ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಗುಣಸಾಗರ

Published 24 ಮೇ 2023, 23:44 IST
Last Updated 24 ಮೇ 2023, 23:44 IST
ಅಕ್ಷರ ಗಾತ್ರ

ನಿನ್ನ ಸಿಹಿಕಹಿಯೆಲ್ಲ ಕಡಲೊಳುಪ್ಪಾಗುವುದು |
ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ||
ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು |
ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ || 891 ||

ಪದ-ಅರ್ಥ:ಕಡಲೊಳುಪ್ಪಾಗುವುದು=ಕಡಲೊಳು+ಉಪ್ಪಾಗುವುದು, ಬ್ರಹ್ಮದೊಳಗಂತು=ಬ್ರಹ್ಮದೊಳಗೆ+ಅಂತು, ಚೆನ್ನಹುದು=ಚೆನ್ನಾಗಿರುವುದು.


ವಾಚ್ಯಾರ್ಥ: ಎಲ್ಲ ನೀರುಗಳು ಸಮುದ್ರವನ್ನು ಸೇರಿ ಉಪ್ಪಾಗುವಂತೆ, ನಿನ್ನ ಎಲ್ಲ ಗುಣಗಳು ಬ್ರಹ್ಮದೊಳಗೆ ಸೇರಿ ಒಂದಾಗುತ್ತವೆ. ಅದು ಪುಣ್ಯವೊ, ಪಾಪವೊ, ಅಹಿತವೊ, ಹಿತವೊ ಅದೆಲ್ಲವೂ ಬ್ರಹ್ಮನಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತವೆ.


ವಿವರಣೆ: ಒಂದು ಪೂರ್ವಿಕರ ಮಾತು ಹೀಗಿದೆ:

“ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರ: ಕೇಶವಂ ಪ್ರತಿಗಚ್ಛತಿ ||”

“ಬಾನಿನಿಂದ ಬೀಳುವ ಮಳೆಯ ನೀರು ಹರಿಯುವುದು ಕಡಲ ಕಡೆಗೆ, ಅಂತೆಯೇ ಯಾವ ದೇವರಿಗೆ ಮಣಿದರೂ ಅದು ಸೇರುವುದು ಕೇಶವನ ಕಡೆಗೇ”. ಆಕಾಶದಿಂದ ಬಿದ್ದ ಪ್ರತಿಯೊಂದು ನೀರ ಹನಿಯ ಗುರಿ ಸಾಗರವೇ. ಅದು ಸಾಗರವನ್ನು ಸೇರಿದಾಗಲೇ ಅದರ ಸಾರ್ಥಕ್ಯ. ಆಕಾಶದಿಂದ ಮಳೆಯಾಗಿ ಸುರಿದ ನೀರು ಶುದ್ಧವಾಗಿಯೇ ಇರುತ್ತದೆ. ಅದಕ್ಕೆ ಯಾವ ರುಚಿ, ಬಣ್ಣ, ವಾಸನೆ ಇಲ್ಲ. ಆದರೆ ನೆಲಕ್ಕೆ ಬಿದ್ದ ಮೇಲೆ ಅದು ನೆಲದಲ್ಲಿ ಇಂಗಿ, ಹರಿದು, ರುಚಿ, ಬಣ್ಣ, ವಾಸನೆಗಳನ್ನು ಪಡೆಯುತ್ತದೆ. ಆ ಗುಣ ನೀರು ಹರಿದು ಬಂದ ಮಣ್ಣಿನ, ಪರಿಸರದ ಕೊಡುಗೆ. ಕೆಲವು ಕಡೆಯ ನೀರು ತುಂಬ ಸಿಹಿ, ಮತ್ತೆ ಕೆಲವೆಡೆ ಬಾಯಿಗಿಡದಷ್ಟು ಕಹಿ. ಪ್ರಯಾಗದಲ್ಲಿ ಗಂಗೆ-ಯಮುನೆಯರ ಸಂಗಮವಿದೆ. ಎತ್ತರದಲ್ಲಿ ನಿಂತು ನೋಡಿದರೆ ಗಂಗೆಯ ನೀರಿನ ಬಿಳೀ ಬಣ್ಣ, ಯಮುನೆಯ ಕಪ್ಪು ಬಣ್ಣ ಮಿಳಿತವಾಗುವುದು ಸ್ಪಷ್ಟವಾಗಿ ಕಾಣುತ್ತದೆ. ಆ ಬಣ್ಣ, ನದಿಗಳು ಹರಿದು ಬಂದ ಮಣ್ಣಿನ ಸಾರದ ಬಣ್ಣ. ಆದರೆ ಎಲ್ಲ ನದಿಗಳು ತಮ್ಮ ಗಮ್ಯಸ್ಥಾನವಾದ ಸಮುದ್ರವನ್ನು ಸೇರಿದ ಮೇಲೆ ಏನಾಗುತ್ತದೆ?

ಅವುಗಳ ಬಣ್ಣ, ವಾಸನೆ, ರುಚಿಗಳೆಲ್ಲ ಮರೆಯಾಗಿ ಕೇವಲ ಸಾಗರದ ಉಪ್ಪಿನ ರುಚಿಯೊಂದೇ ಉಳಿಯುತ್ತದೆ. ಅದೇ ರೀತಿ ಪ್ರತಿಯೊಂದು ಜೀವಿಯೂ ಹುಟ್ಟಿದಾಗ ಪ್ರತಿಶತ ನೂರರಷ್ಟು ಶುದ್ಧವಾಗಿಯೇ ಇರುತ್ತದೆ. ಆದರೆ ಜೀವನ ಪ್ರವಾಹದಲ್ಲಿ ಸಾಗಿದಾಗ, ಅವರವರ ಕರ್ಮಕ್ಕೆ ಅನುಗುಣವಾಗಿ, ಆಸಕ್ತಿಗನುಗುಣವಾಗಿ, ಪರಿಸರಕ್ಕನುಗುಣವಾಗಿ, ಪಾಪವನ್ನೋ, ಪುಣ್ಯವನ್ನೋ ಗಳಿಸುತ್ತವೆ. ಅದಕ್ಕೆ ಪೂರಕವಾಗಿ ಹಿತವನ್ನೋ, ಅಹಿತವನ್ನೋ ಮಾಡುತ್ತವೆ. ಕೊನೆಗೆ ಜೀವಿಗಳು ಬ್ರಹ್ಮನೆಂಬ ಸಮುದ್ರದಲ್ಲಿ ಸೇರಿದಾಗ ತಮ್ಮೆಲ್ಲ ಅರ್ಜಿತ ಗುಣಗಳನ್ನು ಕಳೆದುಕೊಂಡು ಅಲ್ಲಿಯೇ ಮರೆಯಾಗುತ್ತವೆ. ಬ್ರಹ್ಮನು ಗುಣಾತೀತನೂ ಹೌದು, ಸರ್ವಗುಣಗಳ ಆಗರವೂ ಹೌದು. ನಮ್ಮೆಲ್ಲ ಗುಣಗಳು ಅವನನ್ನು ಸೇರುವುದು ಮಾತ್ರವಲ್ಲ, ಅವೆಲ್ಲ ಅಲ್ಲಿಯೇ ಇವೆ. ಅದನ್ನು ಕಗ್ಗ ಸುಂದರವಾಗಿ “ಚೆನ್ನಹುದು ಬೊಮ್ಮನಲಿ” ಎನ್ನುತ್ತದೆ. ಹಾಗೆಂದರೆ ಬ್ರಹ್ಮದಲ್ಲಿ ಪರಸ್ಪರ ವಿರೋಧವೆಂದು ತೋರುವ ಸರ್ವಗುಣಗಳು ಹೊಂದಾಣಿಕೆಯಿಂದ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT