ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಧಿಯ ಅಧಿಕಾರ

Last Updated 25 ಜನವರಿ 2022, 19:30 IST
ಅಕ್ಷರ ಗಾತ್ರ

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |
ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||
ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು |
ಅದಟದಿರು ನೀನವನ – ಮಂಕುತಿಮ್ಮ || 549 ||

ಪದ-ಅರ್ಥ: ಹದವರಿತು=ಹದವ+ಅರಿತು, ಕುದುರಿಸುವನೆಲ್ಲವನು=ಕುದುರಿಸುವನು(ಸರಿಪಡಿಸುವನು)+ಎಲ್ಲವನು, ಅದಟದಿರು=ಗದರಿ
ಸದಿರು, ನೀನವನ=ನೀನು+ಅವನ.

ವಾಚ್ಯಾರ್ಥ: ವಿಧಿಗೆ ನೀನು ಕಾರ್ಯದ ರೂಪುರೇಷೆಗಳನ್ನು ವಿಧಿಸಲು ಹೋಗಬೇಡ. ನೀನು ಅದಕ್ಕೆ ಅಧಿಕಾರಿಯಲ್ಲ ಮತ್ತು ವಿಧಿ ಮೂರ್ಖನಲ್ಲ. ಸರಿಯಾದ ಹದವನ್ನು ನೋಡಿಕೊಂಡು ಎಲ್ಲವನ್ನೂ ಸರಿಪಡಿಸುತ್ತಾನೆ. ಅವನನ್ನು ಗದರಿಸ ಹೋಗದಿರು.

ವಿವರಣೆ: ವಿಧಿ ಎನ್ನುವುದೊಂದು ನಮ್ಮ ಭಾರತೀಯ ಕಲ್ಪನೆ. ವಿಧಿ ನಮ್ಮ ಎಲ್ಲ ಚಿಂತನೆಗಳನ್ನು ಮೀರಿದ್ದು. ಅದರ ಹೊಂಚು ನಮಗೆ ತಿಳಿಯಲಾರದು. ನಮ್ಮ ಅತ್ಯಂತ ಯೋಜಿತವಾದ ಕಾರ್ಯಗಳು ನಡೆಯದೆ ಹೋದಾಗ ಅಥವಾ ಯೋಜಿಸದೇ ಇದ್ದ ಕಾರ್ಯಗಳು ಕಲ್ಪನಾತೀತವಾಗಿ ನಡೆದು ಹೋದಾಗ ಅವು ಯಾಕೆ ಹಾಗೆ ನಡೆದವು ಎಂಬುದನ್ನು ವಿವರಿಸಲು ನಮ್ಮ ತರ್ಕ ಸೋತು ಹೋಗುತ್ತದೆ. ನಮ್ಮ ತರ್ಕದ ಮಿತಿಗಳನ್ನು ದಾಟಿದ, ಅವರ್ಣನೀಯವಾದ ಸಂದರ್ಭಗಳನ್ನು ವಿವರಿಸಲು ಈ ‘ವಿಧಿ’ ಎಂಬ ಪದವನ್ನು ಹಿರಿಯರು ಬಳಸಿರಬೇಕು. ನಮಗೆ ಯಾವುದೇ ರೀತಿಯ ಸಂಬಂಧವಿಲ್ಲದ ವ್ಯಕ್ತಿಯೋ, ಕೆಲಸವೋ ನಮಗೆ ಸಹಾಯಕವಾಗಿ ಅಥವಾ ವಿರುದ್ಧವಾಗಿ ನಡೆಯುವುದನ್ನು ಹೇಗೆ ವಿವರಿಸುವುದೆಂದು ತಿಳಿಯದೆ, ಅದು ವಿಧಿಯ ಕಾರ್ಯ ಎಂದಿರಬೇಕು. ಯಾಕೆಂದರೆ ಅದು ಕಾರ್ಯ-ಕಾರಣ ಸಿದ್ಧಾಂತಕ್ಕೆ ಹೊರಗು.

ಅಯೋಧ್ಯೆಯ ರಾಜ್ಯಭಾರ ಮಾಡುತ್ತಿದ್ದ ರಾಜಾಹರಿಶ್ಚಂದ್ರ. ಅವನು ತನ್ನ ಪಾಡಿಗೆ ತಾನು ಸಂತೋಷವಾಗಿ, ಪ್ರಾಮಾಣಿಕವಾಗಿ ರಾಜ್ಯಬಾರ ಮಾಡುತ್ತಿದ್ದ. ಆಗ ಸ್ವರ್ಗದಲ್ಲಿ ಮಹರ್ಷಿ ವಶಿಷ್ಠರಿಗೆ ಮತ್ತು ವಿಶ್ವಾಮಿತ್ರರಿಗೆ ವಾದ ಪ್ರಾರಂಭವಾಯಿತಂತೆ. ಭೂಲೋಕದಲ್ಲಿ ಸತ್ಯವನ್ನೇ ಹೇಳಿ ಬದುಕುವುದು ಸಾಧ್ಯವಿಲ್ಲವೆಂಬುದು ವಿಶ್ವಾಮಿತ್ರರ ವಾದ. ಹಾಗಿಲ್ಲ, ಹರಿಶ್ಚಂದ್ರನಂಥ ಸತ್ಯವಾದಿಗಳೂ ಇದ್ದಾರೆ ಎಂದರು ವಶಿಷ್ಠರು. ಒತ್ತಡದ ಸ್ಥಿತಿ ಬಂದಾಗ ಎಂಥವನೂ ಸತ್ಯವನ್ನೂ ಬಿಡುತ್ತಾನೆ ಎಂದು ವಾದಿಸಿದರು ವಿಶ್ವಾಮಿತ್ರರು. ಅದಕ್ಕೆ ವಶಿಷ್ಠರು ಒಪ್ಪದಿದ್ದುದರಿಂದ ಪರೀಕ್ಷೆ ಮಾಡಿ ನೋಡಲು ವಿಶ್ವಾಮಿತ್ರರು ತೀರ್ಮಾನಿಸಿದರು. ಅದಕ್ಕೆ ಪ್ರಯೋಗಪಶುವಾದದ್ದು ಹರಿಶ್ಚಂದ್ರ. ವಿಶ್ವಾಮಿತ್ರರು ಹರಿಶ್ಚಂದ್ರನನ್ನು ಯಾವ ಮಟ್ಟಿಗೆ ಪರೀಕ್ಷಿಸಿದರು ಎನ್ನುವುದು ಪುರಾಣದ ಕಥೆಯಾಯಿತು. ಪಾಪ! ಇದಕ್ಕೆ ಹರಿಶ್ಚಂದ್ರ ಮಾಡಿದ ತಪ್ಪೇನು? ಅದನ್ನು ನಾವು ವಿಧಿಯ ಪರೀಕ್ಷೆ ಎಂದೆವು.

ಇಂದಿಗೂ ಹಾಗೆಯೇ ಇದೆ. ನಾನಿಷ್ಟು ಪ್ರಯತ್ನ ಮಾಡಿದ್ದೇನೆ, ಇಷ್ಟು ಓದಿದ್ದೇನೆ. ಇಷ್ಟು ಜನರಿಗೆ ಸಹಾಯ ಮಾಡಿದ್ದೇನೆ, ಆದ್ದರಿಂದ ನನಗೆ ಇಂಥ ಫಲ ಸಿಗಲಿ ಎಂದು ಆಶಿಸುವುದು ಸಾಧ್ಯವಿಲ್ಲ. ಅದು ಹಾಗೆ ಆಗಿಯೇ ತೀರುತ್ತದೆಂಬ ಭರವಸೆಯಿಲ್ಲ. ಒಂದು ಸುಭಾಷಿತ ಇದನ್ನು ಅನುಮೋದಿಸುತ್ತದೆ.

ಮನಸಾಸಿ ಯದಸ್ಪೃಷ್ಟಂ ದೂರಾದಪಿ ಯದುಜ್ಝಿತಮ್ |
ಅದಪ್ಯುಪಾಯ್ಯೆ ರ್ವಿವಿಧೈರ್ವಿಧಿರಿಚ್ಛನ್ ಪ್ರಯಚ್ಛತಿ||

‘ಯಾವುದನ್ನು ಮನಸ್ಸಿನಿಂದ ಕೂಡ ಮುಟ್ಟಲಾಗದೋ, ಯಾವುದು ನಿರಾಸೆಯಿಂದ ತಿರಸ್ಕರಿಸಲ್ಪಟ್ಟಿದೆಯೋ, ಅಂಥದನ್ನೂ ಸಹ ಬಗೆಬಗೆಯ ಮಾರ್ಗಗಳಿಂದ ವಿಧಿ ನಡೆಸಿ ಬಿಡುತ್ತದೆ’ ಅದನ್ನು ಕಗ್ಗ ಹೇಳುತ್ತದೆ. ವಿಧಿಗೆ ನೀನು ಹೀಗೆ ಮಾಡು, ಹಾಗೆ ತಿಳಿಸು ಎಂದು ಅಪ್ಪಣೆ ಕೊಡಬೇಡ. ನೀನು ಅಧಿಕಾರಿಯೂ ಅಲ್ಲ, ವಿಧಿ ದಡ್ಡನೂ ಅಲ್ಲ. ಅವನೇ ಎಲ್ಲವನ್ನೂ ಸರಿಯಾದ ಸಮಯದಲ್ಲಿ ಹೊಂದಿಸುತ್ತಾನೆ. ಅವನನ್ನು ಗದರಿಸುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT