ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತಕ್ಕೇ ತಿಳಿಯದ ಜೀವನ

Last Updated 8 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |
ಅಂತರಗಭೀರಗಳ ತಾನೆ ಕಂಡವನಾರ್? ||
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |
ಸ್ವಂತಕೇ ದುರ್ದರ್ಶ– ಮಂಕುತಿಮ್ಮ || 194 ||
ಪದ-ಅರ್ಥ: ಅಂತರಗಭೀರ=ಅಂತರ(ಆಂತರ್ಯದ)+ಗಭೀರ(ಆಳ), ಗಂತಿ=ಗ್ರಂಥಿ, ಮಡಿಪುಮಡಿಪುಗಳಲ್ಲಿ=ಮಡಿಪು(ಮಡಿಕೆ)+ಮಡಿಪುಗಳಲ್ಲಿ, ದುರ್ದರ್ಶ=ಕಾಣಲು ಕಷ್ಟವಾದದ್ದು.
ವಾಚ್ಯಾರ್ಥ: ತನ್ನ ಅಂತರಂಗವನ್ನೆಲ್ಲ ತೆರೆದು ತೋರಿಸುವವನಾರು? ತನ್ನ ಆಂತರ್ಯದಲ್ಲೇ ಇರುವ ಆಳವನ್ನು ಕಂಡವರಾರು? ಗ್ರಂಥಿಗಳು, ಗಂಟುಗಳು ಮನಸ್ಸಿನ ಮಡಿಕೆ, ಮಡಿಕೆಗಳಲ್ಲಿ ಸೇರಿಕೊಂಡಿವೆ. ಅವು ಸ್ವತಃಆ ವ್ಯಕ್ತಿಗೇ ಕಾಣಲು ಕಷ್ಟವಾದವುಗಳು.
ವಿವರಣೆ: ಪ್ರಪಂಚದ ಎಲ್ಲ ಮತಗಳ, ತತ್ವಗಳ ದಾರ್ಶನಿಕರು ಒಕ್ಕೊರಲಿನಿಂದ ಹೇಳಿದ ಮಾತೆಂದರೆ ಯಾವುದನ್ನು ಬೇಕಾದರೂ ಅರಿಯಬಹುದು ಆದರೆ ನಮ್ಮ ಮನಸ್ಸನ್ನೇ ಅರಿಯುವುದು ಬಹಳ ಕಷ್ಟ. ಜನ್ಮ ಜನ್ಮಾಂತರಗಳ ನೆನಪುಗಳು, ಘಟನೆಗಳು, ಅನುಭವಗಳು, ಚಿಂತನೆಗಳು ಮನಸ್ಸೆಂಬ ಈ ಬುಡವಿಲ್ಲದ ಬೃಹತ್ ಪಾತ್ರೆಯಲ್ಲಿ ಸೇರುತ್ತ ಬಂದಿವೆ. ಯಾವುದೂ ಕಳೆದುಹೋಗುವುದಿಲ್ಲ. ಯಾವ ಕ್ಷಣದಲ್ಲಿ, ಯಾವ ಪ್ರೇರಣೆಯಿಂದ ಯಾವ ಅನುಭವ ಠಕ್ಕನೆ ಮೇಲೆದ್ದು ಬಂದೀತು ಎಂಬುದನ್ನು ಹೇಳುವುದು ಕಷ್ಟ. ಖ್ಯಾತ ತತ್ವಜ್ಞಾನಿ ಜಿ.ಕೆ. ಚೆಸ್ಟರ್‍ಟನ್ ಹೇಳಿದರು, “ಒಬ್ಬ ಮನುಷ್ಯ ಇಡೀ ಬ್ರ್ರಹ್ಮಾಂಡವನ್ನೇ ಅರಿಯಬಹುದು. ಆದರೆ ಅವನ ಆಂತರ್ಯವನ್ನು ಅರಿಯುವುದು ಅಸಾಧ್ಯ. ಅವನ ಆಂತರ್ಯ ಪ್ರಪಂಚದ ಅತ್ಯಂತ ದೂರದ ನಕ್ಷತ್ರಕ್ಕಿಂತ ದೂರವಾಗಿದೆ”.

ಯಾಕೆ ಹೀಗೆ? ನನ್ನ ಆಂತರ್ಯವೇ ನನ್ನ ಕೈಗೆ ಸಿಗದಷ್ಟು ದೂರವಾಗಿದೆ? ಶರೀರ ಎಂಬ ಈ ವ್ಯವಸ್ಥೆಯಲ್ಲಿ ಮನಸ್ಸು ಎಂಬ ಶಕ್ತಿಯ ಪಾತ್ರ ಹಿರಿದಾದದ್ದು, ಜಟಿಲವಾದದ್ದು. ಮನಸ್ಸು ಶರೀರವನ್ನು ಬಹುಪಾಲು ನಿಯಂತ್ರಿಸುತ್ತದೆ. ಮನಸ್ಸು ಅಶಕ್ತವಾದ ಶರೀರವನ್ನು ತನಗೆ ಬೇಕಾದ ಹಾಗೆ ದುಡಿಸಬಲ್ಲದು, ಬಲಶಾಲಿಯಾದ ಶರೀರವನ್ನು ಕುಗ್ಗಿಸಿಬಿಡಬಹುದು. ಈ ಮನಸ್ಸಿನಿಂದಲೇ ಅತ್ಯಂತ ದಡ್ಡನೆಂದೆನಿಸಿಕೊಂಡವನು ಪ್ರತಿಭಾಶಾಲಿಯಂತಾಗಬಹುದು ಅಥವಾ ಅತ್ಯಂತ ಬುದ್ಧಿವಂತನೆನಿಸಿಕೊಂಡವನು ಕ್ಷಣಾರ್ಧದಲ್ಲಿ ನಿಸ್ತೇಜನಾಗಿ ಕುಳಿತುಬಿಡಬಹುದು. ಮಿದುಳಿನಲ್ಲಿ ಹುಟ್ಟಿದ ಈ ಮನಸ್ಸು ಇಡೀ ಶರೀರದಲ್ಲಿ ವ್ಯಾಪಿಸಿ ಶರೀರವನ್ನೇ ಆಳುತ್ತದೆ ಎಂದು ತೈತ್ತರೀಯ ಉಪನಿಷತ್ತು ಹೇಳುತ್ತದೆ. ಮನಸ್ಸು ಸ್ಥೂಲ ವಸ್ತುವಲ್ಲ, ಕಣ್ಣಿಗೆ ಕಾಣುವ ದ್ರವ್ಯವಲ್ಲ. ಮನಸ್ಸು ಉತ್ಪಾದನೆ ಮಾಡುವ ಭಾವನೆಗಳು, ಸಂಕಲ್ಪಗಳು ಕೂಡ ಕಣ್ಣಿಗೆ ಕಾಣಿಸುವವಲ್ಲ, ಅವು ಅತೀ ಸೂಕ್ಷ್ಮಶಕ್ತಿಗಳು. ಅವು ನಮ್ಮ ತಿಳಿವನ್ನು ಮೀರಿದವುಗಳು. ಅದಕ್ಕೆ ಭಾಗವತದಲ್ಲಿ ಶುಕಾಚಾರ್ಯರು ಹೇಳುತ್ತಾರೆ, “ಅಪಶ್ಯತಾಂ ಆತ್ಮತತ್ಪಮ್” ಎಂದರೆ ಆತ್ಮದ, ಪರಮಾತ್ಮನ ಅರಿವೇ ಇಲ್ಲದೆ, ‘ನಾನು’ ಎಂದರೇನು ಎಂದೇ ತಿಳಿಯದೆ ಬದುಕುವ ಜನ ನಾವು. ನಮ್ಮ ವಿಳಾಸವನ್ನು ನಾವು ಅರಸುವುದು - ನನ್ನ ಹೆಸರಿನಲ್ಲಿ, ನನ್ನ ಮನೆ, ನನ್ನ ಕೆಲಸ, ಹುದ್ದೆ, ಬ್ಯಾಂಕ್‍ನಲ್ಲಿ ಇದ್ದ ಹಣ, ಆಸ್ತಿ, ಜನಮನ್ನಣೆ – ಇವುಗಳಲ್ಲಿ. ಇವೇ ನನ್ನ ಪ್ರಪಂಚ ಮತ್ತು ನನ್ನ ಗುರುತು. ಆದರೆ ನನ್ನೊಳಗೆ ಏನಿದೆ ಗೊತ್ತಿಲ್ಲ!

ಅದಕ್ಕೇ ಕಗ್ಗ ಹೇಳುತ್ತದೆ ಮನುಷ್ಯ ತನ್ನ ಅಂತರಂಗವನ್ನೇ ಅರಿಯಲಾರ, ಅದರ ಆಳವನ್ನು ತಿಳಿಯಲಾರ. ಅವನ ಬದುಕಿನ ಮಡಿಕೆ, ಮಡಿಕೆಗಳಲ್ಲಿ ಸೇರಿಹೋದ ಗಂಟುಗಳು, ಗ್ರಂಥಿಗಳು ಎಷ್ಟಿವೆ, ಎಲ್ಲಿವೆ ಎಂಬುದು ಸ್ವತಃ ಅವನಿಗೇ ತಿಳಿಯುವುದು ಅಸಾಧ್ಯ! ವಿಚಿತ್ರ ನೋಡಿ, ನಾವೆಲ್ಲ ಅಸಾಧ್ಯಗಳೊಂದಿಗೆ ಬದುಕುತ್ತಿದ್ದೇವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT