ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಪುಣ್ಯದ ಮಾರ್ಗಗಳು

Last Updated 20 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ |
ಕುಂದದುಬ್ಬದ ಮನಸು ಬಂದುದೇನಿರಲಿ ||
ಬಂಧು ಮತಿ ಲೋಕದಲಿ, ಮುನ್‌ದೃಷ್ಟಿ ಪರಮದಲಿ ಹೊಂದಿರಲಿವದು ಪುಣ್ಯ – ಮಂಕುತಿಮ್ಮ || 782 ||

ಪದ-ಅರ್ಥ: ಅಂದಿಗಂದಿನ=ಅಂದಿಗೆ+ಅಂದಿನ, ಸಂದನಿತರಲಿ=ಸಂದ(ದೊರೆತ)+ಅನಿತರಲಿ (ಅಷ್ಟರಲಿ), ಕುಂದದುಬ್ಬದ=ಕುಂದದ(ಕುಗ್ಗದ)+ಉಬ್ಬದ(ಹಿಗ್ಗದ),ಬಂದುದೇನಿರಲಿ=ಬಂದದು+ಏನು+ಇರಲಿ, ಮುನ್ ದೃಷ್ಟಿ=ಮುಂದಿನ ದೃಷ್ಟಿ, ಹೊಂದಿರಲಿವದು=ಹೊಂದಿ+ಇರಲಿ+ಅದು.

ವಾಚ್ಯಾರ್ಥ: ಆವತ್ತಿನ ಕೆಲಸ ಆವತ್ತಿಗೆ, ಬಂದದ್ದರಲ್ಲಿ ತೃಪ್ತಿ, ಯಾವ ಪ್ರಸಂಗದಲ್ಲೂ ಹಿಗ್ಗದ, ಕುಗ್ಗದ ಮನಸ್ಸು, ಲೋಕದ ಎಲ್ಲರನ್ನು ಬಂಧುಗಳೆಂದು ತಿಳಿಯುವ ಬುದ್ಧಿ, ಪರಮತತ್ವದಲ್ಲಿ ಮುಂದಿನ ದೃಷ್ಟಿ ಹೊಂದಿದ್ದರೆ ಅದು ಪುಣ್ಯ.

ವಿವರಣೆ: ಅವನೊಬ್ಬ ಆಗರ್ಭ ಶ್ರೀಮಂತ. ಮನೆ ಒಂದು ಅರಮನೆ. ಅಲ್ಲಿ ಸಕಲ ಸೌಭಾಗ್ಯಗಳು ಕಾಲುಮುರಿದುಕೊಂಡು ಕುಳಿತಿವೆ. ಆದರೆ ಆತನಿಗೆ ನಿದ್ರೆ ಇಲ್ಲ. ಸಂಜೆಯಾಗುತ್ತಲೇ ಆತ ಎಷ್ಟು ಹಣ ಖರ್ಚಾಯಿತು, ಎಷ್ಟು ಹಣ ಬಂತು ಎಂಬುದರ ಲೆಕ್ಕ ಹಾಕಬೇಕು. ಒಂದೊAದು ಬಾರಿ ಕಳೆದ ತಿಂಗಳಿಗಿಂತ ಹೆಚ್ಚು ಲಾಭವಾದರೆ ಸಂತೋಷವಾಗುತ್ತಿತ್ತು. ಕೆಲವೊಮ್ಮೆ ಲಾಭಕಡಿಮೆಯಾದರೆ ಆತಂಕ. ಅವನಿಗೆ ನಷ್ಟವಾಗದಿದ್ದರೂ ಲಾಭಾಂಶದಲ್ಲಿ ಕಡಿಮೆಯಾಯಿತಲ್ಲ ಎಂಬ ದು:ಖ. ಏನು ಮಾಡಿದರೆ ಲಾಭ ಹೆಚ್ಚಾದೀತು ಎಂಬ ಯೋಚನೆ ಅವನನ್ನು ಹಿಂಡುತ್ತಿತ್ತು. ಅವನ ಮನೆಯ ಬದಿಯಲ್ಲೇ ಒಬ್ಬ ರೈತನ ಮನೆ. ಅವನಿಗೆ ಸ್ವಂತದ ಜಮೀನು ಇಲ್ಲ. ಮತ್ತೊಬ್ಬರ ಹೊಲದಲ್ಲಿ ಕೆಲಸಮಾಡಿ ಬದುಕು ಸಾಗಿಸುತ್ತಿದ್ದ. ಒಂದು ದಿನ ರಾತ್ರಿ ಶ್ರೀಮಂತ ತನ್ನ ಮಾಳಿಗೆಯ ಮೇಲೆ ನಿಂತು ಸುತ್ತ ಮುತ್ತ ನೋಡುತ್ತಿದ್ದ. ಆಗ ಮನೆಯ ಹೊರಗೆ ಕಲ್ಲುಬೆಂಚಿನ ಮೇಲೆ ಮಲಗಿದ್ದ ರೈತನನ್ನು ಕಂಡ. ಹೊರಗಡೆ ಚಳಿ ಇದೆ.

ಆದರೆ ರೈತ ಅಲ್ಲಿಯೇ ಮುದ್ದೆಯಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ. ಶ್ರೀಮಂತನಿಗೆ ಆಶ್ಚರ್ಯ! ತನಗೆ ಅಂಥ ಪ್ರಶಾಂತ ನಿದ್ರೆ ಎಂದೂ ದೊರೆಯಲಿಲ್ಲವಲ್ಲ. ಮರುದಿನ ರೈತನನ್ನು ಕರೆದು ಮಾತನಾಡಿಸಿ ಕೇಳಿದ. ರೈತ ಹೇಳಿದ, “ನನಗೆ ಯಾವ ಚಿಂತೆಯೂ ಇಲ್ಲ ಸ್ವಾಮಿ. ಅಂದಿನ ಕೂಲಿ ಕೆಲಸವನ್ನು ಅಂದೇ ಮಾಡುತ್ತೇನೆ. ಬಂದ ಹಣ ನನ್ನ ಬದುಕಿಗೆ ಸಾಕು. ಹೆಚ್ಚಿನ ಅಪೇಕ್ಷೆ ಏನೂ ಇಲ್ಲ”. ಕಗ್ಗದ ಮೊದಲೆರಡು ಸಾಲಿನ ಮಾತೇ ರೈತನದು.


ಮೈತುಂಬ ದುಡಿತ, ಬಂದದ್ದರಲ್ಲಿ ತೃಪ್ತಿ. ಹೆಚ್ಚು ಕಡಿಮೆ ಎಂಬ ಚಿಂತೆಯಿಲ್ಲ. ಕಗ್ಗ ಇನ್ನೆರಡು ಗುಣಗಳನ್ನು ಸಾರ್ಥಕ ಜೀವನಕ್ಕೆ ಶಿಫಾರಸ್ಸು ಮಾಡುತ್ತದೆ. ಅವು ಬಂಧುಮತಿ, ಮತ್ತು ಪರಮದಲ್ಲಿ ಮುನ್ ದೃಷ್ಟಿ. ಬಂಧುಮತಿಯೆಂದರೆ ಲೋಕದಲ್ಲಿರುವವರೆಲ್ಲ ನಮ್ಮ ಬಂಧುಗಳೇ ಎಂಬ ಭಾವ. ‘ವಸುಧೈವ ಕುಟುಂಬಕಂ’ ಎನ್ನುವುದೂ ಅದೇ. ಪರಮದಲ್ಲಿ ಮುನ್ ದೃಷ್ಟಿ ಎಂದರೆ ತನ್ನ ಮುಖ್ಯ ಗುರಿ ಪರಮವಸ್ತು ಎಂಬಚಿಂತನೆ. ಲೋಕ ಜೀವನವನ್ನು ನಡೆಸುತ್ತ, ತೃಪ್ತಿಯಿಂದಿರುತ, ಪರಮವಸ್ತುವಿನಲ್ಲಿ ದೃಷ್ಟಿಯನ್ನು ನೆಟ್ಟಿರಬೇಕು. ಇವೆಲ್ಲ ಹೊಂದಿದ್ದರೆ ಬದುಕೊಂದುಪುಣ್ಯದಮಾರ್ಗವಾಗುತ್ತದೆ. ಆ ದಿಶೆಗೆ ಪ್ರಯತ್ನಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT