ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ‌ಸೇವೆಯ ಪ್ರಭಾವ

Last Updated 31 ಡಿಸೆಂಬರ್ 2020, 20:50 IST
ಅಕ್ಷರ ಗಾತ್ರ

ವಾರಾಣಸಿಯಿಂದ ಸ್ವಲ್ಪ ದೂರದಲ್ಲಿ ನದಿಯ ಒಂದು ಬದಿಯಲ್ಲಿ ಬೇಡರ ಗ್ರಾಮವಿತ್ತು. ಅದರ ಇನ್ನೊಂದು ಬದಿಯಲ್ಲಿ ಮತ್ತೊಂದು ಬೇಡರ ಗ್ರಾಮ. ಎರಡೂ ಗ್ರಾಮಗಳ ಮುಖ್ಯಸ್ಥರು ಅತ್ಯಂತ ಸ್ನೇಹಿತರಾಗಿದ್ದರು. ಒಬ್ಬ ನಾಯಕನಿಗೆ ದುಕೂಲಕ ಎಂಬ ಮಗ ಮತ್ತು ಇನ್ನೊಬ್ಬನಿಗೆ ಪಾರಿಕಾ ಎಂಬ ಮಗಳಿದ್ದಳು. ಈ ಇಬ್ಬರಿಗೂ ಸಂಸಾರದಲ್ಲಿ, ದೇಹಭೋಗದಲ್ಲಿ ಆಸಕ್ತಿ ಇರಲಿಲ್ಲ. ಆದರೂ ಹಿರಿಯರು ಒತ್ತಾಯ ಮಾಡಿ ಮದುವೆ ಮಾಡಿದರು.

ನವದಂಪತಿಗಳು ಸಾಮಾನ್ಯರಂತೆ ಕಾಮಾಸಕ್ತಿಯಲ್ಲಿ ತೊಡಗದೆ ಪ್ರವ್ರಜ್ಯವನ್ನು ಸ್ವೀಕರಿಸಿ ಹಿಮಾಲಯಕ್ಕೆ ಬಂದು ನೆಲೆಸಿದರು. ಇಂದ್ರ ಅವರ ಧರ್ಮಭಾವನೆಯನ್ನು ಗಮನಿಸಿ ಅವರಿಗೆ ಆಶ್ರಮ ವ್ಯವಸ್ಥೆ ಮಾಡಿದ. ಅವರು ಅಲ್ಲಿಯೇ ಬಹುಕಾಲ ನೆಲೆಸಿದರು. ಇಂದ್ರ ಅವರ ಬಗ್ಗೆ ಯೋಚಿಸಿದ. ಅವರಿಗಿನ್ನು ಸ್ವಲ್ಪ ಕಾಲದಲ್ಲಿ ಅಂಧತ್ವ ಬರುವಂತಿದೆ. ಅವರನ್ನು ನೋಡಿಕೊಳ್ಳುವವರಾರು? ಆತ ದುಕೂಲಕನ ಬಳಿಗೆ ಬಂದು ಪುತ್ರಸಂತಾನ ಪಡೆಯುವಂತೆ ಹೇಳಿದ.

ತಾವು ಪ್ರವ್ರಜಿತರಾಗಿರುವುದರಿಂದ ಅದು ಸಾಧ್ಯವಿಲ್ಲವೆಂದಾಗ ಇಂದ್ರ ಹೇಳಿದ, ‘ಹಾಗಾದರೆ ಪಾರಿಕಾ ರಸಜ್ವಲೆಯಾದಾಗ ಆಕೆಯ ನಾಭಿಯನ್ನು ಮುಟ್ಟಿಬಿಡು. ನಾನು ಮಗನನ್ನು ಕರುಣಿಸುತ್ತೇನೆ’. ದುಕೂಲಕ ಹಾಗೆಯೇ ಮಾಡಿದಾಗ ಹತ್ತು ತಿಂಗಳುಗಳ ನಂತರ ಬೋಧಿಸತ್ವ ಅವರಿಗೆ ಬಂಗಾರದ ಬಣ್ಣದ ಮಗನಾಗಿ ಹುಟ್ಟಿದ. ಅವನಿಗೆ ಸ್ವರ್ಣಸಾಮ ಎಂದು ಎಂದು ಹೆಸರಿಟ್ಟರು. ಆತ ಹದಿನಾರು ವರ್ಷದವನಾದರೂ ಅವನ ಸೇವೆಯನ್ನು ತಂದೆ-ತಾಯಿಯರೇ ಮಾಡುತ್ತಿದ್ದರು.

ಒಂದು ದಿನ ಅವರು ಹಣ್ಣುಹಂಪಲು ತರಲು ಕಾಡಿಗೆ ಹೋದಾಗ ಜೋರಾಗಿ ಮಳೆ ಬಂದಿತು. ರಕ್ಷಣೆ ಪಡೆಯಲು ಅವರು ಒಂದು ಮರದ ಕೆಳಗೆ ನಿಂತರು. ಅಲ್ಲೊಂದು ವಿಷಸರ್ಪ ಮರದಿಂದ ನೇತಾಡುತ್ತಿತ್ತು. ಇವರು ಹತ್ತಿರ ಬಂದಾಗ ಅದು ಕೋಪದಿಂದ ಬುಸುಗುಟ್ಟಿತು. ಆ ವಿಷಕ್ಕೆ ಅವರಿಬ್ಬರ ಕಣ್ಣುಗಳು ಹೋಗಿಬಿಟ್ಟವು. ತಂದೆ-ತಾಯಿಯರಿಗಾಗಿ ಕಾದು ನಂತರ ಸ್ವರ್ಣಸಾಮ ಅವರನ್ನು ಹುಡುಕಿಕೊಂಡು ಹೋಗಿ, ಕೈ ಹಿಡಿದು ಆಶ್ರಮಕ್ಕೆ ಕರೆತಂದು ಅತ್ಯಂತ ಶ್ರದ್ಧೆಯಿಂದ, ಗೌರವದಿಂದ ಅವರ ಸೇವೆಯನ್ನು ಸದಾ ಮಾಡುತ್ತಿದ್ದ.

ಹೀಗೊಂದು ದಿನ ಅವರಿಗಾಗಿ ಹಣ್ಣು ತಂದು, ಬರುವಾಗ ನದಿಯಲ್ಲಿ ಸ್ನಾನ ಮಾಡಿ ಬರಲು ಹೊರಟ. ಆ ಸಮಯದಲ್ಲಿ ಪೀಲಿಯಕ್ಕನೆಂಬ ವಾರಾಣಸಿಯ ರಾಜ ಬೇಟೆಯಾಡಲು ಕಾಡಿಗೆ ಬಂದವನು, ಜಿಂಕೆಗಳ ಮಧ್ಯದಲ್ಲಿ ಬರುತ್ತಿದ್ದ ಸ್ವರ್ಣಸಾಮನನ್ನು ಕಂಡು ಇದೊಂದು ವಿಶೇಷ ಮೃಗವೆಂದು ಭಾವಿಸಿ ಬಾಣಬಿಟ್ಟ. ಸ್ವರ್ಣಸಾಮ ರಕ್ತ ಸುರಿಸುತ್ತ ಬಿದ್ದ. ಹತ್ತಿರಕ್ಕೆ ಬಂದ ರಾಜ, ಈತ ಮನುಷ್ಯ, ಅದರಲ್ಲೂ ಆಶ್ರಮವಾಸಿ ಎಂದು ತಿಳಿದು ಗಾಬರಿಯಾದ. ಈತ ಸತ್ತು ಹೋದರೆ, ಅವನ ವೃದ್ಧ, ಅಂಧ ತಾಯಿ-ತಂದೆಯರನ್ನು ತಾವೇ ನೋಡಿಕೊಳ್ಳಬೇಕು ಎಂದು ತೀರ್ಮಾನಿಸಿದ.

ಸುತ್ತಮುತ್ತ ಹುಡುಕಾಡಿ ವೃದ್ಧ ದಂಪತಿಗಳನ್ನು ಕೈಹಿಡಿದು ಸ್ವರ್ಣಸಾಮ ಬಿದ್ದಿದ್ದ ಜಾಗಕ್ಕೆ ಕರೆದು ತಂದ. ತಾನು ಮಾಡಿದ ಅಪರಾಧಕ್ಕೆ ಕ್ಷಮೆ ಕೋರಿದ ಮತ್ತು ಅವರ ಯೋಗಕ್ಷೇಮದ ಜವಾಬ್ದಾರಿ ತನ್ನದೇ ಎಂದ. ಆಗ ತಂದೆ ಹೇಳಿದ, ‘ನಾವು ಇಷ್ಟು ವರ್ಷ ತಪಸ್ಸು ಮಾಡಿದ್ದೇವೆ. ಒಬ್ಬನೇ ಮಗ ಸತ್ತ ಎಂದು ದುಃಖವಾದರೂ ಅವನನ್ನು ಹತ್ಯೆ ಮಾಡಿದವನ ಬಗ್ಗೆ ದ್ವೇಷವಿಲ್ಲ. ಅದೊಂದು ಆಕಸ್ಮಿಕ. ನೀವು ಹೊರಡಿ’. ಇದನ್ನು ಗಮನಿಸುತ್ತಿದ್ದ ವನದೇವತೆ, ಸ್ವರ್ಣಸಾಮ ವಿಷಬಾಣದಿಂದ ಗಾಯಗೊಂಡಿದ್ದಾನೆ, ಆದರೆ ಸತ್ತಿಲ್ಲ ಎಂದು ತಿಳಿದು ಅವನಲ್ಲಿ ಚೈತನ್ಯ ಮೂಡುವಂತೆ ಮಾಡಿದಳು. ತಂದೆ-ತಾಯಿಯರು ಸಂತೋಷದಿಂದ ಸತ್ಯಕ್ರಿಯೆಯನ್ನು ಮಾಡಿದರು.

ಆಶ್ಚರ್ಯವೆಂಬಂತೆ ಅವರ ಕಣ್ಣುಗಳು ಮರಳಿ ಬಂದವು. ಆಗ ಅಲ್ಲಿಗೆ ಬಂದ ಇಂದ್ರ ಹೇಳಿದ, ‘ಇದು ಯಾವುದೂ ಆಶ್ಚರ್ಯವಲ್ಲ. ಧರ್ಮಾನುಸಾರ ತಂದೆ-ತಾಯಿಯರ ಸೇವೆಯನ್ನು ಮಾಡುವವರ ರೋಗ ಚಿಕಿತ್ಸೆಯನ್ನು ಸ್ವತಃ ದೇವತೆಗಳೇ ಮಾಡುತ್ತಾರೆ’. ಕಾಶಿರಾಜ ಇಂದ್ರನಿಗೆ ನಮಸ್ಕಾರ ಮಾಡಿ ತನ್ನ ನಾಡಿಗೆ ತೆರಳಿದ. ಬೋಧಿಸತ್ವ ತಂದೆ-ತಾಯಿಯರ ಸೇವೆ ಮಾಡುತ್ತ ಬ್ರಹ್ಮಲೋಕಗಾಮಿಯಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT