ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಆತ್ಮಶುದ್ಧಿ: ಮಂಕುತಿಮ್ಮನ ಕಗ್ಗ

Last Updated 30 ಏಪ್ರಿಲ್ 2020, 3:32 IST
ಅಕ್ಷರ ಗಾತ್ರ

ನಾಚಿಕೆಯನಾಗಿಪುವು ನಮ್ಮ ಸುಖದಾತುರದ |
ಯೋಚನೆಗಳವನು ಮರುವಗಲು ಪರಿಕಿಸಲು ||
ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು |
ರೇಚನವದಾತ್ಮಕ್ಕೆ – ಮಂಕುತಿಮ್ಮ || 285 ||

ಪದ-ಅರ್ಥ: ನಾಚಿಕೆಯನಾಗಿಪುವು=ನಾಚಿಕೆಯನು+ಆಗಿಪುವು(ಮಾಡುವುವು), ಸುಖದಾತುರದ=ಸುಖದ+ಆತುರದ, ಪರಿಕಿಸಲು=ಪರೀಕ್ಷಿಸಲು, ರಸನೆ=ನಾಲಗೆ, ತಾನೊಳಸೇದಿಕೊಳ್ಳುವುದು=ತಾನು+ಒಳಸೇದಿಕೊಳ್ಳುವುದು, ರೇಚನವದಾತ್ಮಕ್ಕೆ=ರೇಚನ (ಒಳಗಿನ ಕೊಳೆಯನ್ನು ಹೊರಗೆ ಹಾಕುವುದು, ವಿರೇಚಕ)+ಅದು+ಆತ್ಮಕ್ಕೆ.

ವಾಚ್ಯಾರ್ಥ: ನಮ್ಮ ಸುಖದ, ಆತುರದ ಬಯಕೆಗಳನ್ನು ಮರುದಿನ ಪರೀಕ್ಷಿಸಿದರೆ ನಮಗೇ ನಾಚಿಕೆಯಾಗುತ್ತದೆ. ಆಗ ಹೊರಚಾಚಿದ್ದ ನಮ್ಮ ಆಸೆಯ ನಾಲಗೆ ಸೇದಿಕೊಳ್ಳುತ್ತದೆ. ಅದು ನಮ್ಮ ಆತ್ಮಕ್ಕೆ ವಿರೇಚಕವಿದ್ದಂತೆ

ವಿವರಣೆ: ಅವಳು ಚಂದ್ರಾವತಿ, ರಾಜನ ಒಬ್ಬಳೇ ಮಗಳು. ರಾಜ ಆಕೆಯನ್ನು ಮಗನಂತೆಯೇ ಬೆಳೆಸಿದ್ದ. ಆಕೆಯದು ಅಸಾಮಾನ್ಯ ಬುದ್ಧಿವಂತಿಕೆ. ಅದರೊಂದಿಗೆಆಕೆ ಅಪರೂಪದ ಸುಂದರಿ. ವಿಶ್ವಮೂರ್ತಿ ಆಸ್ಥಾನದಲ್ಲಿ ರಾಜಗುರು. ಆತನಿಗೆ ನಮ್ಮ ಶಾಸ್ತçಗಳಲ್ಲಿ ಆತ್ಯಂತಿಕವಾದ ಜ್ಞಾನ. ಅವರ ಪ್ರವಚನದ ಶೈಲಿಯೂ ಮನಮುಟ್ಟುವಂತಹದ್ದು. ಚಂದ್ರಾವತಿಗೆ ಗುರುಗಳಾದ ವಿಶ್ವಮೂರ್ತಿಗಳ ಮೇಲೆ ಅತ್ಯಂತ ವಿಶ್ವಾಸ ಮತ್ತು ಶ್ರದ್ಧೆ. ಅವರ ಪ್ರವಚನದ ಕಾಲದಲ್ಲಿ ಆಕೆ ಯಾವಾಗಲೂ ಮುಂದೆಯೇ ಕುಳಿತುಕೊಳ್ಳುವಳು. ಅವಳು ಬೆರಗುಗಣ್ಣುಗಳಿಂದ ನೋಡುತ್ತ ಗುರುಗಳು ಹೇಳುವ ಪ್ರತಿಯೊಂದು ಮಾತನ್ನು ಹಾಗೆಯೇ ಅರಗಿಸಿಕೊಂಡು ಬಿಡುತ್ತಿದ್ದಳು. ಗುರುಗಳಿಗೆ ತನ್ನ ಶಿಷ್ಯೆಯ ಕಲಿಕೆಯ ಬಗ್ಗೆ ಅಪಾರ ಅಭಿಮಾನ. ಆದರೆ ದಿನಕಳೆದಂತೆ ಆಕೆಯ ರೂಪದ ಕಡೆಗೆ ಅವರ ಮನಸ್ಸು ಎಳೆಯಿತು.

ಆಕೆಯನ್ನು ನೋಡುತ್ತ ಮಂತ್ರಗಳು ಮರೆಯತೊಡಗಿದವು. ಆಕೆಯನ್ನು ಮದುವೆಯಾಗಬೇಕೆಂಬ ಆತುರ ಅವರ ನಿದ್ರೆಗೆಡೆಸಿತು. ಆಕೆಗೂ ತನ್ನಲ್ಲಿ ಪ್ರೀತಿ ಉಂಟಾಗಿರಬೇಕೆAಬ ಭಾವನೆ ಬಲಿಯಿತು. ಮರುದಿನ ಆಕೆಗೆ ಹೇಳಿದರು, “ಚಂದ್ರಾವತಿ, ನನಗೆ ನಿನ್ನನ್ನು ಕಂಡರೆ ವಿಶೇಷ ಪ್ರೀತಿ ಮತ್ತು ಆತ್ಮೀಯತೆ”. “ನನಗೂ ಅಷ್ಟೇ ಗುರುಗಳೇ” ಎಂದಳು ರಾಜಕುಮಾರಿ. ಗುರುಗಳಿಗೆ ಸ್ವರ್ಗ ಮೂರೇ ಗೇಣು. ಮಾರನೇ ದಿನ ರಾಜಕುಮಾರಿ ರಾಜನೊಂದಿಗೆ ಗುರುಗಳ ಮನೆಗೆ ಹೂವು, ಹಣ್ಣುಗಳನ್ನು ತೆಗೆದುಕೊಂಡು ಬಂದಳು.

ತನ್ನ ಮದುವೆಯ ಬಗ್ಗೆಯೇ ಮಾತಿರಬೇಕು ಎಂದು ಹಿಗ್ಗಿದರು ಗುರುಗಳು. ಚಂದ್ರಾವತಿ ಹೂವು ಹಣ್ಣುಗಳ ತಟ್ಟೆಯನ್ನು ಗುರುಗಳ ಮುಂದಿಟ್ಟು, “ಇದುವರೆಗೂ ತಮ್ಮನ್ನು ಕೇವಲ ಗುರುವೆಂದು ಕಾಣುತ್ತಿದ್ದೆ. ಆದರೆ ನೀವು ನನಗೆ ವಿದ್ಯಾದಾನ ಮಾಡಿ ಮತ್ತೊಬ್ಬ ತಂದೆಯಾಗಿದ್ದೀರಿ. ತಂದೆಯಾಗಿ ನನಗೆ ಆಶೀರ್ವದಿಸಿ” ಎಂದು ಪಾದ ಮುಟ್ಟಿ ನಮಸ್ಕರಿಸಿದಳು. ಗುರುಗಳು ಬೆವೆತು ಹೋದರು. ಆ ಹುಡುಗಿಗೆ ತನ್ನ ಮೇಲೆ ಯಾವ ಭಾವವಿದೆ ಎಂದು ತಿಳಿದು ತಮ್ಮ ಮನಸ್ಸಿನ ಕೊಳಕಿಗೆ ಹೇಸಿದರು. ಪುಣ್ಯ! ತನ್ನ ಕೊಳಕು ಮನಸ್ಸಿನ ಭಾವನೆ ಆಕೆಗೆ ತಿಳಿಯಲಿಲ್ಲವಲ್ಲ ಎಂದು ನಿಟ್ಟಿಸಿರುಬಿಟ್ಟರು. ಮರುದಿನವೇ ರಾಜ್ಯವನ್ನು ತೊಲಗಿ ಹಿಮಾಲಯಕ್ಕೆ ಹೋದರು.

ಇಡೀ ಕಥೆ ಈ ಕಗ್ಗದ ವಿವರಣೆ ಇದ್ದಂತಿದೆ. ನಮ್ಮ ಸುಖದ, ಆತುರದ ನಿರ್ಣಯಗಳನ್ನು ಮರುಪರಿಶೀಲಿಸಿದಾಗ ನಮಗೇ ನಾಚಿಕೆಯಾಗುತ್ತದೆ. ಈ ರೀತಿ ಮನಸ್ಸು ಕೊಳಕಾದದ್ದನ್ನು ಕಂಡಾಗ ನಮ್ಮ ತೃಷ್ಣೆಯ ನಾಲಗೆ ಒಳಗೆ ಸೆಳೆದುಕೊಳ್ಳುತ್ತದೆ. ಇನ್ನೊಮ್ಮೆ ಇಂಥ ತಪ್ಪು ಮಾಡಬಾರದೆಂಬ ಎಚ್ಚರಿಕೆ ಮೂಡುತ್ತದೆ. ಬದುಕಿನಲ್ಲಿ ಜರುಗುವ ಇಂಥ ಕೆಲವು ಘಟನೆಗಳು, ನಮ್ಮೊಳಗೆ ತುಂಬಿಕೊಂಡಿರುವ ಕೊಳಕನ್ನು ಹೊರಹಾಕಿ ದೇಹಶುದ್ಧಿ ಮಾಡುವ ವಿರೇಚಕದಂತೆ, ನಮ್ಮ ಆತ್ಮಶುದ್ಧಿಯನ್ನು ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT