ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಧಿಯ ದಾಳಿ

Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು –ಮಂಕುತಿಮ್ಮ || 550 ||

ಪದ-ಅರ್ಥ: ಮೆಲುಮೆಲನೊಮ್ಮೆ=ಮೆಲು+
ಮೆಲನೆ+ಒಮ್ಮೆ, ಬಹನು=ಬರುವನು, ತಾಳುಮೆ
ಯಿನಿರು=ತಾಳುಮೆಯಿನ್(ತಾಳ್ಮೆಯಿಂದ)+ಇರು

ವಾಚ್ಯಾರ್ಥ: ಈ ವಿಧಿರಾಯನೆಂಬುವವನು ಹೇಳದೆಯೆ, ಕೇಳದೆಯೆ, ಕೆಲವೊಮ್ಮೆ ಹಗುರವಾಗಿ ಮೆಲ್ಲಮೆಲ್ಲನೆ ಬಂದರೆ ಕೆಲವೊಮ್ಮೆ ದಾಳಿ ಮಾಡುವಂತೆ ರಭಸದಲ್ಲಿ ಬರುತ್ತಾನೆ. ಬಂದವನೇ ಕೆಳಗಿದ್ದನ್ನು ಮೇಲೆ, ಮೇಲಿದ್ದನ್ನು ಕೆಳಗೆ ಮಾಡಿ ಬಿಡುತ್ತಾನೆ. ನೀನು ತಾಳ್ಮೆಯಿಂದಿರು.

ವಿವರಣೆ: ರಾಜ ತನ್ನ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದ. ತಾನೊಬ್ಬ ಅತ್ಯಂತ ಸಮರ್ಥ ಆಡಳಿತಗಾರ, ಪ್ರಜಾ ಚಿಂತಕ ಎಂಬುದರ ಅರಿವು ಅವನಿಗಿತ್ತು. ನಗರಗಳಲ್ಲಿ, ಹಳ್ಳಿಗಳಲ್ಲಿ ಜನರ ಸಭೆ ಕರೆದಿದ್ದ, ಎತ್ತರದ ದಿನ್ನೆಯ ಮೇಲೆ ಅವನ ಅಲಂಕೃತ ಕುರ್ಚಿಯನ್ನಿಟ್ಟಿದ್ದರು. ಜನರೆಲ್ಲ ಕೆಳಗೆ ನೆಲದ ಮೇಲೆ ಕುಳಿತಿದ್ದರು. ಉಭಯಕುಶಲೋಪರಿಯಾದ ಮೇಲೆ ನಗರದ ಹಿರಿಯನೊಬ್ಬ ರಾಜನಿಗೆ ಗೌರವ ಸಲ್ಲಿಸಿ ಮಾತನಾಡಿದ. ‘ಮಹಾರಾಜರು ದಕ್ಷರು, ಜನರ ಪ್ರೀತಿಗೆ ಮಾನ್ಯರಾದವರು. ಅವರು ಹೀಗೆಯೇ ದೀರ್ಘಕಾಲ ಅಧಿಕಾರದಲ್ಲಿರಲಿ. ವಿಧಿ ಅವರನ್ನು ಯಾವಾಗಲೂ ಕರುಣೆಯಿಂದ ಕಾಣಲಿ’ ಎಂದ. ರಾಜ ತಕ್ಷಣವೇ ಕೇಳಿದ, ‘ವಿಧಿ ಏನು ಮಾಡುತ್ತದೆ? ನಮ್ಮ ಪ್ರಯತ್ನವೇ ಮುಖ್ಯ. ವಿಧಿ ಎನ್ನುವುದು ಹೇಡಿಗಳ ಮತ್ತು ಸೋಮಾರಿಗಳ ಮಾತು. ಯಾರಾದರು ವಿಧಿಯನ್ನು ಕಂಡಿದ್ದೀರಾ? ಅದು ಏನು ಮಾಡುತ್ತದೆ ಎಂಬುದನ್ನು ತಿಳಿದಿದ್ದೀರಾ?’ ಅವನ ಕೋಪ ಏರುತ್ತಿತ್ತು. ಆಗ ಅಲ್ಲಿ ನಿಂತಿದ್ದ ಒಬ್ಬ ದನಗಾಹಿ ಹುಡುಗ ಜೋರಾಗಿ ಕೂಗಿದ, ‘ಪ್ರಭುಗಳೇ, ನನಗೆ ವಿಧಿ ಏನು ಮಾಡುತ್ತದೆ ಗೊತ್ತು’. ರಾಜ ಅವನನ್ನು ಹತ್ತಿರಕ್ಕೆ ಕರೆದ. ‘ನೀನು ಹೇಳಯ್ಯ, ವಿಧಿ ಏನು ಮಾಡಬಲ್ಲದು?’. ಹುಡುಗ ಹೇಳಿದ, ‘ಮಹಾಪ್ರಭೂ, ಕೇವಲ ಐದು ನಿಮಿಷ ನಾನು ಹೇಳಿದ ಹಾಗೆ ತಾವು ಕೇಳಬೇಕು. ಯಾಕೆ ಎಂದು ಕೇಳಕೂಡದು. ಹಾಗೆ ಮಾಡಿದರೆ ನಾನು ವಿಧಿಯ ಕರಾಮತ್ತನ್ನು ತೋರಿಸುತ್ತೇನೆ’. ರಾಜ ಆಯ್ತು ಎಂದ. ಹುಡುಗ, ‘ಈಗ ತಾವು ನಾನು ನಿಂತಲ್ಲಿಗೆ ಹೋಗಿ ಕೂಡ್ರಬೇಕು. ರಾಜ ಹಾಗೆಯೇ ಮಾಡಿದ. ಹುಡುಗ ನೇರವಾಗಿ ಹೋಗಿ ರಾಜನಿಗಾಗಿ ಇಟ್ಟಿದ್ದ ಕುರ್ಚಿಯಲ್ಲಿ ಕುಳಿತ. ಜನ ಗಾಬರಿಗೊಂಡರು, ಗದ್ದಲವಾಯಿತು’. ಹುಡುಗ ಹೇಳಿದ, ‘ದಯವಿಟ್ಟು ಸುಮ್ಮನಿರಿ. ನನಗಿರುವುದು ಐದೇ ನಿಮಿಷ’. ನಂತರ ರಾಜನೆಡೆಗೆ ನೋಡಿ ಹೇಳಿದ, ‘ಮಹಾರಾಜರೆ ತಿಳಿಯಿತೇ ವಿಧಿಯ ಶಕ್ತಿ? ಎರಡೇ ನಿಮಿಷದಲ್ಲಿ ರಾಜನಾದವನನ್ನು ನೆಲದಲ್ಲಿ ಕೂಡ್ರಿಸಿತು, ದನಕಾಯುವವನನ್ನು ಸಿಂಹಾಸನದಲ್ಲಿ ಕೂಡ್ರಿಸಿತು’.

ವಿಧಿಯ ಈ ಕೈವಾಡವನ್ನು ಕಗ್ಗ ಹೇಳುತ್ತದೆ. ವಿಧಿ ನಮ್ಮ ಮೇಲೆ ಹೇಗೆ ಆಕ್ರಮಣ ಮಾಡುತ್ತದೆಂಬುದನ್ನು ತಿಳಿಯುವುದು ಕಷ್ಟ. ನಿಧಾನವಾಗಿಯೋ, ರಭಸದಿಂದಲೋ ನಮ್ಮ ಬಾಳಿನಲ್ಲಿ ನುಗ್ಗಿ ಕೆಳಗಿರುವುದನ್ನು ಮೇಲೆ ಮಾಡಿ, ಮೇಲಿರುವುದನ್ನು ಕೆಳಗೆ ಮಾಡಿ ಬಿಡುತ್ತದೆ. ಹೆಸರಿಲ್ಲದ ಹುಡುಗ, ಚಾಣಕ್ಯನ ಕೈಗೆ ಸಿಕ್ಕಿ ಚಂದ್ರಗುಪ್ತ ಮೌರ್ಯನಾಗುತ್ತಾನೆ, ಅಧಿಕಾರದ ಎತ್ತರದಲ್ಲಿ ಉನ್ಮತ್ತತೆಯಲ್ಲಿ ಇದ್ದ ಸದ್ದಾಂ ಹುಸೇನ ಅನಾಥನಂತೆ ಗಲ್ಲಿಗೇರುತ್ತಾನೆ. ನಾಗರಿಕತೆಯ ಔನ್ನತ್ಯದಲ್ಲಿದ್ದ ರೋಮ್ ಸಾಮ್ರಾಜ್ಯ ಕುಸಿದುಹೋಗುತ್ತದೆ. ಜನರು ಹೆಸರೇ ಕೇಳಿಲ್ಲದ ವ್ಯಕ್ತಿ ರಾಷ್ಟ್ರಪತಿಯಾಗುತ್ತಾನೆ. ಹಣ, ಅಧಿಕಾರದಿಂದ ಎತ್ತರಕ್ಕೇರಿದ್ದ ಮನುಷ್ಯ ಜೈಲು ಸೇರುತ್ತಾನೆ. ಹಾಗೆ ಸೇರುವುದಕ್ಕಿಂತ ಮೊದಲು ತಾನು ಅಜೇಯ, ಅಭೇದ್ಯ ಎಂದುಕೊಂಡಿದ್ದ. ಹೀಗಾಗಿ ವಿಧಿ ಧಾಳಿ ಮಾಡಿದಾಗ ನಮಗಿರುವ ಢಾಲು, ರಕ್ಷಕ ಎಂದರೆ ತಾಳ್ಮೆ ಒಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT