತಿಳಿಯುತ್ತಾನೆಯೇ), ಪಾಪಿಯೆದೆಯೊಳಕಿಳಿಯೊ=ಪಾಪಿಯ+ಎದೆಯೊಳಗೆ+ಇಳಿಯೊ

ವಾಚ್ಯಾರ್ಥ: ಪಾಪವೇನು ಸುಲಭದಲ್ಲಿ ಆಗಿಹೋಗುತ್ತದೆಯೆ? ತಾಪದಲ್ಲಿ, ಸಂಕಟದಲ್ಲಿ ಬೇಯದವನು ಅದನ್ನು ಮಾಡಲಾರ. ಬಾವಿಯ ಆಳವನ್ನು ದಂಡೆಯಲ್ಲಿ ನಿಂತವನು ತಿಳಿಯಬಲ್ಲನೆ? ಅದಕ್ಕೆ ಪಾಪಿಯ ಹೃದಯದಾಳಕ್ಕಿಳಿದು ಅವನ ಸ್ಥಿತಿಯನ್ನು ಅರಿತುಕೊ.

ವಿವರಣೆ: ಅವನೊಬ್ಬ ಕಳ್ಳ. ಯಾವುದೋ ಮನೆಗೆ ಕನ್ನ ಹಾಕಲು ತೀರ್ಮಾನ ಮಾಡಿದ್ದಾನೆ. ಅವನು ಆ ಮನೆಯ ಮುಂದೆ ನಾಲ್ಕಾರು ಬಾರಿ ತಿರುಗಾಡಿ, ಮನೆಯಲ್ಲಿ ಯಾರಿದ್ದಾರೆ, ಯಾವ ಸಮಯದಲ್ಲಿ ಮನೆಯಲ್ಲಿ ಯಾರೂ ಇರುವದಿಲ್ಲ, ಮನೆಯ ಯಾವ ಭಾಗ ಹೆಚ್ಚು ಅಭದ್ರವಾಗಿದೆ, ಕಳ್ಳತನ ಮಾಡಿದ ಮೇಲೆ ಅಲ್ಲಿಂದ ಓಡಿ ಹೋಗುವ ದಾರಿ, ದಾರಿಯಲ್ಲಿ ಬರಬಹುದಾದ ಅಡೆತಡೆಗಳು, ಆಕಸ್ಮಿಕವಾಗಿ ಆಗಬಹುದಾದ ಸಂಗತಿಗಳು ಇವೆಲ್ಲವನ್ನು ಚಿಂತನೆ ಮಾಡುತ್ತಾನೆ. ಅಷ್ಟೇ ಅಲ್ಲ, ಕಳ್ಳತನ ಮಾಡುವಾಗ, ಮನೆಯಲ್ಲಿ ಥಟ್ಟನೆ ಯಾರಾದರೂ ಎದ್ದು ಬಂದರೆ ಅವರನ್ನು ನಿವಾರಿಸುವ, ಎಚ್ಚರ ತಪ್ಪಿಸುವ, ಆತ್ಯಂತಿಕ ಪರಿಸ್ಥಿತಿ ಬಂದರೆ ಅವರನ್ನು ಕೊಂದೇ ಬಿಡುವ ದಾರಿಗಳನ್ನು ಯೋಜಿಸುತ್ತಾನೆ.

ನಂತರ, ಇಷ್ಟೆಲ್ಲ ಕಾಳಜಿಗಳನ್ನು ವಹಿಸಿದರೂ ಸಿಕ್ಕಿ ಹಾಕಿಕೊಂಡರೆ, ಜೈಲು ಸೇರಿದರೆ, ತಾನು ಮರಳಿ ಬರುವವರೆಗೆ ತನ್ನ ಮನೆಯನ್ನು ನಿಭಾಯಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾನೆ. ನಮಗೆ ಕಳ್ಳತನ ಮಾಡಿದ್ದು ಕಾಣುತ್ತದೆ, ಕಳ್ಳ ಕಾಣುತ್ತಾನೆ. ಆದರೆ ಅವನ ಕಳ್ಳತನದ ಹಿಂದೆ ಆತ ಚಿಂತೆಯ ತಾಪದಲ್ಲಿ ಬೆಂದು, ದಹಿಸಿ ಹೋದದ್ದು ಕಾಣುವುದಿಲ್ಲ. ಕಳ್ಳತನ ಮಾಡುವುದಕ್ಕಿಂತ ಮೊದಲು ಅನೇಕ ಬಾರಿ ಮಾನಸಿಕವಾಗಿ ಅದನ್ನು ಯೋಜಿಸಿ, ಚಿಂತಿಸಿ, ಆ ನರಕದಲ್ಲಿ ಹತ್ತಾರು ಬಾರಿ ಹೋಗಿ ಬಂದಿದ್ದಾನೆ.

ಅದಕ್ಕೇ ಕಗ್ಗ ಹೇಳುತ್ತದೆ, ‘ಪಾಪವೆಂಬುದು ಸುಲಭ ಸಾಧನೆಯಲ್ಲ’. ತನಗಿಲ್ಲದ ಭಾಗ್ಯವನ್ನು ಹೇಗಾದರೂ ಸರಿಯೆ, ಮೋಸದಿಂದಾದರೂ ಸರಿಯೇ ಪಡೆದೇ ತೀರಬೇಕೆಂಬ ತಾಪದಲ್ಲಿ ಬೆಂದು ಹೋಗಿದ್ದಾನೆ. ಇದು ಬರೀ ಕಳ್ಳತನದ ವಿಷಯವಲ್ಲ. ಯಾವುದೇ ಮೋಸ, ಪಾಪ ಮಾಡುವ ಮೊದಲು ಆ ವ್ಯಕ್ತಿ ಮೊದಲು ಪಾಪದ ಬೆಂಕಿಯಲ್ಲಿ ಹಾಯ್ದು ಬರುತ್ತಾನೆ. ಹಾಗೆ ಬೇಯದ ವ್ಯಕ್ತಿ ಪಾಪವನ್ನು ಮಾಡಲಾರ. ಯಾರನ್ನೋ ಕೊಲ್ಲಬೇಕು ಎಂದು ಹೊಂಚು ಹಾಕಿದ ಮನುಷ್ಯನ ಹೃದಯದಲ್ಲಿ ದ್ವೇಷದ, ಕೋಪದ ಬೆಂಕಿ ಎಷ್ಟು ಪ್ರಖರವಾಗಿರಬೇಕು! ಮೊದಲು ಆತ ತನ್ನ ಹೃದಯದ ಬೆಂಕಿಯಲ್ಲೇ ದಹಿಸಿ ಹೋಗಿದ್ದಾನೆ.

ಬಾವಿಯ ದಡದಲ್ಲಿಯೇ ನಿಂತವನಿಗೆ ಬಾವಿಯ ಆಳ ತಿಳಿದೀತು ಹೇಗೆ? ಬಾವಿಯಲ್ಲಿ ಹಾರಿಕೊಂಡು, ಉಸಿರು ಹಿಡಿದುಕೊಂಡು ಮುಳುಗಿ ತಳ ನೋಡಿ ಬಂದವನಿಗೆ ಅದರ ಆಳ ಮತ್ತು ಕಷ್ಟ ತಿಳಿದೀತು. ಅದಕ್ಕೆ ಬರೀ ಪಾಪಿಯನ್ನು ಹಳಿಯುವುದಕ್ಕಿಂತ ಅವನ ಪಾಪಕ್ಕೆ ಕಾರಣಗಳೇನು, ಸಂದರ್ಭವೇನು ಎಂಬುದನ್ನು ತಿಳಿಯುವುದು ಸರಿಯಾದದ್ದು. ವ್ಯಕ್ತಿ ಮಾಡಿದ ಪಾಪಕ್ಕೆ ಕ್ಷಮೆ ಇಲ್ಲ, ಶಿಕ್ಷೆ ಬಂದೇ ತೀರುತ್ತದೆ. ಆದರೆ ಅವನನ್ನು ಪಾಪಕ್ಕೆ ಎಳೆದ ಪರಿಸ್ಥಿತಿಯ, ಅದರ ಶಕ್ತಿಯ ಅರಿವೂ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT