ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಗು | ಬೇಕು ಸಹಾನುಭೂತಿ

Last Updated 21 ಏಪ್ರಿಲ್ 2020, 19:43 IST
ಅಕ್ಷರ ಗಾತ್ರ

ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು ? ||
ಆತುಮದ ಪರಿಕಥೆಯನರಿತವರೆ ನಾವು? ||
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |
ನೀತಿ ನಿಂದೆಯೊಳಿರದು- ಮಂಕುತಿಮ್ಮ || 281 ||

ಪದ-ಅರ್ಥ: ಪಾತಕಿಯೊಳಾಗ್ರಹವ=ಪಾತಕಿಯೊಳು+ಆಗ್ರಹವ(ಕೋಪವ), ಆತುಮದ=ಆತ್ಮದ, ಪರಿಕಥೆಯನರಿತವರೆ=ಪರಿಕಥೆಯನು(ಆಂತರ್ಯದ ಕಥೆಯನ್ನು)+ಅರಿತವರೆ, ನಮ್ಮನುಕಂಪೆ=ನಮ್ಮ+ಅನುಕಂಪೆ(ಸಹಾನುಭೂತಿ), ನಿಂದೆಯೊಳಿರದು=ನಿಂದೆಯೊಳು
(ನಿಂದೆಯಲ್ಲಿ)+ಇರದು.

ವಾಚ್ಯಾರ್ಥ

ಒಬ್ಬ ಪಾತಕಿಯಲ್ಲಿ ನಾವು ಕೋಪ ತೋರುವುದಾದರೆ, ಪ್ರಪಂಚದಲ್ಲಿ ನಿರ್ಮಲನಾಗಿರುವವರು ಯಾರು? ಆ ಪಾತಕಿ ಎನ್ನುವವನ ಆಂತರ್ಯದ ಕಥೆಯನ್ನು ನಾವು ಅರಿತಿದ್ದೇವೆಯೇ? ಸೋತು, ನೆಲಕಚ್ಚಿದಂತಹ ದುರ್ಬಲನಾದವನಿಗೆ ನಮ್ಮ ಸಹಾನುಭೂತಿ ಸಲ್ಲಬೇಕು. ಬರೀ ನಿಂದಿಸುವುದೇ ನೀತಿಯಾಗಲಾರದು.

ವಿವರಣೆ

ಒಂದು ಬಾರಿ ನಮ್ಮ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಒಂದು ಯೋಜನೆಯನ್ನು ಹಾಕಿಕೊಂಡಿದ್ದರು. ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಬಂಧಿಖಾನೆಗೆ ಹೋಗಿ ಅಲ್ಲಿ ಮಹಿಳಾ ಕೈದಿಗಳ ಸಂದರ್ಶನ ಮಾಡ ಬಯಸಿದ್ದರು. ಅದರಲ್ಲೂ ಜೀವಾವಧಿ ಶಿಕ್ಷೆಗೆ ಒಳಗಾದ ಮಹಿಳೆಯರನ್ನು ಮಾತನಾಡಿಸುವುದು ಮುಖ್ಯವಾಗಿತ್ತು. ಯಾವ ಕಾರಣಕ್ಕೆ ಅವರು ಅಪರಾಧವನ್ನು ಮಾಡಿದರು, ಮಾಡುವ ಮೊದಲು ಹಾಗೂ ನಂತರ ಅವರ ಮನಸ್ಥಿತಿ ಹೇಗಿತ್ತು? ಈಗ ಹಿಂತಿರುಗಿ ನೋಡಿದಾಗ ತಾವು ಮಾಡಿದ ಕೃತ್ಯಗಳ ಬಗ್ಗೆ ಅವರಿಗೆ ಏನನ್ನಿಸುತ್ತದೆ? ಎಂಬುದನ್ನು ತಿಳಿಯಬೇಕಿತ್ತು. ಸಂದರ್ಶನ ಮುಗಿಸಿ ಬಂದ ವಿದ್ಯಾರ್ಥಿನಿಯರು ಬದುಕನ್ನು ನೋಡುವ ದೃಷ್ಟಿಯೇ ಬದಲಾದಂತಿತ್ತು. ಒಬ್ಬ ಹುಡುಗಿ ಹೇಳಿದಳು, ‘ನನಗೆ ಆ ಕೈದಿಗಳ ಬಗ್ಗೆ ಬಹಳ ಕೋಪವಿತ್ತು, ಅವರೆಲ್ಲ ಒಂದಲ್ಲ ಒಂದು ಕೊಲೆ ಮಾಡಿ ಬಂದವರು. ಅವರನ್ನು ನೇಣಿಗೇ ಹಾಕಬೇಕಿತ್ತು. ಅದು ಯಾಕೆ ಅವರನ್ನು ಇಟ್ಟುಕೊಂಡು ಊಟ ಹಾಕಿ, ಆರೋಗ್ಯ ಕಾಪಾಡಿ ಕಾಯ್ದುಕೊಳ್ಳುತ್ತಾರೋ ಎಂದು ವಾದ ಮಾಡುತ್ತಿದ್ದೆ. ಆದರೆ ಅವರನ್ನು ಕಂಡು ಮಾತನಾಡಿಸಿದಾಗ, ಪಾಪ! ಅವರು ಇದ್ದ ಸಂದರ್ಭವೇ ಹಾಗಿತ್ತು’. ಒಬ್ಬ ಮಹಿಳೆ ಗಂಡನನ್ನು ಕೊಂದು ಜೈಲು ಸೇರಿದವಳು. ಯಾಕೆ ಹಾಗೆ ಮಾಡಿದೆ ಎಂದು ಕೇಳಿದಾಗ, ‘ಇನ್ನೇನು ಮಾಡಲಮ್ಮ? ನನಗೆ ಗಂಡನ ಮೇಲೆ ಪ್ರೀತಿ ಇರಲಿಲ್ಲವೇ? ಆತ ಬಹಳ ಒಳ್ಳೆಯವ. ಆದರೆ ಕುಡಿದು ಬಂದಾಗ ಮನುಷ್ಯನೇ ಅಲ್ಲ. ದಿನದಂತೆ ಅಂದೂ ಕುಡಿದು ಬಂದ, ಮತ್ತಷ್ಟು ದುಡ್ಡು ಕೇಳಿದ. ನಾನು ಇಲ್ಲವೆಂದಾಗ ಮನಸಾರೆ ಹೊಡೆದ. ಅವನನ್ನು ತಡೆಯಲು ನನ್ನ ಪುಟ್ಟ ಮಗ ಅಡ್ಡ ಬಂದ. ಆಗ ಕೈಯಲ್ಲಿದ್ದ ದನ ಕಟ್ಟುವ ಗೂಟದಿಂದ ಮಗುವನ್ನು ಹೊಡೆಯಲು ಮುನ್ನುಗ್ಗಿದ ಗಂಡನನ್ನು ತಡೆಯಲು ಅವನನ್ನು ಜೋರಾಗಿ ತಳ್ಳಿದೆ. ಆತ ಹಿಂದೆ ತಿರುಗಿ ನೆಲ ಅಗಿಯುವ ಗುದ್ದಲಿಯ ಮೇಲೆ ಬಿದ್ದ. ಕ್ಷಣದಲ್ಲೇ ಸತ್ತುಹೋದ. ಅವನನ್ನು ಕೊಲ್ಲುವ ಮನಸ್ಸಾಗಲಿ ವಿಚಾರವಾಗಲಿ ನನಗಿರಲಿಲ್ಲ’ ಎಂದು ಕಣ್ಣೊರೆಸಿಕೊಂಡಳು.

ಈ ವಿಷಯ ಗೊತ್ತಾಗುವವರೆಗೆ ಆಕೆ ಪರಮಪಾತಕಿಯೇ. ಈ ಕಗ್ಗದ ಧ್ವನಿ ಇದೇ. ಇನ್ನೊಬ್ಬ ವ್ಯಕ್ತಿ ಪಾತಕಿ, ತಪ್ಪುಗಾರ ಎನ್ನುವುದಕ್ಕೆ ನಿಜವಾಗಿಯೂ ಪ್ರಪಂಚದಲ್ಲಿ ಸಂಪೂರ್ಣವಾಗಿ ನಿರ್ಮಲವಾಗಿರುವವರು ಇದ್ದಾರೆಯೇ? ಈ ತಪ್ಪುಗಾರರ, ಪಾತಕಿಗಳ ನಿಜವಾದ ಸ್ಥಿತಿ, ಅವರ ಹತಾಶೆ ನಮಗೆ ತಿಳಿದಿದೆಯೇ? ಸೋತು ನೆಲಕಚ್ಚಿ ಕುಳಿತವರಿಗೆ ನಮ್ಮ ಕೋಪಕ್ಕಿಂತ, ಸಹಾನುಭೂತಿಯ ಅವಶ್ಯಕತೆ ಇದೆ. ಬರೀ ನಿಂದೆ ಮಾಡುವುದರಿಂದ ಏನೂ ಆಗದು. ಹಾಗೆಂದರೆ ಪಾತಕಕ್ಕೆ ಶಿಕ್ಷೆ ಬೇಡವೇ? ಖಂಡಿತವಾಗಿಯೂ ಬೇಕು. ತಪ್ಪು ಮಾಡಿದವರಿಗೆ ವ್ಯವಸ್ಥೆಯೋ, ವಿಧಿಯೋ ಶಿಕ್ಷೆಯನ್ನು ಕೊಟ್ಟೇ ತೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT