ಮಂಗಳವಾರ, ಜನವರಿ 21, 2020
26 °C

ವಿಶೇಷ ಔಷಧಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಕಾಶಿಯ ಹತ್ತಿರದ ನಗರದಲ್ಲಿ ಒಬ್ಬ ಗೃಹಸ್ಥನ ಮನೆಯಲ್ಲಿ ಹುಟ್ಟಿದ್ದ. ಅವನಿಗೆ ಸುಜಾತಕುಮಾರ ಎಂದು ಹೆಸರಿಟ್ಟರು. ಈತ ಬೆಳೆದು ದೊಡ್ಡವನಾಗಿ ಎಲ್ಲ ವಿದ್ಯೆಗಳನ್ನು ಪಡೆದುಕೊಂಡು ತುಂಬ ಜ್ಞಾನಿಯೆಂದು ಹೆಸರು ಪಡೆದಿದ್ದ.

ಹೀಗಿರುವಾಗ ಮನೆಯಲ್ಲಿ ಹಿರಿಯರಾಗಿದ್ದ, ತುಂಬ ವಯಸ್ಸಾಗಿದ್ದ ಅವನ ತಾತ ತೀರಿಹೋದರು. ಬೋಧಿಸತ್ವನ ತಂದೆಗೆ ಇದೊಂದು ದೊಡ್ಡ ಆಘಾತವಾಯಿತು. ತಂದೆಯನ್ನು ತುಂಬ ಹಚ್ಚಿಕೊಂಡಿದ್ದ ಅವರಿಗೆ ಆ ದುಃಖವನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ದುಃಖಿತನಾದ ತಂದೆ ತನ್ನ ತಂದೆಯ ಅಂತ್ಯಕ್ರಿಯೆಗಳನ್ನು ಮಾಡಿ ನಂತರ ಅವರ ಮೂಳೆಗಳನ್ನು ಆರಿಸಿ ತಂದು, ಮನೆಯ ಮುಂದೆ ಒಂದು ಮಣ್ಣಿನ ಸ್ತೂಪವನ್ನು ಕಟ್ಟಿ, ಅದರೊಳಗೆ ಆ ಮೂಳೆಗಳನ್ನು ತುಂಬಿದರು. ಇಡೀ ದಿನ ಹಗಲು, ರಾತ್ರಿ ಆ ಸ್ತೂಪದ ಮುಂದೆ ಕುಳಿತು ಎದೆ ಬಡಿದುಕೊಂಡು ಅಳುತ್ತಿದ್ದರು. ಕೆಲದಿನಗಳ ನಂತರ ಇದು ಕಡಿಮೆಯಾದೀತೆಂದು ಮನೆಯ ಜನರು ಕಾಯ್ದರು. ಅವರ ಪ್ರಲಾಪ ಕಡಿಮೆಯಾಗುವುದರ ಬದಲು ಹೆಚ್ಚೇ ಆಗತೊಡಗಿತು. ಅವರು ಊಟ, ಸ್ನಾನ, ಕೆಲಸಗಳನ್ನೆಲ್ಲ ಬಿಟ್ಟು ಅಳುವುದರಲ್ಲೇ ಇದ್ದರು.

ತಾತನ ಸಾವಿನ ನಂತರ ತಂದೆಗೆ ಆ ಸ್ಥಿತಿಯನ್ನು ಕಂಡು ತಾನೇ ಈ ಪರಿಸ್ಥಿತಿಯನ್ನು ಸರಿ ಮಾಡಬೇಕೆಂದುಕೊಂಡು ಬೋಧಿಸತ್ವ ಯೋಚಿಸಿದ. ಆಗ ನಗರದ ಹೊರಭಾಗದಲ್ಲಿ ರೈತನೊಬ್ಬನ ಎತ್ತು ಸತ್ತು ಹೋಗಿತ್ತು. ಅದನ್ನು ತಿಳಿದು ಅಲ್ಲಿಗೆ ಹೋಗಿ ಸತ್ತ ಎತ್ತಿನ ಮುಂದೆ ಹಸಿರು ಹುಲ್ಲನ್ನು ಹಾಕಿ, ಒಂದು ಪಾತ್ರೆಯಲ್ಲಿ ಶುದ್ಧ ನೀರನ್ನಿಟ್ಟು, ದಯವಿಟ್ಟು ಹುಲ್ಲು ತಿನ್ನು, ನೀರು ಕುಡಿ ಎಂದು ಬೇಡತೊಡಗಿದ. ಜನರೆಲ್ಲ ಬಂದು, ಸತ್ತ ಎತ್ತು ಹೇಗೆ ಹುಲ್ಲನ್ನು ತಿಂದೀತು? ಎಂದು ಕೇಳಿದರೆ ಅವರ ಮಾತುಗಳನ್ನೇ ಕಿವಿಗೆ ಹಾಕಿಕೊಳ್ಳದೆ ತನ್ನ ಪ್ರಲಾಪವನ್ನು ಮುಂದುವರಿಸಿದ. ಆಗ ಜನರು ಅವನ ತಂದೆಯ ಬಳಿಗೆ ಹೋಗಿ, ನಿಮ್ಮ ಮಗ ಸುಜಾತಕುಮಾರನಿಗೆ ಮತಿಭ್ರಮಣೆಯಾಗಿದೆ. ಸತ್ತ ಎತ್ತಿಗೆ ಹುಲ್ಲು ತಿನ್ನು ಎಂದು ಬೇಡಿಕೊಳ್ಳುತ್ತಾನೆ. ಯಾರ ಮಾತನ್ನು ಕೇಳುತ್ತಿಲ್ಲ ಎಂದು ತಿಳಿಸಿದರು.

ಆಗ ತಂದೆ ಬಂದು ಸುಜಾತಕುಮಾರನನ್ನು ಕಂಡು ದುಃಖದಿಂದ, ‘ಮಗೂ, ನಿನಗೆ ಆ ಎತ್ತಿನ ಬಗ್ಗೆ ತುಂಬ ಪ್ರೀತಿ ಇದೆ ಎನ್ನುವುದು ತಿಳಿಯಿತು. ಆ ಪ್ರೀತಿಯೇನೋ ಸರಿಯೆ. ಆದರೆ ಎತ್ತು ಸತ್ತು ಹೋಗಿದೆ. ಅದು ಹೇಗೆ ಹುಲ್ಲು ತಿಂದೀತು? ನೀನು ಜ್ಞಾನಿ, ಆದರೆ ಏಕೆ ಮೂಢರ ಹಾಗೆ ಸತ್ತ ಎತ್ತಿಗೆ ಆಹಾರ, ನೀರು ಕೊಡುತ್ತೀಯಾ?’ ಎಂದು ಕೇಳಿದರು. ಸುಜಾತಕುಮಾರ ಹೇಳಿದ, ಅಪ್ಪಾ, ಈ ಎತ್ತು ಸತ್ತಿರಬಹುದು. ಆದರೆ ಅದರ ಕೈಕಾಲುಗಳು ಇನ್ನೂ ಹಾಗೆಯೇ ಇವೆ. ದೇಹವೂ ಹಾಗೆಯೇ ಇದೆ. ಅದು ಆಹಾರ ಸೇವಿಸಿ ಶಕ್ತಿ ಪಡೆದು ಮತ್ತೆ ಏಳಬಹುದು ಎಂದುಕೊಂಡಿದ್ದೇನೆ. ಆದರೆ ತಾತನ ದೇಹವೂ ಇಲ್ಲ, ಮೂಳೆಗಳೆಲ್ಲ ಸ್ತೂಪ ಸೇರಿವೆ. ಹಾಗೆ ಇನ್ನೆಂದಿಗೂ ಬರದ ತಾತನಿಗೆ ನೀನು ಅಳುತ್ತಿದ್ದರೆ ನಾನು ಎತ್ತಿಗೋಸ್ಕರ ಅಳುವುದು ಹೇಗೆ ತಪ್ಪು?. ತಂದೆಗೆ ತಪ್ಪಿನ ಅರಿವಾಗಿ ಪಿತೃ ಶೋಕವನ್ನು ಕಳೆದುಕೊಂಡು ಕಾರ್ಯತತ್ಪರರಾದರು.

ಒಂದು ವಿಕ್ಷಿಪ್ತ ನಡತೆಗೆ ಮತ್ತೊಂದು ವಿಕ್ಷಿಪ್ತ ನಡೆಯೇ ಔಷಧಿ. 

ಪ್ರತಿಕ್ರಿಯಿಸಿ (+)