ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ರಹಸ್ಯದ ಎರಡು ನೆಲೆಗಳು

Published 26 ಮೇ 2023, 0:35 IST
Last Updated 26 ಮೇ 2023, 0:35 IST
ಅಕ್ಷರ ಗಾತ್ರ


ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ |
ಒಳಗೆ, ಹೃತ್ಕೂಪದಾಳದಲಿ, ಮುಸಕಿನಲಿ ||
ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ |
ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ || 892 ||

ಪದ-ಅರ್ಥ: ವಿಶ್ವದಿನಾಚೆ=ವಿಶ್ವದಿನ್ (ವಿಶ್ವದಿಂದ)+ಆಚೆ, ಹೃತ್ಕೂಪದಾಳದಲಿ=ಹೃತ್ಕೂಪದ (ಹೃದಯವೆಂಬ ಬಾವಿಯ)+ಆಳದಲಿ, ನೆಲೆಗಳಿಂತೆರಡು=ನೆಲೆಗಳು+ಇಂತು+ಎರಡು, ರಹಸ್ಯಕವುಗಳುಲಿ=ರಹಸ್ಯಕ+ಅವುಗಳ+ಉಲಿ(ಧ್ವನಿ).


ವಾಚ್ಯಾರ್ಥ: ಹೊರಗೆ, ವಿಶ್ವದಿಂದ ಆಚೆಗೆ, ದೂರದಲ್ಲಿ, ಆಕಾಶದಾಚೆಯ ಒಂದು ಧ್ವನಿ. ಒಳಗೆ, ಹೃದಯದಾಳದಲ್ಲಿ, ಅಜ್ಞಾನದ ಮುಸುಕಿನಿಂದ ಒಂದು ಧ್ವನಿ. ಇವೆರಡು ಮೂಲ ರಹಸ್ಯದ ನೆಲೆಗಳು. ಅವುಗಳ ಧ್ವನಿ ನಿನ್ನಲ್ಲಿ ಕಲೆತರೆ, ನೀನು ಜ್ಞಾನಿ.


ವಿವರಣೆ: ಈ ಕಗ್ಗ ಮೂಲ ರಹಸ್ಯದ ಎರಡು ನೆಲೆಗಳನ್ನು ಗುರುತಿಸುತ್ತದೆ. ಮೂಲರಹಸ್ಯ ಪರಬ್ರಹ್ಮ ವಸ್ತು. ಅದು ಎರಡು ನೆಲೆಗಳಲ್ಲಿ ಕಾರ್ಯಮಾಡುತ್ತದೆ. ಒಂದು ವ್ಯಕ್ತ ಅಥವಾ ದೃಶ್ಯ ಇನ್ನೊಂದು ಅವ್ಯಕ್ತ ಅಥವಾ ಅದೃಶ್ಯ. ಪರಸತ್ವ ವ್ಯಕ್ತವಾಗುವುದು ಯಾವಾಗ? ಅದು ಜಗತ್ತಿನ ರೂಪದಲ್ಲಿ ಕಂಡಾಗ, ನಮ್ಮ ಇಂದ್ರಿಯಗಳಿಗೆ ಗೋಚರವಾದಾಗ. ಅದನ್ನೇ ನಾವು ಪೃಕೃತಿ ಎಂದು ಕರೆದೆವು. ಅದು ಪರಬ್ರಹ್ಮದ ವ್ಯಕ್ತರೂಪ. ಅದು ತುಂಬ ದೊಡ್ಡದು ಎಂದು ತೋರುತ್ತದಲ್ಲವೆ? ಆದರೆ ಶಾಸ್ತçಗಳು ಹೇಳುತ್ತವೆ, ವ್ಯಕ್ತ ಪ್ರಪಂಚ, ಅವ್ಯಕ್ತ ಪ್ರಪಂಚದ ಸಣ್ಣ ತುಂಡು. ಸಮುದ್ರದಲ್ಲಿ ಒಂದು ಮಂಜುಗಡ್ಡೆ ತೇಲಿದ ಹಾಗೆ. ಆಕಾಶದಲ್ಲೊಂದು ಬಲೂನ್ ಹಾರಿದ ಹಾಗೆ.

ಪುರುಷ ಸೂಕ್ತದ ಮಾತು ಹೀಗಿದೆ –
“ಪಾದೋಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾಮೃತಂದಿವಿ” ಹಾಗೆಂದರೆ ಸಮಗ್ರ ದೃಶ್ಯ ಪ್ರಪಂಚವೆಲ್ಲ ಒಂದು ಭಾಗವಾದರೆ ಅದರ ಮೂರು ಪಟ್ಟಿನಷ್ಟು ಅದೃಶ್ಯ ಪ್ರಪಂಚ ಹರಡಿಕೊಂಡಿದೆ. ದೃಶ್ಯ ಪ್ರಪಂಚವೇನೋ ನಮಗೆ ಕಾಣುತ್ತದೆ, ಅದನ್ನು ನಾವು ಅನುಭವಿಸುತ್ತೇವೆ. ಆದರೆ ಅದೃಶ್ಯ ಪ್ರಪಂಚವನ್ನು ಎಲ್ಲಿ ಹುಡುಕುವುದು? ಆ ವಿಷಯವನ್ನು ಕಗ್ಗ ಹೇಳುತ್ತದೆ. ನಮ್ಮ ಹೊರಗೆ, ವಿಶ್ವದ ಎಲ್ಲೆಡೆಯಲ್ಲಿ, ಆಗಸದಾಚೆ ಇರುವ ಸೂರ್ಯಮಂಡಲ, ಚಂದ್ರಮಂಡಲಗಳು, ನೀಹಾರಿಕೆಗಳು, ದೂರದ ನಕ್ಷತ್ರಪುಂಜಗಳು ಇವೆಲ್ಲ ದೃಶ್ಯ ಅಥವಾ ವ್ಯಕ್ತರೂಪಗಳು. ಅವ್ಯಕ್ತ ಪ್ರಪಂಚ ನಮ್ಮೊಳಗಿದೆ, ಹೃದಯದಾಳದಲ್ಲಿ ನೆಲೆಯಾಗಿದೆ. ಹೊರಗಿನ ಪ್ರಪಂಚದ ಅರಿವಿಗೆ ಬಾಹ್ಯದೃಷ್ಟಿ ಬೇಕಾದರೆ, ಆಂತರಿಕ ಪ್ರಪಂಚದ
ತಿಳಿವಳಿಕೆಗೆ ಅಂತರ್‌ದೃಷ್ಟಿ ಬೇಕು. ಇವೆರಡೂ ಪರಬ್ರಹ್ಮದ ಎರಡು ನೆಲೆಗಳು. ಅದಕ್ಕೇ ಪರಬ್ರಹ್ಮವನ್ನು “ವ್ಯಕ್ತಾವ್ಯಕ್ತ ಸ್ವರೂಪಾಯ” ಎಂದು ವರ್ಣಿಸುತ್ತಾರೆ. ಹಾಗೆಂದರೇನಾಯಿತು? ಪರಬ್ರಹ್ಮವಸ್ತು ಒಳಗೆ-ಹೊರಗೆ ಎಲ್ಲೆಡೆಯಲ್ಲಿಯೂ ಇದೆ. ಅದು ಸರ್ವವ್ಯಾಪಿಯಾದದ್ದು. ಇವೆರಡನ್ನು, ಅವುಗಳ ಧ್ವನಿಗಳನ್ನು ತಿಳಿದ
ಮನುಷ್ಯನೇ ಜ್ಞಾನಿ. ಅವನಿಗೆ ಬಾಹ್ಯದಲ್ಲಿ ಮತ್ತು ಆಂತರ್ಯದಲ್ಲಿ ಒಂದೇ ಆದ ಪರವಸ್ತು ಗೋಚರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT