ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ವಿವಿಧತೆಯಲ್ಲಿ ಸಾಮರಸ್ಯ

Last Updated 18 ಆಗಸ್ಟ್ 2021, 21:21 IST
ಅಕ್ಷರ ಗಾತ್ರ

ನೀಲವಿಸ್ತರವಿರಲು ನಕ್ಷತ್ರ ಬಿಂದು ಸೊಗ |

ಶೈಲದಚಲತೆಯಿರಲು ಝರಿಯ ವೇಗ ಸೊಗ ||

ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |

ವೈಲಕ್ಷಣದೆ ಚೆಂದ – ಮಂಕುತಿಮ್ಮ || 451 ||

ಪದ-ಅರ್ಥ: ನೀಲವಿಸ್ತರ=ಆಕಾಶದ ವಿಸ್ತರ, ಸೊಗ=ಸೊಗಸು, ಶೈಲದಚಲತೆ=ಶೈಲದ(ಪರ್ವತದ)+ಅಚಲತೆ(ಸ್ಥಿರತೆ), ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು(ಅನುಕೂಲ) ವೈಲಕ್ಷಣ=ವಿವಿಧತೆ.

ವಾಚ್ಯಾರ್ಥ: ವಿಸ್ತಾರವಾದ ಆಕಾಶದಲ್ಲಿ ಒಂದು ಹೊಳೆಯುವ ನಕ್ಷತ್ರ ಸೊಗಸು. ಅಚಲವಾಗಿ ಬೆಟ್ಟಗಳು ನಿಂತಾಗ, ಹರಿಯುವ ನೀರಿನ ಝರಿಯ ವೇಗ ಚೆಂದ. ಬಾಳು ಬಯಲಂತಿರುವಾಗ ಕಟ್ಟಿಕೊಂಡ ಮನೆಯೇ ಅನುಕೂಲವಾದದ್ದು. ಈ ವೈವಿಧ್ಯತೆಯೇ ಬದುಕಿನ ಅಂದ.

ವಿವರಣೆ: ವಿಮಾನದಲ್ಲಿ ಕುಳಿತು ಆಕಾಶಕ್ಕೆ ಹಾರುವುದೇ ಒಂದು ಸೊಗಸು. ಕಿಟಕಿಯ ಪಕ್ಕ ಕುಳಿತು ಗಮನಿಸಿ. ವಿಮಾನ ನೆಲದ ಮೇಲೆ ಓಡುದಾರಿಯಲ್ಲಿ ನಿಂತು ಮೊದಲು ನಿಧಾನವಾಗಿ ಚಲಿಸಿ, ವೇಗವನ್ನು ಮೈಗೂಡಿಸಿಕೊಂಡು, ಭರದಿಂದ ನುಗ್ಗಿ ಸೊಂಯ್ ಎಂದು ನೆಲಬಿಟ್ಟು ಹಾರಿದಾಗ ಅದೆಷ್ಟು ಸಂತೋಷ. ಪ್ರತಿಕ್ಷಣಕ್ಕೂ ಹಿಂದೋಡುತ್ತಿರುವ ದೃಶ್ಯಗಳು, ಮೇಲಕ್ಕೆ ಹೋದಂತೆ ಇರುವೆಗಳಂತೆ ಕಾಣುವ ವಾಹನಗಳು, ಬೆಂಕಿಪೊಟ್ಟಣದಂತೆ ತೋರುವ ಮನೆಗಳು, ಬೆಳ್ಳಿಯ ಕಡ್ಡಿಯಂತೆ ಕಾಣಿಸುವ ನದಿಗಳು ಮನ ತುಂಬುತ್ತವೆ. ಮೇಲೆ ಪೂರ್ತಿ ಏರಿದ ಮೇಲೆ ಯಾವ ಸೊಬಗೂ ಇಲ್ಲ. ವಿಮಾನ ನಿಂತಲ್ಲಿಯೇ ನಿಂತಂತೆ ತೋರುತ್ತದೆ. ಗಟ್ಟಿಯಾದ, ಅಚಲವಾದ ನೆಲವಿದ್ದುದರಿಂದ ವಿಮಾನದ ರಭಸ ಎದ್ದು ಕಾಣುತ್ತದೆ. ಒಂದರ ಸ್ಥಿರತೆ ಮತ್ತೊಂದರ ಚಲನೆಗೆ ಪುಟಕೊಡುತ್ತದೆ. ಆಗಲೇ ವೇಗದ ಕಲ್ಪನೆ ಬರುವುದು. ಎರಡು ವಾಹನಗಳು ಒಂದೇ ವೇಗದಲ್ಲಿ ಸಾಗುತ್ತಿದ್ದರೆ, ತುಲನಾತ್ಮಕವಾಗಿ ಅವು ನಿಂತೇ ಇದ್ದಂತೆ ಭಾಸವಾಗುತ್ತದೆ. ಒಂದು ಸ್ಥಿರ ಮತ್ತೊಂದು ಚರವಾದಾಗ ಸೊಗಸು. ಅಂತೆಯೇ ವಿಶಾಲವಾದ ಕಪ್ಪು ಆಕಾಶದಲ್ಲಿ ಹೊಳೆಯುವ ಒಂದೇ ನಕ್ಷತ್ರ ಮನಸೆಳೆಯುತ್ತದೆ. ಜೋಗದ ಬೆಟ್ಟ ಭದ್ರವಾಗಿ ನಿಂತಾಗ ಜಲಪಾತದ ಸೌಂದರ್ಯ ಎದ್ದು ಕಾಣುತ್ತದೆ. ಹಿಮಾಲಯ ಪರ್ವತದ ವಿಸ್ತಾರದಲ್ಲಿ ದೂರದಲ್ಲಿ ಕಾಣುವ ಒಂಟಿ ಮನೆ ಎಷ್ಟು ಚಂದ!

ಹೀಗೆಂದರೇನಾಯಿತು? ಬದುಕು ಸುಂದರವಾಗಲು ಬೇಕಾದ ಗುಣಗಳು ಒಂದೇ ತೆರದುವಲ್ಲ. ಅವು ನಾನಾ ಪ್ರಕಾರದವುಗಳು. ಅವುಗಳು ಮೇಲ್ನೋಟಕ್ಕೆ ಪರಸ್ಪರ ವಿರೋಧಿಗಳಂತೆ ತೋರಬಹುದು. ಆದರೆ ಅವು ಜೊತೆ ಜೊತೆಯಲ್ಲಿದ್ದಾಗ ಸೌಂದರ್ಯದದ ಗಮ್ಯಸ್ಥಾನಗಳಾಗುತ್ತವೆ. ಸೌಂದರ್ಯವೃದ್ಧಿಗೆ ಅವುಗಳ ಸಮನ್ವಯತೆ ಕಾರಣವಾಗುತ್ತದೆ. ಸಂಮಿಳಿತತೆಯ ಸಮರಸ ಸ್ಥಿತಿಯಲ್ಲಿ ಅವು ಪರಸ್ಪರ ಸಹಕಾರಿಗಳೇ ಆಗುತ್ತವೆ. ಅದನ್ನು ಗಮನಿಸಿ, ಆಸ್ವಾದಿಸುವುದು ವಿವೇಕ.

ವಿವಿಧತೆಯಲ್ಲಿಸಾಮರಸ್ಯವನ್ನು ಕಾಣುವುದೇ ಔಚಿತ್ಯಜ್ಞಾನ. ಮನುಷ್ಯ ಜೀವನ ಸಮೃದ್ಧವಾಗಬೇಕಾದರೆ ಇಂಥ ತೋರಿಕೆಗೆ ಬೇರೆಯೆಂದು ಕಾಣುವ ನೂರಾರು ಗುಣಗಳು ಮೈತ್ರಿಯಿಂದ ಸಮ್ಮಿಳಿತವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT