ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎಡೆಬಿಡದ ಚೈತನ್ಯದ ರಕ್ಷೆ

Last Updated 30 ಮಾರ್ಚ್ 2023, 4:38 IST
ಅಕ್ಷರ ಗಾತ್ರ

ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು |
ದಿವಸಾಬ್ದಯುಗ ಚಕ್ರ ತಿರು ತಿರುಗಿದಂತೆ ||
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ |
ಅವಿರತದ ಚೈತನ್ಯ – ಮಂಕುತಿಮ್ಮ || 852 ||

ಪದ-ಅರ್ಥ: ದಿವಸಾಬ್ದಯುಗ=ದಿವಸ+ಅಬ್ದ(ವರ್ಷ)+ಯುಗ, ಪ್ರವಿಹಿಪ್ಪುವದರಂತೆ=ಪ್ರವಹಿಪವು(ಹರಿಯುವವು)+ಅದರಂತೆ,ಅವಿರತದ=ಬಿಡುವಿಲ್ಲದ.

ವಾಚ್ಯಾರ್ಥ: ದಿವಸ, ವರ್ಷ, ಯುಗಗಳು ಚಕ್ರದಂತೆ ತಿರುಗಿದಾಗ ಹೊಸಹೊಸ ಪ್ರಶ್ನೆಗಳು, ಹೊಸಹೊ ಸಪರೀಕ್ಷೆಗಳು ಎದುರಾಗುತ್ತವೆ. ಅಂತೆಯೇ ವ್ಯಕ್ತಿಯ ಪೌರುಷ, ಹಿತದ ಪ್ರಜ್ಞೆ ಬದಲಾಗುತ್ತಿರುವುದು ಬಿಡುವಿಲ್ಲದೆ ಸ್ಫುರಿಸುವ ಚೈತನ್ಯದ ಗುಣ.

ವಿವರಣೆ: ಮಾನವ ಇತಿಹಾಸವನ್ನು ತಿರುಗಿ ನೋಡಿದರೆ ಪರಮಾದ್ಭುತವೊಂದು ಎದ್ದು ಕಾಣುತ್ತದೆ. ಅದೆಂದರೆ ಮಾನವನೆಂಬ ಜೀವಿ ಭೂಮಿಯ ಮೇಲೆ ಬಂದಾಗಿನಿಂದ ಇಲ್ಲಿಯವರೆಗೆ ಕಾಲದ ಪ್ರಭಾವದಿಂದ ಬದಲಾವಣೆಗಳು ನಡೆಯುತ್ತಲೇ ಇದ್ದರೂ, ಅವು ಮಾನವನ ಅಸ್ತಿತ್ವಕ್ಕೇ ತೊಂದರೆಯಾಗಬಹುದೆಂದು ಕಂಡರೂ, ಅನೇಕ ಮಹಾಪ್ರಳಯದಂತಹ ಸ್ಥಿತಿಗಳು ಬಂದೊದಗಿದರೂ, ಮನುಷ್ಯ ಉಳಿದೇ ಇದ್ದಾನೆ. ಅವನು ಮುಂದಕ್ಕೆ ಮುಖವನ್ನು ಆಸೆಯತ್ತ ಚಾಚಿದ್ದಾನೆ.

ಮೊದಲು ಹಸಿವು, ರಕ್ಷಣೆಯ ಭಯ, ನಂತರ ಪ್ರಾಣಿಗಳನ್ನು ವ್ಯವಸಾಯಕ್ಕಾಗಿ ಪಳಗಿಸಿಕೊಳ್ಳುವ ಶ್ರಮ, ರೋಗರುಜಿನಗಳಿಂದ, ಪ್ರಕೃತಿಯ ವಿಕೋಪಗಳಿಂದ ಪಾರಾಗುವ ಸಂಕಟ. ಇದಾದ ನಂತರ ಒಂದು ಸಾಮಾಜಿಕ ನೆಲೆ ನಿರ್ಮಾಣವಾದ ಮೇಲೆ ಅವನಲ್ಲಿ ಆಲೋಚನೆಯ ಕ್ಷೇತ್ರ ವಿಸ್ತಾರವಾಗತೊಡಗಿತು. ತಾನು ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸತೊಡಗಿದ. ಮನೆ, ವಸ್ತ್ರ, ವಾಹನಗಳು ಬಂದವು. ಅದರೊಂದಿಗೇ ವಿಶೇಷವಾದ, ಆಸೆ, ದುರಾಸೆಗಳು ಹುಟ್ಟಿಕೊಂಡವು.

ಹೀಗೆ ಮನುಷ್ಯ ಅನ್ನಮಯಕೋಶದಿಂದ ಬೆಳೆಯುತ್ತ ಪ್ರಾಣಮಯ ಕೋಶ, ಮನೋಮಯ ಕೋಶಗಳನ್ನು ದಾಟಿ ವಿಜ್ಞಾನಮಯ ಕೋಶವನ್ನು ಪ್ರವೇಶಿಸುವವರೆಗೆ ಅವನು ಎದುರಿಸಿದ ಸಮಸ್ಯೆಗಳು, ಪರೀಕ್ಷೆಗಳು ಹಲವಾರು. ಹೆಜ್ಜೆಹೆಜ್ಜೆಗೆ, ಪ್ರತಿಯೊಂದು ಹಂತದಲ್ಲೂ ಅವನನ್ನು ಇವು ಹಿಂಡಿ ಎಳೆದವು. ಕೆಲವರು ಮಾತ್ರ ಕೊನೆಯ ಸಚ್ಚಿದಾನಂದಕೋಶವನ್ನು ತಲುಪಿದರು. ಹೀಗೆ ಪ. ದಿನ, ವರ್ಷ, ಯುಗಗಳು ಉರುಳಿದಂತೆ ಮನುಷ್ಯ ಎದುರಿಸಿದ ಪ್ರಶ್ನೆಗಳು, ಸಮಸ್ಯೆಗಳು ಅನೇಕ ಮತ್ತು ವಿಭಿನ್ನ, ಆದರೆ ಆಶ್ಚರ್ಯವೆಂದರೆ ಇವೆಲ್ಲ ಅಗ್ನಿಪರೀಕ್ಷೆಗಳ ನಂತರವೂ ಮನುಷ್ಯ ಎದೆಗುಂದಲಿಲ್ಲ, ಮಾನವ ಸರಪಳಿ ಕತ್ತರಿಸಿ ನಿರ್ನಾಮವಾಗಲಿಲ್ಲ, ಬದಲಾಗಿ ಹೆಚ್ಚು ಪ್ರಬಲವಾಗಿ, ಶಕ್ತಿಯುತವಾಗಿ ಬೆಳೆದು ನಿಂತಿತು. ಇದಕ್ಕೆ ಕಾರಣವನ್ನು ಕಗ್ಗ ನೀಡುತ್ತದೆ. ಕಣ್ಣಿಗೆ ಕಾಣದಂತೆ ಇರುವ ಬ್ರಹ್ಮಸತ್ವ ಸದಾಕಾಲ ಪ್ರವಹಿಸುತ್ತ ಮನುಷ್ಯನಲ್ಲಿ ಪೌರುಷ, ಹಿತಪ್ರಜ್ಞೆಯನ್ನು ಬೆಳೆಸುತ್ತಲೇ ಇದೆ. ಚೈತನ್ಯದ ಪ್ರವಾಹ ಯಾವಾಗಲೂ ತಡೆಯಿಲ್ಲದಂತೆ ಇರುವುದು. ಹೀಗಾಗಿ ಎಂತಹ ಸಮಸ್ಯೆ, ಪರೀಕ್ಷೆ ಬಂದರೂ ಈ ಚೈತನ್ಯ ಅದು ನಂದಿಹೋಗದಂತೆ ಕಾಪಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT