ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದ್ವಂದ್ವಗಳ ಚಿಂತನೆ

Last Updated 5 ಆಗಸ್ಟ್ 2021, 18:09 IST
ಅಕ್ಷರ ಗಾತ್ರ

ಮಗ ಹಾಗೆ ತನ್ನ ದುಃಖವನ್ನು ಹೇಳಿಕೊಂಡಾಗಲೂ ಬೋಧಿಸತ್ವ ಯಾವ ಮಾತನ್ನೂ ಆಡಲಿಲ್ಲ. ಆಗ ಜಾಲಿಕುಮಾರ ಹೃದಯ ಕರಗುವಂತೆ ವಿಲಾಪ ಮಾಡತೊಡಗಿದ. ‘ಅಪ್ಪಾ, ಆ ಯಾಚಕನೊಂದಿಗೆ ಹೋಗುವುದು ನನಗೆ ಕಷ್ಟವಲ್ಲ. ಮನುಷ್ಯನಿಗೆ ಈ ತರಹದ ಸುಖ-ದುಃಖಗಳು ಬಂದೇ ಬರುತ್ತವೆ. ಆದರೆ ತಾಯಿಯ ದರ್ಶನವಿಲ್ಲದೆ ಹೋಗುವುದು ನನಗೆ ತುಂಬ ದುಃಖಕರ. ನನ್ನ ಬಡಪಾಯಿ ತಾಯಿ, ನನ್ನನ್ನು ಮತ್ತು ಸುಂದರಿಯಾದ ನನ್ನ ತಂಗಿಯನ್ನು ಕಾಣದೆ ಚಿರಕಾಲ ಅಳುತ್ತಾಳೆ. ಆಕೆ ಸದಾಕಾಲವೂ ತಂಗಿಯನ್ನು ಆಶ್ರಮದಲ್ಲಿ ಕಾಣಲು ಹವಣಿಸುತ್ತಾಳೆ. ನೀವಿಬ್ಬರೂ ನಮ್ಮನ್ನು ಕಾಣದೆ ಕೊರಗಿ ಕೃಶರಾಗಿಬಿಡುತ್ತೀರಿ. ಅಪ್ಪಾ, ನಾವು ಇನ್ನು ಮೇಲೆ ಇಲ್ಲಿ ಸುರಿದಿರುವ ಜಮ್ಮು ನೇರಳೆ, ಸಿಂಧುವಾರಿಕ, ಅಶ್ವರಥ, ಹಲಸು, ನ್ಯಗ್ರೋಧ ಮುಂತಾದ ಹಣ್ಣಿನ ಮರಗಳನ್ನು ತೊರೆದು ಹೋಗುತ್ತೇವೆ. ಈ ಆಶ್ರಮ, ತಂಪಾದ ನೀರಿನ ನದಿ, ಸರೋವರಗಳು, ನಾವು ಸಂತೋಷವಾಗಿ ಆಡಿಕೊಂಡಿದ್ದ ಪರಿಸರ, ಎಲ್ಲವನ್ನೂ ಬಿಟ್ಟು ಹೋಗುತ್ತೇವೆ. ಅಪ್ಪಾ, ಇಗೋ, ಇವು ನಾವು ಆಟವಾಡುತ್ತಿದ್ದ ಆನೆ, ಕುದುರೆ, ಎತ್ತುಗಳ ಗೊಂಬೆಗಳು. ಇವುಗಳೊಂದಿಗೆ ನಾವು ಆಟವಾಡುತ್ತಿದ್ದೆವು. ಇಂದು ಅವುಗಳನ್ನು ನಾವು ತ್ಯಜಿಸುತ್ತಿದ್ದೇವೆ’. ಹೀಗೆ ಹೇಳಿ ಮಗ ಅಳುತ್ತಿದ್ದಾಗ ಯಾಚಕನಾದ ಮುದಿಬ್ರಾಹ್ಮಣ ಅಲ್ಲಿಗೆ ಬಂದ. ಮತ್ತೆ ಅಣ್ಣ-ತಂಗಿಯನ್ನು ಬಳ್ಳಿಯಿಂದ ಕಟ್ಟಿ, ತಂದೆಯ ಮುಂದೆಯೇ ರಪರಪನೆ ಹೊಡೆಯುತ್ತ, ಎಳೆದುಕೊಂಡು ಹೊರಟ. ಹಾಗೆ ಎಳೆದೊಯ್ಯುತ್ತಿರುವಾಗ ಮಕ್ಕಳು ತಂದೆಗೆ ಕೂಗಿ ಹೇಳಿದರು, ‘ತಂದೆಯೇ, ಅಮ್ಮನಿಗೆ ಆರೋಗ್ಯ ಕಾಪಾಡಿಕೊಳ್ಳಲು ಹೇಳಿ. ನೀನೂ ಸುಖವಾಗಿರು. ನಮ್ಮ ಆಟದ ಬೊಂಬೆಗಳು ಅಮ್ಮನ ದುಃಖವನ್ನು ಕೊಂಚ ಕಡಿಮೆ ಮಾಡಿಯಾವು’.

ಮಕ್ಕಳ ದುಃಖವನ್ನು ಕಂಡು ಬೋಧಿಸತ್ವನ ಮನಸ್ಸಿನಲ್ಲಿ ತಳಮಳ ಉಂಟಾಯಿತು. ಅವನ ಹೃದಯದ ಮಾಂಸ ಬಿಸಿಯಾಯಿತು. ಸಿಂಹದ ಬಾಯಿಯಲ್ಲಿ ತಲೆಯನ್ನು ಸಿಕ್ಕಿಸಿಕೊಂಡ ಆನೆಯಂತೆ, ರಾಹುವಿನ ಮುಖದಲ್ಲಿ ಸೇರಿದ ಚಂದ್ರನಂತೆ ಆತ ನಡುಗುತ್ತ, ತನ್ನನ್ನು ನಿಯಂತ್ರಿಸಿಕೊಳ್ಳಲಾರದವನಂತೆ, ಮಕ್ಕಳನ್ನು ನೋಡದೆ ಆಶ್ರಮದೊಳಗೆ ಬಂದ. ಅಲ್ಲಿ ತಾನೊಬ್ಬನೇ ನಿಂತು ಕರುಣಾಪೂರ್ಣವಾಗಿ ಪ್ರಲಾಪ ಮಾಡತೊಡಗಿದ. ‘ನಾನೇನೋ ನನ್ನ ಮುಕ್ತಿಗಾಗಿ ಮಕ್ಕಳನ್ನು ತ್ಯಾಗ ಮಾಡಿಬಿಟ್ಟೆ. ಇನ್ನು ಮುಂದೆ ಮಕ್ಕಳಿಗೆ ಹಸಿವು, ಬಾಯಾರಿಕೆಯಾದರೆ ಯಾರನ್ನು ಕೇಳಬೇಕು? ಸಂಜೆ ಮಲಗುವಾಗ ಅವರಿಗೆ ಯಾರು ಊಟ ಕೊಡುತ್ತಾರೆ? ಕಾಲಿನಲ್ಲಿ ಪಾದರಕ್ಷೆಗಳಿಲ್ಲದೆ ಹೇಗೆ ನಡೆದಾರು? ಮಕ್ಕಳಿಗೆ ನಡೆದು ಆಯಾಸವಾದರೆ ಎತ್ತಿಕೊಳ್ಳುವವರಾರು? ಆ ಮುದುಕ ಬ್ರಾಹ್ಮಣ ನನ್ನ ಮುಂದೆಯೇ ಮಕ್ಕಳಿಗೆ ಹೊಡೆಯುತ್ತ ಹೋದನಲ್ಲ, ಬಲೆಯಲ್ಲಿ ಸಿಕ್ಕ ಮೀನುಗಳನ್ನು ಹೊಡೆದಂತೆ ಸುಕೋಮಲವಾದ ಮಕ್ಕಳನ್ನು ಶಿಕ್ಷಿಸುತ್ತಾನಲ್ಲ, ಅವನಿಂದ ಕರುಣೆಯನ್ನು ಅಪೇಕ್ಷಿಸುವುದು ಸಾಧ್ಯವೇ?’

ಹೀಗೆ ಚಿಂತಿಸುವಾಗ ಬೋಧಿಸತ್ವನ ಮನಸ್ಸಿನಲ್ಲಿ ಸಂಕಲ್ಪ, ವಿಕಲ್ಪಗಳು ಏಳತೊಡಗಿದವು. ಈ ಬ್ರಾಹ್ಮಣ ಮಕ್ಕಳಿಗೆ ತೊಂದರೆ ಕೊಡುತ್ತಾನೆ. ಆದ್ದರಿಂದ ನಾನು ನನ್ನ ಬಿಲ್ಲು, ಖಡ್ಗಗಳನ್ನು ತೆಗೆದುಕೊಂಡು ಹೋಗಿ, ಬ್ರಾಹ್ಮಣನನ್ನು ಹಿಂಬಾಲಿಸಿ, ಅವನನ್ನು ಕೊಂದು ಮಕ್ಕಳನ್ನು ಕರೆತಂದುಬಿಡಲೇ? ಆದರೆ ದಾನಕೊಟ್ಟು ಅದರ ವಿರುದ್ಧವಾಗಿ ಚಿಂತಿಸುವುದು ಅನುಚಿತ. ಹೀಗೆ ದ್ವಂದ್ವದಲ್ಲಿ ಚಿಂತಿಸಿ ಬೋಧಿಸತ್ವ ಬೆಂಡಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT