ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮ ಸ್ಥಾನದ ನಾಶ | ಬುದ್ಧನ ಜಾತಕ ಕಥೆಗಳು

Last Updated 29 ಏಪ್ರಿಲ್ 2020, 4:47 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ, ನಗರದಲ್ಲಿ ಒಬ್ಬ ಅತ್ಯಂತ ಶ್ರೀಮಂತ ಬ್ರಾಹ್ಮಣನಿದ್ದ. ಅವನಿಗೆ ಎಂಬತ್ತು ಕೋಟಿ ಧನವಿತ್ತು. ಅವನಿಗೆ ಮಕ್ಕಳಿರಲಿಲ್ಲ. ಗಂಡ-ಹೆಂಡಿರಿಬ್ಬರೂ ಭಗವಂತನನ್ನು ಪ್ರಾರ್ಥಿಸಿದಾಗ ಭಗವಂತನ ಕರುಣೆಯಿಂದ ಬೋಧಿಸತ್ವ ಬ್ರಹ್ಮಲೋಕದಿಂದ ಇಳಿದು ಬ್ರಾಹ್ಮಣಿಯ ಗರ್ಭಕ್ಕೆ ಸೇರಿದ. ಹುಟ್ಟಿದ ಮಗುವಿಗೆ ಬೋಧಿಕುಮಾರ ಎಂದು ಹೆಸರಿಟ್ಟರು. ಹುಡುಗ ದೊಡ್ಡವನಾದ ಮೇಲೆ ತಕ್ಷಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು ಪಾರಂಗತನಾಗಿ ಮರಳಿದ.

ಅವನು ತರುಣನಾದಾಗ ಒಂದು ಉತ್ತಮ ಕುಲದ ಯುವತಿಯನ್ನು ತಂದು ಮದುವೆ ಮಾಡಿದರು. ಆಕೆಯೂ ದೇವಲೋಕದಿಂದ ಬಂದವಳೇ. ಅಪ್ಸರೆಯರನ್ನು ಮೀರಿಸುವಂಥ ಸೌಂದರ್ಯ ಆಕೆಯದಾಗಿತ್ತು. ಗಂಡ ಹೆಂಡತಿಯರಿಬ್ಬರಿಗೂ ವ್ಯವಹಾರಿಕ ಬದುಕಿನಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಒಬ್ಬರನ್ನೊಬ್ಬರು ಕಾಮದ ದೃಷ್ಟಿಯಿಂದ ನೋಡಲೇ ಇಲ್ಲ. ಜೊತೆಯಲ್ಲೇ ಇದ್ದರೂ ಇಬ್ಬರು ಸಾಧಕರು ಒಂದೆಡೆ ಇರುವಂತೆ ಬದುಕಿದರು. ಒಂದು ದಿನ ಗಂಡ, ‘ನಾನು ಈ ಎಲ್ಲವನ್ನು ಬಿಟ್ಟು ಪ್ರವ್ರಜ್ಯವನ್ನು ತೆಗೆದುಕೊಂಡು ಹಿಮಾಲಯಕ್ಕೆ ಹೋಗುತ್ತೇನೆ. ನೀನು ಇಲ್ಲಿಯೇ ಇದ್ದು ಸಂಪತ್ತನ್ನು ನೋಡಿಕೋ’ ಎಂದ. ಆಕೆ, ‘ನನಗೆ ಹಣದಲ್ಲಿ, ಭೋಗವಿಲಾಸಗಳಲ್ಲಿ ಯಾವ ಆಸಕ್ತಿಯೂ ಇಲ್ಲ. ನಾನೂ ಪ್ರವ್ರಜಿತಳಾಗಿ ಬಂದು ಬಿಡುತ್ತೇನೆ’ ಎಂದಳು. ಇಬ್ಬರೂ ಸೇರಿ ಎಲ್ಲ ಸಂಪತ್ತನ್ನು ದಾನ ಮಾಡಿ ಹಿಮಾಲಯವನ್ನು ಸೇರಿ ಮುಂದೆ ಹತ್ತು ವರ್ಷ ಪ್ರವ್ರಜ್ಯೆಯ ಆನಂದವನ್ನು ಪಡೆಯುತ್ತಿದ್ದರು.

ನಂತರ ದೇಶ ಸುತ್ತಲೆಂದು ತಿರುಗಾಡುತ್ತ ವಾರಾಣಸಿಗೆ ಬಂದು ರಾಜೋದ್ಯಾನದಲ್ಲಿ ತಂಗಿದರು. ಅಲ್ಲಿ ಕೂಡ ಇಬ್ಬರು ಸಾಧಕರಂತೆಯೇ ಸಂತೋಷವಾಗಿ ಉಳಿದಿದ್ದರು. ಒಂದು ದಿನ ರಾಜ ಉದ್ಯಾನವನಕ್ಕೆ ಬಂದವನು ಇವರಿಬ್ಬರನ್ನು ನೋಡಿದ. ಅಂತಹ ಅಪರೂಪದ ಸುಂದರಿ ಸನ್ಯಾಸಿಯ ವೇಷ ಧರಿಸಿ, ಮತ್ತೊಬ್ಬ ಸನ್ಯಾಸಿಯ ಜೊತೆಗಿದ್ದಾಳೆ. ಇಂಥ ಸುಂದರಿ ತನ್ನ ಅರಮನೆಯಲ್ಲಿರಬೇಕು ಎಂದು ತೀರ್ಮಾನಿಸಿ ತನ್ನ ಸೈನಿಕರಿಗೆ ಆಕೆಯನ್ನು ಹಿಡಿದು ತರುವಂತೆ ಆಜ್ಞೆ ಮಾಡಿದ. ಆಕೆ ಅಳುತ್ತಲೇ ಹೊರಟಳು. ಅವಳೊಂದಿಗಿದ್ದ ಋಷಿಯನ್ನು ಕೇಳಿದ, ‘ಆಕೆ ನಿಮಗೇನಾಗಬೇಕು? ನಿನ್ನ ಜೊತೆ ಯಾಕಿದ್ದಾಳೆ?’. ಮುನಿ ಹೇಳಿದ ‘ನಾವಿಬ್ಬರೂ ಸಾಧಕರು. ನಾನು ಗೃಹಸ್ಥಾಶ್ರಮದಲ್ಲಿದ್ದಾಗ ಆಕೆ ನನ್ನ ಜೊತೆಗಾತಿಯಾಗಿದ್ದಳು’. ರಾಜನಿಗೆ ಆಶ್ಚರ್ಯವಾಯಿತು, ‘ನಾನು ಆಕೆಯನ್ನು ಎಳೆದುಕೊಂಡು ಹೋಗುತ್ತಿದ್ದೇನೆ’ ಎಂದು ಹೇಳಿದ. ಮುನಿ, ‘ರಾಜಾ, ಆಕೆ ಒಬ್ಬ ಅಪರೂಪದ ಗುಣದ ಸಾಧಕಿ. ಆಕೆಗೆ ಯಾವ ಭೋಗಭಾಗ್ಯಗಳಲ್ಲಿ ಆಸಕ್ತಿ ಇಲ್ಲ. ಆಕೆ ಇಲ್ಲಿದ್ದರೂ ಅಷ್ಟೇ, ಅಲ್ಲಿ ಇದ್ದರೂ ಅಷ್ಟೇ’ ಎಂದು ನಿರ್ವಿಕಾರವಾಗಿ ಹೇಳಿದ.

ರಾಜ ಪರಿವ್ರಾಜಿಕೆಯನ್ನು ರಾಜಗೃಹದಲ್ಲಿ ಬಂಧಿಸಿಟ್ಟ, ಏನೇನೋ ಆಸೆ ತೋರಿಸಿದ, ರಾಣಿಯನ್ನಾಗಿ ಮಾಡುತ್ತೇನೆಂದ. ಆಕೆ ತಿರುಗಿ ಕೂಡ ನೋಡದೆ ತನ್ನ ಧ್ಯಾನದಲ್ಲೇ ಇದ್ದುಬಿಟ್ಟಳು. ರಾಜನಿಗೆ ಸಂಶಯ ಬಂದಿತು. ಈ ಸನ್ಯಾಸಿಗಳು ಮಾಯಾವಿಗಳೂ ಇರುತ್ತಾರೆ. ಇಬ್ಬರೂ ಸೇರಿ ಏನಾದರೂ ಹೊಂಚು ಹಾಕಿರಬಹುದೇ ಎಂದುಕೊಂಡು ಉದ್ಯಾನದಲ್ಲಿದ್ದ ಮುನಿಯ ಬಳಿಗೆ ಬಂದು, ‘ನಿನ್ನ ಜೊತೆಗಾತಿಯನ್ನು ಕರೆದೊಯ್ದಿದ್ದೇನೆ. ನಿನಗೆ ಕೋಪ ಬರುವುದಿಲ್ಲವೇ?’ ಎಂದು ಕೆದಕಿದ. ಆಗ ಮುನಿ ಸಮಾಧಾನದಿಂದ ಹೇಳಿದ, ‘ನನಗೆ ಕೋಪ ಹುಟ್ಟಿತ್ತು. ಆದರೆ ಅದನ್ನು ತಪದಿಂದ ಶಾಂತ ಮಾಡಿದೆ. ಯಾಕೆಂದರೆ ಕಟ್ಟಿಗೆಯ ಉಜ್ಜುವಿಕೆಯಿಂದ ಬೆಂಕಿ ಹುಟ್ಟುತ್ತದೆ. ಹುಟ್ಟಿದ ಬೆಂಕಿ ಮೊದಲು ಆ ಕಟ್ಟಿಗೆಯನ್ನೇ ಸುಟ್ಟು ಹಾಕುತ್ತದೆ. ಆ ಪವಿತ್ರ ಹೆಣ್ಣಿನ ಮನದ ಕ್ಲೇಶ ನಿನ್ನಅರಮನೆಯನ್ನು, ಮನೆತನವನ್ನು ಸುಟ್ಟು ಹಾಕುತ್ತದೆ’. ರಾಜ ಗಾಬರಿಯಾದ ಮತ್ತು ಪರಿವ್ರಾಜಿಕೆಯನ್ನು ತಂದು ಉದ್ಯಾನದಲ್ಲಿ ಬಿಟ್ಟ. ನಂತರ ಅವರಿಬ್ಬರೂ ಹಿಮಾಲಯಕ್ಕೆ ಹೊರಟು ಹೋದರು.

ಕೋಪ, ಅನ್ಯಾಯಗಳು ಎಲ್ಲಿ ಹುಟ್ಟುತ್ತವೋ, ಅವು ತಮ್ಮ ಜನ್ಮಸ್ಥಾನವನ್ನೇ ನಾಶಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT