ಶುಕ್ರವಾರ, ನವೆಂಬರ್ 15, 2019
26 °C

ಮೋಹ ಬೀಜ

ಗುರುರಾಜ ಕರಜಗಿ
Published:
Updated:

ಸತ್ತವೆನ್ನಾಸೆಗಳು, ಗೆದ್ದೆ ನಿಂದ್ರಿಯಗಣವ |
ಚಿತ್ತವಿನ್ನಲುಗದೆಂಬಾಜಂಬ ಬೇಡ ||
ಎತ್ತಣಿಂದಲೊ ಗಾಳಿ ಮೋಹಬೀಜವತಂದು |
ಬಿತ್ತಲಾರದೆ ಮನದಿ ? – ಮಂಕುತಿಮ್ಮ || ೨೦೬ ||

ಪದ-ಅರ್ಥ: ಸತ್ತವೆನ್ನಾಸೆಗಳು=ಸತ್ತವು+ಎನ್ನ+ಆಸೆಗಳು, ಗೆದ್ರೆನಿಂದ್ರಿಯಗಣವ=ಗೆದ್ದೆನು+ಇಂದ್ರಿಯ+ಗಣವ, ಚಿತ್ತವಿನ್ನಲುಗದೆಂಬಾ=ಚಿತ್ತ(ಮನಸ್ಸು)+ಇನ್ನು+ಅಲುಗದು+ಎಂಬ

ವಾಚ್ಯಾರ್ಥ: ನನ್ನ ಆಸೆಗಳೆಲ್ಲ ಸತ್ತು ಹೋದವು, ನನ್ನ ಇಂದ್ರಿಯಗಳನ್ನೆಲ್ಲ ಗೆದ್ದು ಬಿಟ್ಟಿದ್ದೇನೆ, ನನ್ನ ಮನಸ್ಸು ಇನ್ನು ಹೊಯ್ದಾಡದು ಎಂಬ ಜಂಬ, ಅಹಂಕಾರ ಬೇಡ. ಯಾವ ದಿಕ್ಕಿನಿಂದಲೋ ಗಾಳಿ ಮೋಹದ ಬೀಜವನ್ನುತಂದು ನಿನ್ನ ಮನಸ್ಸಿನಲ್ಲಿ ಬಿತ್ತಲಾರದೆ?

ವಿವರಣೆ: ಮನಸ್ಸು ಹೀಗೆಯೇ ಎಂದು ಹೇಳುವುದು ಅಸಾಧ್ಯ.

ಹೆಂಡತಿ ಗಂಡನಿಗೆ ಹೇಳುತ್ತಿದ್ದಳು, “ನನ್ನತಮ್ಮ ವಿಚಿತ್ರವಾಗಿಆಡುತ್ತಿದ್ದಾನೆ. ತಾನು ಸನ್ಯಾಸಿಯಾಗುತ್ತೇನೆ ಎಂದು ಹೇಳುತ್ತಾನೆ. ಅದಕ್ಕಾಗಿ ಏನೇನೋ ಧ್ಯಾನ, ಕ್ರಿಯೆಗಳನ್ನು ಮಾಡುತ್ತಿದ್ದಾನೆ. ನನ್ನ ತಂದೆ-ತಾಯಿಗೆ ಆತಂಕವಾಗಿದೆ. ಅವನೊಬ್ಬನೇ ಮಗ. ನೀವು ಅವನಿಗೆ ಬುದ್ಧಿ ಹೇಳಿ ಸನ್ಯಾಸಿಯಾಗುವುದನ್ನು ತಪ್ಪಿಸಿ”. ಗಂಡ ಮಾತನ್ನುತಲೆಯಲ್ಲಿ ಹಾಕಿಕೊಳ್ಳಲಿಲ್ಲ. ಆದರೆ, ಹೆಂಡತಿ ದಿನನಿತ್ಯ ಇದನ್ನೇ ಹೇಳುತ್ತಿದ್ದಳು. ಸುಮಾರು ಮೂರು ತಿಂಗಳು ಹೀಗೆಯೇ ಕಳೆಯಿತು.

ಹೆಂಡತಿ ಹೇಳುವುದನ್ನು ಬಿಡಲಿಲ್ಲ, ಗಂಡ ಕೇಳಿಸಿಕೊಳ್ಳಲಿಲ್ಲ. ಒಂದು ದಿನ ಆಕೆ ಮತ್ತೆ ಅದನ್ನೇಒತ್ತಿ ಹೇಳಿದಾಗ ಗಂಡ ಹೇಳಿದ, “ನಿನ್ನ ತಮ್ಮ ಸನ್ಯಾಸಿಯಾಗುತ್ತಾನೋ ಇಲ್ಲವೋ ನನಗೆ ತಿಳಿಯದು. ಆದರೆ ನಾನು ಮಾತ್ರ ಇದೇ ಕ್ಷಣದಲ್ಲಿ ಸಂಸಾರ ತೊರೆದು ಸನ್ಯಾಸಿಯಾಗಿ ಹೊರಟುಬಿಟ್ಟೆ” ಎಂದವನೇ ಮನೆ ಬಿಟ್ಟು ಹೊರಟೇ ಹೋದ. ಸನ್ಯಾಸಿಯಾಗಬೇಕೆಂದು ಪ್ರಯತ್ನಮಾಡುತ್ತಿದ್ದವ ಹಾಗೆಯೇ ಸಂಸಾರದಲ್ಲಿ ಉಳಿದ. ಯಾವ ಕ್ಷಣದಲ್ಲಿ ಮನಸ್ಸು ಹೇಗೆ ಒಲಿದೀತು ಎಂಬುದನ್ನು ತಿಳಿಯುವುದು ಬಲು ಕಷ್ಟ.

ನನಗೆ ಯಾವ ಆಸೆಗಳೂ ಇಲ್ಲ ಎಂದು ಇಡೀ ಸಾಮ್ರಾಜ್ಯವನ್ನು ತೊರೆದು ಕಾಡಿಗೆ ಸನ್ಯಾಸಿಯಾಗಿ, ವಿರಾಗಿಯಾಗಿ ಹೋದ ಭರತ ಚಕ್ರವರ್ತಿಗೆ ಮೋಹ ಹುಟ್ಟಿದ್ದು ಒಂದು ಜಿಂಕೆಯಲ್ಲಿ. ಇದೇ ರೀತಿ ಚಕ್ರವರ್ತಿ ಪದವಿಯನ್ನೇ ತ್ಯಾಗ ಮಾಡಿ ಆಸೆ ನನ್ನನ್ನು ಬಿಟ್ಟಿತು ಎಂದುಕೊಂಡ ಭೃತ್ಯಹರಿಗೆ ಸಿಹಿತಿಂಡಿ ಆಸೆಯಾಗಿ ಕಾಡಿತು. ತಪಸ್ಸಿನ ಬೆಂಕಿಯಲ್ಲಿ ಶುದ್ಧನಾಗಿದ್ದೇನೆ ಎಂದುಕೊಂಡ ವಿಶ್ವಾಮಿತ್ರರಿಗೆ ಮೇನಕೆ ಮೋಹವಾಗಿ ಕಾಡಿದಳು. ಭೂಮಿಯಷ್ಟೇ ಗಟ್ಟಿಯಾದ ಮನಸ್ಸುಳ್ಳ ಭೂಮಿಸುತೆ ಸೀತೆ ಮಾಯೆಯ ಜಿಂಕೆಗೆ ದುಂಬಾಲು ಬೀಳುವಂತೆ ಮಾಡಿದ್ದು ಈ ಮೋಹವೇ. ಸಂಸಾರ,ರಾಜ್ಯ ಬೇಡವೆಂದು ಶಪಥ ಮಾಡಿದ ಭೀಷ್ಮರನ್ನು ಕಾಡಿದ್ದೂ ಹಸ್ತಿನಾಪುರ ರಕ್ಷಣೆಯ ಮೋಹ.

ನನ್ನ ಸ್ನೇಹಿತರೊಬ್ಬರು ಸಂಸಾರದ ಮೋಹ ಬೇಡ ಎಂದು ಮನೆ ತೊರೆದು ದೂರದ ನಾಡಿಗೆ ನಡೆದು, ಬ್ರಹ್ಮಚಾರಿಯಾಗಿ ಉಳಿದರು. ನಾವು ಅವರನ್ನು ‘ನಿರ್ಮೋಹಿ’ ಎನ್ನುತ್ತಿದ್ದೆವು. ಅವರು ರಿಟೈರ್‌ ಆಗುವುದಕ್ಕಿಂತ ಎರಡು ವರ್ಷ ಮೊದಲು ಆ ದೇಶದಲ್ಲಿ ಭಾರೀ ಭೂಕಂಪವಾಗಿ ಅನೇಕ ಮನೆಗಳು ನಿರ್ನಾಮವಾಗಿ ಹೋದವು. ಇವರ ಪಕ್ಕದ ಮನೆಯ ಹೆಣ್ಣುಮಗಳ ಗಂಡ, ಮಗ ಸತ್ತು ಹೋಗಿ ಆಕೆ ಏಕಾಂಗಿಯಾದಳು. ಕರುಣೆಯಿಂದ ಆಕೆಗೆ ಆಸರೆ ನೀಡಿದರು. ನಿಧಾನವಾಗಿ ಕರುಣೆ ಪ್ರೇಮವಾಗಿ ಅವರಿಬ್ಬರೂ ಮದುವೆ ಯಾದರು. ಈಗ ಎಪ್ಪತ್ತನೆಯ ವಯಸ್ಸಿನಲ್ಲಿ ಅವರಿಗೆ ಮೂರು ವರ್ಷದ ಮಗಳು. ಮೋಹ ಅವರನ್ನು ದೀರ್ಘಕಾಲ ಬದುಕುವಂತೆ ಪ್ರೇರೇಪಿಸುತ್ತಿದೆ!

ಅದಕ್ಕೆ ಕಗ್ಗ ಹೇಳುತ್ತದೆ, ನಿನ್ನ ಮನಸ್ಸಿನ ಸ್ಥಿರತೆಯ ಬಗ್ಗೆ ಅಹಂಕಾರ ಬೇಡ. ಯಾವಾಗ ಮೋಹ ಎಲ್ಲಿಂದ ಬಂದೀತೋ? ಹೇಳುವುದು ಕಷ್ಟ.

ಪ್ರತಿಕ್ರಿಯಿಸಿ (+)