ಶುಕ್ರವಾರ, ಅಕ್ಟೋಬರ್ 22, 2021
28 °C

ಬೆರಗಿನ ಬೆಳಕು: ಮೃತ್ಯುಂಜಯತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ|
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ?||
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ?|
ಬಿದ್ದ ಮನೆಯನು ಕಟ್ಟೊ – ಮಂಕುತಿಮ್ಮ ||474||

ಪದ-ಅರ್ಥ: ನಿಲ್ಲುಪುದೆ= ನಿಲ್ಲಿಸುವುದು, ಮೃತ್ಯುಂಜಯತೆ= ಸಾವನ್ನು ಗೆಲ್ಲುವಿಕೆ, ನಭ= ಆಕಾಶ, ಮಗುಳ್ದದು= ಮತ್ತೆ ಮರಳಿ.

ವಾಚ್ಯಾರ್ಥ: ಬಿದ್ದ ವ್ಯವಸ್ಥೆಯನ್ನು ಕಟ್ಟುವದರಲ್ಲೇ ಮನುಷ್ಯನ ಅಮರತ್ವವಿದೆ. ಆಕಾಶ ಮೇಲಿಂದ ಮೇಲೆ ಮಳೆಯನ್ನು ಸುರಿಸಿ ಭೂಮಿಯನ್ನು ಶುದ್ಧಿಗೊಳಿಸುವುದಿಲ್ಲವೆ? ಗದ್ದೆಯಲ್ಲಿಯ ಬೆಳೆಯನ್ನು ಕೊಯ್ದು ತೆಗೆದರೆ ಮತ್ತೆ ಧರೆ ಬೆಳೆಯನ್ನು ಕೊಡುವುದಿಲ್ಲವೆ? ಅದಕ್ಕಾಗಿ ಬಿದ್ದ ವ್ಯವಸ್ಥೆಯನ್ನು ಕಟ್ಟು.

ವಿವರಣೆ: ಮೃತ್ಯುಂಜಯ ಎಂದರೆ ಮೃತ್ಯುವನ್ನು ಜಯಿಸುವುದು. ಮೃತ್ಯುವನ್ನು ಗೆಲ್ಲುವುದು ಸಾಧ್ಯವೆ? ಯಾರಾದರೂ ಮೃತ್ಯುವನ್ನು ಗೆದ್ದಿದ್ದಾರೆಯೆ? ಹಾಗಾದರೆ ಮೃತ್ಯುಂಜಯತೆ ಎನ್ನುವ ಮಾತಿಗೆ ಏನರ್ಥ? ಈ ಮಾತು ಸೂಕ್ಷ್ಮವಾಗಿ ಕಠೋಪನಿಷತ್ತಿನಲ್ಲಿ ಬರುತ್ತದೆ. ಪುಟ್ಟ ಬಾಲಕ ನಚಿಕೇತ ಯಮನ ಬಳಿ ಹೋಗುತ್ತಾನೆ. ಸಾವಿನ ಗುಟ್ಟನ್ನು ಕೇಳುತ್ತಾನೆ. ಸಾವನ್ನು ಗೆಲ್ಲುವುದು ಸಾಧ್ಯವೇ ಎಂದು ಪ್ರಶ್ನಿಸುತ್ತಾನೆ. ಸಾವನ್ನು ಗೆಲ್ಲುವುದು ಸಾಧ್ಯವಿಲ್ಲ ಎನ್ನುತ್ತಾನೆ ಯಮ ಎಂದುಕೊಂಡಿದ್ದ ನನಗೆ ಅವನ ಉತ್ತರ ಬೆರಗು ಹುಟ್ಟಿಸಿತ್ತು. ಅದೊಂದು ಸೂಕ್ಷ್ಮ ನಿರ್ದೇಶ. ಯಮ ಹೇಳುತ್ತಾನೆ, ‘ಸಾವನ್ನು ಗೆಲ್ಲಬಹುದು ಆದರೆ ದೇಹದಿಂದಲ್ಲ, ಮಾಡುವ ಸಾಧನೆಯಿಂದ’! ಈ ದೇಹದ ಲಕ್ಷಣವೇ ಕರಗಿ ಹೋಗುವುದು. ಆದರೆ ಅದರ ಮೂಲಕ ಮಾಡಿದ ಕಾರ್ಯ ಚಿರಾಯು. ಒಬ್ಬ ರಾಜಕುಮಾರ ಸತ್ಯವಚನ ಮತ್ತು ಏಕಪತ್ನೀ ವ್ರತಸ್ಥತೆಯಿಂದ, ರಾಕ್ಷಸನ ದಮನ ಮಾಡಿ, ಲೋಕೋತ್ತರನಾದ. ಶ್ರೀರಾಮನೆಂದು, ದೇವರೆಂದು, ಶಾಶ್ವತನಾದ.

ಯಾದವರ ಹುಡುಗ ತನ್ನ ಬದುಕಿನುದ್ದಕ್ಕೂ ನಿರಪೇಕ್ಷನಾಗಿ, ಚಕ್ರವರ್ತಿಗಳ ಕಿರೀಟಗಳು ಪದತಲದಲ್ಲೇ ಇದ್ದರೂ, ತಾನು ರಾಜನಾಗದೆ, ಕೇವಲ ಧರ್ಮಸ್ಥಾಪನೆಗೆ ತನ್ನ ಬದುಕನ್ನು ಅಹರ್ನಿಶಿ ಸವೆಸಿದ, ಶ್ರೀ ಕೃಷ್ಣ ಎಂದು ದೇವರಾದ. ಆಸೆಯನ್ನೇ ನಿರಾಕರಿಸಿ, ಜಗಕೆಲ್ಲ ಬೋಧಿಸಿದ ಬುದ್ಧ ಅವತಾರಿಯಾದ. ಇದೇ ರೀತಿಯಲ್ಲಿ ಮಹಾವೀರ, ಏಸೂಕ್ರಿಸ್ತ, ಪ್ರವಾದಿಗಳು, ಶಂಕರಾಚಾರ್ಯ, ಬಸವಣ್ಣ, ಶ್ರೀರಾಮಕೃಷ್ಣ, ವಿವೇಕಾನಂದ, ಗಾಂಧಿ ಇವರೆಲ್ಲ ಚಿರಾಯುಗಳಾದವರು. ಇವರಲ್ಲಿ ಯಾರೂ ದೇಹದಿಂದ ಬದುಕಿಲ್ಲ. ಆದರೆ ಅವರ ಗಾಥೆ ಶಾಶ್ವತವಾಗಿದೆ. ಎಲ್ಲರೂ ವ್ಯವಸ್ಥೆಯನ್ನು ಕಟ್ಟಿದವರು. ಅದನ್ನೇ ಈ ಕಗ್ಗ ಹೇಳುತ್ತದೆ - ಬಿದ್ದುದನು ನಿಲ್ಲುಪದೆ ನರನ ಮೃತ್ಯುಂಜಯತೆ. ಯಾವಾಗ, ಎಲ್ಲಿ ವ್ಯವಸ್ಥೆ ಕುಸಿಯುತ್ತದೆಯೋ, ಎಲ್ಲಿ ಅರಾಜಕತೆ ಮತ್ತು ಅನಾಯಕತ್ವ ತಲೆ ಎತ್ತುತ್ತದೋ ಅಲ್ಲಿ ಎದ್ದು ಬರುವ ನಾಯಕ ಚಿರಂಜೀವಿಯಾಗುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುವುದೂ ಅದನ್ನೇ. ‘ಎಲ್ಲಿ ಎಲ್ಲಿ ಧರ್ಮ ಕುಸಿದು ಅಧರ್ಮ ಮೇಲೆದ್ದು ಬರುತ್ತದೋ ಆಗ ನಾನು ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ’. ವ್ಯವಸ್ಥೆಯ ಸಾವು, ಮೃತ್ಯುಂಜಯನ ಹುಟ್ಟಿಗೆ ಕಾರಣವಾಗುತ್ತದೆ. ಅದು ಒಬ್ಬ ವ್ಯಕ್ತಿಯೇ ಆಗಿರಬೇಕೆಂದಿಲ್ಲ, ಅದು ಒಂದು ಸಮುದಾಯದ ಪ್ರಕ್ರಿಯೆಯೂ ಆಗಿರಬಹುದು. ಹಿರೋಶಿಮಾ, ನಾಗಾಸಾಕಿಗಳ ಮೇಲೆ ಬಿದ್ದ ಬಾಂಬುಗಳು ಇಡೀ ಜಪಾನ್ ದೇಶವನ್ನು ಉಧ್ವಸ್ಥಗೊಳಿಸಿದಾಗ, ಜಪಾನಿನ ಜನ ದೇಶವನ್ನು ಜಗತ್ತು ಬೆರಗಾಗುವಂತೆ ಪುನರ್ ನಿರ್ಮಾಣ ಮಾಡಿದ್ದು, ಎರಡೂ ಮಹಾಯುದ್ಧಗಳನ್ನು ಪ್ರಾರಂಭಿಸಿ, ತನ್ನ ದೇಶವನ್ನು ನುಚ್ಚುನೂರು ಮಾಡಿಕೊಂಡಿದ್ದ ಜರ್ಮನಿ ಮತ್ತೆ ಫೀನಿಕ್ಸ್‌ ಪಕ್ಷಿಯಂತೆ ಮೇಲೆದ್ದು ತನ್ನನ್ನು ಅಭೂತಪೂರ್ವವಾಗಿ ಸೃಷ್ಟಿಕೊಂಡದ್ದು, ಮೃತ್ಯುಂಜಯತೆಯ ಕಾರ್ಯಗಳೇ. ಕಗ್ಗ ಸುಂದರವಾಗಿ ಎರಡು ಉದಾಹರಣೆಗಳನ್ನು ನೀಡುತ್ತದೆ. ಎಷ್ಟು ಸಲ ಭೂಮಿ ಕೊಳೆಯಾದರೂ, ಮಳೆ ಮತ್ತೆ ಮತ್ತೆ ಬಂದು ಅದನ್ನು ತೊಳೆಯುತ್ತದೆ. ಎಷ್ಟು ಬಾರಿ ಬೆಳೆಯನ್ನು ಕತ್ತರಿಸಿದರೂ ಧರೆ ಮತ್ತೆ ಮತ್ತೆ ನೀಡುತ್ತದೆ. ಅಂತೆಯೇ ಪ್ರತಿ ಬಾರಿ ವ್ಯವಸ್ಥೆ ಕುಸಿದಾಗ ಅದನ್ನು ಕಟ್ಟುವುದೇ ಮೃತ್ಯುಂಜಯತೆ ಎಂದು ಸಾರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು