ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮನವ ಶೋಧಿಸಬೇಕು

Last Updated 12 ಜೂನ್ 2022, 20:30 IST
ಅಕ್ಷರ ಗಾತ್ರ

ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ |
ಕರಕರೆಯ ಬೇರುಗಳ, ಮನದ ಗಂಟುಗಳ ||
ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ |
ಉರಳಪ್ಪುದಾತ್ಮಕ್ಕೆ – ಮಂಕುತಿಮ್ಮ || 648 ||

ಪದ-ಅರ್ಥ: ತರಿದುಬಿಡು=ಕತ್ತರಿಸಿಬಿಡು, ತೊರೆದುಬಿಡು=ನೀಗಿ ಬಿಡು, ನೆನಹಿಂದ=ನೆನಪಿನಿಂದ, ಕರಕರೆಯ=ಮನಸ್ಸಿಗೆ ಮುಜುಗರವಾದ, ಉರಕೆ=ಎದೆಗೆ, ಪ್ರೀತಿಹಾರಮುಮೊರ್ಮೆ=ಪ್ರೀತಿ ಹಾರಮು (ಪ್ರೀತಿಯ ಹಾರವೂ)+ಒರ್ಮೆ(ಒಮ್ಮೆ), ಉರಳಪ್ಪುದಾತ್ಮಕ್ಕೆ=ಉರಳಪ್ಪುದು(ನೇಣಾಗುವುದು)+ಆತ್ಮಕ್ಕೆ

ವಾಚ್ಯಾರ್ಥ: ನಿನ್ನ ನೆನಪುಗಳಿಂದ, ಮನಸ್ಸಿನ ಗಂಟುಗಳನ್ನು, ಮುಜುಗರವನ್ನು ಮಾಡಿದ ವಿಷಯಗಳ ಬೇರುಗಳನ್ನು ಕತ್ತರಿಸಿ, ಕಳೆದುಬಿಡು, ಅಳಿಸಿಬಿಡು. ಯಾಕೆಂದರೆ ಎದೆಗೆ ಸೊಗಸು ತಂದ ಪ್ರೀತಿಯ ಹಾರ ಕೂಡ ಒಮ್ಮೆ ಆತ್ಮಕ್ಕೆ ಉರುಳಾಗಬಹುದು.

ವಿವರಣೆ: ಮನಸ್ಸಿನ ಹೊಯ್ದಾಟಗಳನ್ನು, ಬೋನಿನೊಳಗೆ ಹಾರಾಡುತ್ತಿರುವ, ಹುಚ್ಚುಹಿಡಿದ ಕೋತಿಗೆ ಹೋಲಿಸುತ್ತಾರೆ. ಅದಕ್ಕೆ ಹುಚ್ಚು ಮಾತ್ರ ಹಿಡಿದಿಲ್ಲ, ಅದು ಸುರೆಯನ್ನು ಕುಡಿದಿದೆ ಮತ್ತು ಅದಕ್ಕೆ ಚೇಳು ಕುಟುಕಿದೆ. ಮನಸ್ಸಿನ ಚಲನೆ ಅಂಥದ್ದು. ಧ್ಯಾನಮಾಡಲು ಪ್ರಯತ್ನಿಸಿದವರಿಗೆಲ್ಲ ಇದು ತಿಳಿದಿದೆ. ಮೇಲೆ ಏಳು ಎಂದು ಕೈಗೆ ಬುದ್ಧಿ ಹೇಳಿದರೆ ಅದು ಥಟ್ಟನೆ ಮೇಲೇಳುತ್ತದೆ. ಆದರೆ ಶಾಂತವಾಗು ಎಂದು ಮನಸ್ಸಿಗೆ ಹೇಳಿದರೆ? ಅದು ಮತ್ತಷ್ಟು ಹಾರಾಡಿ ಅಣಕಿಸುತ್ತದೆ.

ಒಂದು ಅತ್ಯಂತ ನುಣುಪಾದ ಕೇರಂ ಬೋರ್ಡನ್ನು ಕಲ್ಪಿಸಿಕೊಳ್ಳಿ. ಅದರ ಮೇಲೆ ಸಾಕಷ್ಟು ಜಾರುವ ಪುಡಿಯನ್ನು ಹಾಕಿದ್ದೀರಿ. ಹೊಡೆಯುವ ಬಿಲ್ಲೆಯನ್ನು ತಳ್ಳಿದರೆ ಅದು ಮೊದಲು ನೇರ ಹೋದೀತು. ನಂತರ ಬೋರ್ಡಿನ ಅಂಚಿಗೆ, ಬೇರೆ ಬಿಲ್ಲೆಗಳಿಗೆ ಪಟಪಟನೆ ಹೊಡೆದು, ಎಲ್ಲೆಲ್ಲಿಯೋ ಜಾರಿ ಹೋಗುತ್ತದೆ. ಜಾರುವ ಬಿಲ್ಲೆಯ ಬದಲು ಮಣ್ಣಿನ ಮುದ್ದೆ ಇದ್ದರೆ? ಅದು ಜಾರದೆ ಒಂದೆಡೆಗೆ ನಿಲ್ಲುತ್ತದೆ. ಹೀಗೆ ಮನಸ್ಸನ್ನು ಜಾರದಂತೆ
ನಿಲ್ಲಿಸುವುದನ್ನೇ ರಾಜಯೋಗದಲ್ಲಿ ಧಾರಣಾ ಎಂದು ಕರೆಯುತ್ತಾರೆ. ಅದು ಏಕಾಗ್ರತೆ,

ಕಠೋಪನಿಷತ್ ಹೇಳುತ್ತದೆ –

ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾಸಹ |
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹು: ಪರಮಾಂ ಗತಿಮ್ ||

(ಮನಸ್ಸು, ಇಂದ್ರಿಯ, ಬುದ್ಧಿ ಇನಿತೂ ಚಲಿಸದೆ ಶಾಂತಿಯನ್ನು ಪಡೆಯುವುದೇ ಪರಮಗತಿ ಎನ್ನುತ್ತಾರೆ). ಈ ಗತಿಯನ್ನು ಪಡೆಯಲು ಏನು ಮಾಡಬೇಕು ಎನ್ನುವುದನ್ನು ಈ ಕಗ್ಗ, ನಮಗರ್ಥ
ವಾಗುವ ಸುಲಭ ಕನ್ನಡದಲ್ಲಿ ತಿಳಿಸುತ್ತದೆ. ‘ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ”. ಆ ನೆನಪಿನಲ್ಲಿ ಸೇರಿಕೊಂಡ ಮುಜುಗರದ ಕ್ಷಣಗಳನ್ನು, ಮನಸ್ಸಿನ ಗಂಟುಗಳನ್ನು ತೆಗೆದುಹಾಕಬೇಕು. ಇದಕ್ಕೆ ಅಷ್ಟಾಂಗ ಯೋಗದ ಮಾರ್ಗಗಳು ಸಹಕಾರಿ. ಸೊಗಸಾದ ನೆನಪುಗಳೂ ಬೇಡ. ಯಾಕೆಂದರೆ ಸಂಭ್ರಮದಿಂದ ಎದೆಗೆ ಹಾಕಿಕೊಂಡ ಹಾರವೇ ಉರುಳಾಗಬಹುದು. ಅದನ್ನೇ ಬಸವಣ್ಣನವರು ಸುಂದರವಾಗಿ, ‘ಹೊಗಳಿ, ಹೊಗಳಿ ಎನ್ನ ಹೊನ್ನಶೂಲಕ್ಕೇರಿಸದಿರಯ್ಯಾ’ ಎಂದರು. ಪ್ರಿಯವಾಗುವ ಹೊಗಳಿಕೆಯೇ ಪ್ರಾಣ ತೆಗೆಯುವ ಶೂಲ - ಬಂಗಾರದ್ದಾಗಿದ್ದರೂ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT