ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಿತಶಕ್ತ ಮನುಷ್ಯ

Last Updated 3 ಜನವರಿ 2022, 19:30 IST
ಅಕ್ಷರ ಗಾತ್ರ

ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ?|
ಎರಡುಮನಿತಿನಿತುಳ್ಳ ತೋಳಿನಂತಿಹನೋ ?||
ತಿರುಗಿಸುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತ ಶಕ್ತ – ಮಂಕುತಿಮ್ಮ || 533 ||

ಪದ-ಅರ್ಥ: ಪರವಶನೊ=ಅಧೀನನೊ, ಎರಡುಮನಿತಿನಿತುಳ್ಳ=ಎರಡುಂ+ಇನಿತು+
ಇನಿತು(ಸ್ವಲ್ಪ)+ಉಳ್ಳ, ನರನಂತು=ನರನು+ಅಂತು, ಮಿತಶಕ್ತ=ಮಿತವಾದ ಶಕ್ತಿಯುಳ್ಳುವ.

ವಾಚ್ಯಾರ್ಥ: ಮನುಷ್ಯ ಸ್ವತಂತ್ರನೋ ಅಥವಾ ದೈವದ, ವಿಧಿಯ ಅಧೀನನೊ? ಅಥವಾ ಎರಡೂ ಅಷ್ಟಿಷ್ಟು ಹೊಂದಿದ ತೋಳುಗಳಂತೆ ಇರುವನೊ? ಯಾಕೆಂದರೆ ತೋಳು ತಿರುಗುತ್ತದೆ, ಮಡಿಸುತ್ತದೆ ಆದರೆ ಅದು ದೇಹಕ್ಕೆ ಅಂಟಿಕೊಂಡಿದ್ದು, ಪೂರ್ತಿ ಸ್ವತಂತ್ರವಲ್ಲ. ಮನುಷ್ಯನೂ ಹಾಗೆಯೇ ಮಿತವಾದ ಶಕ್ತಿಯುಳ್ಳವನು.

ವಿವರಣೆ: ನಮ್ಮ ಮನೆಯ ಹತ್ತಿರದ ಪೊಲೀಸ್ ಠಾಣೆಯಲ್ಲಿ ಒಬ್ಬರು ಸಬ್-ಇನ್ಸಪೆಕ್ಟರ್. ಅವರು ಭಾರೀ ಜರ್ಬಿನವರು. ಪ್ರದೇಶದ ಕಳ್ಳರು-ಮೋಸಗಾರರು ಅವರ ಹೆಸರು ಹೇಳಿದರೆ ಗಡಗಡ ನಡುಗುತ್ತಿದ್ದರು. ಅವರು ಸದಾ ಚಟುವಟಿಕೆಯಂದಿದ್ದು, ಅವರಿಂದ ಆಗದ ಯಾವ ಕೆಲಸವೂ ಇಲ್ಲ, ಅವರು ಅತ್ಯಂತ ಶಕ್ತಿಶಾಲಿಗಳು ಎಂಬ ಹೆಸರು. ಒಂದು ದಿನ ಠಾಣೆಯ ನಿರೀಕ್ಷಣೆಗೆ ರಾಜ್ಯದ ಡೈರೆಕ್ಟರ್-ಜನರಲ್ ಬಂದರು. ಆಗ ಈ ಸಬ್-ಇನ್ಸ್‌ಪೆಕ್ಟರ್‌ ಬೆಕ್ಕಿನ ಹಾಗೆ ಮುದುಡಿ ಕುಳಿತಿದ್ದರು. ಧ್ವನಿಯೇ ಇಲ್ಲ. ಡೈರೆಕ್ಟರ್-ಜನರಲ್‌ ಅವರು ಗಡಸುಧ್ವನಿಯಲ್ಲಿ ಆಜ್ಞೆಗಳನ್ನು ನೀಡುತ್ತಿದ್ದಾರೆ. ಸಬ್-ಇನ್ಸಪೆಕ್ಟರ್‌ ಅವರು ಮೆಲುದನಿಯಲ್ಲಿ ಹಾಂ.. ಸರ್, ಹೌದು ಸರ್ ಎಂದು ಗೋಣು ಹಾಕುತ್ತಿದ್ದರು. ಆಗ ಜನರಿಗೆ ಅನ್ನಿಸಿದ್ದು ಡೈರೆಕ್ಟರ್-ಜನರಲ್‌ರಿಗೆ ಇರುವ ಸ್ವಾತಂತ್ರ್ಯ ಸಬ್-ಇನ್ಸಪೆಕ್ಟರ್‌ಗಿಲ್ಲ.

ಅಂದೇ ಸಂಜೆ ಡೈರೆಕ್ಟರ್-ಜನರಲ್‌ರು ರಾಜ್ಯದ ಗೃಹಮಂತ್ರಿಗಳನ್ನು ಕಂಡರು. ಆಗ ಡೈರೆಕ್ಟರ್-ಜನರಲ್‌ ಅವರದು ಮೃದು ಮಾತು, ಹೆದರಿಕೆಯ ನಡೆ. ಗೃಹಮಂತ್ರಿಗಳು ಸರ್ವತಂತ್ರ ಸ್ವತಂತ್ರರಂತೆ ಕಂಡರು. ಮರುದಿನ ರಾಜ್ಯದ ಮುಖ್ಯಮಂತ್ರಿಗಳು ಗೃಹಮಂತ್ರಿಗಳನ್ನು ಕಚೇರಿಗೆ ಬರಹೇಳಿದರು. ಅವರು ಅಬ್ಬರಿಸಿ ಗೃಹಮಂತ್ರಿಗಳಿಂದ ಸಮಜಾಯಿಶಿ ಕೇಳುತ್ತಿದ್ದರು. ಗೃಹಮಂತ್ರಿಗಳು ಅಧೀನರಂತೆ ವರ್ತಿಸಿದರು, ಮುಖ್ಯಮಂತ್ರಿಗಳು ಸಂಪೂರ್ಣ ಸ್ವತಂತ್ರರಂತೆ ತೋರಿದರು. ಹೀಗೆಂದರೆ ಎಲ್ಲರೂ ಅಧೀನರು, ಅವರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ ಎಂದಲ್ಲ. ಪ್ರತಿಯೊಬ್ಬರಿಗೂ ಕಾರ್ಯಸ್ವಾತಂತ್ರ್ಯವಿದೆ. ಆದರೆ ಅದು ಮಿತವಾದದ್ದು. ಸಂಪೂರ್ಣ ಸ್ವಾತಂತ್ರ್ಯ ಎನ್ನುವುದಿಲ್ಲ. ಕರ್ತವ್ಯ ಮಾಡಲೇಬೇಕು, ಆದರೆ ಮಿತಿ ಇದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ,

“ತಸ್ಮಾತ್ ತ್ಪಮುತ್ತಿಷ್ಠ ಯಶೋಲಭಸ್ಪ ಜಿತ್ಪಾ ಶತ್ರೂನ್ ಭುಂಕ್ಷ್ಯ ರಾಜ್ಯಂ ಸಮೃದ್ಧಿಂ |
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತ ಮಾತ್ರಂ ಭವಸವ್ಯಸಾಚಿನ್ ||

‘ನೀನು ಎದ್ದು ಹಗೆಗಳನ್ನು ಗೆದ್ದು ಹೆಸರು ಪಡೆ, ಅರಸೊತ್ತಿಗೆಯನ್ನು ಪಡೆ, ಸಿರಿಯನುಣ್ಣು, ನಾನು ಇವರನ್ನು ಈಗಾಗಲೇ ಕೊಂದಾಗಿದೆ. ನೀನು ಬರಿ ನೆಪಮಾತ್ರವಾಗು’

ಕೃಷ್ಣ ಅರ್ಜುನನಿಗೆ ಹೋರಾಡಲು ಹೇಳುತ್ತಾನೆ, ಆದರೆ ನೀನೊಂದು ನೆಪಮಾತ್ರ ಎಂಬುದನ್ನು ತಿಳಿಸುತ್ತಾನೆ. ಕಗ್ಗ ತೋಳಿನ ಉದಾಹರಣೆ ಕೊಡುತ್ತದೆ. ಅದಕ್ಕೆ ಬೆರಳುಗಳನ್ನು, ಮೊಣಕೈಯನ್ನು ಮಡಿಚಲು, ಕೈ ತಿರುಗಿಸಲು ಎಲ್ಲ ಸ್ವಾತಂತ್ರ್ಯವಿದೆ. ಆದರೆ ಅದು ದೇಹದ ಮಿತಿಯನ್ನು ದಾಟಿ ಹೋಗಲಾರದು. ಅದಕ್ಕೆ ಒಂದೆಡೆಗೆ ಸ್ವಾತಂತ್ರ್ಯ, ಮತ್ತೊಂದೆಡೆಗೆಬಂಧ. ಹಾಗೆಯೇ ಮನುಷ್ಯ ಕಾರ್ಯಮಾಡಲು ಸ್ವತಂತ್ರನಾಗಿದ್ದಾನೆ ಆದರೆ ಅದಕ್ಕೆ ದೈವದ ಮಿತಿ ಇದೆ ಎಂಬುದೂ ತಿಳಿದಿರಬೇಕು. ಅವನು ಮಿತಶಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT