ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಹಂಕಾರದ ಬೀಜ

Last Updated 4 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮತ್ತೊಂದು ದಿನ ರಾಜ ವಿದೇಹ ಮಹೋಷಧಕುಮಾರನೊಂದಿಗೆ ರಾಜೋದ್ಯಾನಕ್ಕೆ ಬಂದ. ಅವನು ಅತ್ತಿತ್ತ ನೋಡುತ್ತಿರುವಾಗ ಪ್ರವೇಶದ್ವಾರದ ಮೇಲೆ ಒಂದು ಓತಿಕ್ಯಾತ ಕುಳಿತಿತ್ತು. ರಾಜ ಬರುವುದನ್ನು ಕಂಡು ಸರಸರನೆ ಕೆಳಗಿಳಿದು ಬಂದು ನೆಲದ ಮೇಲೆ ಮಲಗಿತು. ಅದರ ವಿನಯವನ್ನು ಕಂಡು ರಾಜ ಪಂಡಿತನನ್ನು ಕೇಳಿದ, ‘ಪಂಡಿತ ಈ ಓತಿಕ್ಯಾತ ಹೀಗೇಕೆ ಮಾಡಿತು?’
‘ಮಹಾರಾಜ, ಓತಿಕ್ಯಾತ ತಮ್ಮ ಸೇವೆಯಲ್ಲಿದೆ. ಅದಕ್ಕೇ ವಿನಯದಿಂದ ಹೀಗೆ ಕೆಳಗೆ ಬಂದು ಕುಳಿತಿತು’ ಎಂದ ಪಂಡಿತ.
‘ಹಾಗಾದರೆ, ನನಗೆ ಅದು ಮಾಡುವ ಸೇವೆ ವ್ಯರ್ಥವಾಗಬಾರದು. ಅದಕ್ಕೆ ಯಾವ ಭೋಗವಸ್ತು ಬೇಕೋ, ಅದನ್ನು ಕೊಡಿಸು’ ಎಂದ ರಾಜ.

‘ಪ್ರಭೂ, ಅದಕ್ಕೆ ಬೇರೆ ಯಾವ ವಸ್ತುಗಳ ಬಯಕೆಯೂ ಇಲ್ಲ. ಅದಕ್ಕೆ ಸರಿಯಾದ ಸಮಯಕ್ಕೆ ಊಟ ಸಿಕ್ಕರೆ ಸಾಕು’.
‘ಅದು ಏನನ್ನು ತಿನ್ನುತ್ತದೆ?’ ಕೇಳಿದ ರಾಜ.‌

‘ಅದಕ್ಕೆ ಕವಡೆ ಕಾಸಿನ ಮಾಂಸ ಸಿಕ್ಕರೆ ಸಾಕು’ ಎಂದ ಕುಮಾರ. ಆಗ ರಾಜ ಹೇಳಿದ, ‘ನೋಡು, ರಾಜ ಕೊಟ್ಟಿದ್ದು ಕವಡೆ ಕಾಸಿನ ಬೆಲೆಯದು ಎಂದು ಯಾರೂ ಎನ್ನಬಾರದು. ಅದಕ್ಕೆ ನಿತ್ಯವೂ ಆ ಓತಿಕ್ಯಾತಕ್ಕೆ ಅರ್ಧಮಾಸದ ಬೆಲೆಯ ಮಾಂಸವನ್ನು ಒದಗಿಸಬೇಕು. ಇದು ನನ್ನ ಆಜ್ಞೆ’. ಮಹೋಷಧಪಂಡಿತ ಒಬ್ಬ ಆಳನ್ನು ಕರೆದು, ನಿತ್ಯವೂ ಅರ್ಧ ಮಾಸದ ಮಾಂಸವನ್ನು ಈ ಪ್ರಾಣಿಗೆ ಕೊಡುವಂತೆ ಹೇಳಿ ವ್ಯವಸ್ಥೆ ಮಾಡಿದ. ಅಂದಿನಿಂದ ಆ ಓತಿಕ್ಯಾತಕ್ಕೆ ಅರ್ಧಮಾಸ ಮಾಂಸ ವ್ಯವಸ್ಥಿತವಾಗಿ ದೊರಕತೊಡಗಿತು.

ಮರುದಿನ ಉಪೋಸಥ ವೃತ ಇದ್ದುದರಿಂದ ಇಡೀ ಮಾರುಕಟ್ಟೆಯಲ್ಲಿ ಒಂದು ಚೂರು ಮಾಂಸವೂ ದೊರಕುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಆಳು ಮನುಷ್ಯ ಆ ಓತಿಕ್ಯಾತಕ್ಕೆ ಅಂದಿನ ಮಾಂಸವನ್ನು ಕೊಟ್ಟು ಮರುದಿನದ ಅರ್ಧಮಾಸದ ತುಣುಕನ್ನು ಅದರ ಕೊರಳಿಗೆ ಕಟ್ಟಿಬಿಟ್ಟ. ಅಂದರೆ ಮರುದಿನ ಅದು ಅದನ್ನು ತಿನ್ನಬಹುದಿತ್ತು. ಓತಿಕ್ಯಾತಕ್ಕೆ ಬಹಳ ಸಂತೋಷವಾಯಿತು. ಅದಕ್ಕೆ ಇಂದಿನ ಊಟದೊಂದಿಗೆ ನಾಳಿನ ಊಟವೂ ಮುಂಗಡವಾಗಿ ದೊರೆತಿತ್ತು.

ಅಂದು ರಾಜ ಮತ್ತೆ ಮಹೋಷಧಕುಮಾರನೊಂದಿಗೆ ರಾಜೋದ್ಯಾನಕ್ಕೆ ಬಂದ. ಆಗಲೂ ಓತಿಕ್ಯಾತ ಪ್ರವೇಶದ್ವಾರದ ಮೇಲೆಯೇ ಕುಳಿತಿತ್ತು. ಆದರೆ ಈ ಬಾರಿ ಅದು ಕೆಳಗೆ ಇಳಿದು ಬರದೆ, ತಲೆ, ಬಾಲ ಅಲ್ಲಾಡಿಸುತ್ತ ಸೊಕ್ಕಿನಿಂದ ಕುಳಿತಿತ್ತು. ರಾಜ ಆಶ್ಚರ್ಯದಿಂದ ಕೇಳಿದ, ‘ಏನಾಗಿದೆ ಈ ಓತಿಕ್ಯಾತಕ್ಕೆ? ಒಳ್ಳೆಯ ಗರ್ವದಿಂದ ಕುಳಿತಿದೆ. ನನ್ನನ್ನು ನೋಡಿಯೂ ನೋಡದಂತೆ, ನನಗೇ ಸವಾಲು ಹಾಕುವಂತೆ ನೋಡುತ್ತಿದೆ’. ಮಹೋಷಧಕುಮಾರ ಯೋಚಿಸಿದ. ಓತಿಕ್ಯಾತಕ್ಕೆ ಹೊಟ್ಟೆ ತುಂಬಿದಂತಿದೆ. ಮತ್ತೆ ಅದರ ಕೊರಳಲ್ಲಿ ನಾಳಿನ ಮಾಂಸವೂ ಇದೆ. ಆದ್ದರಿಂದಲೇ ಅದಕ್ಕೆ ಶ್ರೀಮಂತಿಕೆಯ ಸೊಕ್ಕು ಬಂದಿದೆ. ಅದನ್ನು ಕಂಡು ನಕ್ಕು ಕುಮಾರ ಹೇಳಿದ, ‘ಮಹಾರಾಜ, ಅದಕ್ಕೆ ಬೇಕಾದ್ದಕ್ಕಿಂತ ಸ್ವಲ್ಪ ಹೆಚ್ಚು ಮಾಂಸ ಇದ್ದುದರಿಂದ ಅಹಂಕಾರ ಬಂದಿದೆ. ಮನುಷ್ಯರಿಗೂ ಇದೇ ರೋಗ ಬರುತ್ತದೆ. ಅಗತ್ಯಕ್ಕಿಂತ ಕೊಂಚ ಹೆಚ್ಚು ಮಾಂಸ ಸಿಕ್ಕಾಗ ಈ ಓತಿಕ್ಯಾತಕ್ಕೇ ಇಷ್ಟು ಅಹಂಕಾರ ಬರುವುದಾದರೆ ಅಡ್ಡದಾರಿಯಿಂದ ಅಪಾರ ಸಂಪತ್ತನ್ನು ಗಳಿಸಿದವರಿಗೆ ಕಣ್ಣು ನೆತ್ತಿಗೇರುವುದರಲ್ಲಿ ಯಾವ ಆಶ್ಚರ್ಯವಿದೆ?’.

ಇದೇ ಅಹಂಕಾರ ಮರದ ಬೀಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT