ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಶಕ್ರನ ವರಗಳು

Last Updated 29 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ದೇವೇಂದ್ರ ಶಕ್ರ ವರದಾನ ಮಾಡಿದ ಮೇಲೆ ಬೋಧಿಸತ್ವ, ‘ದೇವೇಂದ್ರ, ನಿನ್ನ ಕರುಣೆ ದೊಡ್ಡದು. ನನಗೆ ಅದೇ ವರ, ಬೇರೆ ವರಗಳು ಬೇಡ’ ಎಂದ. ಆಗ ಶಕ್ರ ಒತ್ತಾಯಿಸಿ ವರಗಳನ್ನು ನೀಡಿಯಾಗಿದೆ. ಅವುಗಳನ್ನು ಕೇಳಲೇಬೇಕು ಎಂದು ಆಜ್ಞೆ ಮಾಡಿದಾಗ, ಬೋಧಿಸತ್ವ ಎಂಟು ವರಗಳನ್ನು ಕೇಳಿದ.

‘ಹೇ, ಸಮಸ್ತಪ್ರಾಣಿಗಳ ದೈವವಾದ ಶಕ್ರ, ನನಗೆ ವರಗಳನ್ನು ಕೊಡಬೇಕೆಂದಿದ್ದರೆ, ನಾನು ಇಲ್ಲಿಂದ ನನ್ನ ರಾಜ್ಯದ ಅರಮನೆಗೆ ಹೋದರೆ ನನ್ನ ತಂದೆ ನನ್ನನ್ನು ಅನುಮೋದನೆ ಮಾಡಲಿ ಹಾಗೂ ಪ್ರೀತಿಯಿಂದ ಆಸನ ಗ್ರಹಿಸಲು ಹೇಳಲಿ. ಇದು ಮೊದಲ ವರ. ರಾಜಾಪರಾಧವನ್ನು ಮಾಡಿದವನೆಂದು ಯಾವುದೋ ನಿರಪರಾಧಿಯನ್ನು ವಧೆಗೆ ಕಳಿಸುವಂತಾಗಿದ್ದರೆ ಅವನನ್ನು ನಾನು ಮುಕ್ತಗೊಳಿಸುವಂತಾಗಲಿ. ಇದು ಎರಡನೆಯ ವರ. ಮುದುಕರು, ಚಿಕ್ಕಮಕ್ಕಳು, ಮಧ್ಯವಯಸ್ಸಿನವರು ಎಲ್ಲರೂ ನನ್ನ ಧರ್ಮಶ್ರದ್ಧೆಯ ಆಧಾರದ ಮೇಲೆ ಬದುಕಲಿ. ಇದು ಮೂರನೆಯ ವರ. ನಾನೆಂದಿಗೂ ಪರಸ್ತ್ರೀಯರಲ್ಲಿ ಮನ ಮಾಡದಿರಲಿ, ಬೇರೆ ಹೆಂಗಸರಿಗೆ ನಾನು ವಶವಾಗದಿರಲಿ ಮತ್ತು ನನ್ನ ಹೆಂಡತಿಯಲ್ಲಿ ಮಾತ್ರ ಅನುರಕ್ತನಾಗಿರಲಿ. ಇದು ನಾಲ್ಕನೆಯ ವರ. ನನಗೆ ಪುತ್ರನಾದರೆ ಅವನು ದೀರ್ಘಾಯುವಾಗಲಿ ಮತ್ತು ಅವನು ಧರ್ಮದಿಂದ ಜಗತ್ತನ್ನು ಗೆಲ್ಲಲಿ. ಇದು ಐದನೆಯ ವರ. ರಾತ್ರಿ ಕಳೆದ ಮೇಲೆ, ಸೂರ್ಯೋದಯವಾದ ಮೇಲೆ ದಿವ್ಯ ಭೋಜನವಾಗಲಿ. ಹೀಗೆಂದರೆ, ಎಂದಿಗೂ ಆಹಾರದ ಅಭಾವ ತಲೆದೋರದಿರಲಿ. ಇದು ಆರನೆಯ ವರ. ನಾನು ದಾನ ಮಾಡುವುದರಿಂದ ನನ್ನ ಬಳಿ ಇದ್ದ ಹಣ ಮುಗಿದು ಹೋಗದಿರಲಿ, ನನಗೆ ಕೊಟ್ಟು ಎಂದಿಗೂ ದುಃಖವಾಗದಂತಿರಲಿ, ಪ್ರತಿಬಾರಿಯೂ ದಾನಮಾಡಿದಾಗ ಹೆಚ್ಚು ಆನಂದ ಉಂಟಾಗಲಿ. ಇದು ಏಳನೆಯ ವರ. ನನಗೆ ಈ ದೇಹದಿಂದ ಬಿಡುಗಡೆಯಾದ ಮೇಲೆ ನಾನು ವಿಶೇಷರೂಪದಿಂದ ಸ್ವರ್ಗಗಾಮಿಯಾಗುವಂತಾಗಲಿ. ಮುಂದೆ ಪುನಃ ಪುನಃ ಜನನ, ಮರಣಗಳ ಬಂಧನದಿಂದ ಪಾರಾಗಿ ಮೋಕ್ಷ ದೊರೆಯುವಂತಾಗಲಿ. ಇದು ನನ್ನ ಎಂಟನೆಯ ವರ. ಕೃಪೆಯಿಟ್ಟು ಈ ವರಗಳನ್ನು ನನಗೆ ನೀಡು’.

ಶಕ್ರ ಹೇಳಿದ, ‘ಬೋಧಿಸತ್ವ, ನೀನು ಕೇಳಿದ ವರಗಳೆಲ್ಲ ಪವಿತ್ರವಾದವು, ಜನಪರವಾದವುಗಳು. ನೀನು ಬೇಡಿದ್ದೆಲ್ಲ ನಿನಗೆ ದೊರೆಯಲಿ ಎಂದು ವರ ನೀಡುತ್ತೇನೆ. ಇನ್ನೂ ಸ್ವಲ್ಪ ದಿನಗಳಲ್ಲಿ ನಿನ್ನ ತಂದೆ ನಿನ್ನನ್ನು ನೋಡಲು ಬರುತ್ತಾನೆ. ನಿನಗೆ ಮಂಗಳವಾಗಲಿ’, ಹೀಗೆ ಹೇಳಿ ಶಕ್ರ ತನ್ನ ಸ್ವಸ್ಥಾನಕ್ಕೆ ಮರಳಿ ಹೋದ. ನಂತರ ಬೋಧಿಸತ್ವ ಮತ್ತು ಮಾದ್ರಿಯರು ಶಕ್ರನೇ ಕೊಟ್ಟ ಆಶ್ರಮದಲ್ಲಿ ಸಂತೋಷದಿಂದ ಇರತೊಡಗಿದರು. ಇತ್ತ ಮಕ್ಕಳನ್ನು ಕರೆದುಕೊಂಡು ಹೊರಟ ಮುದಿ ಬ್ರಾಹ್ಮಣ ಅರವತ್ತು ಯೋಜನ ಮಾರ್ಗದಲ್ಲಿ ನಡೆಯುತ್ತ ಹೊರಟಿದ್ದ. ದೇವತೆಗಳು ಮಕ್ಕಳ ರಕ್ಷಣೆ ಮಾಡುತ್ತಿದ್ದರು. ಸೂರ್ಯಾಸ್ತವಾದ ಮೇಲೆ ಬ್ರಾಹ್ಮಣ ಮಕ್ಕಳನ್ನು ಬಿಗಿಯಾಗಿ ಕಟ್ಟಿ ನೆಲದ ಮೇಲೆ ಮಲಗಿಸುತ್ತಿದ್ದ. ತಾನು ಕಾಡುಪ್ರಾಣಿಗಳ ಭಯದಿಂದ ಮರವನ್ನೇರಿ ಕೊಂಬೆಗಳ ಮೇಲೆ ಬಿದ್ದಿರುತ್ತಿದ್ದ. ಆ ಸಮಯದಲ್ಲಿ ಒಬ್ಬ ದೇವಪುತ್ರ ವೆಸ್ಸಂತರನ ರೂಪ ಧರಿಸಿ ಮತ್ತು ಇನ್ನೊಬ್ಬ ದೇವಕನ್ಯೆ ಮಾದ್ರಿದೇವಿಯ ರೂಪಧರಿಸಿ ಬಂದು ಮಕ್ಕಳ ಕಟ್ಟುಗಳನ್ನು ಬಿಡಿಸಿ, ಕೈಕಾಲುಗಳಿಗೆ ಸುಗಂಧಪೂರಿತವಾದ ಎಣ್ಣೆಯನ್ನು ಹಚ್ಚಿ, ಮಾಲೀಶುಮಾಡಿ, ಮೀಯಿಸಿ, ಅಲಂಕರಿಸಿ, ಊಟ ಮಾಡಿಸಿ ದಿವ್ಯಶಯ್ಯೆಯಲ್ಲಿ ಮಲಗಿಸುತ್ತಿದ್ದರು. ಬೆಳಗಾಗುತ್ತಿರುವಂತೆ ಮತ್ತೆ ಅವರನ್ನು ಬಂಧಿಸಿದಂತೆಯೇ ಇಟ್ಟು ಮಾಯವಾಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT