ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಕರುಣೆಗೆ ಕೃತಜ್ಞತೆ

Last Updated 25 ನವೆಂಬರ್ 2021, 20:28 IST
ಅಕ್ಷರ ಗಾತ್ರ

ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ|
ಸರಿ ತನಗೆ ತೋರ್ದನಿತನ್ ಅದರೊಳವನೀವಂ||
ಅರಿಕೆಯೆಲ್ಲವ ನಡಸದಿರೆ ದೊರೆಯೆ ಸುಳ್ಳಹನೆ?||
ಕರುಣೆ ನಿರ್ಬಂಧವೇಂ? – ಮಂಕುತಿಮ್ಮ ||506||

ಪದ-ಅರ್ಥ: ಬಿನ್ನಯಿಸೆ (ಬೇಡಿದರೆ), ತೋರ್ದನಿತನ್= ತೋರ್ದ (ತೋರಿದ)+ ಅನಿತನ್ (ಕೆಲವನ್ನು), ಅದರೊಳವನೀವಂ= ಅದರೊಳ್ (ಅದರಲ್ಲಿ)+ ಅವನು+ ಈವಂ (ನೀಡುತ್ತಾನೆ), ಅರಿಕೆಯೆಲ್ಲವ= ಅರಿಕೆ (ಬೇಡಿಕೆ)+ ಎಲ್ಲವ, ನಿರ್ಬಂಧವೇಂ= ಬಲವಂತವೇ

ವಾಚ್ಯಾರ್ಥ: ರಾಜನಿಗೆ ನೀನು ನೂರೆಂಟು ಬಯಕೆಗಳನ್ನು ಬೇಡಿದರೆ, ತನಗೆ ಸರಿ ಎಂದು ತೋಚಿದ ಕೆಲವನ್ನು ಆತ ನೀಡುತ್ತಾನೆ. ಕೇಳಿದ್ದ ಎಲ್ಲವನ್ನು ಆತ ನಡೆಸದಿದ್ದರೆ, ಆತ ರಾಜನಿದ್ದದ್ದು ಸುಳ್ಳೇ? ಕರುಣೆ ಏನು ಬಲವಂತವೇ?

ವಿವರಣೆ: ಒಂದು ಸುಂದರವಾದ ಚಿತ್ರವನ್ನು ಕಗ್ಗ ನೀಡುತ್ತದೆ. ನಮ್ಮ ಬಯಕೆಗಳಿಗೆ ಕೊನೆಯೇ ಇಲ್ಲ. ಒಬ್ಬ ಮನುಷ್ಯ ತನ್ನ ರಾಜ್ಯದ ದೊರೆಯ ಮುಂದೆ ಹೋಗಿ ತನ್ನ ಬಯಕೆಗಳ ಪಟ್ಟಿಯನ್ನಿಟ್ಟು ಬೇಡಿಕೊಂಡರೆ ರಾಜ ಏನು ಮಾಡುತ್ತಾನೆ? ಪಟ್ಟಿಯನ್ನು ಗಮನಿಸಿ, ಅದರೊಂದಿಗೆ, ಬೇಡಿದವನ ಯೋಗ್ಯತೆಯನ್ನು ತಾಳೆ ಹಾಕಿ, ಬೇಡಿಕೆಗಳಲ್ಲಿ ಯಾವುದು ಯೋಗ್ಯವೋ, ಅವನ ಶಕ್ತಿಗೆ ಹಿತವೋ ಅದನ್ನು ನೋಡಿ ಕೆಲವನ್ನು ಪೂರೈಸಬಹುದು. ಕೇಳಿದ್ದನ್ನೆಲ್ಲ ಕೊಡಲಾರ. ಹಾಗೆ ಕೊಡದೆ ಹೋದರೆ ಅವನು ರಾಜನಾದದ್ದು ಸುಳ್ಳೇ?

ಕರುಣೆಯಿಂದ ನೀಡುವುದಕ್ಕೆ ಬಲವಂತ ಸಲ್ಲದು. ಈ ಉದಾಹರಣೆಯಲ್ಲಿ ಬೇಡುವವ ಮತ್ತು ರಾಜನ ಚಿತ್ರಣವಿದ್ದರೂ, ಅದರ ಹಿನ್ನಲೆಯ ಆಶಯ ಮನುಷ್ಯ ಮತ್ತು ಭಗವಂತನ ಸಂಬಂಧವೇ ಆಗಿದೆ. ಮನುಷ್ಯನಿಗೆ ಸಾವಿರಾರು ಬಯಕೆಗಳು. ನಮ್ಮ ಪ್ರತಿಯೊಂದು ಪ್ರಾರ್ಥನೆ, ಪೂಜೆಯಲ್ಲಿ, ಬೇಡಿಕೆಗಳ ಪಟ್ಟಿಯೇ ಇರುತ್ತದೆ. ದೇವರು ಎಲ್ಲ ಆಶಯಗಳನ್ನು ಪೂರೈಸುವುದಿಲ್ಲ. ಬಹುಶಃ ಅದಕ್ಕೆ ಎರಡು ಕಾರಣಗಳು. ಮೊದಲನೆಯದು, ಎಲ್ಲರ ಬೇಡಿಕೆಗಳನ್ನು ನಡೆಸುತ್ತ ಬಂದರೆ ಜಗತ್ತಿನ ವ್ಯವಸ್ಥೆ ತಪ್ಪಿ ಹೋಗುತ್ತದೆ. ಯಾಕೆಂದರೆ ಒಬ್ಬರ ಬಯಕೆ, ಮತ್ತೊಬ್ಬರ ಅವಶ್ಯಕತೆಗೆ ವಿರುದ್ಧವಾಗಿರಬಹುದು. ಎರಡನೆಯದು, ಬೇಡಿಕೆಯ ಈಡೇರಿಕೆಯಿಂದ ಅವನಿಗೆ ತೊಂದರೆಯೇ ಆಗಬಹುದು.

ನಾವು ಪುರಾಣಗಳಲ್ಲಿ ಓದಿಲ್ಲವೇ? ಭಸ್ಮಾಸುರ, ಹಿರಣ್ಯಕಶಿಪು, ಸುಂದ-ಉಪಸುಂದರು ಏನು ಬೇಕೆಂಬುದು ತಿಳಿಯದೆ ವರ ಬೇಡಿ ಪಡೆದು ನಾಶವಾದರು. ಇದರೊಂದಿಗೆ ನಾವು ಮಾಡಿದ ಕರ್ಮಫಲವೊಂದಿದೆ. ಅದನ್ನು ದಾಟುವಂತಿಲ್ಲ. ಇವನ್ನೆಲ್ಲ ಗಮನಿಸಿ ದೇವರು ನಾವು ಬೇಡಿದವುಗಳಲ್ಲಿ ಕೆಲವೊಂದನ್ನು ಮಾತ್ರ ಕರುಣೆಯಿಂದ ದಯಪಾಲಿಸುತ್ತಾನೆ. ಅದು ಕರುಣೆ, ಏಕೆಂದರೆ ಅದರಿಂದಲೇ ನಮಗೆ ಒಳಿತು. ಅದು ಆ ಕ್ಷಣಕ್ಕೆ ತೋರಲಿಕ್ಕಿಲ್ಲ. ಕೆಲಸಮಯದ ನಂತರ ಹಾಗೆ ಆದದ್ದು ಒಳ್ಳೆಯದೇ ಎನ್ನಿಸೀತು. ಕರುಣೆಯಿಂದ ನೀಡಿದ್ದನ್ನು ವಿನಮ್ರತೆಯಿಮದ ಸ್ವೀಕರಿಸಬೇಕು. ಕರುಣೆಯನ್ನು ಬಲವಂತದಿಂದ, ಒತ್ತಾಯದಿಂದ ಕೇಳಲಾಗುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT