ಮಂಗಳವಾರ, ನವೆಂಬರ್ 19, 2019
28 °C
413

ಅನವಶ್ಯಕವಾದ ಮಾತು

ಗುರುರಾಜ ಕರಜಗಿ
Published:
Updated:

ಇದೊಂದು ಪುಟ್ಟ ಕಥೆ. ಆದರೆ, ಬಹಳ ಪ್ರಯೋಜನಕಾರಿ.

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಮಂತ್ರಿಯಾಗಿ ಹುಟ್ಟಿದ್ದ. ರಾಜನೇನೋ ಒಳ್ಳೆಯವನೇ. ಆದರೆ ಅವನಿಗೊಂದು ದುರಭ್ಯಾಸ. ಅದು ಅತಿಯಾದ ವಾಚಾಳಿತನ. ರಾಜನಾದವನು ಹೆಚ್ಚು ಮಾತನಾಡಬಾರದು. ಮಾತನಾಡಿದ್ದು ಅರ್ಥಪೂರ್ಣವಾಗಿರಬೇಕು. ಆದರೆ, ಈತನಿಗೆ ವಿಪರೀತ ಮಾತನಾಡುವ ಹವ್ಯಾಸ. ಎಲ್ಲರಿಗಿಂತ ಮೊದಲೇ ಮಾತನಾಡಲು ಪ್ರಾರಂಭಿಸುತ್ತಿದ್ದ. ಅವನಿಗೆ ಹೇಗೆ ತಿಳಿಹೇಳುವುದು ಎಂದು ಬೋಧಿಸತ್ವ ಆಲೋಚಿಸುತ್ತಿದ್ದ.

ಒಂದು ದಿನ ರಾಜ ಮತ್ತು ಮಂತ್ರಿ ರಾಜೋದ್ಯಾನಕ್ಕೆ ಬಂದು ಮಾವಿನ ಮರದ ಕೆಳಗಿದ್ದ ಮಂಗಲಶಿಲೆಯ ಮೇಲೆ ಕುಳಿತುಕೊಂಡರು. ಮರದ ಮೇಲೆ ಗೂಡಿನಲ್ಲಿ ಒಂದು ಕೋಗಿಲೆ ಮೊಟ್ಟೆಯನ್ನಿಟ್ಟು ಹೋಗಿತ್ತು. ಒಂದು ಕಾಗೆ ಈ ಮೊಟ್ಟೆಯನ್ನು ತನ್ನ ಮೊಟ್ಟೆಯೆಂದೇ ತಿಳಿದು ಪಾಲಿಸುತ್ತಿತ್ತು. ಕೆಲದಿನಗಳ ನಂತರ ಮೊಟ್ಟೆಗಳೆಲ್ಲ ಒಡೆದು ಮರಿಗಳು ಹೊರಬಂದವು. ನೋಡುವುದಕ್ಕೆ ಎರಡೂ ಒಂದೇ ತೆರನಾಗಿದ್ದುದರಿಂದ ವ್ಯತ್ಯಾಸ ತಿಳಿಯದೆ ಎರಡನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು, ಕೊಕ್ಕಿನಿಂದ ಆಹಾರ ನೀಡಿ ಕಾಪಾಡುತ್ತಿತ್ತು.

ಇನ್ನೂ ಮರಿಗಳ ರೆಕ್ಕೆ ಬಲಿತಿರಲಿಲ್ಲ. ಆಗ ಒಂದು ದಿನ ಮರಿ ಕೋಗಿಲೆ ತನಗೆ ಸಹಜವಾದ ಧ್ವನಿಯಲ್ಲಿ ಮಧುರವಾಗಿ ಹಾಡತೊಡಗಿತು. ಕಾಗೆಗೆ ಆಶ್ಚರ್ಯವಾಯಿತು. ಇದು ಹೀಗೇಕೆ ಶಬ್ದ ಮಾಡುತ್ತಿದೆ? ನಮ್ಮ ಪಕ್ಷಿಗಳ ಹಾಗೆ ಕಿರುಚುತ್ತಿಲ್ಲ. ಇದಾವುದೋ ಬೇರೆ ಪಕ್ಷಿ; ದೊಡ್ಡದಾದ ಮೇಲೆ ತಮಗೇನು ತೊಂದರೆ ಕೊಟ್ಟೀತೋ ಎಂದು ಭಯವಾಗಿ ಆ ಮರಿಯನ್ನು ತನ್ನ ಕೊಕ್ಕಿನಿಂದ ಕುಕ್ಕಿ, ಕುಕ್ಕಿ ಸಾಯಿಸಿ ಮರದಿಂದ ತಳ್ಳಿಬಿಟ್ಟಿತು. ಆ ಸತ್ತ ಮರಿ ಕೋಗಿಲೆಯ ದೇಹ ರಾಜನ ಕಾಲಬಳಿ ಬಿತ್ತು. ರಾಜ “ಇದೇಕೆ ಹೀಗಾಯಿತು?” ಎಂದು ಮಂತ್ರಿಯನ್ನು ಕೇಳಿದ. ಇಂಥ ಅವಕಾಶಕ್ಕೇ ಕಾಯುತ್ತಿದ್ದ ಮಂತ್ರಿ ಹೇಳಿದ, “ಮಹಾರಾಜಾ, ಇದು ಹೆಚ್ಚು ವಾಚಾಳಿಯಾದವರ ಗತಿ. ಈ ಕೋಗಿಲೆಯ ಮರಿಯನ್ನು ಕಾಗೆ ತನ್ನದೆಂದೇ ಸಾಕಿತು, ಆಹಾರ ನೀಡಿತು. ಇದು ಹೊತ್ತಲ್ಲದ ಹೊತ್ತಿನಲ್ಲಿ, ತನ್ನ ರೆಕ್ಕೆಗಳ ಬಲಿಯುವ ಮೊದಲೇ ಕೋಗಿಲೆಯಂತೆ ಕೂಗಿತು. ರೆಕ್ಕೆ ಬಲಿತು ದೂರ ಹಾರಿದ ಮೇಲೆ ಹಾಡಿದ್ದರೆ ಬದುಕುತ್ತಿತ್ತು. ಇದು ತನ್ನ ಮರಿಯಲ್ಲ ಎಂದು ತಿಳಿದ ಕಾಗೆ ಇದನ್ನು ಕೊಂದು ಹಾಕಿತು”.

ಈ ಮಾತು ಕೇಳಿ ರಾಜ ಬುದ್ಧಿ ತಿಳಿದು ಮಿತಭಾಷಿಯಾಗಿಬಿಟ್ಟ.

ಮನುಷ್ಯನಾಗಲಿ, ಪಶುಪಕ್ಷಿಗಳಾಗಲಿ, ಅವಶ್ಯವಿಲ್ಲದಾಗ, ಅಸಮಯದಲ್ಲಿ, ಮಿತಿಮೀರಿ ಮಾತನಾಡಿದರೆ ಇದೇ ದು:ಖವನ್ನು, ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅನಾವಶ್ಯಕವಾಗಿ ಆಡಿದ ಮಾತು ಮನುಷ್ಯನನ್ನು ಕೆಳಗೆ ಬೀಳಿಸುವಂತೆ, ಅತ್ಯಂತ ಹರಿತವಾದ ಅಸ್ತ್ರವೂ ಬೀಳಿಸಲಾರದು. ಅವಿವೇಕಿಗಳು ಅಸಮಯದಲ್ಲಿ ಮಾತನಾಡಿ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ, ಬುದ್ಧಿವಂತರು ಸಮಯಕ್ಕೆ ತಕ್ಕಂತೆ ವಿಚಾರಪೂರ್ಣವಾಗಿ ಮಾತನಾಡಿ ಮೆಚ್ಚುಗೆ ಪಡೆಯುತ್ತಾರೆ.

ಪ್ರತಿಕ್ರಿಯಿಸಿ (+)