ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಪಂಚವನ್ನು ತುಂಬಿದ ಕಾಂತಿ

Last Updated 9 ಸೆಪ್ಟೆಂಬರ್ 2021, 23:37 IST
ಅಕ್ಷರ ಗಾತ್ರ

ಹೃದಯ ಪುಷ್ಪಮರಂದವಾತ್ಮಕೆ ನಿಜಾನಂದ |
ಉದಿಪುದಾರಸ ಸುಂದರದ ಕಿರಣ ಸೋಕೆ ||
ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್
ಪ್ರಕೃತಿಯೊಳ್ |
ಪುದಿದಿರ್ಪ ಕಾಂತಿಯದು – ಮಂಕುತಿಮ್ಮ
|| 459 ||

ಪದ-ಅರ್ಥ: ಪುಷ್ಪಮರಂದವಾತ್ಮಕೆ= ಪುಷ್ಪ+ ಮರಂದ (ಮಕರಂದ)+ ಆತ್ಮಕೆ, ಉದಿಪುದಾ= ಉದಿಪುದು (ಒಸರುವುದು)+ ಆ, ಪುದಿದಿರ್ಪ= ತುಂಬಿರುವ.

ವಾಚ್ಯಾರ್ಥ: ಬದುಕಿನಲ್ಲಿ, ಕವಿತೆಯಲ್ಲಿ, ಕಲೆಗಳಲ್ಲಿ, ಪ್ರಕೃತಿಯಲ್ಲಿ ಕಂಡ ಸೌಂದರ್ಯದ ಕಿರಣ ಸೋಕಿದೊಡನೆ ಹೃದಯವೆಂಬ ಪುಷ್ಪದ ಮಕರಂದ ಜಿನುಗುವುದು. ಅದರಿಂದ ಆತ್ಮಕ್ಕೆ ನಿಜವಾದ ಆನಂದ. ಎಲ್ಲೆಡೆಯೂ ತುಂಬಿರುವ ಕಾಂತಿ ಆ ಸೌಂದರ್ಯ.

ವಿವರಣೆ: ಭಗವಾನ್ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿಯೊಂದು ಅದ್ಭುತ ಕಾವ್ಯಸೃಷ್ಟಿ. ಅದರಲ್ಲಿ ಶ್ಲೋಕವೊಂದು ಹೀಗಿದೆ:

ಕಿರಂತೀಮಂಗೇಭ್ಯ: ಕಿರಣನಿಕುರುಂಬಾಮೃತರಸಂ ಹೃದಿ ತ್ಪಾಮಾಧತ್ತೇ ಹಿಮಕರ ಶಿಲಾಮೂರ್ತಿಮಿನ ಯ: |
ಸ ಸರ್ಪಾಣಾಂ ದರ್ಪಂ ಶಮಯತಿ ಶಕಂತಾಧಿಪ ಇವ ಜ್ಪರಪ್ಲು ಪ್ಟಾನ್ ದೃಷ್ಟ್ಯಾ ಸುಖಯತಿ ಸುದಾಧಾರಸಿಯಾ ||

‘ಹೇ ಜಗನ್ಮಾತೆ, ನಿನ್ನ ಅವಯವಗಳು ಹೊರಸೂಸುವ ಕಾಂತಿಭರಿತ ಕಿರಣಗಳು, ಅಮೃತಧಾರೆಯನ್ನು ಸುರಿಸುವ ಚಂದ್ರಕಾಂತ ಶಿಲೆಯ ಮುದ್ದುಬೊಂಬೆಯಂತಹ ನಿನ್ನ ಮೋಹಕರೂಪವನ್ನು ಯಾವ ಸಾಧಕನು ತನ್ನ ಹೃದಯಕಮಲದಲ್ಲಿ ಪ್ರತಿಷ್ಠಾಪಿಸಿ ಧ್ಯಾನಿಸುತ್ತಾನೋ, ಆತನಿಗೆ, ಗರುಡನು ಹಾವಿನ ಸೊಕ್ಕಡಗಿಸುವಂತೆ, ನಿನ್ನ ಅಮೃತನಾಡಿಯುಕ್ತ ನೋಟ ಮಾತ್ರದಿಂದಲೇ ಜ್ವರಪೀಡಿತರಾದವರನ್ನು ಹಾಗೂ ಬಯಸಿ ಬಂದವರನ್ನು ಸುಖವಾಗಿಸುವ ಶಕ್ತಿ ಬರುತ್ತದೆ’.

ಈ ಜಗನ್ಮಾತೆ ಪ್ರಪಂಚದ ಎಲ್ಲೆಡೆಯಲ್ಲಿ ಪಸರಿಸಿದ್ದಾಳೆ. ಸೃಷ್ಟಿಯ ಪ್ರತಿಯೊಂದರಲ್ಲೂ, ಮನುಷ್ಯರ, ಪ್ರಾಣಿಗಳ ಗುಣಗಳಲ್ಲಿಯೂ ಆಕೆಯ ಸುಸ್ಥಿತಿ ಇದೆ. ಎಲ್ಲ ರಸಗಳ ಮೂಲ ಆಕೆ. ಆ ರಸ ನಮ್ಮ ಬದುಕಿನ ಕ್ಷಣಗಳಲ್ಲಿ, ಕಾವ್ಯದಲ್ಲಿ, ಕಲೆಗಳಲ್ಲಿ ತುಂಬಿಕೊಂಡಿದೆ. ಆ ಸೌಂದರ್ಯದ ಕಿರಣಗಳು ನಮ್ಮನ್ನು ತಾಗಿದಾಗ, ನಮ್ಮ ಹೃದಯವೆಂಬ ಪುಷ್ಪದಲ್ಲಿ ಮಕರಂದವೆಂಬ ರಸ ಒಸರುತ್ತದೆ. ಅದರಿಂದ ಆತ್ಮಕ್ಕೆ ನಿಜವಾದ ಆನಂದ ದೊರಕುತ್ತದೆ. ಸೌಂದರ್ಯ ಎನ್ನುವುದು ಎಲ್ಲವೂ ‘ಅಲಂಕಾರ’ ಮತ್ತು ‘ರಸ’ ಎನ್ನುವ ಎರಡು ಪದಗಳಲ್ಲಿ ಅಡಕವಾಗಿದೆ. ಇವೆರಡೂ ಪದಗಳು ಸೌಂದರ್ಯವನ್ನು ಸೂಚಿಸುವ ಅತ್ಯಂತ ಪ್ರಾಚೀನ ಪದಗಳು. ಪ್ರಪಂಚದ ಅನುಭವಗಳಿಂದ, ಕಾವ್ಯ- ನಾಟ್ಯಾದಿಗಳಿಂದ ಸಹೃದಯನ ಹೃದಯದಲ್ಲಿ ಹೇಗೆ ರಸಾನುಭವ ಉಂಟಾಗುತ್ತದೆಂಬುದನ್ನು ನಮ್ಮ ಅಲಂಕಾರಿಕರು ಅನ್ಯಾದೃಶವಾಗಿ ಪರಿಶೀಲಿಸಿದ್ದಾರೆ. ಬಾಹ್ಯದಲ್ಲಿ ಆದ ಸೌಂದರ್ಯದ ಅನುಭವ ನಮ್ಮ ಹೃದಯದಲ್ಲಿ ಪ್ರತಿಫಲಿಸಿದಾಗ ಈ ರಸ ಉಕ್ಕುತ್ತದೆ. ಆಗ ನಮಗರಿವಿಲ್ಲದಂತೆ ಆನಂದದ ಅನುಭೂತಿ
ಯಾಗುತ್ತದೆ. ರಸವನ್ನು ಉಕ್ಕಿಸುವ ಈ ವಿಶೇಷ ಕಾಂತಿ ಎಲ್ಲೆಡೆಯೂ ತುಂಬಿಕೊಂಡಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT