ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಗುಣದರ್ಶನಕ್ಕೆ ಅಂತರ ಬೇಕು

Last Updated 14 ಜುಲೈ 2020, 19:01 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಮಹಾನ್ ಹಂಸವಾಗಿ ಹುಟ್ಟಿ ಒಂಭತ್ತು ಸಾವಿರ ಹಂಸಗಳೊಡನೆ ಚಿತ್ರಕೂಟ ಪರ್ವತದಲ್ಲಿ ವಾಸವಾಗಿದ್ದ. ಅವನು ಜಂಬೂ ದ್ವೀಪದ ಶುದ್ಧ ನೀರಿನ ಕೊಳದಲ್ಲಿ ನೀರು ಕುಡಿದು, ತನಗೆ ಬೇಕಾದ ಎಲೆಗಳನ್ನು ತಿಂದು ಆಕಾಶದಲ್ಲಿ ಹಾರುತ್ತ ಹೋಗುತ್ತಿದ್ದರೆ ಒಂದು ವಿಶಾಲವಾದ ಬಂಗಾರದ ಚಾಪೆ ಹಾರಿದಂತೆ ತೋರುತ್ತಿತ್ತು.

ಒಮ್ಮೆ ಹೀಗೆ ವಾರಾಣಸಿಯ ಮೇಲೆ ಹಾರಿ ಹೋಗುತ್ತಿದ್ದಾಗ ರಾಜ ಅದನ್ನು ನೋಡಿ ಸಂತೋಷಪಟ್ಟ. ಈ ಪಕ್ಷಿಯೂ ತನ್ನ ಹಾಗೆಯೇ ತನ್ನ ಕುಲಕ್ಕೆ ರಾಜನಾಗಿರಬೇಕು ಎಂದುಕೊಂಡು, ಅದನ್ನು ಬರಮಾಡಿಕೊಳ್ಳುವಂತೆ ಮಂಗಳ ವಾದ್ಯಗಳನ್ನು ಮೊಳಗಿಸಿದ, ದೀಪ-ಧೂಪಗಳನ್ನು ಹಾಕಿಸಿದ. ಅದನ್ನು ಕಂಡು ಈ ರಾಜಹಂಸ ಕೆಳಗಿಳಿದು ಬಂದು ರಾಜನ ಸ್ನೇಹ ಮಾಡಿಕೊಂಡಿತು. ನಂತರ ಚಿತ್ರಕೂಟ ಪರ್ವತಕ್ಕೆ ಹಾರಿಹೋಯಿತು.

ರಾಜನಿಗೆ ರಾಜಹಂಸವನ್ನು ಮೇಲಿಂದ ಮೇಲೆ ನೋಡುವ ಆಸೆ. ಎಷ್ಟೋ ದಿನಗಳ ನಂತರ ಮತ್ತೆ ರಾಜಹಂಸ ವಾರಾಣಸಿಗೆ ಬಂದು ರಾಜನ ಅರಮನೆಯ ಪ್ರಾಂಗಣದಲ್ಲಿ ಇಳಿಯಿತು. ರಾಜ ಸುಗಂಧದ ಎಣ್ಣೆಗಳನ್ನು ಅದರ ರೆಕ್ಕೆಗಳಿಗೆ ಲೇಪನ ಮಾಡಿಸಿ, ಬಂಗಾರದ ಬಟ್ಟಲುಗಳಲ್ಲಿ ಹಾಲು ಜೇನುಗಳ ಪಾಯಸವನ್ನು, ಹಣ್ಣಿನ ರಸವನ್ನು ಕೊಟ್ಟು ಸತ್ಕರಿಸಿ ಕೇಳಿದ, ‘ಹಂಸರಾಜಾ, ನೀನು ಹಾರುವ ವೇಗವನ್ನು ಕಂಡು ಬೆರಗಾಗಿದ್ದೇನೆ.

ನೀನು ಹಾರುವ ವೇಗವನ್ನು ನಾನೊಂದು ಬಾರಿ ನೋಡಬೇಕು, ತೋರಿಸುವೆಯಾ?’ ಹಂಸ ಹೇಳಿತು, ‘ರಾಜಾ, ನನ್ನ ವೇಗವನ್ನು ಕಣ್ಣಿಂದ ನೋಡುವುದು ಅಸಾಧ್ಯ’. ‘ಹಾಗಾದರೆ ನೀನು ನಮ್ಮ ಅತ್ಯಂತ ಶೂರರಾದ ಬಿಲ್ಲುಗಾರರು ಬಿಡುವ ಬಾಣಕ್ಕಿಂತ ಹೆಚ್ಚು ವೇಗವಾಗಿ ಹೋಗುತ್ತೀಯಾ?’ ಎಂದು ಕೇಳಿದ. ಹಂಸ ನಕ್ಕು ಹೇಳಿತು, ‘ಈಗ ಒಂದು ಸಣ್ಣ ಪ್ರದರ್ಶನ ಮಾಡೋಣ. ನೀನು ನಿನ್ನ ಅತ್ಯಂತ ಕುಶಲರಾದ ನಾಲ್ಕು ಜನ ಬಿಲ್ಲುಗಾರರನ್ನು ಕರೆಸು’. ರಾಜ ನಾಲ್ಕು ಧನುರ್ಧಾರಿಗಳನ್ನು ಕರೆಸಿದ.

ಹಂಸ ಈ ನಾಲ್ವರನ್ನು ಮಧ್ಯದಲ್ಲಿ ನಾಲ್ಕು ದಿಕ್ಕಿನೆಡೆಗೆ ಮುಖ ಮಾಡಿ ನಿಲ್ಲಿಸಿತು. ನಂತರ ಹೇಳಿತು, ‘ರಾಜಾ, ನಾನು ಹಾರುವ ವೇಗವನ್ನು ಯಾರೂ ಕಾಣಲು ಸಾಧ್ಯವಿಲ್ಲ. ಅದಕ್ಕೆ ನನ್ನ ಕೊರಳಿಗೆ ಒಂದು ಗಂಟೆಯನ್ನು ಕಟ್ಟಿಕೊಂಡಿದ್ದೇನೆ. ಅದರ ಸಪ್ಪಳದಿಂದ ನೀನು ಊಹೆ ಮಾಡಿಕೊಳ್ಳಬಹುದು. ಈ ನಾಲ್ವರೂ, ನಾಲ್ಕು ದಿಕ್ಕಿಗೆ ಅತ್ಯಂತ ವೇಗವಾಗಿ ಬಾಣಗಳನ್ನು ಬಿಡಲಿ. ನಾನು ಹಾರಿ ನಾಲ್ಕೂ ಬಾಣಗಳು ನೆಲವನ್ನು ತಲುಪುವುದರೊಳಗಾಗಿ ಅವೆಲ್ಲವನ್ನು ಹಿಡಿದು ತಂದುಬಿಡುತ್ತೇನೆ’.

ನಾಲ್ವರೂ ಧನುರ್ಧಾರಿಗಳು ಏಕಕಾಲದಲ್ಲಿ ನಾಲ್ಕು ದಿಕ್ಕಿಗೆ ವೇಗವಾಗಿ ಬಾಣಗಳನ್ನು ಬಿಟ್ಟರು. ರಾಜನಿಗೆ ಪಕ್ಷಿ ಹೋದದ್ದೇ ಗೊತ್ತಾಗಲಿಲ್ಲ. ಕ್ಷಣಾರ್ಧದಲ್ಲಿ ಅದು ನಾಲ್ಕು ಬಾಣಗಳನ್ನು ತಂದು ಅವನ ಮುಂದೆ ಹಾಕಿತು. ಆಶ್ಚರ್ಯದಿಂದ ಮಾರು ಹೋದ ರಾಜ, ಹಂಸಕ್ಕೆ ತನ್ನ ಜೊತೆಯೇ ಸದಾ ಕಾಲ ಇರುವಂತೆ ಬೇಡಿಕೊಂಡ. ಆಗ ಹಂಸ ಹೇಳಿತು, ‘ರಾಜಾ, ಮಿತ್ರರಾದವರು ದೂರವಿದ್ದರೂ ಮನಸ್ಸಿಗೆ ಹತ್ತಿರವಾಗಿರುತ್ತಾರೆ. ಅವರೇ ದೀರ್ಘಕಾಲ ಜೊತೆಯಾಗಿದ್ದರೆ ಪ್ರಿಯನಾದವನೂ ಅಪ್ರಿಯನಾಗುತ್ತಾನೆ. ಅಂತರ ಪ್ರೀತಿಯನ್ನು ಆರೋಗ್ಯವಾಗಿಡುತ್ತದೆ. ನಾವು ಹಾಗೆಯೇ ಇರೋಣ’ ಎಂದು ಹಾರಿ ಹೋಯಿತು.

ಈ ಮಾತು ತುಂಬ ಸರಿ. ಬಹಳ ಕಾಲ ಜೊತೆಯಾಗಿದ್ದಾಗ ಒಳ್ಳೆಯ ಗುಣಗಳಿಗಿಂತ ತಪ್ಪುಗಳೇ ಹೆಚ್ಚು ಎದ್ದು ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT