ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮುದ್ದಿಸದ ಜಗತ್ತು

Last Updated 13 ಜೂನ್ 2022, 20:31 IST
ಅಕ್ಷರ ಗಾತ್ರ

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು|
ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ|
ರಗಳೆಗಾರಿಗೆ ಬಿಡುವೋ – ಮಂಕುತಿಮ್ಮ ||649||

ಪದ-ಅರ್ಥ: ಜಗವೆನ್ನ= ಜಗವು+ ಎನ್ನ, ಮುದ್ದಿಸದದೇಕೆಂದು= ಮುದ್ದಿಸದು+ ಅದೇಕೆ+ ಎಂದು, ಪೆತ್ತರ್ಗೆ= ಹೆತ್ತವರಿಗೆ, ಹುಟ್ಟಿದರ್ಗೆಲ್ಲಮಿರುತಿರೆ= ಹುಟ್ಟದರ್ಗೆ (ಹುಟ್ಟಿದವರಿಗೆ+ ಎಲ್ಲ+ ಇರುತಿರೆ), ರಗಳೆಗಾರಿಗೆ= ರಗಳೆಗೆ+ ಯಾರಿಗೆ.

ವಾಚ್ಯಾರ್ಥ: ಪ್ರಪಂಚ ನನ್ನನ್ನು ಏಕೆ ಹೊಗಳುವುದಿಲ್ಲವೆಂದು ಕೊರಗಬೇಡ. ನಿನ್ನನ್ನು ಹೆತ್ತವರಿಗೆ ನೀನು ಮಗು, ಆದರೆ ಲೋಕಕ್ಕೆ ನೀನೊಬ್ಬ ಸ್ಪರ್ಧಿ. ಹುಟ್ಟಿದ ಎಲ್ಲರಿಗೂ ಅವರವರ ಹೆಗಲಭಾರವಿರುವಾಗ, ನಿನ್ನ ರಗಳೆಯನ್ನು ಕೇಳಲು ಯಾರಿಗೆ ಬಿಡುವಿದೆ?

ವಿವರಣೆ: ಪ್ರಪಂಚದಲ್ಲಿ ಬದುಕಿರುವವರೆಗೆ ಏನಾದರೂ ಕೆಲಸ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬರಿಂದಲೂ ಚಿಕ್ಕ, ದೊಡ್ಡ, ಸಾಧನೆಗಳಾಗುತ್ತವೆ. ಆಗ ಬರುತ್ತದೆ ಅಹಂಕಾರ. ನಾನು ಇಷ್ಟೊಂದು ಕಾರ್ಯಗಳನ್ನು ಮಾಡಿದ್ದೇನೆ, ಆದರೆ ಯಾರಿಗೂ ಅದರೆ ಬೆಲೆ ಅರ್ಥವಾಗುವುದಿಲ್ಲ. ಆ ನನ್ನ ಸ್ನೇಹಿತ, ನನ್ನಷ್ಟು ಕೆಲಸಗಳನ್ನು ಮಾಡದಿದ್ದರೂ ಜನರಿಂದ, ಸರ್ಕಾರದಿಂದ ಅವನಿಗೆ ಏನೆಲ್ಲ ಮರ್ಯಾದೆ ದೊರೆಯುತ್ತದಲ್ಲ ಎಂಬ ಹೊಟ್ಟೆಯುರಿ ಪ್ರಾರಂಭವಾಗುತ್ತದೆ. ಆಗ ಸ್ನೇಹಿತನ ಬಗ್ಗೆ ಅಸೂಯೆ ಪ್ರಾರಂಭ. ಇನ್ನು ತನ್ನ ಬೆಳವಣಿಗೆಯ ಬಗ್ಗೆ ತಲೆಕೆಡಿಸಿಕೊಳ್ಳುವುದರ ಬದಲು ಆ ಸ್ನೇಹಿತನ ವೈಫಲ್ಯಗಳ ಅಪೇಕ್ಷೆ ಹೆಚ್ಚಾಗುತ್ತದೆ.

ಈ ಸ್ವಪ್ರೇಮ ಎಲ್ಲರಲ್ಲಿಯೂ ಇರುತ್ತದೆ. ಜನ ತನ್ನನ್ನು, ತಾನು ಮಾಡಿದ್ದನ್ನು ಮೆಚ್ಚಬೇಕು ಎನ್ನುವ ಅಪೇಕ್ಷೆ ಸಾಮಾನ್ಯವಾದದ್ದು. ಈ ಪ್ರವೃತ್ತಿಯ ಪ್ರಾರಂಭ ಬಾಲ್ಯದಲ್ಲಿಯೇ ಆಗುತ್ತದೆ. ಮಗು ಪುಟ್ಟದಾಗಿದ್ದಾಗ ತಂದೆ ತಾಯಿಯರು ಪ್ರೋತ್ಸಾಹಕ್ಕಾಗಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಈ ಪ್ರೇರಣಾದಾಯಿ ಮಾತುಗಳನ್ನು ಮಗು ಸತ್ಯವೆಂದೇ ಭಾವಿಸತೊಡಗುತ್ತದೆ, ತಾನು ಮಾಡುವುದು ನಿಜವಾಗಿಯೂ ಶ್ರೇಷ್ಠವಾದದ್ದು ಎಂಬ ನಂಬಿಕೆ ಬಲಿಯುತ್ತದೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ, ಮಗುವಿನ ಚಿಕ್ಕಪುಟ್ಟ ತಪ್ಪುಗಳೂ ಪಾಲಕರಿಗೆ ಆನಂದಾಯಕವಾಗಿರುತ್ತವೆ.

ಇತ್ತೀಚೆಗೆ ಒಂದು ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರಜ್ಞರು ಒಂದು ವಿಷಯವನ್ನು ತಿಳಿಯಪಡಿಸಿದ್ದಾರೆ. ಅದರ ಪ್ರಕಾರ ಮಕ್ಕಳ ಸ್ವ-ಪ್ರೇಮಕ್ಕೆ ಕಾರಣ ಪಾಲಕರ ಅತಿಯಾದ ಪ್ರೇಮ. ಈಗ ಒಂದೋ, ಎರಡೋ ಮಕ್ಕಳು. ತಂದೆ-ತಾಯಿಯರು ಅವರನ್ನು ದುರ್ಬೀನಿನ ಕೆಳಗೆ ಇಟ್ಟುಕೊಂಡು ಬೆಳೆಸುತ್ತಾರೆ. ಮಕ್ಕಳು ಕೇಳುವುದಕ್ಕೆ ಮೊದಲೇ ರಾಶಿ ರಾಶಿ ಸಾಮಾನುಗಳನ್ನು ತಂದು ತುಂಬುತ್ತಾರೆ. ಆಗ ಮಗುವಿಗೆ ಎಲ್ಲವೂ ದೊರೆಯುವುದು ಅನಾಯಾಸವಾಗಿ ಮತ್ತು ಯಾವ ಅಪೇಕ್ಷೆಯೂ ಇಲ್ಲದೆ. ಮುಂದೆ ಪ್ರಪಂಚದಲ್ಲಿ ಸ್ವರ್ಧೆಗೆ ಬಂದಾಗ ಮಗುವಿಗೆ ಆಘಾತ. ಇಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಅಲ್ಲಿ ಪ್ರತಿಸ್ಪರ್ಧಿಗಳಿದ್ದಾರೆ. ಆಗ ಪ್ರಾರಂಭವಾಗುತ್ತದೆ, ಕೊರಗು, ಗೊಣಗಾಟ.

ಅದಕ್ಕೇ ಕಗ್ಗ ಹೇಳುತ್ತದೆ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕಷ್ಟಗಳ, ಸಮಸ್ಯೆಗಳ ಹೊರೆ ಇದೆ. ಅದನ್ನು ಪರಿಹರಿಸುವುದರಲ್ಲಿಯೇ ಅವರು ಮಗ್ನರಾಗಿದ್ದಾರೆ. ಅಂಥದ್ದರಲ್ಲಿ ನಿನ್ನ ಗೊಣಗಾಟವನ್ನು ಯಾರು ಕೇಳುತ್ತಾರೆ? ಯಾರಿಗೆ ನಿನ್ನ ತಕರಾರುಗಳನ್ನು ಕೇಳಲು ವ್ಯವಧಾನವಿದೆ? ನಮಗೆ ಹೇಗೆ ಉಳಿದವರ ಕರ್ಮಗಳನ್ನು ಹೊತ್ತುಕೊಳ್ಳುವುದು ಸಾಧ್ಯವಿಲ್ಲವೋ ಹಾಗೆಯೇ ನಮ್ಮ ಕರ್ಮಗಳನ್ನು ನಾವೇ ಹೊರಬೇಕು. ಅದನ್ನು ಬಾಯಿಮುಚ್ಚಿ ಹೊರಬೇಕು-ಗೊಣಗಿ
ಪ್ರಯೋಜನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT