ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನಾಸಕ್ತ ಯೋಗ

Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

ಶಿಶುಗಳವಲಕ್ಕಿ ಬೆಲ್ಲದ ಸಂಭ್ರಮವ ನೋಡಿ |
ಹಸಿವನೊಂದುವನೆ ಹಿರಿಯನು? ನಲಿಯದಿಹನೆ?||
ವಿಷಯಸಂಸಕ್ತ ಲೋಕವನ್ ಅನಾಸಕ್ತಿಯಿಂ |
ದೊಸೆದುನೋಳ್ಪನು ಜಾಣ – ಮಂಕುತಿಮ್ಮ ||679||

ಪದ-ಅರ್ಥ: ಶಿಶುಗಳವಲ್ಲಕ್ಕಿಬೆಲ್ಲದ=ಶಿಶುಗಳ+ಅವಲಕ್ಕಿ+ಬೆಲ್ಲದ, ಹಸಿವನೊಂದುವನೆ=ಹಸಿವನು+ಒಂದುವನೆ (ಹೊಂದುವನೆ), ವಿಷಯಸಂಸಕ್ತಲೋಕವನ್=ವಿಷಯ+ಸಂಸಕ್ತ(ಆಸಕ್ತಿ ಹೊಂದಿದ)+ಲೋಕವನ್ (ಲೋಕವನ್ನು), ಅನಾಸಕ್ತಿಯಿಂದೊಸೆದುನೋಳ್ಪನು=ಅನಾಸಕ್ತಿಯಿಂದ+ಒಸೆದು(ಬಗೆದು)+ನೋಳ್ಪನು(ನೋಡುವನು).
ವಾಚ್ಯಾರ್ಥ: ಮಕ್ಕಳು ಸಂಭ್ರಮದಿಂದ ತಿನ್ನುವ ಅವಲಕ್ಕಿ ಬೆಲ್ಲವನ್ನು ಕಂಡು ಹಿರಿಯನಾದವನು, ಹಸಿವಿನಿಂದ ಕಿತ್ತುಕೊಳ್ಳುತ್ತಾನೆಯೇ? ಸಂತೋಷಪಡುವುದಿಲ್ಲವೆ? ಹಾಗೆಯೇ ವಿಷಯ ಪ್ರಪಂಚದಲ್ಲಿ ಮಗ್ನವಾಗಿರುವ ಲೋಕವನ್ನು ಅನಾಸಕ್ತಿಯಿಂದ ತಿಳಿದು ನೋಡುವವನು ಜಾಣ.

ವಿವರಣೆ: ಡಿ.ವಿ.ಜಿ ಈ ಕಗ್ಗದಲ್ಲಿ ಒಂದು ಸುಂದರವಾದ ಚಿತ್ರವನ್ನು ಕಟ್ಟಿಕೊಡುತ್ತಾರೆ. ಮನೆಯಲ್ಲಿ ಅಜ್ಜ ಕುಳಿತಿದ್ದಾರೆ. ಮೊಮ್ಮಕ್ಕಳು ಮುಂದೆ ಆಟವಾಡುತ್ತ ನಲಿಯುತ್ತಿದ್ದಾರೆ. ಆಗ ತಾಯಿ, ಮಕ್ಕಳಿಗೆ ತುಂಬ ಇಷ್ಟವಾದ ಅವಲಕ್ಕಿ ಬೆಲ್ಲವನ್ನು ತಂದು ಕೊಡುತ್ತಾಳೆ. ಮಕ್ಕಳಿಗೆ ತುಂಬ ಸಂಭ್ರಮ. ಕುಣಿಯುತ್ತ, ಮಾತನಾಡುತ್ತ ಅದನ್ನು ಸಂತೋಷದಿಂದ ಮೆಲ್ಲುತ್ತಿದ್ದಾರೆ. ಆಗ ಅಜ್ಜ ಏನು ಮಾಡುತ್ತಾರೆ? ನನಗೂ ಹಸಿವೆಯಾಗಿದೆ ಎಂದು ಕೂಗಿ ಮಕ್ಕಳ ಕೈಯಲ್ಲಿದ್ದ ಅವಲಕ್ಕಿ ಬೆಲ್ಲವನ್ನು ಕಿತ್ತುಕೊಂಡು ತಿನ್ನುತ್ತಾರೆಯೇ? ಅಥವಾ ಛೇ ಅವಲಕ್ಕಿ ಬೆಲ್ಲವೇನು ಒಳ್ಳೆಯ ತಿಂಡಿಯೇ ಎಂದು ತಿರಸ್ಕಾರ ಮಾಡುತ್ತಾರೆಯೇ? ಸಾಮಾನ್ಯವಾಗಿ ಹಿರಿಯರು ಮಕ್ಕಳ ಸಂಭ್ರಮವನ್ನು ಕಂಡು ಸಂತೋಷಪಡುತ್ತಾರೆ. ಆ ತಿಂಡಿಗೆ ಆಸೆ ಪಡದೆ ಅನಾಸಕ್ತಿಯಿಂದ ಮಕ್ಕಳ ಸಂತೋಷವನ್ನು ನೋಡುತ್ತಾರೆ.

ಈ ಒಂದು ಪುಟ್ಟ ಪ್ರಸಂಗ ಅಧ್ಯಾತ್ಮಿಕ ಅನಾಸಕ್ತಿಯೋಗವನ್ನು ಸುಂದರವಾಗಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ. ಮಹಾತ್ಮ ಗಾಂಧೀಜಿ ‘ಅನಾಸಕ್ತಿ ಯೋಗ’ ಎಂಬ ಗ್ರಂಥವನ್ನು ಗುಜರಾತಿ ಭಾಷೆಯಲ್ಲಿ ರಚಿಸಿದ್ದರು. ಅದನ್ನು ಕನ್ನಡಕ್ಕೆ ಸಿದ್ಧವನಹಳ್ಳಿ ಕೃಷ್ಣಶರ್ಮರು ಅನುವಾದಿಸಿದ್ದಾರೆ. ಅನಾಸಕ್ತಿ ಬೇರೆ, ನಿರಾಸಕ್ತಿ ಬೇರೆ. ಗಾಂಧೀಜಿ ಅತ್ಯಂತ ಸರಳವಾಗಿ, “ನಿಷಿದ್ಧವಾದುದು ಫಲಾಸಕ್ತಿ, ವಿಹಿತವಾದದ್ದು ಅನಾಸಕ್ತಿ” ಎನ್ನುತ್ತಾರೆ. ಅನಾಸಕ್ತ ಯೋಗಿ ಪ್ರಪಂಚವನ್ನು ದೂಷಿಸುವುದಿಲ್ಲ, ತಿರಸ್ಕರಿಸುವುದಿಲ್ಲ. ಅವನು ಅದರಿಂದ ಫಲವನ್ನು ಅಪೇಕ್ಷಿಸುವುದಿಲ್ಲ. ಅಂಥ ಯೋಗಿಗೆ ತಾರ್ಕಿದ ಹಂಗಿಲ್ಲ. ಅವನು ಯಾವುದನ್ನೂ ಅಪೇಕ್ಷಿಸದಿದ್ದರೂ, ತನ್ನ ಕರ್ಮವನ್ನು ಯಥಾವತ್ತಾಗಿ ಮಾಡುತ್ತಾನೆ. ಪ್ರಪಂಚದ ಜನ ವಿಷಯಗಳಲ್ಲಿ ಆಸಕ್ತರಾದದ್ದನ್ನು ಕಂಡು ದೂಷಿಸುವದಿಲ್ಲ ಮತ್ತು ತಾನೂ ಆ ವಿಷಯಗಳಿಗೆ ಸಿಕ್ಕಿಕೊಳ್ಳುವುದಿಲ್ಲ. ಜಗತ್ತಿನ ಪ್ರಗತಿಯನ್ನು, ಸಾಧನೆಯನ್ನು, ಕಂಡುಬರುವ ಹೊಸದನ್ನು ಕಂಡು ಸಂತೋಷಪಡುತ್ತಾನೆ. ಆದರೆ ಅವನಲ್ಲಿ ಯಾವ ಅಪೇಕ್ಷೆಯೂ ಇಲ್ಲ.

ಮನೆಯಲ್ಲಿ ಹಿರಿಯ, ಮಕ್ಕಳ ಸಂಭ್ರಮವನ್ನು ಕಂಡು ಸಂತೋಷಿಸುವಂತೆ, ತಾನೂ ಆಸಕ್ತಿಯಿಂದ ಅವರ ಸಂತಸವನ್ನು ಕಿತ್ತುಕೊಳ್ಳದಂತೆ, ಪ್ರಪಂಚದ ಅನಾಸಕ್ತ ಯೋಗಿ, ವಿಷಯಗಳಲ್ಲಿ ಮಗ್ನವಾದ ಜನರನ್ನು ಕಂಡು, ತಾನೂ ಅವರಂತೆಯೇ ಆಗಬೇಕೆಂದು ಅಪೇಕ್ಷಿಸುವುದಿಲ್ಲ. ಅದರ ತಿರಸ್ಕಾರವನ್ನೂ ಮಾಡುವುದಿಲ್ಲ. ಯಾಕೆಂದರೆ ಅದೂ ಒಂದು ಬ್ರಹ್ಮದ ಲೀಲೆ ಎಂಬುದು ಅವನಿಗೆ ತಿಳಿದಿದೆ. ಅಂಥವನು ಜಾಣ, ಜ್ಞಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT