ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸುರಾ ಪ್ರಭಾವ

Last Updated 12 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಸುರಾ ಎಂಬ ಕಾಡುಮನುಷ್ಯ ಕಾಡಿನಲ್ಲಿ ಸುತ್ತಾಡುತ್ತ ಬೃಹತ್ ಮರವೊಂದನ್ನು ಕಂಡ. ಮರದ ಕಾಂಡ ಹತ್ತು ಅಡಿ ಮೇಲಕ್ಕೆ ಮೂರು ಕಾಂಡವಾಗಿ ಹರಡಿತ್ತು. ಮೂರ ಕಾಂಡಗಳು ಸೇರುವ ಸ್ಥಳದಲ್ಲಿ ಒಂದು ದೊಡ್ಡ ಹಂಡೆಯಷ್ಟು ಗುಳಿ ಉಂಟಾಗಿತ್ತು. ಮಳೆ ಬಂದದ್ದರಿಂದ ಅದು ತುಂಬಿಕೊಂಡಿತ್ತು. ಸುತ್ತ ಹರಡಿಕೊಂಡಿದ್ದ ಹರೀಟಕ, ಮೆಣಸು, ನೆಲ್ಲಿಯ ಗಿಡಬಳ್ಳಿಗಳಿಂದ ಹಣ್ಣುಗಳೆಲ್ಲ ಅದರಲ್ಲಿ ಬಿದ್ದಿದ್ದವು. ಗಿಳಿಗಳು, ಹಕ್ಕಿಗಳು ಬೇರೆ ಬೇರೆ ಕಡೆಗಳಿಂದ ಧಾನ್ಯಗಳನ್ನು ತಿನ್ನುವಾಗ ಅವೂ ಉದುರಿ ನೀರಿನಲ್ಲಿ ಬೀಳುತ್ತಿದ್ದವು. ಮುಂದೆ ಬಿಸಿಲು ಬಿದ್ದಾಗ ಅವೆಲ್ಲ ಸೇರಿ ಹುಳಿಯಾಗಿ ನೀರು ಕೆಂಪು ಬಣ್ಣಕ್ಕೆತಿರುಗಿತು.

ಸುರಾ ಅಲ್ಲಿಗೆ ಬಂದಾಗ ಅನೇಕ ಹಕ್ಕಿಗಳು ಅಲ್ಲಿಗೆ ಬಂದು ಮರದ ಹೊಂಡದಲ್ಲಿದ್ದ ನೀರನ್ನು ಕುಡಿದು ಕೆಳಗೆ ದೊಪ್ಪನೇ ಬೀಳುತ್ತಿದ್ದು, ಒಂದು ತಾಸಿನ ನಂತರ ಮೇಲೆದ್ದು ಹರ್ಷದಿಂದ ಹಾರಿ ಹೋಗುತ್ತಿದ್ದುದನ್ನು ಆತ ಕಂಡ. ಆದ್ದರಿಂದ ಆ ನೀರು ವಿಷವಲ್ಲ, ಅಮಲೇರಿಸುವ ವಸ್ತು ಎಂದು ತಾನೂ ಕುಡಿದು, ಮತ್ತೇರಿ ಸಂಭ್ರಮಪಟ್ಟ. ಹತ್ತಿರದಲ್ಲಿ ತಪಸ್ಸು ಮಾಡುತ್ತಿದ್ದ ವರುಣನಿಗೂ ಇದರ ರುಚಿ ಹಚ್ಚಿಸಿದ. ಇಬ್ಬರೂ ಸೇರಿ ಮದಿರೆಯನ್ನು ಕುಡಿದು, ಮತ್ತೇರಿ ಕೆಳಗೆ ಬಿದ್ದ ಹಕ್ಕಿಗಳನ್ನು ಕೊಂದು, ಸುಟ್ಟು ಮಾಂಸ ತಿನ್ನುತ್ತ ಕೆಲದಿನ ಬದುಕಿದರು.

ಇದರಿಂದಲೇ ಹಣ ಮಾಡಬೇಕೆಂದು ಸುರಾ ಮತ್ತು ವರುಣರಿಬ್ಬರೂ ಅದನ್ನು ಮಡಕೆಗಳಲ್ಲಿ ತುಂಬಿಕೊಂಡು ವಾರಣಾಸಿಗೆ ಬಂದು ರಾಜನಿಗೆ ಕುಡಿಸಿದರು. ಅದರ ಹುಚ್ಚು ಆತನಿಗೆ ತಗುಲಿತು. ಆತ ಮತ್ತೆ ಮತ್ತೆ ಬೇಡಿದಾಗ ಮರದ ತೊಗಟೆಯನ್ನು ತಂದು ಅದರೊಂದಿಗೆ ಏನೇನೋ ವಸ್ತುಗಳನ್ನು ಕುದಿಸಿ ಸುರೆ ಮಾಡಿ ಮಾರಿದರು. ನಗರದ ಜನರೆಲ್ಲ ದುರ್ಗತಿಯನ್ನು ಪಡೆದರು. ಇದೇ ರೀತಿ ಇನ್ನೊಂದೆರಡು ರಾಜ್ಯಗಳನ್ನು ಹಾಳು ಮಾಡಿ ಸಾವತ್ತಿಗೆ ಬಂದರು. ಆಗ ಸರ್ವಮಿತ್ರನೆಂಬ ರಾಜ ಆಳುತ್ತಿದ್ದ. ಸುರಾ ಮತ್ತು ವರುಣರು ರಾಜನನ್ನು ಕಂಡು ಅವನಿಂದ ಸಕಲ ವಸ್ತುಗಳು ಮತ್ತು ಅಪಾರವಾದ ಹಣವನ್ನು ಪಡೆದು ಐದುನೂರು ಮಡಕೆಗಳಷ್ಟು ಸುರೆಯನ್ನು ಮಾಡಿದರು.

ರಾಜ, ಜನರೆಲ್ಲ ಸೇರಿ ಸುರೆ ಕುಡಿದು ಮೈಮರೆತರು. ಆಗ ಶಕ್ರ ಭೂಮಿಯಲ್ಲಿ ಹೇಗೆ ಧರ್ಮಪಾಲನೆಯಾಗುತ್ತಿದೆ ಎಂಬುದನ್ನು ನೋಡಲು ಬಂದ. ಇಡೀ ದೇಶ ಸುರೆಯಲ್ಲಿ ಹಾಳಾಗಿ ಹೋಗುತ್ತಿರುವುದನ್ನು ಕಂಡು, ತಾನೇ ಒಂದು ಮಡಕೆಯನ್ನು ಹಿಡಿದುಕೊಂಡು ರಾಜನ ಮುಂದೆ ಬಂದ. ಫಳಫಳನೆ ಹೊಳೆಯುತ್ತಿರುವ ದೇಹಕಾಂತಿಯ ಈ ವ್ಯಕ್ತಿಯನ್ನು ಕಂಡು ರಾಜ, ‘ನೀನು ಯಾರು?‘ ಎಂದು ಕೇಳಿದ. ತಾನು ಇಂದ್ರನೆಂದೂ ರಾಜನಿಗೊಂದು ವಿಶೇಷ ವಸ್ತುವನ್ನು ಕೊಡಲು ಬಂದಿರುವುದಾಗಿಯೂ ಹೇಳಿ ಮಡಕೆಯನ್ನು ಕೊಟ್ಟು ಹೇಳಿದ, ‘ನನ್ನ ಮಡಕೆಯಲ್ಲಿರುವುದೂ ಆ ಐದುನೂರು ಮಡಕೆಯಲ್ಲಿರುವ ವಸ್ತುವೇ. ನಿನ್ನನ್ನು, ನಿನ್ನ ದೇಶವನ್ನು ನಾಶಮಾಡಲು ಇದಕ್ಕಿಂತ ಒಳ್ಳೆಯ ವಸ್ತು ಮತ್ತಾವುದೂ ಇಲ್ಲ. ಯಾವುದನ್ನು ಕುಡಿದರೆ ತನ್ನ ಮನುಷ್ಯತ್ವವನ್ನೇ ಮರೆಯುತ್ತಾನೋ, ಸಂಪತ್ತನ್ನು ಕಳೆದುಕೊಂಡು ಕೊಳಚೆ ಗುಂಡಿಗಳಲ್ಲಿ ಮನುಷ್ಯ ಹೊರಳಾಡುವಂತೆ ಮಾಡುತ್ತದೋ, ರಾಜನನ್ನು ಮೂರ್ಖನಂತೆ ವರ್ತಿಸುವಂತೆ ಮಾಡುತ್ತದೋ ಅದೇ ಈ ವಸ್ತು‘. ರಾಜನ ಕಣ್ಣು ತೆರೆಯಿತು.

ಸುರಾ ಮತ್ತು ವರುಣರನ್ನು ಸಾಯುವ ತನಕ ಜೈಲಿನಲ್ಲಿ ಹಾಕಿ ತನ್ನ ದೇಶದಲ್ಲಿ ಸುರೆ ಇಲ್ಲದಂತೆ ಮಾಡಿದ. ದೇಶ ಸಂಪದ್ಭರಿತವಾಯಿತು, ಸುಖಶಾಂತಿಗಳಿಂದ ನೆಲೆಸಿತು.

ನಮ್ಮ ದೇಶವೂ ಹಾಗಾದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT