ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ತಲ್ಲಣವಿಲ್ಲದ ಬದುಕು

Last Updated 15 ಜೂನ್ 2022, 20:30 IST
ಅಕ್ಷರ ಗಾತ್ರ

ಮೌನದಿಂದಂಬಲಿಯನುಂಡು ತಣಿಯುವ ಮಾನಿ |
ಶ್ವಾನನುಣುವೆಂಜಲೋಗರಕೆ ಕರಬುವನೆ ? ||
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ |
ಮಾಣು ನೀಂ ತಲ್ಲಣವ – ಮಂಕುತಿಮ್ಮ || 651 ||

ಪದ-ಅರ್ಥ: ಮೌನದಿಂದಂಬಲಿಯನುಂಡು=ಮೌನದಿಂದ+ಅಂಬಲಿಯನು+ಉಂಡು, ತಣಿಯುವ=ತೃಪ್ತಿಪಡುವ, ಮಾನಿ=ಸ್ವಾಭಿಮಾನಿ, ಶ್ವಾನನುಣುವೆಂಜಲೋಗರಕೆ=ಶ್ವಾನ(ನಾಯಿ)+ಉಣುವ+ಎಂಜಲು+ಓಗರಕ್ಕೆ(ಅನ್ನಕ್ಕೆ), ಕರಬುವನೆ=ಅಸೂಯೆಪಡುವನೆ, ತರತಮವಿವೇಕದಲ್ಲಿ=ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ವಿವೇಕದಲ್ಲಿ, ಮಾಣು=ತಡೆ, ನಿಲ್ಲಿಸು, ತಲ್ಲಣವ=ತಳಮಳವ

ವಾಚ್ಯಾರ್ಥ: ಮೌನದಿಂದ, ಆತ್ಮಗೌರವದಿಂದ ಅಂಬಲಿಯನ್ನು ಉಂಡು ತೃಪ್ತನಾಗುವ ಅಭಿಮಾನಿ ನಾಯಿ ತಿನ್ನುವ ಎಂಜಲು ಅನ್ನಕ್ಕೆ ಅಸೂಯೆ ಪಡುವನೆ? ಜ್ಞಾನಿಯಾದವನು ಮೇಲುಕೀಳು ವಿವೇಕದಲ್ಲಿ ತಿಳಿದು ನಡೆಯುತ್ತಾನೆ. ನೀನು ಕಳವಳವನ್ನು ಪಡಬೇಡ.

ವಿವರಣೆ: ಇದೊಂದು ಅತ್ಯಂತ ಮನಮುಟ್ಟುವ ಚೌಪದಿ. ಬಹಳ ಬೋಧಪ್ರದವಾದದ್ದು. ತಮಗೆ ದೊರೆತದ್ದರಲ್ಲಿ ತೃಪ್ತಿಯನ್ನು ಕಾಣದೆ, ತನ್ನದಲ್ಲದ ದುಡ್ಡಿಗೆ, ಲಂಚದಾಸೆಯಿಂದ ಕೈ ಒಡ್ಡುವವನು ನಾಯಿತಿನ್ನುವ ಎಂಜಲು ಅನ್ನಕ್ಕೆ ಕೈ ಚಾಚಿದಂತೆ. ಇರುವುದರೊಳಗೆ ತೃಪ್ತಿಯನ್ನು ಪಡೆಯುವವನು ಮಾನಿ. ಮಾನಿ ಎಂದರೆ ಆತ್ಮಾಭಿಮಾನವುಳ್ಳವನು. ಸ್ವಾಭಿಮಾನವಿದ್ದವರು ಯಾರೂ ಎಂಜಲು ಕಾಸಿಗೆ ಕೈ ಚಾಚುವುದಿಲ್ಲ, ಚಾಚಬಾರದು.

ಜ್ಞಾನಿಯಾದವನು ತರತಮವಿವೇಕದಿಂದ ಬದುಕುತ್ತಾನಂತೆ. ಹಾಗೆಂದರೆ ಯಾವುದು ಹೆಚ್ಚು, ಯಾವುದು ಕಡಿಮೆ ಎನ್ನುವುದರ ತಿಳುವಳಿಕೆ ಉಳ್ಳವನು. ಹೆಚ್ಚು ಕಡಿಮೆ ಎನ್ನುವುದು ವಸ್ತುವಿನ ಬೆಲೆಯಲ್ಲಿ, ಅಂತಸ್ತಿನಲ್ಲಿ ಅಲ್ಲ. ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎನ್ನುವ ಪ್ರಜ್ಞೆ ಇರುವವರು. ನನ್ನ ಪರಿಚಯದವರೊಬ್ಬರು ಸರ್ಕಾರದಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರು. ಇಡೀ ಇಲಾಖೆಗೆ ಅವರೇ ಮುಖ್ಯಸ್ಥರು. ಮಂತ್ರಿಗಳಿಗೂ ಅವರ ತೀರ್ಮಾನಗಳ ಮೇಲೆ ಅಪಾರ ನಂಬಿಕೆ. ಅವರು ರಿಟೈರ್ ಆಗುವುದಕ್ಕಿಂತ ಎರಡು ದಿನ ಮೊದಲು ಉದ್ಯಮಿಯೊಬ್ಬರು ಬಂದು ಅವರನ್ನು ಕಂಡರು, ತಮ್ಮ ಕೆಲಸ ಮಾಡಿಕೊಡಲು ಬೇಡಿಕೊಂಡರು. ಈ ಅಧಿಕಾರಿ ಆಗಲಿ ಎಂದಿದ್ದರೆ ಅವರ ಕೆಲಸ ಆಗಿಯೇ ತೀರುತ್ತಿತ್ತು ಮತ್ತು ಅಧಿಕಾರಿಗೆ ಸುಲಭವಾಗಿ ಒಂದು ಕೋಟಿ ರೂಪಾಯಿ ಹಣ ದೊರೆಯುತ್ತಿತ್ತು. ಇವರು ಸೊಪ್ಪು ಹಾಕದೆ ಅವರನ್ನು ತಿರಸ್ಕರಿಸಿದರು. ಇವರು ರಿಟೈರ್ ಆದ ಮರುದಿನವೂ ಆತ ಮನೆಗೆ ಬಂದ. ಇವರದು ಬಾಡಿಗೆ ಮನೆ, ತೀರ ಚಿಕ್ಕದು. ಅದನ್ನು ಕಂಡು ಆತ ಹೇಳಿದ, ‘ಸರ್, ನಾನು ನನ್ನ ಫೈಲನ್ನು ತಂದುಕೊಡುತ್ತೇನೆ, ನೀವು ನಿನ್ನೆಯ ದಿನ ಮಾಡಿದಂತೆ ಸಹಿ ಹಾಕಿದರೆ ಸಾಕು. ನಮ್ಮ ಕಂಪನಿಯದೇ ಒಂದು ಮೂರು ಬೆಡ್ ರೂಂ ಮನೆ ಇದೆ. ಅದು ಕನಿಷ್ಠ ಎರಡು ಕೋಟಿಯಾಗುತ್ತದೆ. ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ.’ ಅದಕ್ಕವರು, ‘ಸ್ವಾಮಿ, ಮೇಲೆ ಏಳಿ, ನನಗೆ ನಿಮ್ಮ ಎಂಜಲಿನ ಮನೆ ಬೇಡ. ಅದನ್ನು ತೆಗೆದುಕೊಂಡು ಸಾಯುವವರೆಗೆ ಋಣ ದಲ್ಲಿ ಒದ್ದಾಡಲಾರೆ. ನೀವು ಹೊರಡದಿದ್ದರೆ ನಾನು ಪೋಲೀಸರಿಗೆ ಫೋನ್ ಮಾಡಬೇಕಾಗುತ್ತದೆ’ ಎಂದು ಗುಡುಗಿದರು. ಆತ ಮರೆಯಾದ. ಈ ಅಧಿಕಾರಿ ಕೊನೆಯವರೆಗೂ ತಮ್ಮ ಆತ್ಮಗೌರವವನ್ನು ಕಾಪಾಡಿಕೊಂಡು ಎದೆ ಎತ್ತಿ, ನಗುನಗುತ್ತಾ ಬದುಕಿದರು.

ಎಂಜಲಿಗೆ ಕೈ ಒಡ್ಡದೆ, ಯಾವ ನಡತೆ ದೊಡ್ಡ ಮಟ್ಟದ್ದು, ಯಾವುದು ಕೀಳುಮಟ್ಟದ್ದು ಎಂದು ತಿಳಿಯುವವನು ತರತಮವಿವೇಕದ ಜ್ಞಾನಿ. ಆ ಜ್ಞಾನಿ ಸಂತೋಷವನ್ನು ಪರರು ನೀಡಿದ ಎಂಜಲು ಕಾಸಿನಲ್ಲಿ ಕಾಣುವುದಿಲ್ಲ, ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳುವುದರಲ್ಲಿ ಕಾಣುತ್ತಾನೆ. ಹಾಗೆ ಮನಸ್ಸು ಸ್ಪಷ್ಟ ಇರುವವರಲ್ಲಿ ತಳಮಳ, ತಲ್ಲಣ ಇರುವುದಿಲ್ಲ.ಬದುಕುನಿರಾಳವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT