ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕೌತುಕದ ಯೋಗ

Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸ್ವಾತಿ ಮಳೆಹನಿ ಬೀಳ್ಪ, ಶುಕ್ತಿ ಬಾಯ್ದೆರೆದೇಳ್ಪ |
ಕೌತುಕದ ಸಮಯಯೋಗದೆ ಮೌಕ್ತಿಕ ಫಲ ||
ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ |
ಆ ತೆರದ ಯೋಗದಿನೆ – ಮಂಕುತಿಮ್ಮ || 370 ||

ಪದ-ಅರ್ಥ: ಶುಕ್ತಿ=ಮುತ್ತಿನ ಚಿಪ್ಪು, ಬಾಯ್ದೆರೆದೇಳ್ಪ=ಬಾಯ್ದೆರೆದು(ಬಾಯಿ ತೆಗೆದು)+ಏಳ್ಪ(ಏಳುವ), ಮೌಕ್ತಿಕಫಲ=ಮುತ್ತಾಗುವ ಫಲ, ಹುಟ್ಟುಮ್=ಹುಟ್ಟುಕೂಡ, ಯೋಗದಿನೆ=ಯೋಗದಂತೆ

ವಾಚ್ಯಾರ್ಥ: ಸ್ವಾತಿ ಮಳೆಯ ಹನಿ ಬೀಳುವಾಗ, ಸ್ವಲ್ಪವೇ ಬಾಯಿ ತೆರೆದು ಮೇಲೆದ್ದ ಚಿಪ್ಪಿನಲ್ಲಿ ಆ ಹನಿ ಬಿದ್ದ ಕೌತುಕದ ಸಮಯದಲ್ಲೇ ಮುತ್ತಾಗುವ ಪ್ರಕ್ರಿಯೆ. ಪ್ರೀತಿ, ಸುಖ, ಸತ್ಯದರ್ಶನ, ಶಾಂತಿಗಳ ಹುಟ್ಟು ಕೂಡ ಇದೇ ತರಹದ ಯೋಗವಿದ್ದಂತೆ.

ವಿವರಣೆ: ಮುತ್ತು ತಯಾರಾಗುವುದು ಒಂದು ಅದ್ಭುತವಾದ, ಪವಾಡಸದೃಶ ಕವಿಕಲ್ಪನೆ. ಮಳೆಗಾಲದ ಕೊನೆಯ ಭಾಗದಲ್ಲಿ ಬರುವ ಸ್ವಾತಿ ಮಳೆಯ ವಿಶೇಷವೆಂದರೆ ಅದು ರಭಸದಿಂದ, ಧಾರಾಕಾರವಾಗಿ ಬರುವುದಿಲ್ಲ. ಹನಿಹನಿಯಾಗಿ ಧರೆಗಿಳಿಯುತ್ತದೆ. ಆ ಸಮಯದಲ್ಲಿ ಸಮುದ್ರದಾಳದಲ್ಲಿದ್ದ ಚಿಪ್ಪೊಂದು ನೀರಿನಲೆಯ ಮೇಲೆ ತೇಲಿ ಬರುತ್ತದೆ. ಅದರ ಬಾಯಿ ಕೊಂಚವಷ್ಟೇ ತೆರೆದುಕೊಂಡು ಆಕಾಶಮುಖವಾಗುತ್ತದೆ. ಅಂಥ ಅಮೃತಕ್ಷಣದಲ್ಲಿ ಮಳೆಯ ಒಂದು ಹನಿ ಚಿಪ್ಪಿನಲ್ಲಿ ಸೇರಿಕೊಳ್ಳುತ್ತದೆ. ಆ ಪರಕೀಯವಾದ ವಸ್ತುವನ್ನು ನಿರಾಕರಿಸುವಂತೆ ಚಿಪ್ಪಿನಲ್ಲಿಯ ಹುಳ ತನ್ನ ಎಂಜಲನ್ನು ಹನಿಯ ಸುತ್ತ ಹರಡುತ್ತ ಹೋಗುತ್ತದೆ. ಹೀಗೆ ಪದರಿನ ಮೇಲೆ ಪದರನ್ನು ಸೃಷ್ಟಿಸುತ್ತ ಹೋದಾಗ ಅದರ ಎಂಜಲು ಗಟ್ಟಿಯಾಗುತ್ತ ಬರುತ್ತದೆ. ಒಳಗಿನ ನೀರ ಹನಿ ಆವಿಯಾಗಿ ಹೋಗಿ ಉಳಿದದ್ದು ಮುತ್ತಾಗುತ್ತದೆ. ಇದೊಂದು ನಿಸರ್ಗದ ಕೌತುಕವೇ ಅಲ್ಲವೇ? ಆಕಾಶದಿಂದ ಬರುವ ಮಳೆಯ ನೀರಿನ ಹನಿ, ಸಮುದ್ರದಾಳದಿಂದ ಬರುವ ಅರೆತೆರೆದ ಚಿಪ್ಪಿನೊಳಗೆಯೇ ಬೀಳುವುದು ಒಂದು ಅನನ್ಯವಾದ ಸಂಯೋಗ. ಎಲ್ಲಿ ಹನಿಗಳೂ ಮುತ್ತಾಗುವುದಿಲ್ಲ. ಎಲ್ಲ ಚಿಪ್ಪುಗಳಿಗೂ ಮಳೆಯ ಹನಿ ದೊರಕುವುದಿಲ್ಲ. ಅದೊಂದು ಅಪರೂಪದ ಯೋಗ. ಅದರ ಫಲವೇ ಮುತ್ತು. ಅದನ್ನು ಮೌಕ್ತಿಕ ಎಂದು ಕರೆಯುತ್ತಾರೆ. ಎಲ್ಲಿಂದೆಲ್ಲಿಯ ಬೆಸುಗೆ? ಗಗನದ ಮಳೆ, ಸಮುದ್ರದ ತಳದ ಚಿಪ್ಪು, ಚಿಪ್ಪಿನಲ್ಲಿಯ ಹುಳ, ಅನಪೇಕ್ಷಿತವಾದ ನೀರನ್ನು ಹೊರಗೆ ತಳ್ಳುವ ಪ್ರಯತ್ನದಲ್ಲಿ ಅಪರೂಪವಾದ, ಸುಂದರವಾದ ಮುತ್ತಿನ ಸೃಷ್ಟಿ.

ಇದೇ ರೀತಿ ಮಾನವೀಯ ಮೌಲ್ಯಗಳಾದ ಪ್ರೀತಿ, ಸಂತೋಷ, ಸತ್ಯದರ್ಶನ, ಶಾಂತಿಗಳ ಉಗಮವೂ ಕೌತುಕಮಯವಾದದ್ದು. ರಾಜಕುಮಾರನಾಗಿ ಸುಖಲೋಲುಪತೆಯಲ್ಲಿದ್ದ ಸಿದ್ಧಾರ್ಥ, ಒಂದು ಕ್ಷಣದಲ್ಲಿ ಬದುಕಿನ ದಯನೀಯ ಸ್ಥಿತಿಯನ್ನು ಕಂಡು, ಕರಗಿ ಬುದ್ಧನಾದದ್ದು ಒಂದು ಕೌತುಕದ ಯೋಗವೆ. ಕ್ರೌರ್ಯವನ್ನೇ ತನ್ನ ಹೆಗ್ಗುರುತನ್ನಾಗಿ ಮಾಡಿಕೊಂಡು ಸದಾಕಾಲ ಕುದಿಯುತ್ತಿದ್ದ ಅಂಗುಲಿಮಾಲನಿಗೆ ಕರುಣೆಯ ಮೂರ್ತಿ ಬುದ್ಧನ ದರ್ಶನದಲ್ಲಿ ಶಾಂತಿಯ ಒರತೆ ದೊರೆತದ್ದು ಇಂಥ ಕೌತುಕವೇ. ಎಲ್ಲಿಯೋ ಹುಟ್ಟಿದ ಹುಡುಗಿ, ಎಲ್ಲಿಯೋ ಹುಟ್ಟಿದ ಹುಡುಗ ಅದಾವ ಕಾರಣಕ್ಕೋ ಜೊತೆಯಾಗಿ, ಪ್ರೀತಿಯನ್ನು ಹಂಚಿಕೊಂಡು ಬದುಕುವುದು ಕೂಡ ಒಂದು ಯೋಗವೆ. ತನ್ನ ಗೆಳೆಯ, ಆತ್ಮೀಯ ಸ್ನೇಹಿತನಾದ ಕೃಷ್ಣ ಜಗದಾದಿ ದೈವವೆಂದು, ಯುದ್ಧಮುಖದಲ್ಲಿ, ಅವನ ವಿಶ್ವರೂಪದರ್ಶನದಿಂದ, ತಿಳಿದ ಅರ್ಜುನನಿಗೆ, ಆದ ಸತ್ಯದರ್ಶನವೂ ಒಂದು ಕೌತುಕದ ಯೋಗ.

ಹೀಗೆ ಚಿಪ್ಪಿನಲ್ಲಿ ಮುತ್ತಾಗುವ ಯೋಗದಂತೆ, ನಮ್ಮ ಬದುಕಿನಲ್ಲಿ ಆಗಾಗ ಹೊಳೆಯುವ ಮೌಲ್ಯದರ್ಶನವೂ ಒಂದು ಕೌತುಕದ ಯೋಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT