ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ವಿಶ್ವಮೂಲದ ದರ್ಶನ

Published 24 ಮೇ 2023, 1:02 IST
Last Updated 24 ಮೇ 2023, 1:02 IST
ಅಕ್ಷರ ಗಾತ್ರ


ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು |
ಶಾಶ್ವತಬ್ರಹ್ಮದುಚ್ಛಾ÷್ಪಸ ಘನಬಿಂದು ||
ಪ್ರಶ್ಪಸಿತದಲೆಗಳನೆ ಪಿಡಿದು ಗುರಿಯರಿತೀಜೆ |
ವಿಶ್ವಮೂಲಾಪ್ತಿಯಲ - ಮಂಕುತಿಮ್ಮ || 890 ||


ಪದ-ಅರ್ಥ: ನಶ್ವರಾಕೃತಿ=ನಶ್ವರ(ಶಾಶ್ವತವಲ್ಲದ)+ಆಕೃತಿ, ವಿಶ್ವವಾರ್ಧಿಯಿದು=ವಿಶ್ವ+ವಾರ್ಧಿ(ಸಮುದ್ರ) +ಇದು, ಶಾಶ್ವತಬ್ರಹ್ಮದುಚ್ಛಾ÷್ಪಸ=ಶಾಶ್ವತ+ಬ್ರಹ್ಮದ+ಉಚ್ಛಾ÷್ಪಸ(ಉಸಿರು),
ಪ್ರಶ್ಪಸಿತದಲೆಗಳನೆ+ ಪ್ರಶ್ಪಸಿತದ(ಉಸಿರಾಟದ)+ಅಲೆಗಳನೆ, ಪಿಡಿದು=ಹಿಡಿದು, ಗುರಿಯರಿತೀಜೆ=ಗುರಿಯರಿತು+ಈಜೆ, ವಿಶ್ವಮೂಲಾಪ್ತಿಯಲ=ವಿಶ್ವಮೂಲ+ಅಪ್ತಿ(ದರ್ಶನ,
ದೊರೆಯುವಿಕೆ)+ಅಲ.


ವಾಚ್ಯಾರ್ಥ: ಈ ವಿಶ್ವ ನಶ್ವರವಾದ ಆಕೃತಿ ಮತ್ತು ನಾಮಗಳ ಸಮುದ್ರ. ಇದು ಶಾಶ್ವತವಾದ ಬ್ರಹ್ಮದ ಉಚ್ಛಾಸ್ವದ ಘನವಾದ ಬಿಂದು. ಈ ಬಿಂದು ಸಾಗರದ ಅಲೆಗಳಲ್ಲಿ ಒಂದು. ಉಸಿರಾಟದ
ಅಲೆಗಳನ್ನು ಹಿಡಿದು, ಗುರಿಯನ್ನು ತಿಳಿದು ಈಜಿದರೆ ವಿಶ್ವದ ಮೂಲವಾದ ಪರಸತ್ವದ ದರ್ಶನವಾಗುತ್ತದೆ

.
ವಿವರಣೆ: ಇದೊಂದು ಅತ್ಯದ್ಭುತವಾದ ಕಲ್ಪನೆಯ ಚಿತ್ರಣ. ಈ ಪ್ರಪಂಚ ಒಂದು ವಿಶಾಲವಾದ ಸಮುದ್ರ. ಇದರಲ್ಲಿ ಇರುವುದು ಯಾವುವು? ಕೇವಲ ನಶ್ವರವಾದ ಆಕಾರ ಮತ್ತು ಹೆಸರುಗಳು. ಪ್ರಪಂಚದಲ್ಲಿ ಎಷ್ಟೊಂದು ಕೋಟಿ, ಕೋಟಿ ಜೀವಗಳು ಬಂದು ಹೋದವಲ್ಲ! ಅವು ಒಂದೂ ಉಳಿಯಲಿಲ್ಲ, ಉಳಿಯುವುದಿಲ್ಲ. ಅದೆಷ್ಟೇ ದೊಡ್ಡ ಸಾಧನೆ ಮಾಡಿದರೂ, ಅದೇನೆ ವಿಶೇಷತೆ ಇದ್ದರೂ ಯಾವ ಜೀವವೂ ಶಾಶ್ವತವಾಗಿ ಉಳಿಯಲಿಲ್ಲ. ಪ್ರತಿಯೊಂದು ಜೀವಕ್ಕೊಂದು ಹೆಸರು.

ಎಲ್ಲೋ ಕೆಲವೊಂದು ಹೆಸರುಗಳನ್ನು ಬಿಟ್ಟರೆ ಯಾವ ಹೆಸರೂ ಯಾರ ನೆನಪಿನಲ್ಲೂ ಇಲ್ಲ. ಅಂದರೆ ಈ ವಿಶ್ವವೆಂಬ ಸಮುದ್ರದಲ್ಲಿ ಯಾವ ಆಕಾರವೂ, ಯಾವ ಹೆಸರೂ ಶಾಶ್ವತವಲ್ಲ, ನಶ್ವರ.ಪ್ರಪಂಚವೆಂಬುದು ಸಮುದ್ರವೆಂದರೆ ಅದು ಹುಟ್ಟಿದ್ದು ಹೇಗೆ? ಅದು ಶಾಶ್ವತವಾದ ಬ್ರಹ್ಮದ ಉಚ್ಛಾಸ್ವದ ಒಂದು ಬಿಂದು ಘನವಾದದ್ದು. ಬ್ರಹ್ಮದ ಒಂದು ಉಸಿರಿನ ಬಿಂದು ಘನವಾದಾಗ ಈ ವಿಶ್ವದ ಸೃಷ್ಟಿ. ಇಂಥ ಸಮುದ್ರದ ಅಲೆಗಳೆಂದರೆ ಅಸಂಖ್ಯವಾದ ಜೀವಗಳು. ಬಿಂದುವಿಗೆ ಎಂದರೆ ಒಂದು ಜೀವಕ್ಕೆ, ತಾನು ಬಂದದ್ದು ಎಲ್ಲಿಂದ, ತನ್ನ ಮೂಲ ಯಾವುದು ಎಂಬುದರ ಕಲ್ಪನೆ ಇದೆಯೆ? ಬಹಳಷ್ಟು ಜೀವಗಳಿಗೆ ತಮಗೊಂದು ಶಾಶ್ವತವಾದ ಮೂಲವಿದೆ ಎನ್ನುವುದೇ ಹೊಳೆದಿಲ್ಲ.

ಹಾಗೆಯೇ ತಳಮಳಿಸುತ್ತ, ಹೊರಳುತ್ತ, ಆವಿಯಾಗಿ ಮರೆಯಾಗುವವರೆಗೆ ಇರುವುದೇ ಬದುಕಿನ ಗುರಿ ಎಂದು ಭಾವಿಸಿವೆ. ಆದರೆ ಯಾರೋ ಕೆಲವು ಸಾಧಕರು. ನಮಗೊಂದು ಮೂಲವಿರಬೇಕಲ್ಲ ಎಂದು ಚಿಂತಿಸಿ ಅದನ್ನು ಹುಡುಕಲು, ಪಡೆಯಲು ಪ್ರಯತ್ನಿಸುತ್ತಾರೆ. ಅದನ್ನು ಕಗ್ಗ ಹೇಳುತ್ತದೆ, ಪರಬ್ರಹ್ಮದ ಉಸಿರಾಟದ ಅಲೆಗಳಲ್ಲಿ ಒಂದು ಬಿಂದುವಾದ ಜೀವ, ತನಗೊಂದು ಮೂಲವಿದೆ ಎಂದು ನಿರ್ಧರಿಸಿಕೊಂಡು, ಆ ಗುರಿಯನ್ನು ಅರಿತು, ಏಕಮನಸ್ಸಿನಿಂದ ಗುರಿಯೆಡೆಗೆ ಈಜಿದಾಗ ಮಾತ್ರ ಅವರಿಗೆ ವಿಶ್ವಮೂಲದ ದರ್ಶನವಾಗುತ್ತದೆ. ಆಗ ಪರಮಶಾಂತಿ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT