ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದ್ವೈತ– ಅದ್ವೈತ

Last Updated 5 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ನೇತ್ರಯುಗಳಂ ಪಿಡಿಗುವೊಂದು ಲಕ್ಷ್ಯವ ಕೂಡಿ
ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||
ದೈತದಿಂದದ್ವೈತವದ್ವೈತದೊಳ್ ದ್ವೈತ‌|
ಚೈತನ್ಯಲೀಲೆಯಿದು – ಮಂಕುತಿಮ್ಮ || 770 ||

ಪದ-ಅರ್ಥ: ನೇತ್ರಯುಗಳಂ=ಎರಡು ಕಣ್ಣುಗಳು, ಪಿಡಿಗುವೊಂದು=ಪಿಡುಗುಮ್ (ಹಿಡಿಯುವವು+ಒಂದು, ಹಸ್ತಯುಗ=ಎರಡು ಹಸ್ತಗಳು, ಮನದರ್ಥವೊಂದನ್=ಮನದ+ಅರ್ಥ+ಒಂದನ್ (ಒಂದನ್ನು), ದ್ವೈತಂದದ್ವೆತವದ್ವೆಂತದೊಳ್=ದ್ವೈತದಿಂದ(ಎರಡರಿಂದ) +ಅದ್ವೈತ(ಒಂದು)+ಅದ್ವೈತದೊಳು (ಅದ್ವೈತದಲ್ಲಿ), ಚೈತನ್ಯಲೀಲೆಯಿದು=ಚೈತನ್ಯ(ಪರಮ ಚೇತನದ)+ಲೀಲೆ+ಇದು.

ವಾಚ್ಯಾರ್ಥ: ಎರಡು ಕಣ್ಣುಗಳು ಕೂಡಿ ಒಂದು ಗುರಿಯನ್ನು ಹಿಡಿಯುತ್ತವೆ. ಎರಡು ಕೈಗಳು ಸೇರಿ ಮನದ ಒಂದು ಕಾರ್ಯವನ್ನು ಪೂರೈಸುತ್ತವೆ. ಹೀಗೆ ಎರಡರಿಂದ ಒಂದರ ಸಾಧನೆ, ಒಂದರಲ್ಲಿ ಎರಡರ ಕಾರ್ಯ. ಇದೇ ಪರಮಚೇತನದ ಲೀಲೆ.
ವಿವರಣೆ: ನಮಗೆ ಇರುವುವು ಎರಡು ಕಣ್ಣುಗಳು. ಆದರೆ ಅವೆರಡೂ ಸೇರಿ ಒಂದೇ ವಸ್ತುವನ್ನು ಕಾಣುತ್ತವೆ. ಒಂದೊಂದು ಕಣ್ಣು ಬೇರೆಯದನ್ನೇ ನೋಡುತ್ತಿದ್ದರೆ ಏನಾದರೂ ಕಂಡೀತೇ? ಎರಡು ಕಣ್ಣುಗಳು ಕಾಣುವುದು ಒಂದೇ ನೋಟ.ಇದೇ ದ್ವೈತದಿಂದ ಅದ್ವೈತವಾಗುವ ಬಗೆ. ಅದೇ ರೀತಿ ಎರಡು ಕೈಗಳಾದರೂ ಅವು ಜೊತೆಗೂಡಿ ಮನಸ್ಸಿನಲ್ಲಿ ಬಂದ ಕಾರ್ಯವನ್ನು ಸಾಧ್ಯವಾಗಿಸುತ್ತವೆ. ಮತ್ತೆ ಇದು ದ್ವೈತದಿಂದ ಅದ್ವೈತ ಮೇಲ್ನೋಟಕ್ಕೆ ಎರಡು ಕಣ್ಣುಗಳು ಒಂದು ದೃಷ್ಟಿ, ಎರಡು ಕೈಗಳು ಒಂದೇ ಕಾರ್ಯ ಎಂಬ ಚಿಂತನೆ ಎಂದು ತೋರಿದರೂ, ಆಳದಲ್ಲಿ ಅದರ ವಿಷಯವೇ ಬೇರೆ. ನಮ್ಮ ಅಧ್ಯಾತ್ಮದಲ್ಲಿ ಮೂರು ವಿಷಯಗಳು ಮೂಲದಲ್ಲಿ ಮುಖ್ಯ. ಅವು ಜೀವ, ಜಗತ್ತು ಮತ್ತು ಈಶ್ವರ. ಮೊದಲು ಈಶ್ವರ ಅಥವಾ ಬ್ರಹ್ಮವಸ್ತು ಒಂದೇ ಇತ್ತು. ಅದು ಎರಡಿಲ್ಲದ್ದು-ಅದೇ ಅದ್ವೈತ. ಅದನ್ನು ತೈತ್ತರೀಯ ಉಪನಿಷತ್ “ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ” ಎನ್ನುತ್ತದೆ. ಹಾಗೆಂದರೆ ಎರಡನೆಯದೆಂಬುದೇ ಇಲ್ಲವೆಂದ ಮೇಲೆ ಅಲ್ಲಿ ಮಾತಿಗಾಗಲೀಮನಸ್ಸಿಗಾಗಲೀ ಕೆಲಸವೇ ಇಲ್ಲ. ಆದರೆ ಆ ಅದ್ವೈತ ಹಾಗೆಯೇ
ಒಂದೇ ಆಗಿ ಉಳಿಯಲಿಲ್ಲ. ತನ್ನ ಮಾಯೆಯಿಂದ ಜಗತ್ತನ್ನು ಸೃಷ್ಟಿಸಿತು. ಅದರಲ್ಲಿ ಕೋಟಿ ಕೋಟಿ ಜೀವರೂಪದಲ್ಲಿ ಹೊರಹೊಮ್ಮಿತು. ಈಗ ಜೀವ ಮತ್ತು ಈಶ್ವರರೆಂಬ ಎರಡಾಗಿ ಕಾಣತೊಡಗಿದರು. ಈಶ್ವರ ಅನಂತ ಶಕ್ತಿಯ ಒಡೆಯ. ಜೀವಅವನದೇ ಒಂದು ಕಿಡಿಯಾದರೂ ಅದು ದೇವರಾಗಲಾರದು. ಹೀಗೆ ಆತ್ಮ ಮತ್ತು ಪರಮಾತ್ಮ ಇಬ್ಬರಾದರು. ಇದು ದ್ವೈತ. ಈ ಚಿಂತನೆ ಒಂದು ವಿರೋಧಾಭಾಸದಂತೆ ತೋರುತ್ತದೆ. ಮೂಲದಲ್ಲಿ ಒಂದೇ ಇದ್ದದ್ದು ಈಗ ಎರಡಾಯಿತು. ಹಾಗೆಂದರೆ ಅದ್ವೈತ, ದ್ವೈತವಾಯಿತು. ಅದು ನಿಜವಾಗಿಯೂ ದ್ವೈತವೇ? ನೀರು ಮರಗಟ್ಟಿದಾಗ ಮಂಜುಗಡ್ಡೆಯಾಗುತ್ತದೆ. ಆಗ ನೀರು ಮತ್ತು ಮಂಜುಗಡ್ಡೆ ಎರಡಾದಂತೆ ತೋರುತ್ತವೆ. ಮಂಜುಗಡ್ಡೆ ಕರಗಿದಾಗ ನೀರಾಗುತ್ತದೆ. ಆಗ ಉಳಿದದ್ದು ಒಂದೇ ನೀರು, ಅದು ಅದ್ವೈತ. ಪರಮಾತ್ಮನ ಒಂದು ಕಿಡಿಯಾದ ಜೀವಾತ್ಮ ಕೊನೆಗೆ ಪರಮಾತ್ಮನ ಬಳಿಗೇ ಹೋಗಿ
ಅದ್ವೈತವಾಗುತ್ತದೆ. ಇದು ಚೈತನ್ಯದ ಲೀಲೆ.

ದ್ವೈತಾದ್ವೈತಗಳು ತೋರಿಕೆಗೆ ಎರಡಾಗಿ ಕಂಡರೂ ಮೂಲದಲ್ಲಿ ಒಂದೇ ಆಗಿವೆಎಂಬುದು ಕಗ್ಗದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT