ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅವಶ್ಯಕತೆಗಳ ಶ್ರೇಣಿ

Last Updated 16 ಜೂನ್ 2022, 20:15 IST
ಅಕ್ಷರ ಗಾತ್ರ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕಿಂತ ಹೆಣ್ಣುಗಂಡೊಲವು||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ|
ತಿನ್ನುವುದದಾತ್ಮವನೆ – ಮಂಕುತಿಮ್ಮ||652||

ಪದ-ಅರ್ಥ: ಅನ್ನದಾತುರಕಿಂತ= ಅನ್ನದ+ ಆತುರಕಿಂತ, ದಾಹವೀಯೆಲ್ಲಕಂ= ದಾಹವು+ ಈ+ ಎಲ್ಲಕಂ (ಎಲ್ಲಕ್ಕಿಂತ), ತಿನ್ನುವುದದಾತ್ಮವನೆ= ತಿನ್ನುವುದು+ ಅದು+ ಆತ್ಮವನೆ

ವಾಚ್ಯಾರ್ಥ: ಅನ್ನದ ಅಪೇಕ್ಷೆಗಿಂತ, ಚಿನ್ನದ ಅಪೇಕ್ಷೆ ತೀಕ್ಷ್ಣ. ಚಿನ್ನದ ಆತುರಕ್ಕಿಂತ ಹೆಣ್ಣು ಗಂಡುಗಳ ಪ್ರೇಮ ಉತ್ಕಟವಾದದ್ದು. ಈ ಎಲ್ಲವುಗಳಿಗಿಂತ ಮನ್ನಣೆಯ ಅಪೇಕ್ಷೆ ಅತ್ಯಂತ ತೀವ್ರವಾದದ್ದು. ಅದು ಆತ್ಮವನ್ನೇ ನುಂಗಿ ಹಾಕುತ್ತದೆ.

ವಿವರಣೆ: ಅಬ್ರಹಾಂ ಮ್ಯಾಸ್ಲೋ ಎಂಬ ಸಮಾಜವಿಜ್ಞಾನಿ ಅನೇಕ ವರ್ಷಗಳ ಸಂಶೋಧನೆಯ ನಂತರ ಮನುಷ್ಯರಅವಶ್ಯಕತೆಗಳಶ್ರೇಣಿಯೊಂದನ್ನು ವಿವರಿಸಿ ಪ್ರಖ್ಯಾತನಾದ. ಅದರಂತೆ, ಅವಶ್ಯಕತೆಗಳು ಐದು ಹಂತಗಳಲ್ಲಿರುತ್ತವೆ. ಅದಲ್ಲದೆ, ಮೊದಲನೆಯ ಶ್ರೇಣಿಯ ತೃಪ್ತಿಯಾದ ಮೇಲೆ ಮುಂದಿನ ಶ್ರೇಣಿಯ ಅವಶ್ಯಕತೆ ತೋರುತ್ತದೆ. ತೀರ ಕೆಳಮಟ್ಟದ ಮೆಟ್ಟಿಲು ದೈಹಿಕ ತೃಪ್ತಿ. ಮನುಷ್ಯನಿಗೆ ಮೊದಲು ಅನ್ನ, ಬಟ್ಟೆ, ವಸತಿ ಬೇಕು. ಉಪವಾಸ ಒದ್ದಾಡುತ್ತಿರುವವನು ಅಧಿಕಾರ, ಅಂತಸ್ತುಗಳ ಚಿಂತೆ ಮಾಡಲಾರ. ಮೊದಲು ಹೊಟ್ಟೆ ತುಂಬಬೇಕು, ಮಾನಮುಚ್ಚಬೇಕು. ಒಂದು ಸಲ ಭೌತಿಕ ಅಗತ್ಯಗಳು ಪೂರೈಕೆಯಾದವೋ, ಮುಂದಿನಶ್ರೇಣಿಬರುತ್ತದೆ. ಹೊಟ್ಟೆ ತುಂಬಿಸಲು ಕೆಲಸ ದೊರೆತ ಮೇಲೆ ಭದ್ರತೆಯ ಅವಶ್ಯಕತೆ. ಒಂದು ಮನೆ ಮಾಡಬೇಕು, ಒಂದಿಷ್ಟು ಚಿನ್ನವನ್ನು ಕೂಡಿಡಬೇಕು. ಕಷ್ಟಕಾಲದಲ್ಲಿ ಬೇಕಲ್ಲ?

ಅದೂ ಆಯಿತು ಎಂದಾಗ ಮನೆಯಲ್ಲಿ ಹೇಳುತ್ತಾರೆ ಒಂದು ಮದುವೆ ಮಾಡಿಕೋ. ಹೇಗಿದ್ದರೂ ಕೆಲಸವಾಗಿದೆ, ಮನೆಯೂ ಇದೆ. ಗಮನಿಸಿ, ಅನ್ನದ ಅಪೇಕ್ಷೆಯ ತೀವ್ರತೆ ಕಡಿಮೆ. ತುಂಬ ಹಸಿದು ಕಂಗಾಲಾದವನಿಗೆ ಊಟಕ್ಕೆ ಹಾಕಿದರೆ ಎಷ್ಟು ರೊಟ್ಟಿ ತಿಂದಾನು? ನಾಲ್ಕು, ಐದು? ಆಮೇಲೆ? ಸಾಕು, ಹೊಟ್ಟೆ ತುಂಬಿತು, ಇನ್ನು ತಿನ್ನುವುದಾಗುವುದಿಲ್ಲ ಎನ್ನುತ್ತಾನೆ. ಆದರೆ ಚಿನ್ನ ಎಷ್ಟಿದ್ದರೆ ಸಾಕು? ಹೊಟ್ಟೆ ತುಂಬಿದ ಹಾಗೆ ಅಪೇಕ್ಷೆಯ ತೂಬು ತುಂಬುವುದಿಲ್ಲ. ಮುಂದೆ ಗಂಡು-ಹೆಣ್ಣಿನ ಒಲವು ಅದಕ್ಕಿಂತ ತೀಕ್ಷ್ಣವಾದದ್ದು. ಅದು ದೈಹಿಕ ಸೆಳೆತ ಮಾತ್ರವಲ್ಲ. ಕಲ್ಪನೆ ಮಾಡಿ, ಅತ್ಯಂತ ಪ್ರಿಯಳಾದ ಹೆಂಡತಿಯ ಅಥವಾ ಪ್ರಿಯವಾದ ಗಂಡನ ಆರೋಗ್ಯ ಕುಸಿದುಹೋಗಿದೆ. ವಿಶೇಷ ಚಿಕಿತ್ಸೆಯಾಗಬೇಕು. ಆಗ ಯಾರೂ ಚಿನ್ನದ ಮುಖ ನೋಡುವುದಿಲ್ಲ, ಚಿನ್ನವನ್ನು ಮಾರಿಯಾದರೂ ಜೀವವನ್ನು ಉಳಿಸಿಕೊಳ್ಳೋಣ ಎಂದು ಒದ್ದಾಡುತ್ತಾರೆ. ಚಿನ್ನದ ಅಪೇಕ್ಷೆಗಿಂತ ಪ್ರೀತಿ ಹೆಚ್ಚು ತೀವ್ರವಾಗಿರುತ್ತದೆ.

ಇದಾದ ಮೇಲೆ ಬರುವುದು ನಾಲ್ಕನೆಯ ಹಂತ, ಅದು ಮನ್ನಣೆಯ ದಾಹದಶ್ರೇಣಿ. ಜಗತ್ತಿನಲ್ಲಿ ಮನ್ನಣೆಯನ್ನು ಪಡೆಯಲು ಜನ ಏನೆಲ್ಲ ಮಾಡುತ್ತಾರೆ. ಈ ಮನ್ನಣೆಯನ್ನು ಪಡೆಯುವ ಹುಚ್ಚು ಯಾರನ್ನೂ ಬಿಟ್ಟಿಲ್ಲ. ಜನ ತಮ್ಮನ್ನು ಎಲ್ಲೆಲ್ಲಿಯೂ ಗುರುತಿಸಬೇಕು, ಸನ್ಮಾನಿಸಬೇಕು ಎನ್ನುವ ಅಪೇಕ್ಷೆಯಿಂದ ಹಿಡಿದು ಹೇಗಾದರೂ ಮಾಡಿ ರಾಜ್ಯ, ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಳ್ಳುವ ಹಂಬಲ ಸೆಳೆಯುತ್ತದೆ. ರಾಜಕೀಯದಲ್ಲಿ ಮಂತ್ರಿ ಸ್ಥಾನಬೇಕು, ಅದು ಸಿಕ್ಕ ಮೇಲೆ ಮಹತ್ವದ ಖಾತೆ ಬೇಕು. ಅದೂ ದೊರೆತ ಮೇಲೆ ಉಪಮುಖ್ಯಮಂತ್ರಿ ಸ್ಥಾನ ಒಳ್ಳೆಯದಲ್ಲವೇ ಎನ್ನಿಸುತ್ತದೆ. ನಂತರ ಅದೂ ಸಣ್ಣದಾಗಿ ಕಂಡು ಮುಖ್ಯಮಂತ್ರಿ ಪದವಿಯನ್ನು ಪಡೆಯಲೇಬೇಕೆಂಬ ತುಡಿತ ಕಾಡುತ್ತದೆ. ಅದಕ್ಕೆ ಒಂದು ಸುಭಾಷಿತವಿದೆ.

ಘಟಂ ವಿಂದ್ಯಾತ್, ಪಟಂ ವಿಂದ್ಯಾತ್ ಕುರ್ಯಾದ್ಪಾಗಾರ್ಧಭ ಸ್ಪರಮ್|
ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ||

‘ಮಡಕೆಯನ್ನು ಒಡೆ, ಬಟ್ಟೆಯನ್ನು ಹರಿ ಅಥವಾ ಕತ್ತೆಯಂತೆ ಕಿರಿಚು. ಒಟ್ಟಿನಲ್ಲಿ ಯಾವುದೋ ವಿಧದಲ್ಲಿ ಪ್ರಸಿದ್ಧನಾಗು’

ಈ ಕೀರ್ತಿಶನಿ ಎಷ್ಟು ಪ್ರಬಲವಾದದ್ದೆಂದರೆ ಅತ್ಯಂತ ಮುಖ್ಯವಾದ ಆತ್ಮಪ್ರಜ್ಞೆಯನ್ನೇ ನುಂಗಿ ಹಾಕುತ್ತದೆ. ಒಂದು ವಿಷಯವನ್ನು ನಾವು ನೆನಪಿಡಬೇಕು. ಮ್ಯಾಸ್ಲೋ ಮಹಾಶಯ, ತನ್ನ ದೀರ್ಘ ಸಂಶೋಧನೆಯ ಫಲಶೃತಿಯಾದ ಪಂಚ ಶ್ರೇಣಿಯ ಅಗತ್ಯತೆಗಳ ಬಗ್ಗೆ ಹೇಳುವುದಕ್ಕಿಂತ ದಶಕಗಳ ಮೊದಲೇ ಡಿ.ವಿ.ಜಿ ಅದನ್ನು ಈ ನಾಲ್ಕೇ ಸಾಲುಗಳಲ್ಲಿ ಶಿಲ್ಪಿಸಿಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT