ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅಂಗಾಂಗಗಳಲ್ಲಿ ಹಸಿವು

Last Updated 16 ಏಪ್ರಿಲ್ 2020, 1:42 IST
ಅಕ್ಷರ ಗಾತ್ರ

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |
ಕಾಣಿಸುವರನ್ನವನು ? ಹಸಿವವರ ಗುರುವು ||
ಮಾನವನುಮಂತುದರಶಿಷ್ಯನವನಾ ರಸನೆ |
ನಾನಾವಯವಗಳಲಿ - ಮಂಕುತಿಮ್ಮ || 278 ||

ಪದ-ಅರ್ಥ: ಕಾಣಿಸುವರನ್ನವನು=ಕಾಣಿಸುವರು (ನೀಡುವರು)+ಅನ್ನವನು, ಮಾನವನುಮಂತುದರಶಿಷ್ಯನವನಾ=ಮಾನವನು+ಅಂತು(ಅಂತೆಯೇ)+ಉದರಶಿಷ್ಯ(ಹೊಟ್ಟೆಯ ಶಿಷ್ಯ)+ಅವನ+ಆ, ರಸನೆ=ನಾಲಗೆ, ನಾನಾವಯವಗಳಲಿ=ನಾನಾ+ಅವಯವಗಳಲಿ

ವಾಚ್ಯಾರ್ಥ: ಆನೆಗೆ, ಇರುವೆಗೆ, ಕಾಗೆಗೆ, ಕಪ್ಪೆಗೆ ಯಾರು ಆಹಾರ ನೀಡುತ್ತಾರೆ? ಹಸಿವೇ ಅವರ ಗುರು. ಅಂತೆಯೇ ಮಾನವನೂ ತನ್ನ ಹೊಟ್ಟೆಯ ಶಿಷ್ಯನೆ. ನಾಲಿಗೆ ಅವನ ಎಲ್ಲ ಅವಯವಗಳಲ್ಲಿದೆ.

ವಿವರಣೆ: ಕನಕದಾಸರು ಮೈದುಂಬಿ ಹಾಡಿದರು, ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’, ಬೆಟ್ಟದ ತುದಿಯಲ್ಲಿದ್ದ ವೃಕ್ಷಕ್ಕೆ, ಕಲ್ಲೊಳಗೆ ಹುಟ್ಟಿದ ಕಪ್ಪೆಗೆ, ಸಕಲ ಜೀವರಾಶಿಗೆ ಭಗವಂತ ಆಹಾರವನ್ನು ಇಟ್ಟೇ ತೀರುತ್ತಾನೆ, ಅದರ ಬಗ್ಗೆ ಸಂಶಯ ಬೇಡ ಎಂದರವರು. ಅವರದ್ದು ಭಕ್ತದೃಷ್ಟಿ. ಆದ್ದರಿಂದ ಭಗವಂತನೇ ಎಲ್ಲ ಅವಶ್ಯಕತೆಗಳನ್ನು ಪೂರೈಸುವವನು. ಡಿ.ವಿ.ಜಿ ಹೇಳುತ್ತಾರೆ, ಭಗವಂತ ಕೊಡಬಹುದೇನೋ ಆದರೆ ಅವನು ನೇರವಾಗಿ ಬಂದು ಕೊಡುವುದಿಲ್ಲವಲ್ಲ! ಪ್ರಾಣಿಗಳ ಹೊಟ್ಟೆಯಲ್ಲಿಯ ಹಸಿವೆಯೇ ಅವರಿಗೆ ಗುರುವಾಗಿ ಅನ್ನದ ದಾರಿ ತೋರುತ್ತದೆ.

ದಕ್ಷಿಣ ಕೊರಿಯದ ಸಿಯೋಲ್‌ನಲ್ಲಿ ಒಬ್ಬ ಪುಟ್ಟ ಹುಡುಗನಿದ್ದ. ಅವನಿಗೆ ತಂದೆಯಿಲ್ಲ. ತಾಯಿ ಎಲ್ಲೆಲ್ಲೋ ಕೆಲಸ ಮಾಡಿ ತನ್ನ ಮಗ ಹಾಗೂ ಮಗಳ ಹೊಟ್ಟೆ ತುಂಬಿಸಬೇಕು. ಎಷ್ಟೋ ಬಾರಿ ಹೊಟ್ಟೆ ತುಂಬದೆ ಹಸಿವಿನಿಂದಲೇ ಮಲಗಬೇಕಿತ್ತು. ಆ ಹುಡುಗ ಅಮ್ಮನ ಒದ್ದಾಟ, ತಂಗಿಯ ಸಂಕಟ ಕಂಡ. ಅಂದೇ ತೀರ್ಮಾನ ಮಾಡಿದ, ಇನ್ನು ನನ್ನ ಪರಿವಾರ ಹಸಿವೆಯಿಂದ ನರಳಬಾರದು. ಪುಟ್ಟ ಹುಡುಗ ಮನೆ ಮನೆಗೆ ಅಲೆದು ಪೇಪರ್ ಹಂಚಿದ. ಅದರಲ್ಲಿ ಬೆಳವಣಿಗೆಯನ್ನು ಕಂಡ. ಸಣ್ಣ ಸಣ್ಣ ವ್ಯಾಪಾರ ಮಾಡಿದ. ಸದಾಕಾಲದ ಪರಿಶ್ರಮ ಮತ್ತು ಹಸಿವಿನ ಭಯ ಅವನಿಂದ ಪವಾಡಗಳನ್ನೇ ಮಾಡಿಸಿತು. ಆತ ತನ್ನ ನಲವತ್ತನೆಯ ವರ್ಷದಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾದ. ಕಿಮ್‌ವಾಂಗ್ ಚೂಂಗ್, ‘ದೇವೂ’ ಕಂಪನಿಯ ಚೇರ್‌ಮನ್ ಆದ. ಒಮ್ಮೆ ದೂರದರ್ಶನದ ಸಂದರ್ಶನದಲ್ಲಿ ಅವನನ್ನು ಕೇಳಿದರು, ‘ಸರ್ ಈ ನಿಮ್ಮ ಈ ಅತ್ಯದ್ಭುತ ಯಶಸ್ಸಿಗೆ ಏನು ಕಾರಣ-ನಿಮ್ಮ ಬುದ್ಧಿವಂತಿಕೆ, ಸದಾಕಾಲದ ಪರಿಶ್ರಮ, ಸಹೋದ್ಯೋಗಿಗಳ ಸಹಕಾರ ಅಥವಾ ಭಗವಂತನ ಕೃಪೆ?. ಆತ ಮುಗುಳ್ನಕ್ಕು ಹೇಳಿದ, ‘ಅವೆಲ್ಲವುಗಳೂ ಸಹಕಾರಿಯಾದವು. ಆದರೆ ನನ್ನ ಯಶಸ್ಸಿಗೆ ಮುಖ್ಯ ಕಾರಣ ನನಗಿದ್ದ ಹಸಿವಿನ ಭಯ. ನಾನು ಮತ್ತೆಂದಿಗೂ ನನ್ನ ಪರಿವಾರ ಆ ಹಸಿವಿನ ಕಂದರಕ್ಕೆ ಹೋಗುವುದನ್ನು ಬಯಸುವುದಿಲ್ಲ’.

ಈ ಕಗ್ಗ ಬರೀ ನಾಲಿಗೆಯ ಹಸಿವನ್ನು ಮಾತ್ರ ಹೇಳುವುದಿಲ್ಲ. ಮನುಷ್ಯನ ಹಸಿವು ಅವನ ಅಂಗಾಂಗಗಳಲ್ಲಿ ತುಂಬಿಕೊಂಡಿದೆ. ಕಣ್ಣಿಗೆ ಸುಂದರವಾದದ್ದನ್ನು ನೋಡುವ ಹಸಿವು, ಕಿವಿಗೆ ಇಂಪಾದದ್ದನ್ನು ಕೇಳುವ ಹಸಿವು, ಮೂಗಿಗೆ ಸುಗಂಧವನ್ನು ಮೂಸುವ ಹಸಿವು, ರುಚಿಯಾದದ್ದನ್ನು ತಿನ್ನುವ ಹಸಿವು ನಾಲಗೆಗೆ, ಹಿತವಾದದ್ದನ್ನು ಮುಟ್ಟುವ ಹಸಿವು ಸ್ಪರ್ಶಕ್ಕೆ. ಅದಕ್ಕೇ ಕಗ್ಗ, ‘ಅವನ ನಾಲಗೆ ನಾನಾವಯವಗಳಲಿ’ ಎಂದು ಸ್ಪಷ್ಟಪಡಿಸುತ್ತದೆ. ಹಸಿವನ್ನು ಹಿಂಗಿಸಿಕೊಳ್ಳುವುದು ಅವಶ್ಯ. ಆದರೆ ಆ ಹಸಿವಿಗೆ ಒಂದು ಮಿತಿಯನ್ನು ಹಾಕಿಕೊಳ್ಳುವುದೂ ಅಷ್ಟೇ ಅವಶ್ಯಕ. ಮಿತಿಯಿಲ್ಲದ ಹಸಿವು ಅನಾಹುತಕ್ಕೆ ಅಹ್ವಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT