ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬದಲಾದ ಮನೋಧರ್ಮ

Last Updated 22 ಆಗಸ್ಟ್ 2021, 19:50 IST
ಅಕ್ಷರ ಗಾತ್ರ

ಇದುವರೆಗೂ ಸಂಕಟಪಟ್ಟಿದ್ದ ಮಾದ್ರಿದೇವಿ ದುಃಖದಿಂದ, ಆಯಾಸದಿಂದ ಬಸವಳಿದು ಬೋಧಿಸತ್ವನ ಮುಂದೆಯೇ ಕುಸಿದು ಬಿದ್ದಳು. ಇದುವರೆಗೂ ಮೂರ್ತಿಯಂತೆ ಸುಮ್ಮನಿದ್ದ ಬೋಧಿಸತ್ವ, ಆಕೆ ಸತ್ತೇ ಹೋದಳೆಂದು ಭಾವಿಸಿದ. ಛೇ ಈ ಪತಿವೃತೆ ಕಾಡಿನಲ್ಲಿ, ವಿದೇಶದಲ್ಲಿ, ಅನುಚಿತವಾದ ಸ್ಥಳದಲ್ಲಿ, ಸತ್ತಳು. ಜೇತುತ್ತರ ನಗರದಲ್ಲಿ ಈಕೆಯ ಅಂತ್ಯಕ್ರಿಯೆ ನಡೆದಿದ್ದರೆ ಬಹಳ ಮರ್ಯಾದೆಯಾಗುತ್ತಿತ್ತು. ಎರಡು ರಾಷ್ಟ್ರಗಳು ಕಂಪಿಸಿಬಿಡುತ್ತಿದ್ದವು. ನಾನೀಗ ಕಾಡಿನಲ್ಲಿ ಒಂಟಿಯಾಗಿದ್ದೇನೆ. ಏನು ಮಾಡಲಿ? ಅವನಿಗೂ ದುಃಖ ಒತ್ತರಿಸಿ ಬಂತು.

ನಿಧಾನಕ್ಕೆ ತನ್ನ ಭಾವನೆಗಳನ್ನು ಸ್ಥಿಮಿತಕ್ಕೆ ತಂದುಕೊಂಡು, ಆಕೆಯ ಸ್ಥಿತಿಯನ್ನು ವಿಚಾರಿಸಬೇಕೆಂದುಕೊಂಡು ತನ್ನ ಕೈಯನ್ನು ಆಕೆಯ ಹೃದಯದ ಮೇಲಿಟ್ಟು ನೋಡಿದಾಗ ಅದು ಇನ್ನೂ ಬಿಸಿಯಾಗಿರುವುದು ತಿಳಿಯಿತು. ಆತ ತನ್ನ ಕಮಂಡಲಿನಲ್ಲಿ ನೀರು ತಂದ. ಈಗ ಏಳು ತಿಂಗಳುಗಳಿಂದ ಅವಳ ದೇಹಸ್ಪರ್ಶ ಮಾಡಿರಲಿಲ್ಲ. ಈಗ ಪ್ರೀತಿಯ ಆಧಿಕ್ಯದಿಂದ ತಾನು ಪ್ರವ್ರಜಿತನೆಂಬ ಭಾವನೆಯನ್ನು ಇಟ್ಟುಕೊಳ್ಳಲಾಗಲಿಲ್ಲ. ಆತ ನೀರು ತುಂಬಿದ ಕಣ್ಣುಗಳಿಂದ ಆಕೆಯನ್ನು ನೋಡುತ್ತ, ನಿಧಾನವಾಗಿ ಆಕೆಯ ತಲೆಯನ್ನೆತ್ತಿ ತನ್ನ ತೊಡೆಯ ಮೇಲಿಟ್ಟುಕೊಂಡು ಮುಖಕ್ಕೆ ನೀರು ಚಿಮುಕಿಸಿದ. ಹಾಗೆ ಕುಳಿತುಕೊಂಡೇ ಅವಳ ಮುಖ, ಎದೆಗಳನ್ನು ನಿಧಾನವಾಗಿ ಉಜ್ಜತೊಡಗಿದ. ಕೊಂಚ ಹೊತ್ತಿನಲ್ಲಿ ಆಕೆಯ ದೇಹದಲ್ಲಿ ಚೇತರಿಕೆ ಕಂಡಿತು. ನಂತರ ಆಕೆಗೆ ಪ್ರಜ್ಞೆ ಮರಳಿತು.

ಎಚ್ಚರಗೊಂಡ ಆಕೆ ತಕ್ಷಣವೇ ಎದ್ದು, ಲಜ್ಜಾಭಯದಿಂದ ದೂರ ಸರಿದು, ಬೋಧಿಸತ್ವನಿಗೆ ನಮಸ್ಕರಿಸಿ ಮತ್ತೆ ಕೇಳಿದಳು, ‘ಪ್ರಭೂ, ಮಕ್ಕಳು ಎಲ್ಲಿಗೆ ಹೋಗಿದ್ದಾರೆ?’. ‘ದೇವಿ, ನಾನು ಅವರಿಬ್ಬರನ್ನು ಒಬ್ಬ ಬ್ರಾಹ್ಮಣನಿಗೆ ಸೇವೆ ಮಾಡಲು ದಾಸರಾಗಿ ಕೊಟ್ಟುಬಿಟ್ಟೆ’ ಎಂದ. ‘ಹಾಗಾದರೆ ಬ್ರಾಹ್ಮಣನಿಗೆ ಮಕ್ಕಳನ್ನು ದಾನವಾಗಿ ಕೊಟ್ಟಿದ್ದನ್ನು, ನಾನು ಇಡೀ ರಾತ್ರಿ ಅಳುತ್ತ, ಓಡಾಡುತ್ತಿದ್ದರೂ ಯಾಕೆ ಹೇಳಲಿಲ್ಲ?’ ಎಂದು ಪ್ರಶ್ನಿಸಿದಳು. ‘ಮಾದ್ರಿ, ನಿನಗೆ ಅತ್ಯಂತ ದುಃಖವಾಗುತ್ತದೆ ಮತ್ತು ಆ ದುಃಖದಲ್ಲಿ ಅವರನ್ನು ಹುಡುಕಿಕೊಂಡು ಬೆನ್ನತ್ತಿ ಹೋಗಿಬಿಡುತ್ತೀ ಎಂದು, ಬೆಳಗಾಗುವವರೆಗೂ ಹೇಳಬಾರದೆಂದು, ತೀರ್ಮಾನಿಸಿಕೊಂಡಿದ್ದೆ. ಯಾಕೆಂದರೆ ಈ ಸಮಯಕ್ಕಾಗಲೇ ಅವರು ಕಾಡಿನ ಪ್ರದೇಶವನ್ನು ದಾಟಿ ದೂರ ಹೋಗಿಬಿಟ್ಟಿರುತ್ತಾರೆ. ನಿನ್ನೆ ನೀನು ಕಾಡಿಗೆ ಹೋದ ಮೇಲೆ ಬ್ರಾಹ್ಮಣನೊಬ್ಬ ಆಶ್ರಮಕ್ಕೆ ಬಂದಿದ್ದ.

ಮಾದ್ರಿ ಅವನ ಅಪೇಕ್ಷೆಯಂತೆ ನನ್ನ ಮಗ ಮತ್ತು ಮಗಳನ್ನು ಆತನಿಗೆ ಕೊಟ್ಟುಬಿಟ್ಟಿದ್ದೇನೆ. ಭಯಪಡಬೇಡ. ಸಮಾಧಾನಿಯಾಗು. ನಾವು ಬದುಕಿದ್ದರೆ ಮಕ್ಕಳು ಮುಂದೊಂದು ದಿನ ಸಿಕ್ಕೇ ಸಿಗುತ್ತಾರೆ. ನಾವು ಸುಖಿಯಾಗಿ ಬದುಕುತ್ತೇವೆ. ಯಾಚಕ ಯಾವನಾದರೂ ಮನೆಗೆ ಬಂದಾಗ ಸತ್ಪುರುಷನಾದವನು ತನ್ನಲ್ಲಿ ಏನಿರುತ್ತದೆಯೋ ಅದನ್ನು ದಾನ ಮಾಡಿಬಿಡಬೇಕು. ಮಾದ್ರಿ, ಪುತ್ರದಾನ ಸರ್ವಶ್ರೇಷ್ಠ. ನೀನು ದಯವಿಟ್ಟು ನಾನು ಮಾಡಿದ ದಾನಕ್ಕೆ ಅನುಮೋದನೆಯನ್ನು ನೀಡು’. ಮಾದ್ರಿದೇವಿ ತಲೆಯೆತ್ತಿ ವೆಸ್ಸಂತರ ಬೋಧಿಸತ್ವನ ಕಣ್ಣುಗಳನ್ನು ದಿಟ್ಟಿಸಿ ನೋಡಿ’, ಹೇ ದೇವ, ನೀನು ಕೊಟ್ಟಿರುವ ಮಕ್ಕಳ ಶ್ರೇಷ್ಠ ದಾನವನ್ನು ನಾನು ಹೃದಯಪೂರ್ವಕವಾಗಿ ಅನುಮೋದಿಸುತ್ತೇನೆ’ ಎಂದಳು! ಆಕೆಯ ಮನೋಸ್ಥೈರ್ಯಕ್ಕೆ ಬೋಧಿಸತ್ವ ಬೆರಗಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT