ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೇವ ಭಾವ

Last Updated 7 ಡಿಸೆಂಬರ್ 2021, 19:32 IST
ಅಕ್ಷರ ಗಾತ್ರ

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು - |
ವನುಮಿತಿಯ ನೀಂ ಗೆಯ್ಯೆ, ಸುಖಿಯದೇನೆನುವಂ? ||
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ - |
ದನುಭವವ ನೀನರಸೊ – ಮಂಕುತಿಮ್ಮ || 514 ||

ಪದ-ಅರ್ಥ: ಸುಖವಿಲ್ಲವದರಿಂ=ಸುಖವಿಲ್ಲ+ಅದರಿಂ(ಅದರಿಂದ), ದೇವರಿರನೆನ್ನುವನು ಮಿತಿಯ=ದೇವರು+ಇರನು+
ಎನ್ನುವ+ಅನುಮಿತಿಯ(ಊಹೆಯನ್ನು),ಗೆಯ್ಯೆ=ಮಾಡಿದರೆ,ಸುಖಿಯದೇನೆನುವಂ=ಸುಖಿಯು+ಅದೇನು+ಎನುವಂ(ಎನ್ನುತ್ತಾನೆ), ತನುಬಾಹ್ಯಕರಣದನುಭವಕಿಂತ=ತನು=ಬಾಹ್ಯಕರಣ(ಇಂದ್ರಿಯಗಳ)+ಅನುಭವಕಿಂತ, ಸೂಕ್ಷ್ಮತರದನುಭವವ=ಸೂಕ್ಷ್ಮತರದ+ಅನುಭವವ, ನೀನರಸೊ=ನೀನು+ಅರಸೊ(ಹುಡುಕಾಡು)

ವಾಚ್ಯಾರ್ಥ: ಎನಗೆ ಯಾವ ಸುಖವೂ ಇಲ್ಲ, ಆದ್ದರಿಂದ ದೇವರಿಲ್ಲ ಎನ್ನುವ ಊಹೆಯಿಂದ ಹೊರಟವನು ಒಬ್ಬನಾದರೆ, ಸುಖಿಯಾಗಿದ್ದವನು ದೇವರೆಂದರೇನು ಎನ್ನುತ್ತಾನೆ. ದೇಹದ, ಇಂದ್ರಿಯಗಳ ಅನುಭವಗಳಿಗಿಂತ ಸೂಕ್ಷ್ಮತರವಾದ ಅನುಭವವನ್ನು ನೀನು ಅರಸು.

ವಿವರಣೆ: ಮನೆಯ ಫೋನ್ ಕೆಟ್ಟು ಎಷ್ಟು ದಿನವಾಯಿತು. ಎಷ್ಟು ತಕರಾರು ಮಾಡಿದರೂ ಯಾರೂ ಬಂದು ರಿಪೇರಿ ಮಾಡುತ್ತಿಲ್ಲ. ಫೋನ್ ಇಲಾಖೆಯವರು ಇಲ್ಲವೇ ಇಲ್ಲ. ನನ್ನ ತೊಂದರೆಗಳಿಗೆ ಸರ್ಕಾರಕ್ಕೆ ಏನೆಲ್ಲ ವಿನಂತಿ ಮಾಡಿದೆ, ಏನೂ ಫಲವಿಲ್ಲ, ಸರ್ಕಾರವೇ ಇಲ್ಲ. ಯಾವಾಗಿನಿಂದ ಕೂಗುತ್ತಿದ್ದೇನೆ, ಯಾವ ಪ್ರತಿಸ್ಪಂದನೆಯೂ ಇಲ್ಲ, ಆದ್ದರಿಂದ ಹೊರಗೆ ಯಾರೂ ಇಲ್ಲ, ಹೀಗೆ ಸಾಗುತ್ತದೆ ನಮ್ಮ ವಾದ ಸರಣಿ. ನಮಗೆ ಸಿಗದಿದ್ದರೆ ಅದು ಇಲ್ಲ ಎಂಬ ಸಿದ್ಧಾಂತ. ನಾವು ಭಗವಂತನನ್ನು ಹಾಗೆಯೇ ತಿಳಿಯುತ್ತೇವೆ. ನಮಗೆಷ್ಟು ಕಷ್ಟ, ನಮ್ಮ ದುಃಖಗಳಿಗೆ ಮಿತಿಯೇ ಇಲ್ಲ. ದೇವರೆಂಬುವವನು ಇದ್ದಿದ್ದರೆ ಬಂದು ನಮ್ಮ ರಕ್ಷಣೆ ಮಾಡಬೇಕಿತ್ತಲ್ಲ. ಹಾಗೆ ಮಾಡದಿರುವುದರಿಂದ ದೇವರೆಂಬುವನು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬರುತ್ತೇವೆ. ನಮ್ಮ ಪ್ರಕಾರ ದೇವರೆಂದರೆ ಒಬ್ಬ ಸೂಪರ್ ಮ್ಯಾನ್. ಅವನು ಯಾರಿಗೆ, ಯಾವಾಗ, ಏನು ಸಹಾಯ ಮಾಡಬೇಕು ಎಂದು ಕಾಯ್ದುಕೊಂಡಿದ್ದು, ಕಷ್ಟಕಂಡ ತಕ್ಷಣ ಧಾವಿಸಿ ಬಂದು ಪರಿಹಾರ ಮಾಡಬೇಕು. ನಮ್ಮ ಪ್ರಕಾರ ದೇವರು ದುಃಖಹರ್ತ, ಸುಖಕರ್ತಾ. ಅಂದರೆ ನಮ್ಮ ದುಃಖಗಳನ್ನೆಲ್ಲ ದೂರಮಾಡಿ ಸುಖವನ್ನು ನೀಡುವುದು ಅವನ ಕರ್ತವ್ಯ.

ಕಗ್ಗ ಈ ಮಾತನ್ನು ಹೇಳುತ್ತದೆ. ನನಗೆ ಸುಖವಿಲ್ಲವಾದ್ದರಿಂದ ದೇವರಿಲ್ಲ. ಎನ್ನುವ ತೀರ್ಮಾನಕ್ಕೆ ನಾವು ಬರುವುದಾದರೆ, ಸುಖವಾಗಿರುವವನು ಏನೆನ್ನಬೇಕು? ಅವನು ಸುಖವಾಗಿದ್ದರೆ ದೇವರಿದ್ದಾನೆ ಎನ್ನಬೇಕೇ? ಹಾಗಾದರೆ ಕೆಲವರಿಗೆ ಇದ್ದಾನೆ, ಕೆಲವರಿಗೆ ಇಲ್ಲ ಎನ್ನಲಾದೀತೇ? ಭಗವಂತನನ್ನು, ನಮಗೆ ದೊರೆತದ್ದರಿಂದ ಮತ್ತು ದೊರೆಯದಿದ್ದುದರಿಂದ ತಿಳಿಯಲಾಗುವುದಿಲ್ಲ. ಭಗವಂತನ ಇರುವಿಕೆ ಒಂದು ಅನುಭವ. ಅವನು ನಿತ್ಯ, ನಿರಾಕಾರ. ಅದು ಚಿಂತನೆಗೆ ನಿಲುಕದ ತತ್ವ.

ನಮ್ಮ ಇಂದ್ರಿಯಗಳಿಗೆ ದಕ್ಕುವ ವಿಶ್ವದ ಮೂಲವಸ್ತು ಪ್ರಕೃತಿ. ಅದಕ್ಕೆ ಗುಣವಿದೆ, ರೂಪವಿದೆ. ಅದರ ಪರಮಾಧಾರ ಚೈತನ್ಯವನ್ನೇ ದೃಷ್ಟಾರರು ದೇವರು, ದೈವ, ಪರಮಾತ್ಮ ಎಂದು ಕರೆದರು. ಜಗತ್ತು ದೃಷ್ಟಿಗೋಚರ ಆದರೆ ದೇವರು ಭಾವಗೋಚರ. ನೋಡುವ ಕಾರ್ಯಕ್ಕೆ ಕರಣಗಳು ಬೇಕು. ಆದರೆ ದೈವದ ಕ್ಷೇತ್ರ ಪ್ರವೇಶಿಸಿದೊಡನೆ ಶಬ್ದಗಳು, ಕರಣಗಳು ಅಡಗಿ ಹೋಗುತ್ತವೆ. ಮನ ಅಮನವಾಗುತ್ತದೆ, ದಿಕ್ಕುಗಳ ಭೇದ ಅಡಗುತ್ತದೆ. ಈ ಎಲ್ಲ ಭೇದಗಳು ಕರಗಿ ಹೋದಾಗ ಉಳಿಯುವುದು ದೇವ-ಭಾವ. ಅದು ನಿರಪೇಕ್ಷ ಸತ್ಯದ ಅರಿವು. ಆ ಸೂಕ್ಷ್ಮದ ಅನುಭವವನ್ನು ಅರಸುವುದೇ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT