ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಏನ ಬೇಡಲಿ?

Last Updated 21 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಸೃಷ್ಟಿಯದ್ಭುತಶಕ್ತಿಯುಳ್ಳೊವರ್ನಿರಲು ನ - |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ ? ||
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು ? |
ಕಷ್ಟ ನಮಗಿಹುದಷ್ಟೆ – ಮಂಕುತಿಮ್ಮ || 502 ||

ಪದ ಅರ್ಥ: ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು= ಸೃಷ್ಟಿಯ+ ಅದ್ಭುತಶಕ್ತಿ+ ಉಳ್ಳ+ ಓರ್ವನು+ ಇರಲು, ನೀಡುವುದವನಿಗರಿದೇಂ= ನೀಡುವುದು+ ಅವನಿಗೆ + ಅರಿದೇಂ (ತಿಳಿಯದೇ), ಇಷ್ಟವಾತನೊಳುದಿಸುವಂತೆ- ಇಷ್ಟವು+ ಆತನೊಳು+ ಉದಿಸುವಂತೆ, ಚೋದಿಪುದೆಂತು= ಚೋದಿಪುದು (ಪ್ರಚೋದಿಸುವುದು)+ ಎಂತು

ವಾಚ್ಯಾರ್ಥ: ಸೃಷ್ಟಿಯನ್ನು ನಿರ್ಮಿಸಿದ, ಅದ್ಭುತ ಶಕ್ತಿಯುಳ್ಳವನು ಒಬ್ಬನಿರಲು, ನಮ್ಮ ಆಪೇಕ್ಷೆಗಳನ್ನು ತಿಳಿದುಕೊಂಡು ಕೊಡುವುದು ಅವನಿಗೆ ತಿಳಿಯದೇನು? ನಮ್ಮ ಇಷ್ಟಗಳನ್ನು ಆತ ತಿಳಿದುಕೊಳ್ಳುವಂತೆ ಪ್ರಚೋದಿಸುವುದು ಹೇಗೆ? ಇದೇ ನಮಗೆ ಬಂದಿರುವ ಕಷ್ಟ.

ವಿವರಣೆ: ಸೃಷ್ಟಿಯೇ ಅದ್ಭುತ. ಈ ಅಪರಂಪಾರ ವಿಶ್ವವನ್ನು ಸೃಷ್ಟಿ ಮಾಡಿದವನು ಇನ್ನೆಷ್ಟು ಅದ್ಭುತ ಶಕ್ತಿಯುಳ್ಳವನಾಗಿರಬೇಕು? ಅವನು ಸರ್ವಾಂತರ್ಯಾಮಿಯೂ ಹೌದು, ಸರ್ವಶಕ್ತನೂ ಹೌದು. ಆದ್ದರಿಂದ ನಮಗೆ ಯಾವುದು ಬೇಕು, ಎಷ್ಟು ಬೇಕು ಎನ್ನುವುದು ಅವನಿಗೆ ತಿಳಿದಿರಬೇಕಲ್ಲವೆ? ಅವನೇನು ಸರ್ಕಾರಿ ಅಧಿಕಾರಿಯೇ, ಏನು ಬೇಕೆನ್ನುವುದನ್ನು ಅರ್ಜಿ ಹಾಕಿ ಕೇಳಿಕೊಳ್ಳಲು? ಅವನಿಗೆ ತಿಳಿದಿದ್ದರೆ ಯಾಕೆ ಅವನು ಬೇಡದೆ ಎಲ್ಲರಿಗೂ ಹಂಚುತ್ತಿಲ್ಲ? ಅಥವಾ ನಮಗೇ ಬೇಡಲು ಬರುವುದಿಲ್ಲವೊ? ಗೋಪಾಲದಾಸರು ಅದನ್ನೇ ಕೇಳುತ್ತಾರೆ.

‘ಏನ ಬೇಡಲಿ ನಿನ್ನ ಬಳಿಗೆ ಬಂದು? ನೀನಿತ್ತ ಸೌಭಾಗ್ಯ ನಿಬಿಡವಾಗಿರಲಾಗಿ’. ಈ ಕೀರ್ತನೆಯಲ್ಲಿ ಬೇಡಿ ವಿಫಲರಾದವರ ಪಟ್ಟಿಯನ್ನೇ ಕೊಡುತ್ತಾರೆ. ತಾಯಿಯನ್ನು ಬೇಡಿದರೆ ತಾಯಿ ಸುರುಚಿ ಧ್ರುವನಿಗೆ ಏನು ಕೊಟ್ಟಳು? ಅವನನ್ನು ಕಾಡಿಗಟ್ಟಿದಳು. ತಂದೆಯನ್ನು ಬೇಡಿದ ಪ್ರಲ್ಹಾದನಿಗೆ ತಂದೆಯಾದ ಹಿರಣ್ಯಕಶಿಪು ಎಷ್ಟು ಚಿತ್ರಹಿಂಸೆ ಕೊಟ್ಟ? ಸಹೋದರನನ್ನು ಬೇಡಿದರೆ ತಮ್ಮ ಸುಗ್ರೀವನೇ ಅಣ್ಣ ವಾಲಿಯ ವಧೆ ಮಾಡಿಸಲಿಲ್ಲವೆ? ಇದೊಂದು ಸಂದಿಗ್ಧ ಪರಿಸ್ಥಿತಿ. ಅವನು ನಾವು ಬೇಡಿದ್ದನ್ನು ಕೊಡುವುದಿಲ್ಲ, ನಮಗೆ ಬೇಡಲು ಗೊತ್ತಿಲ್ಲ. ಯಾಕೆಂದರೆ ಮನುಷ್ಯ ಬೇಡಿದ್ದನ್ನೆಲ್ಲ ದೇವರು ಕೊಟ್ಟರೆ ಅದು ಹಿತವೇ ಆದೀತು ಎನ್ನುವಂತಿಲ್ಲ. ಹಾಗಾದರೆ ನಮ್ಮ ಇಷ್ಟಗಳನ್ನು ಪೂರೈಸುವಂತೆ ಭಗವಂತನನ್ನು ಪ್ರಚೋದಿಸುವುದು ಹೇಗೆ? ಅಥವಾ ಬೇಡಿದರೆ ಏನು ಬೇಡಬೇಕು. ಇದೇ ನಮಗಿರುವ ಕಷ್ಟ. ಅದಕ್ಕೂ ಗೋಪಾಲದಾಸರು ಉತ್ತರ ನೀಡಿದ್ದಾರೆ, ತಮ್ಮ ಕೀರ್ತನೆಯ ಕೊನೆಯ ಸೊಲ್ಲಿನಲ್ಲಿ. ‘ಬೇಡುವೆನು ನಾ ನಿನ್ನ ಬೇಡತಕ್ಕುದ ದೇವ ನೀಡೆನೆಂಬುದು ನಿನ್ನ ಮನದಿಚ್ಛೆಯೈ ಮೂಡಲಾದ್ರೀಶ ಶ್ರೀ ಗೋಪಾಲವಿಠಲ ಬೇಡದಂತೆ ಪರರ ಮಾಡೆನ್ನ ದೊರೆಯೇ’

ಭಗವಂತ, ಬೇಡುವುದು ನನ್ನ ಕರ್ಮ, ಕೊಡುವುದು, ಬಿಡುವುದು ನಿನ್ನಿಚ್ಛೆ ಎಂದು ಹೇಳುತ್ತ, ಕೊನೆಗೊಂದು ಅತ್ಯಂತ ಮಾರ್ಮಿಕವಾದ ಮಾತನ್ನು ಹೇಳುತ್ತಾರೆ. ಭಗವಂತ, ಪರರನ್ನು ಬೇಡದಂತೆ, ಅವರ ಮುಂದೆ, ನಿನ್ನ ಮುಂದೆ, ಕೈ ಚಾಚದಂಥ ಬುದ್ಧಿ ಕೊಡು’ ಎಂದು ಹೇಳುತ್ತಾರೆ. ಬೇಡದಿರುವ ಮನಸ್ಸೇ ಭಗವಂತನನ್ನು ನೀಡುವಂತೆ ಪ್ರಚೋದಿಸೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT