ಶನಿವಾರ, ಡಿಸೆಂಬರ್ 7, 2019
24 °C

ಪ್ರೀತಿಯ ಬಂಧಗಳು

ಗುರುರಾಜ ಕರಜಗಿ
Published:
Updated:

ತಡಕಾಟ ಬದುಕೆಲ್ಲವೇಕಾಕಿಜೀವ ತ |
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ||
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ |
ಮಡುವೊಳೋಲಾಡುತ್ತೆ – ಮಂಕುತಿಮ್ಮ || 186 ||

ಪದ-ಅರ್ಥ: ತಡಕಾಟ=ಹುಡುಕಾಟ, ಬದುಕೆಲ್ಲವೇಕಾಕಿಜೀವ=ಬದುಕೆಲ್ಲ+ಏಕಾಕಿ+ಜೀವ, ಪಿಡಿಯಲಲೆದಾಡುಗುಂ=ಪಿಡಿಯಲು (ಹಿಡಿಯಲು)+ಅಲೆದಾಡುಗುಂ(ಅಲೆದಾಡುತ್ತದೆ)  ಮಡುವೊಳೋಲಾಡುತ್ತೆ=ಮಡುವೊಳ್(ಸಾಗರದಲ್ಲಿ)+ಓಲಾಡುತ್ತೆ (ಸಂಚರಿಸುತ್ತದೆ)
ವಾಚ್ಯಾರ್ಥ: ಏಕಾಕಿ ಜೀವದ ಬದುಕು ತಡಕಾಟ. ಅದು ತನ್ನ ಜೊತೆಯ ಜೀವಗಳಿಗಾಗಿ ಹುಡುಕಾಡುತ್ತ, ಕೈಚಾಚಿ ಹಿಡಿಯಲು ಅಲೆದಾಡುತ್ತದೆ. ಪ್ರೀತಿ, ಋಣ, ಮಮತೆಗಳನ್ನರಸುತ್ತ ಸಂಸಾರ ಸಾಗರದಲ್ಲಿ ಸಂಚರಿಸುತ್ತದೆ.

ವಿವರಣೆ: ಒಂದು ಬಾರಿ ಎಂಟು ಜನ ನಿವೃತ್ತ ನ್ಯಾಯಾಧೀಶರು ಒಂದೆಡೆಗೆ ಸೇರಿ ಮಾತನಾಡುವಾಗ ತಮ್ಮ ಸೇವಾವಧಿಯಲ್ಲಿ ತಾವು ಒಬ್ಬ ಅಪರಾಧಿಗೆ ವಿಧಿಸಿದ ಅತ್ಯಂತ ಕಠಿಣವಾದ ಶಿಕ್ಷೆ ಯಾವುದು ಎಂದು ಚರ್ಚಿಸಿದರಂತೆ. ಒಬ್ಬರು ಹೇಳಿದರು, “ನಾನು ಹದಿನಾಲ್ಕು ವರ್ಷದ ಜೀವಾವಧಿ ಶಿಕ್ಷೆ ನೀಡಿದೆ”. ಕೆಲವರು ಮೂರು ತಿಂಗಳು ಕಠಿಣಶ್ರಮದ ಶಿಕ್ಷೆ, ಮತ್ತೊಬ್ಬರು ನಾಲ್ಕು ವರ್ಷದ ಶಿಕ್ಷೆ ಅಂಡಮಾನದಲ್ಲಿ ಎಂದರು. ಹಾಗಾದರೆ ಪ್ರಪಂಚದ ಅತ್ಯಂತ ಕೆಟ್ಟ, ನೀಚ ಅಪರಾಧಕ್ಕೆ ಕಾಯಿದೆಯ ಮಿತಿಗಳನ್ನು ದಾಟಿ ಕೊಡಬಹುದಾದ ಬಹುದೊಡ್ಡ ಶಿಕ್ಷೆ ಯಾವುದು? ಇದರ ಬಗ್ಗೆ ಚಿಂತಿಸಿ ಅವರೊಂದು ತೀರ್ಮಾನಕ್ಕೆ ಬಂದರಂತೆ. ಮನುಷ್ಯನಿಗೆ ಕೊಡಬಹುದಾದ ಅತ್ಯಂತ ಕಠಿಣ ಶಿಕ್ಷೆಯೆಂದರೆ ಏಕಾಂಗಿಯಾಗಿ ಬಂಧನ. ಆತನಿಗೆ ಯಾರೂ ಕಣ್ಣಿಗೆ ಬೀಳದಂತೆ, ಯಾವ ಜೀವಿಯೂ ಅವನಿಗೆ ದೊರಕದಂತೆ ಮಾಡುವುದು. ಏಕಾಕಿತನದಷ್ಟು ಕಷ್ಟದ ಸ್ಥಿತಿ ಮತ್ತೊಂದಿಲ್ಲ. ನಾವೆಲ್ಲ ಹುಟ್ಟುವುದು ಏಕಾಕಿಯಾಗಿಯೇ. ಆದರೆ ಬೆಳೆದಂತೆಲ್ಲ ಈ ಜೀವ ತನ್ನ ಸುತ್ತಮುತ್ತಲಿನ ಜೀವಗಳೊಂದಿಗೆ ಬಂಧಗಳನ್ನು ಕಟ್ಟಿಕೊಳ್ಳುತ್ತ ಸಾಗುತ್ತದೆ. ಬಂಧಗಳೊಂದಿಗೆ ಬರುವ ಪ್ರೀತಿ, ಮಮತೆಗಳಲ್ಲೇ ತನ್ನ ಬದುಕಿನ ಸಾರ್ಥಕ್ಯವನ್ನು ಕಾಣುತ್ತದೆ.

ಕಳೆದ ದಶಕದಲ್ಲಿ “ಕಾಸ್ಟ್‌ ಅವೇ” ಎಂಬ ಇಂಗ್ಲಿಷ್‌ ಸಿನಿಮಾ ತುಂಬ ಪ್ರಸಿದ್ಧವಾಗಿತ್ತು. ಸಮುದ್ರದ ಉಕ್ಕಿ ಬಂದ ತೆರೆಗಳಿಗೆ ಹೊಯ್ದಾಡಿ ಬಂಡೆಗೆ ಬಡಿದು ಛಿದ್ರವಾದ ಹಡಗೊಂದರಿಂದ ಹೊರಗೆ ತೂರಲ್ಪಟ್ಟ ವ್ಯಕ್ತಿಯೊಬ್ಬ ಹೇಗೋ ಒಂದು ಮರದ ಹಲಗೆಯನ್ನು ಹಿಡಿದುಕೊಂಡು ಒಂದು ದ್ವೀಪವನ್ನು ಸೇರುತ್ತಾನೆ. ಅದುವರೆಗೂ ಒಬ್ಬ ಮನುಷ್ಯ ಜೀವಿಯೂ ಕಾಲಿಡದ ನಿರ್ಜನ ದ್ವೀಪ ಅದು. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಪ್ರಾಣಿಯೂ ಇಲ್ಲವೆಂದಾಗ ಆ ಮನುಷ್ಯ ಕಂಗಾಲಾಗುತ್ತಾನೆ, ಏಕಾಕಿತನ ಅವನನ್ನು ಕಾಡಿಸಿ ಹಣ್ಣು ಮಾಡುತ್ತದೆ. ಕೊನೆಗೆ ಅವನು ಸಮುದ್ರದಲ್ಲಿ ತೇಲಿಬಂದ ಒಂದು ಚೆಂಡನ್ನೇ ಸಂಗಾತಿಯನ್ನಾಗಿ ಮಾಡಿಕೊಂಡು ಅದರೊಂದಿಗೇ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತ, ತನ್ನ ಜೊತೆಗೆ ಒಡನಾಡಿಗಳಿಲ್ಲದ ಕೊರತೆಯನ್ನು ತುಂಬಿಕೊಳ್ಳುತ್ತಾನೆ.

ಹಾಗೆಂದರೆ ಏನಾಯಿತು? ನಮಗೆ ಪ್ರೀತಿ, ಮಮತೆಗಳು ಅತ್ಯಗತ್ಯವಾಗಿ ಬೇಕು. ಅದಕ್ಕಾಗಿ ಜೀವ ಚಡಪಡಿಸುತ್ತದೆ, ಕೈ ಚಾಚಿ ಹುಡುಕುತ್ತದೆ, ದೊರೆಯುವವರೆಗೆ ಓಡಾಡಿ ಪ್ರಯತ್ನಿಸುತ್ತದೆ. ಹೀಗೆ ಅದು ಪ್ರೀತಿ, ಮಮತೆ, ಋಣಗಳ ಸಮುದ್ರದಲ್ಲಿ ಸದಾ ಸಂಚರಿಸುತ್ತ ತನ್ನ ಅಸ್ತಿತ್ವಕ್ಕೊಂದು ಅರ್ಥವನ್ನು ಕಲ್ಪಿಸಿಕೊಳ್ಳಲು ಶ್ರಮಿಸುತ್ತದೆ.

ಪ್ರತಿಕ್ರಿಯಿಸಿ (+)