ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ರಕ್ಷಾ ಕವಚ

Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? |
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |
ಸಹನೆ ವಜ್ರದ ಕವಚ – ಮಂಕುತಿಮ್ಮ || 366 ||

ಪದ-ಅರ್ಥ: ಗ್ರಹಗತಿ=ಗ್ರಹಗಳ ಚಲನೆ, ವಿಹಿತವಾಗಿಹುದದರ=ವಿಹಿತವಾಗಿಹುದು(ಸರಿಯಾಗಿರುವುದು)+ಅದರ, ಮುಗಿಯದಾವ=ಮುಗಿಯದು+ಆವ, ದಶೆ=ಸ್ಥಿತಿ.

ವಾಚ್ಯಾರ್ಥ: ಗ್ರಹಗತಿ ಚೆನ್ನಾಗಿಲ್ಲವೆಂದು ಜೋಯಿಸ ಜಾತಕವನ್ನು ತಿದ್ದಬಹುದೆ? ಗ್ರಹಗಳ ಗತಿ ಸೃಷ್ಟಿವಿಧಿಯಂತೆ ನಡೆಯುತ್ತಿದೆ. ಯಾವ ಸ್ಥಿತಿ ಬಂದರೂ ಸಹಿಸದೆ ಮುಗಿವಿಲ್ಲ. ನಮಗೆ ವಜ್ರದ ಕವಚ ಸಹನೆಯೊಂದೆ.

ವಿವರಣೆ: ಬೀಚಿಯವರು ಒಂದು ಸುಂದರವಾದ ಘಟನೆಯನ್ನು ಹೇಳುತ್ತಿದ್ದರು. ಒಬ್ಬ ಮನುಷ್ಯ ಜೋಯಿಸರ ಕಡೆಗೆ ಹೋಗಿ ದಕ್ಷಿಣೆ ಇಟ್ಟು ಕೈ ಮುಗಿದು ಕುಳಿತ. ‘ಏನಪ್ಪಾ ನಿನ್ನ ತೊಂದರೆ?’ ಕೇಳಿದರು ಜೋಯಿಸರು. ‘ಯಾವುದು ಅಂತ ಹೇಳಲಿ ಸ್ವಾಮಿ? ಒಂದೇ ಎರಡೇ, ಬಾಳೆಲ್ಲ ಸಮಸ್ಯೆಯೇ. ಏಳು ವರ್ಷ ಆಯ್ತು ಸ್ವಾಮಿ, ಒಂದು ಕ್ಷಣ ನೆಮ್ಮದಿ ಇಲ್ಲ. ಈ ಗ್ರಹಗಳ ಕಾಟ ಇನ್ನೆಷ್ಟು ದಿನ ಇದೆಯೋ ನೋಡಿ ಹೇಳಿ’ ಎಂದ ಆತ. ಜೋಯಿಸರು ಅವನ ಜಾತಕವನ್ನು ನೋಡಿ ಕಣ್ಣುಮುಚ್ಚಿ, ಗುಣಾಕಾರ, ಭಾಗಾಕಾರ ಮಾಡಿ, ನಂತರ ನಿಧಾನವಾಗಿ ಕಣ್ಣು ತೆರೆದು ಅತ್ಯಂತ ಕರುಣೆಯಿಂದ ಅವನ ಮುಖವನ್ನು ದಿಟ್ಟಿಸಿ, ‘ಅಯ್ಯಾ, ಏನು ಹೇಳಲಿ, ನಿನಗೆ ಇನ್ನೂ ಐದು ವರ್ಷ ಇದೇ ರೀತಿಯ ಕಷ್ಟ ಬಂದೇ ಬರುತ್ತದೆ’. ಅವನ ಮುಖ ಮತ್ತಷ್ಟು ದೀನವಾಯಿತು. ಆದರೂ ಅವನು ಆಶಾವಾದಿ. ಸಾವರಿಸಿಕೊಂಡು ಕೇಳಿದ, ‘ಸ್ವಾಮಿ, ಇಷ್ಟು ವರ್ಷಾನೇ ಅನುಭವಿಸಿದ್ದೇನಂತೆ, ಆಗಲಿ ಬಿಡಿ, ಇನ್ನೈದು ವರ್ಷ. ಆಮೇಲಾದರೂ ಸುಖ ಇದೆಯೇ?’. ಮತ್ತೆ ಗುಣುಗುಣಿಸಿ ಲೆಕ್ಕ ಹಾಕಿದ ಜೋಯಿಸರು ಹೇಳಿದರು, ‘ಇನ್ನೈದು ವರ್ಷಗಳಾದ ಮೇಲೆ ನಿನಗೆ ಈ ಕಷ್ಟಗಳು ಅಭ್ಯಾಸವಾಗಿ ಹೋಗುತ್ತವೆ!. ನಿನಗೆ ಒಂದೇ ದಾರಿ. ಕಷ್ಟ ಬರುತ್ತದೋ, ದುಃಖ ಬರುತ್ತದೋ, ಸುಖ ಸಿಗುತ್ತದೋ, ಯಾವುದು ಬಂದರೂ ಅದನ್ನು ಹಲ್ಲುಕಚ್ಚಿ ಸಹಿಸಿಕೋ. ಅದೇ ನಿನಗೆ ಸುಖದ ಸೂತ್ರ’ ಎಂದು ಕಳುಹಿಸಿದರು.

ಇದು ಅವನೊಬ್ಬನ ಸಮಸ್ಯೆಯಲ್ಲ, ನಮ್ಮೆಲ್ಲರ ಪರಿಸ್ಥಿತಿ. ಕಷ್ಟ ಬಂದಾಗ ದಿಕ್ಕು ತಪ್ಪುತ್ತದೆ. ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದುಕೊಳ್ಳುತ್ತೇವೆ. ಯಾವುಯಾವುದೋ ಪೂಜೆ ಮಾಡಿಸುತ್ತೇವೆ, ಜೋಯಿಸರ ಹತ್ತಿರ ಹೋಗಿ ಯಾವುದಾದರೂ ಶಾಂತಿ, ಹೋಮ, ಹವನ ಮಾಡಿಸಿದರೆ ಗ್ರಹಗತಿ ಸರಿಯಾದೀತೇ ಎಂದು ಕೇಳುತ್ತೇವೆ. ಅದೆಲ್ಲ ಸರಿಯೆ. ಪೂಜೆ, ಹೋಮ, ಹವನಗಳೆಲ್ಲ ನಮ್ಮ ಮನಸ್ಸಿಗೆ ಒಂದು ಶಾಂತಿಯನ್ನು, ಭರವಸೆಯನ್ನು ನೀಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಕಷ್ಟಗಳನ್ನು ಎದುರಿಸಲು ಧೈರ್ಯ, ಧೃಡತೆಗಳನ್ನು ನೀಡುತ್ತವೆ. ಆದರೆ ಕಷ್ಟಗಳನ್ನು ನಿವಾರಿಸುವುದಿಲ್ಲ.

ಜೋಯಿಸರು ಜಾತಕದಲ್ಲಿ ಗ್ರಹಗತಿಯನ್ನು ಬದಲಾಯಿಸಲು ಸಾಧ್ಯವೆ? ಗ್ರಹಗಳು ತಮ್ಮ ಪಾಡಿಗೆ ತಾವು ಸೃಷ್ಟಿಯ ವಿಧಿಯಂತೆ ಚಲಿಸುತ್ತವೆ. ಹಾಗಾದರೆ ಏನು ಮಾಡಬೇಕು? ಸಹಿಸುವುದನ್ನು ಬಿಟ್ಟರೆ ಬೇರೆ ಗತಿಯಿಲ್ಲ. ರಾಮ ವನವಾಸ ಸಹಿಸಬೇಕಾಯಿತು, ಪಾಂಡವರು ಕಾಡಿನಲ್ಲಿ ಸಹನೆಯಿಂದ ನವೆದರು, ಪ್ರಪಂಚದ ಅನೇಕ ದೇಶಗಳಲ್ಲಿ ನಾಯಕರ ದೌರ್ಜನ್ಯಗಳನ್ನು ದಶಕಗಳ ಕಾಲ ಜನರು ಸಹನೆಯಿಂದ ತಾಳಿದರು. ನಮ್ಮ ಬದುಕಿನ ಬಹುದೊಡ್ಡ ರಕ್ಷಾಕವಚವೆಂದರೆ ಸಹನೆಯೊಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT