ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಆಶ್ರಮದ ಕಡೆಗೆ ಪಯಣ

Last Updated 23 ಜೂನ್ 2021, 19:45 IST
ಅಕ್ಷರ ಗಾತ್ರ

ಬೋಧಿಸತ್ವ ವೆಸ್ಸಂತರ ಹೆಂಡತಿ ಮಕ್ಕಳನ್ನು ಕರೆದುಕೊಂಡು ರಥದಲ್ಲಿ ಕುಳಿತು ಸಿವಿ ರಾಷ್ಟ್ರದಿಂದ ಹೊರಟ. ಅವನಿಗೆ ತಿಳಿಯದಂತೆ, ಮುಂದೆ ಅವನಿಗೆ ಅನುಕೂಲವಾಗಲೆಂದು ರಾಣಿ ಪುಸತಿದೇವಿ ಮತ್ತೆರಡು ರಥಗಳಲ್ಲಿ ಅಪಾರವಾದ ಧನಕನಕಗಳನ್ನು ತುಂಬಿ ಅವನ ರಥದ ಹಿಂದೆ ಕಳುಹಿಸಿದಳು. ನಗರವನ್ನು ದಾಟಿದ ಮೇಲೆ ಅದನ್ನು ಮತ್ತೊಮ್ಮೆ ನೋಡಬೇಕೆಂಬ ಇಚ್ಛೆಯಿಂದ ರಥವನ್ನು ನಗರದಕಡೆಗೆತಿರುಗಿಸಿದ. ಅರಮನೆಯನ್ನು ನೋಡಿದ, ತಂದೆ-ತಾಯಿಗಳ ವಿಶೇಷ ನಿವಾಸಗಳನ್ನು ಕಂಡ. ಅವನ ಕರುಣೆಯಿಂದಾಗಿ ಭೂಮಿ ನಡುಗಿತು. ಇನ್ನೂ ಹೆಚ್ಚು ಹೊತ್ತು ಹಾಗೆಯೇ ಕರುಣೆ ಉಕ್ಕಿದರೆ ನಗರಕ್ಕೆ ಅಪಾಯವಾದೀತೆಂದು ಮರಳಿ ರಥವನ್ನು ತಿರುಗಿಸಿ ಓಡಿಸಿದ. ಹೆಂಡತಿಗೆ ಹೇಳಿದ, ‘ಭದ್ರೆ, ಹಿಂದೆ ನೋಡುತ್ತಿರು. ನನ್ನಿಂದ ಏನಾದರೂ ಅಪೇಕ್ಷೆ ಮಾಡುವ ಯಾಚಕರು ಬಂದರೆ ಅವರಿಗೆ ನಿರಾಸೆ ಮಾಡಬೇಡ. ನಿನ್ನ ಬಳಿ ಇರುವ ಆಭರಣಗಳನ್ನು ಕೊಟ್ಟುಬಿಡು’. ಆಕೆ ಹಿಂತಿರುಗಿ, ‘ಆರ್ಯ, ನಮ್ಮ ಹಿಂದೆ ಎರಡು ರಥಗಳು ಬರುತ್ತಿವೆ. ಬಹುಶಃ ಅದನ್ನು ಅತ್ತೆಯವರೇ ಕಳುಹಿಸಿರಬೇಕು’ ಎಂದಳು. ಅಷ್ಟು ಹೊತ್ತಿಗೆ ಕೆಲವು ಯಾಚಕರು ಓಡಿ ಬಂದು, ‘ರಾಜಕುಮಾರ, ನೀನು ನಗರದಲ್ಲಿ ದಾನಮಾಡಿದಾಗ ನಾವು ಇರಲಿಲ್ಲ. ನೀನು ದೇಶತ್ಯಾಗ ಮಾಡುತ್ತಿದ್ದೀ ಎಂದು ತಿಳಿದು ನಿನ್ನ ಹಿಂದೆಯೇ ಓಡಿ ಬಂದೆವು. ದಯವಿಟ್ಟು ನಮಗೆ ಏನಾದರೂ ದಾನ ಮಾಡು’ ಎಂದು ಕೇಳಿದರು.

ವೆಸ್ಸಂತರ ಕೇಳಿದವರಿಗೆಲ್ಲ, ಹಿಂದಿದ್ದ ರಥಗಳಲ್ಲಿಯ ವಸ್ತುಗಳನ್ನು ದಾನಮಾಡುತ್ತ ಬಂದ. ಅವನ ಪರೀಕ್ಷೆಗೋ ಏನೊ ಮತ್ತಷ್ಟು ಜನರು ಬಂದರು. ಅವರಿಗೆ ಹಿಂದಿನ ರಥದ ಕುದುರೆಗಳನ್ನು, ರಥಗಳನ್ನು ದಾನಮಾಡಿಬಿಟ್ಟ. ಮುಂದೆ ಸಾಗುತ್ತಿದ್ದಾಗ, ನಾಲ್ಕು ಜನ ಬಂದು ಅವನ ರಥದ ನಾಲ್ಕು ಕುದುರೆಗಳನ್ನು ಬೇಡಿ ಪಡೆದುಕೊಂಡು ಹೋದರು. ರಥ ಹಾಗೆಯೇ ನಿಂತು ಬಿಟ್ಟಿತು. ಅಷ್ಟರಲ್ಲಿ, ಇದನ್ನು ಕಂಡ ದೇವದೂತರು ಓಡಿಬಂದು ಕುದುರೆಗಳ ರೂಪ ಧರಿಸಿ ರಥವನ್ನು ಎಳೆದುಕೊಂಡು ಹೊರಟರು. ವೆಸ್ಸಂತರನ ಧೃಡತೆಯ ಪರೀಕ್ಷೆಗೆ ಅಲ್ಲಿಗೆ ಒಬ್ಬ ಬ್ರಾಹ್ಮಣ ಬಂದು, ‘ರಾಜಾ, ನನಗೆ ನಿನ್ನ ರಥ, ಕುದುರೆಗಳ ಮೇಲೆ ಮನಸ್ಸಾಗಿದೆ. ಅವುಗಳನ್ನು ನನಗೆ ಕೊಡು’ ಎಂದು ಕೇಳಿದ. ಆಗ ವೆಸ್ಸಂತರ ರಥದಿಂದ ಹೆಂಡತಿ, ಮಕ್ಕಳನ್ನು ಕೆಳಗಿಳಿಸಿ, ರಥದಲ್ಲಿದ್ದ ವಸ್ತುಗಳ ಸಮೇತ ಎಲ್ಲವನ್ನೂ ದಾನಮಾಡಿಬಿಟ್ಟ. ತಕ್ಷಣ ಆ ಬ್ರಾಹ್ಮಣ ರಥ ಸಹಿತವಾಗಿ ಮಾಯವಾಗಿ ಹೋದ!

ವೆಸ್ಸಂತರನ ಮುಖದ ಮೇಲೆ ಒಂದು ಚೂರೂ ದುಃಖದ ಛಾಯೆ ಇರಲಿಲ್ಲ. ಅವರೆಲ್ಲರೂ ನಡೆದೇ ಹೊರಟರು. ಬೋಧಿಸತ್ವ ವೆಸ್ಸಂತರ ಹೆಂಡತಿ ಮಾದ್ರಿಗೆ ಹೇಳಿದ, ‘ಮಾದ್ರಿ, ಮಕ್ಕಳಿಗೆ ನಡೆಯುವುದು ಕಷ್ಟವಾಗುತ್ತದೆ. ಕೃಷ್ಣಾಜಿನ ಚಿಕ್ಕವಳು, ಹಗುರವಾಗಿದ್ದಾಳೆ. ಅವಳನ್ನು ನೀನು ಎತ್ತಿಕೊ. ಮಗ ಜಾಲಿಕುಮಾರ ದೊಡ್ಡವನು, ಭಾರವಾಗಿದ್ದಾನೆ. ಅವನನ್ನು ನಾನು ಕರೆದುಕೊಳ್ಳುತ್ತೇನೆ’. ಇಬ್ಬರೂ ಮಕ್ಕಳನ್ನು ಎತ್ತಿಕೊಂಡು ಬೆಟ್ಟದಕಡೆಗೆನಡೆದರು. ಅವರು ಹೋಗಬೇಕೆಂದಿದ್ದು ವಂಕಪರ್ವತ. ಅಲ್ಲಿಯೇ ಒಂದು ಆಶ್ರಮವನ್ನು ಕಟ್ಟಿಕೊಂಡು ಉಳಿಯುವುದು ವೆಸ್ಸಂತರನ ಗುರಿಯಾಗಿತ್ತು. ಅದಕ್ಕಾಗಿ ದಾರಿಯಲ್ಲಿ ಎದುರು ಬಂದವರನ್ನೆಲ್ಲ, ವಂಕಪರ್ವತವೆಲ್ಲಿ ಎಂದು ಕೇಳುತ್ತಿದ್ದರು. ಅವರು ಕನಿಕರದಿಂದ ಇವರನ್ನು ನೋಡಿ, ‘ಅಯ್ಯೋ, ಇನ್ನೂ ಅದು ಬಹಳ ದೂರದಲ್ಲಿದೆ’ ಎಂದಾಗ ಮಾದ್ರಿಗೆ ನಿರಾಸೆಯಾಗುತ್ತಿತ್ತು. ಆದರೆ ವೆಸ್ಸಂತರ ಮಾತ್ರ ಎಂದಿನಂತೆ ದುಃಖರಹಿತನಾಗಿದ್ದು ಉಳಿದವರಿಗೆ ಉತ್ತೇಜನ ನೀಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT