ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಿರಿ ತರುವ ಆಪತ್ತು

Last Updated 27 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಿಥಿಲೆಯನ್ನು ಮಹಾಜನಕರಾಜ ಆಳುತ್ತಿದ್ದಾಗ ಎಲ್ಲವೂ ಧರ್ಮದ ತಳಹದಿಯ ಮೇಲೆಯೇ ನಡೆಯುತ್ತಿತ್ತು. ಅವನ ಧರ್ಮಪತ್ನಿ ಸೀವಲೀದೇವಿ ಪುಣ್ಯಲಕ್ಷಣಗಳನ್ನು ಹೊಂದಿದ ಪುತ್ರನೊಬ್ಬನಿಗೆ ಜನ್ಮವಿತ್ತಳು. ಅವನಿಗೆ ದೀರ್ಘಾಯುಕುಮಾರ ಎಂದು ಹೆಸರಿಟ್ಟರು. ಅವನು ದೊಡ್ಡವನಾದ ಮೇಲೆ ಅವನನ್ನು ಯುವರಾಜನನ್ನಾಗಿ ಮಾಡಿದ ರಾಜ.

ಒಂದು ಸಲ ರಾಜ ತನ್ನ ಪರಿವಾರದೊಂದಿಗೆ ರಾಜೋದ್ಯಾನಕ್ಕೆ ಹೋದ. ಅವನು ಆನೆಯ ಮೇಲೆ ಕುಳಿತು ಹೊರಟಾಗ ಉದ್ಯಾನದಲ್ಲಿ ಪಕ್ಕಪಕ್ಕದಲ್ಲಿ ಎರಡು ಮಾವಿನಹಣ್ಣಿನ ಮರಗಳು ಕಂಡವು. ಒಂದರಲ್ಲಿ ಮಾವಿನಹಣ್ಣು ಸುರಿದಿವೆ, ಮತ್ತೊಂದರಲ್ಲಿ ಒಂದು ಹಣ್ಣೂ ಇಲ್ಲ. ಆನೆಯ ಮೇಲೆ ಕುಳಿತೇ ರಾಜ ಒಂದು ಮಾವಿನಹಣ್ಣನ್ನು ಕಿತ್ತು ತಿಂದ. ಅದು ಬಹಳ ಸಿಹಿಯಾಗಿತ್ತು. ಆಯ್ತು, ಸಂಜೆ ಮರಳುವಾಗ ಇನ್ನಷ್ಟು ತಿನ್ನುತ್ತೇನೆ ಎಂದು ಹೊರಟ. ರಾಜ ಹಣ್ಣು ತಿಂದ ಎಂದು ತಿಳಿದೊಡನೆ ಅವನ ಹಿಂದೆ ಬರುತ್ತಿದ್ದ ಎಲ್ಲರೂ ತಿನ್ನತೊಡಗಿದರು. ಹಣ್ಣು ಎತ್ತರದ ಕೊಂಬೆಯಲ್ಲಿದ್ದಾಗ ಕಲ್ಲು ಹೊಡೆದು, ಮೇಲೆ ಹತ್ತಿ ಕೊಂಬೆಗಳನ್ನು ಮುರಿದು ಹಣ್ಣು ಪಡೆದರು. ಒಂದು ತಾಸಿನಲ್ಲಿ ಮರ ಎಲೆ, ಕೊಂಬೆಗಳನ್ನು ಕಳೆದುಕೊಂಡು ಬೋಳಾಗಿ ಬಿಟ್ಟಿತು. ಸಂಜೆ ಮರಳುವಾಗ ರಾಜ ಮರದ ಸ್ಥಿತಿ ಗಮನಿಸಿದ. ಪಕ್ಕದ ಮರಕ್ಕೆ ಯಾವ ತೊಂದರೆಯೂ ಆಗಿರಲಿಲ್ಲ. ಯಾಕೆ ಹೀಗಾಯಿತು ಎಂದು ಮಂತ್ರಿಗಳನ್ನು ಕೇಳಿದ. ಅವರು, ‘ಸ್ವಾಮಿ, ಮರದಲ್ಲಿ ಹಣ್ಣಿಲ್ಲದಿದ್ದರೆ ಯಾವ ಅಪಾಯವೂ ಇಲ್ಲ. ಹಣ್ಣಿದ್ದ ಮರಕ್ಕೇ ತೊಂದರೆ’ ಎಂದರು. ತಕ್ಷಣ ರಾಜನ ಮನಸ್ಸಿಗೇನೋ ಹೊಳೆಯಿತು. ಫಲವಿದ್ದ ವೃಕ್ಷಕ್ಕೇ ಅಪಾಯ, ಫಲರಹಿತವಾದದ್ದಕ್ಕೆ ಭಯವಿಲ್ಲ. ಸಂಪದ್ಭರಿತ ರಾಜ್ಯ ಫಲಭರಿತ ವೃಕ್ಷ. ಅದು ಯಾವಾಗಲೂ ಅಪಾಯಕಾರಿ. ಇದರಿಂದ ನಾನು ಪಾರಾಗಬೇಕಾದರೆ ಎಲ್ಲವನ್ನು ತೊರೆದು ಪ್ರವ್ರಜಿತನಾಗುತ್ತೇನೆ ಎಂದು ತೀರ್ಮಾನಿಸಿ ಎಲ್ಲರಿಗೂ ತಿಳಿಸಿ ಹೊರಡಲು ಸಿದ್ಧನಾದ.

ಕ್ಷಣಮಾತ್ರದಲ್ಲಿ ಆದ ವೈರಾಗ್ಯವನ್ನು ತಾಳಿಕೊಳ್ಳುವುದು ಧರ್ಮಪತ್ನಿ ಸೀವಲೀದೇವಿಗೆ ಕಷ್ಟವಾಯಿತು. ಅವನನ್ನು ತಡೆಯಲು ಎಷ್ಟೇ ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಆಕೆಯೊಂದು ಉಪಾಯವನ್ನು ಮಾಡಿದಳು. ಅವನು ಹೋಗುವ ದಾರಿಯಲ್ಲಿ ಅಲ್ಲಲ್ಲಿ ಹಳೆಯ ಧರ್ಮಶಾಲೆಗಳಿಗೆ, ಕಟ್ಟಡಗಳಿಗೆ ಬೆಂಕಿ ಹಚ್ಚಿಸಿ, ‘ಮಹಾರಾಜಾ, ನಗರಕ್ಕೆ ಬೆಂಕಿ ಬಿದ್ದಿದೆ. ಅದನ್ನು ರಕ್ಷಿಸುವುದು ನಿಮ್ಮ ಕರ್ತವ್ಯ’ ಎಂದಳು. ಆತ ನಿರ್ವಿಕಾರವಾಗಿ ‘ಕಟ್ಟಡದ ಬೆಂಕಿ ತಾನೇ ಆರೀತು ಅಥವಾ ಆರಿಸಿಯಾರು. ಆದರೆ ನನ್ನೊಳಗಿನ ಬೆಂಕಿಯನ್ನು ನಾನೇ ಆರಿಸಬೇಕು’ ಎಂದು ಹೊರಟುಬಿಟ್ಟ. ರಾಣಿ ತನ್ನ ಸೈನಿಕರಿಗೇ ಹೇಳಿ ಅವರು ದರೋಡೆಕೋರರಂತೆ ಅಲ್ಲಲ್ಲಿ ಜನರನ್ನು ಲೂಟಿ ಮಾಡಿದ ಹಾಗೆ, ತೋರುವಂತೆ ಮಾಡಿ, ‘ಸ್ವಾಮೀ, ನೀವು ಹೊರಟ ತಕ್ಷಣ ದೇಶ ಅನಾಯಕವಾಗುತ್ತಿದೆ. ಅದನ್ನು ರಕ್ಷಿಸಿ’ ಎಂದು ಬೇಡಿದಳು. ರಾಜ ನಿರ್ವಿಕಾರವಾಗಿ ಹೇಳಿದ, ‘ಈ ಕ್ಷಣದಿಂದ ರಾಜ್ಯ ನನ್ನದಲ್ಲ. ಇದಕ್ಕೆ ಸಂಬಂಧಪಟ್ಟ ಯುವರಾಜ, ಮಂತ್ರಿಗಳು ಸರಿಯಾದ ಕ್ರಮ ತೆಗೆದುಕೊಳ್ಳಲಿ’. ರಾಣಿಯೂ ಅವನ ಹಿಂದೆಯೇ ಹೊರಟಳು. ಮೃಗಾಜಿನನೆಂಬ ಋಷಿ ಬಂದು ಇವನ ಧೃಡತೆಯನ್ನು ಪರೀಕ್ಷಿಸಲು ಕೇಳಿದ, ‘ರಾಜಾ, ಸಕಲ ಭೋಗಭಾಗ್ಯಗಳನ್ನು ತೊರೆದು ಪ್ರವ್ರಜ್ಜೆ ಸ್ವೀಕರಿಸಿ, ಮಣ್ಣಿನ ಪಾತ್ರೆಗೆ ಏಕೆ ಮನ ಮಾಡಿದೆ?’ ಮಹಾಜನಕ ಹೇಳಿದ, ‘ಹಣ್ಣು ತುಂಬಿದ ಮರದಂತೆ, ಐಶ್ವರ್ಯವಂತರಾದ ನಮ್ಮನ್ನು ಹೊಡೆದು ಹಾಕಲು ಶತ್ರುಗಳು ಕಾಯುತ್ತಾರೆ. ಸುಂದರ ಚರ್ಮಕ್ಕಾಗಿ ಚಿರತೆ ಸಾಯುತ್ತದೆ, ದಂತಕ್ಕಾಗಿ ಆನೆ ಸಾಯುತ್ತದೆ. ಆದ್ದರಿಂದ ಭೋಗವೇ ದುಃಖಕ್ಕೆ, ಹಿಂಸೆಗೆ ಕಾರಣವಾಗುತ್ತದೆ. ನನಗೆ ಅದು ಬೇಡ’. ಹೀಗೆ ಹೇಳಿ ಹೆಂಡತಿಗೂ ಪ್ರವ್ರಜ್ಜೆ ಸ್ವೀಕರಿಸುವಂತೆ ಮಾಡಿ ಹಿಮಾಲಯಕ್ಕೆ ಹೊರಟುಹೋದ.

ನಮ್ಮ ಶ್ರೀಮಂತಿಕೆ, ಭೋಗಭಾಗ್ಯಗಳು ಆಪತ್ತಿಗೆ ಆಹ್ವಾನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT