ಬುಧವಾರ, ಜನವರಿ 19, 2022
28 °C

ಬೆರಗಿನ ಬೆಳಕು: ಹಿರಿತನದ ನೋಟದ ಶಾಂತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು |
ಬೆರಗೆ, ಮೈಮರವೆ, ಸೊಲ್ಲಣಗುವುದೆ ಸೊಗಸು ||
ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ |
ಪರಮನರ್ಚನೆಗೆವರ – ಮಂಕುತಿಮ್ಮ || 496 ||

ಪದ-ಅರ್ಥ: ಬೆರಗಾಗಿಪುವುವೆಲ್ಲ=ಬೆರಗಾಗಿ
ಪುವ+ಅವೆಲ್ಲ, ಪಿರಿತನದ=ಹಿರಿತನದ, ಸೊಲ್ಲಣಗುವುದೆ=ಸೊಲ್ಲು(ಮಾತು)+ಅಣಗುವುದೆ (ಮರೆತು ಹೋಗುವುದೆ), ನುಂಗಲೊಗೆವ=ನುಂಗಲು+ಒಗೆವ(ಬೀರುವ, ಹೊರಬರುವ), ಪರಮನರ್ಚನೆಗೆ=ಪರಮನ(ಪರಮಾತ್ಮನ)+ಅರ್ಚನೆಗೆ.

ವಾಚ್ಯಾರ್ಥ: ಪ್ರಪಂಚದಲ್ಲಿ ಕಾಣುವ ಹಿರಿದಾದ ದೃಶ್ಯಗಳು ನಮ್ಮನ್ನು ಬೆರಗಾಗುವಂತೆ, ಮೈಮರೆಸುವಂತೆ, ಮಾತನ್ನು ಮರೆಸುವಂತೆ ಮಾಡುವುದೇ ಸುಂದರ. ಆ ಬೆರಗು ನಮ್ಮ ಮನಸ್ಸನ್ನು ಆವರಿಸಿದಾಗ ಬರುವ ಶಾಂತಿಯ ಕಾಂತಿಯೇ ಭಗವಂತನ ಅರ್ಚನೆಗೆ ದೊರೆತ ವರ.

ವಿವರಣೆ: ನಾನು ಕಾಲೇಜಿಗೆ ಕಾರಿನಲ್ಲಿ ಹೋಗುತ್ತಿದ್ದೆ. ನನ್ನ ಮುಂದೆಯೇ ಒಂದು ದೈತ್ಯ ಲಾರಿ. ಅದರ ಮುಂದೆ ಸ್ವಲ್ಪ ದೂರದಲ್ಲಿ, ಬಲಗಡೆಗೆ, ದಂಪತಿಗಳು ಸ್ಕೂಟರಿನಲ್ಲಿ ಹೋಗುತ್ತಿರುವುದು ಕಾಣುತ್ತಿತ್ತು. ಹಿಂದೆ ಕುಳಿತ ಹೆಂಡತಿಯ ಮಡಿಲಿನಲ್ಲಿ ಒಂದು ಪುಟ್ಟ ಮಗು. ಗಂಡ ಮುಂದಿದ್ದ ರಸ್ತೆಯ ಉಬ್ಬನ್ನು ಗಮನಿಸಲಿಲ್ಲವೋ ಅಥವಾ ವೇಗದಲ್ಲಿ ಅದನ್ನು ದಾಟಿಸಿದನೋ ತಿಳಿಯದು. ಹಿಂದೆ ಕುಳಿತಿದ್ದ ಹೆಂಡತಿ, ಮಕ್ಕಳು ಮೇಲಕ್ಕೆ ಹಾರಿದರು. ಅವನಿಗೂ ಆಯ ತಪ್ಪಿತು. ಗಂಡ, ಹೆಂಡತಿ ಇಬ್ಬರೂ ರಸ್ತೆಯ ಬಲಬದಿಗೆ ಇದ್ದ ವಿಭಜಕದ ಮೇಲೆ ಬಿದ್ದರು. ಮಗು ಹಾರಿ ರಸ್ತೆಯ ಮಧ್ಯೆಯೇ ಬಿತ್ತು. ಹಿಂದೆಯೇ ಇದ್ದ ಲಾರಿ ಅದರ ಮೇಲೆ ಸಾಗಿ ಹೋಯಿತು. ಇದಾದದ್ದು ಕ್ಷಣಾರ್ಧದಲ್ಲಿ. ನನ್ನ ಎದೆ ಹೌಹಾರಿತು. ತಕ್ಷಣ ಕಾರನ್ನು ರಸ್ತೆಯ ಮಧ್ಯೆಯೇ ನಿಲ್ಲಿಸಿದೆ. ಹಿಂದೆ ಬರುವ ವಾಹನಗಳು ನಿಲ್ಲಲೆಂಬ ವಿಚಾರ ನನ್ನದು. ಪರಮಾಶ್ವರ್ಯ! ಮಗುವಿನ ಎರಡೂ ಬದಿಗೂ ಗಾಲಿಗಳು ಹಾದು ಹೋಗಿವೆ. ಪವಾಡಸದೃಶವಾಗಿ ಮಗುವಿಗೇನೂ ಆಗಿಲ್ಲ! ಆದರೆ ಆ ಕಡೆಗೆ ಬಿದ್ದ ತಾಯಿ, ತನ್ನ ತಲೆಯಿಂದ ರಕ್ತ ಸೋರುತ್ತಿರುವುದನ್ನು ಗಮನಿಸದೆ, ಅಯ್ಯೋ ಎಂದು ಧಾವಿಸಿ ಮಗುವಿನೆಡೆಗೆ ನುಗ್ಗಿ ಬಂದು ಅದನ್ನೆತ್ತಿಕೊಂಡು, ಎದೆಗೊತ್ತಿಕೊಂಡು ‘ಕಂದಾ, ಕಂದಾ’ ಎಂದು ಅಳುತ್ತ ರಸ್ತೆಯ ಮಧ್ಯದಲ್ಲೇ ಮೊಳಕಾಲೂರಿ ಕುಳಿತದ್ದನ್ನು ನಾನೆಂದಿಗೂ ಮರೆಯಲಾರೆ. ತಾಯಿಯ ಅನನ್ಯವಾದ, ಅದ್ವಿತೀಯವಾದ, ಮಾತೃಪ್ರೇಮದ ಉತ್ಕಟತೆಯ ದರ್ಶನ ಅದಾಗಿತ್ತು. ನನಗೆ ಕ್ಷಣಕಾಲ ಏನು ಮಾಡಲೂ ತೋಚಲಿಲ್ಲ, ಮಾತು ಬರಲಿಲ್ಲ, ಮೈ ಮರೆತಿತ್ತು.

ಇದು ನನಗಾದ ಧನ್ಯತೆಯ ಕ್ಷಣ. ಹೀಗೆ ಅನೇಕರಿಗೆ, ಪ್ರಪಂಚದಲ್ಲಿ ಪರಮಾದ್ಭುತವನ್ನು ಕಂಡಾಗ, ಅತ್ಯಂತ ದೊಡ್ಡವರ ದರ್ಶನವಾದಾಗ, ಹಿರಿದಾದ ಕ್ಷಣಗಳಿಗೆ ಸಾಕ್ಷಿಯಾದಾಗ ಬೆರಗು ಹುಟ್ಟುತ್ತದೆ. ಆ ವರ್ಣನಾತೀತ ಸಂದರ್ಭದಿಂದ ಮೈಮರೆತು, ಮಾತು ಮೂಕವಾಗುತ್ತದೆ. ಅದೊಂದು ಸುಂದರ, ಸೊಗಸಿನ ಕ್ಷಣ. ಹೀಗೆ ಬೆರಗಿನಿಂದ ಮನಸ್ಸು ನಿಶ್ಚಲವಾಗಿ ನಿಂತಾಗ ಶಾಂತಿ ಮೈದೋರುತ್ತದೆ. ಈ ಶಾಂತಿಯ ಕಾಂತಿ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ.

ಕಗ್ಗ ಹೇಳುತ್ತದೆ, ಈ ಶಾಂತಿ, ಅದರಿಂದ ಬಂದ ಕಾಂತಿ ಇವುಗಳೇ ಪರಮಾತ್ಮನ ಅರ್ಚನೆಗೆ ದೊರೆತ ವರಗಳು. ಭಗವಂತನನ್ನು ಅತ್ಯಂತ ಶ್ರದ್ಧೆಯಿಂದ, ಆರ್ತತೆಯಿಂದ ಪೂಜಿಸಿದಾಗ ಬರುವ ಶಾಂತಿಗೆ ಸಮಾನಾದದ್ದು ಈ ಬಗೆಯ ಹಿರಿತನದ ನೋಟ ನೀಡುವ ಶಾಂತಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.