ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮೂಲಸತ್ವ

Last Updated 9 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ತುಂಬುದಿಟ ಜೀವಿತದ ಗಣನೆಗಳ ಮೀರಿದುದು |
ಇಂಬುಗಳ ಬಿಂಬಗಳ ಸನ್ನಿಧಾನವದು ||
ಅಂಬರದಿನಾಚೆಯದು, ತುಂಬಿರುವುದೆತ್ತಲುಂ |
ಶಂಭು ಪರಬೊಮ್ಮನದು – ಮಂಕುತಿಮ್ಮ || 395 ||

ಪದ-ಅರ್ಥ: ತುಂಬುದಿಟ= ಸಂಪೂರ್ಣ ಸತ್ಯ, ಇಂಬು=ಪ್ರೀತಿ, ಅವಕಾಶ, ಅಂಬರ=ಆಕಾಶ, ತುಂಬಿರುವುದೆತ್ತಲುಂ= ತುಂಬಿರುವುದು+ಎತ್ತಲುಂ (ಎಲ್ಲೆಡೆಗೆ)

ವಾಚ್ಯಾರ್ಥ: ಪರಮಸತ್ಯವೆನ್ನುವುದು ಜೀವಿತಗಳ ಲೆಕ್ಕಕ್ಕೆ ಮೀರಿದ್ದು. ಅದು ನಮ್ಮ ಪ್ರೀತಿ, ಅನುಭವಗಳ ಸ್ಥಾನ. ಅದು ಗಗನವನ್ನು ಮೀರಿದ್ದು, ಎಲ್ಲೆಡೆಗೂ ಹರಡಿಕೊಂಡದ್ದು. ಅದು ಪರಬ್ರಹ್ಮನಾದ ಪರಮೇಶ್ವರನದು.

ವಿವರಣೆ: ಸಂತ ಆಗಸ್ಟಿನ್ ಹೇಳಿದ ಮಾತು ಮನನೀಯವಾದದ್ದು. ‘ಅಂತರಂಗದಲ್ಲಿ ಪರಮಸತ್ಯವನ್ನರಿತ ಬಳಿಕ ಅದರ ಬಗ್ಗೆ
ಮೌನವಾಗಿ ಉಳಿಯುವುದೇ ಲೇಸು. ಅದರ ಬಗ್ಗೆ ಏನೇ ಮಾತು ಹೇಳಿದರೂ ಅದು ಒಟಗುಟ್ಟಿದಂತೆ, ಸುಳ್ಳನ್ನೇ ಬಡಬಡಿಸಿದಂತೆ. ಮಾತಿಗೆ ಮೀರಿದ ಸತ್ಯವನ್ನು ಮಾತಿನಲ್ಲಿ ಹಿಡಿದಿಡುವ ಹುಚ್ಚುತನ ಬೇಡ”.

ಕಗ್ಗದ ಮಾತಿನಂತೆ ಪರಬ್ರಹ್ಮವೆಂಬ ನಿತ್ಯತೆಯನ್ನು, ಅನಂತತೆಯನ್ನು, ಅಮರತ್ವವನ್ನು ಯಾವುದೇ ಹೆಸರು, ರೂಪ, ಗುಣಗಳಿಂದ ಹಿಡಿದಿಡುವುದು ಸಾಧ್ಯವಿಲ್ಲ. ಅದು ತನ್ನನ್ನು ತಾನೇ ಮೀರಬಲ್ಲ, ತನಗೆ ತಾನೇ ಸಾಟಿಯಾಗಬಲ್ಲ, ಕ್ಷಣಕ್ಷಣಕ್ಕೂ ಬೇರೆಯಾಗಬಲ್ಲ, ವಿಕಸನಗೊಳ್ಳುವ ಚಿರಂತನ ಸತ್ಯ. ಅದು ನಮ್ಮ ಚಿಂತನೆಯ ಮಿತಿಗಳನ್ನು ಮೀರಿದ್ದು. ಅದರ ಸನ್ನಿಧಾನದಲ್ಲೇ ನಮಗೆ ಅನುಭವಗಳು ದಕ್ಕುವುದು. ಭಗವಂತನ ವ್ಯಾಪ್ತಿ ಅನೂಹ್ಯವಾದದ್ದು. ಅದರ ಇರುವಿಕೆಯನ್ನು ಗ್ರಹಿಸುವುದು ನಮ್ಮ ಬುದ್ಧಿಶಕ್ತಿಗೆ ನಿಲುಕದ್ದು. ಅದು ಪ್ರತಿಮಾಡಲು ಅಸಮರ್ಥವಾದ ಅಪ್ರತಿಮ ಎನ್ನುತ್ತಾರೆ ಬಸವಣ್ಣನವರು.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ, ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ ಅದು ಅಗಮ್ಯವಾದ, ಅಗೋಚರವಾದ, ಅಪ್ರತಿಮವಾದ ಶಕ್ತಿಯಾದರೂ ಕರುಣೆಯಿಂದ ನಮ್ಮ ಕೈಗೆ ದೊರಕುವುದೂ ಅಷ್ಟೇ ಸತ್ಯ. ಅದಕ್ಕೇ ಅದನ್ನು ಇಂಬುಗಳ, ಬಿಂಬಗಳ ಸನ್ನಿಧಾನವೆಂದು ಕರೆದದ್ದು.

ನಮ್ಮ ಗಮನಕ್ಕೆ ನಿಲುಕುವ ಸೃಷ್ಟಿಯಲ್ಲಿ ಅಸಾಧಾರಣವಾದ, ಅನೂಹ್ಯವಾದ ಅಪೂರ್ವ ಶಕ್ತಿ ಇದೆ. ನೀರಿನಲ್ಲಿ ಆಪ್ಯಾಯನ ಶಕ್ತಿ ಇದೆ, ನೆಲದಲ್ಲಿ ಧಾರಣಶಕ್ತಿ ಇದೆ, ಬೆಂಕಿಯಲ್ಲಿ ಜ್ವಲನಶಕ್ತಿ, ಗಾಳಿಯಲ್ಲಿ ಸ್ಪಂದನಶಕ್ತಿ, ಆಕಾಶದಲ್ಲಿರುವ ಸೂರ್ಯ, ತಾರೆಗಳಲ್ಲಿ ಅಪಾರವಾದ ವಿದ್ಯುತ್ ಶಕ್ತಿ ಇದೆ. ಆದರೆ ಇವೆಲ್ಲ ಶಕ್ತಿಗಳು ಆ ಮೂಲ ಸತ್ವದ ವಿವಿಧ ರೂಪಗಳು- ಶಂಭು ಪರಬ್ರಹ್ಮನವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT