ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಅರ್ಥಗಳು

Last Updated 8 ಫೆಬ್ರುವರಿ 2022, 1:28 IST
ಅಕ್ಷರ ಗಾತ್ರ

ಆಳವನು ನೋಡಿ ಬಗೆದಾಡುವಾ ಮಾತಿಂಗೆ |
ರೂಢಿಯರ್ಥವದೊಂದು ಗೂಢಾರ್ಥವೊಂದು ||
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು|
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ
|| 558 ||
ಪದ-ಅರ್ಥ: ಬಗೆದಾಡುವಾ=ಬಗೆದು
(ತಿಳಿದು)+ಆಡುವಾ, ರೂಢಿಯರ್ಥವದೊಂದು=ರೂಢಿಯ+ಅರ್ಥವು+ಅದೊಂದು, ವಾರಿಧಿಯ=ಸಮುದ್ರವ, ದಾಂಟುವುಡುಪಕೆ=ದಾಂಟುವ+ಉಡುಪಕೆ(ದೋಣಿಗೆ)

ವಾಚ್ಯಾರ್ಥ: ಆಳವಾದ ಯೋಚನೆ ಮಾಡಿ ಆಡಿದ ಮಾತಿಗೆ ಎರಡು ಅರ್ಥಗಳಿರುತ್ತವೆ. ಒಂದು ರೂಢಿಯ ಅರ್ಥ, ಮತ್ತೊಂದು ಗಹನವಾದ ಅರ್ಥ. ಸಮುದ್ರವನ್ನು ದಾಟಲು ಹೊರಟಿರುವ ನಾವೆಗೆ ಗಾಳಿಯ ಪಟ ಮತ್ತು ಹುಟ್ಟುಗೋಲು ಇದ್ದಂತೆ.

ವಿವರಣೆ: ಅಲ್ಲಮಪ್ರಭುವಿನ ಒಂದು ವಚನ ಹೀಗಿದೆ:-
ಭೂತ ಭೂತವ ಕೂಡಿ ಅದ್ಭುತವಾಯಿತ್ತು;
ಕಿಚ್ಚು ಕೋಡಿತ್ತು, ನೀರು ನೀರಡಿಸಿತ್ತು |
ಉರಿಪವನದೋಷದೊಳಗಿದ್ದು
ವಾಯುವಿಮ್ಮಡಿಸಿತ್ತ ಕಂಡೆ ಗುಹೇಶ್ವರ

ನಮಗೆ ಈ ವಚನದಲ್ಲಿಯ ಹೆಚ್ಚಿನ ಪದಗಳು ಗೊತ್ತು. ಭೂತ, ಅದ್ಭುತ, ಕಿಚ್ಚು, ನೀರಡಿಸಿತ್ತು, ಉರಿ, ಪವನ, ವಾಯು ಇವುಗಳ ಸಾಮಾನ್ಯ ಅರ್ಥ ನಮಗೆ ತಿಳಿದಿದೆ. ಆದರೆ ವಚನದ ಒಟ್ಟಾರೆ ಅರ್ಥ ಗೋಚರವಾಗಲಿಲ್ಲ. ಇದೇ ಆಳದ ಮಾತಿನ ವಿಶೇಷ. ಮಾತಿಗೆ ಒಂದು ರೂಢಿಯ ಅರ್ಥವಿದ್ದರೆ ಇನ್ನೊಂದು ಗೂಢವಾದ ಅರ್ಥವಿರುತ್ತದೆ. ಅದನ್ನು ತಿಳಿದಾಗ ವಚನದ ಅರ್ಥ ಒಡಮೂಡುತ್ತದೆ. ಪಂಚಭೂತಗಳು–ಮಣ್ಣು, ನೀರು, ಅಗ್ನಿ, ವಾಯು ಮತ್ತು ಆಕಾಶ. ಈ ಭೂತಗಳು ಕೂಡಿ ಅದ್ಭುತವಾದದ್ದು ದೇಹ. ಕಿಚ್ಚು ಎಂದರೆ ಜ್ಞಾನದ ಬೆಂಕಿ. ಅದು ಬಿಸಿಕೊಡುವ ಬೆಂಕಿಯಲ್ಲ. ತಂಪು ನೀಡುವ ಬೆಂಕಿ. ಮನಸ್ಸು ನೀರು. ಅದಕ್ಕೆ ಯಾವಾಗಲೂ ದಾಹ. ಅದಕ್ಕೇ ನೀರು ನೀರಡಿಸಿತ್ತು ಎಂದದ್ದು! ಚಿಂತೆಯ ಉರಿ, ಚಾಂಚಲ್ಯವೆಂಬ ಪವನದೋಷದಿಂದ ಹೆಚ್ಚಿ, ತಾಪವನ್ನು ಇಮ್ಮಡಿಗೊಳಿಸುತ್ತದೆ.

ಹೀಗೆ ತಿಳಿದು ಆಡಿದ ಮಾತಿಗೆ ಎರಡು ಅರ್ಥಗಳು. ಕನಕದಾಸರು ಹೇಳಿದ, ‘ನಾನು ಹೋದರೆ ಹೋದೇನು’ ಎಂಬ ಮಾತು ಸಾಮಾನ್ಯರಿಗೆ ‘ನಾನು ಹೋದರೆ ಹೋಗಬಹುದು’ ಎಂತಾದರೆ ಅಧ್ಯಾತ್ಮ ಚಿಂತಕರಿಗೆ ‘ನಾನು ಎಂಬ ಅಹಂಕಾರ ಹೋದರೆ ಮಾತ್ರ ಮುಕ್ತಿ ಪಡೆದೇನು’ ಎಂದರ್ಥವಾಗುತ್ತದೆ. ಪ್ರತಿಯೊಂದು ಮಾತಿಗೆ ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳೆಂಬ ಎರಡು ಅರ್ಥಗಳಿರುತ್ತವೆ. ಉದಾಹರಣೆಗೆ –
1.ಬೇಸಿಗೆಯಲ್ಲಿ ಮಡಕೆಯ ನೀರು ಕುಡಿದರೆ ಮೈ ತಂಪಾಗುತ್ತದೆ.
2.ರೋಗಿಯ ಕೈಕಾಲು ತಣ್ಣಗಾಗುತ್ತಿವೆ.

ತಂಪಾಗುವುದು, ತಣ್ಣಗಾಗುವುದು ಎರಡೂ ಒಂದೇ ಅರ್ಥವನ್ನು ಕೊಡುವಂಥವು. ಆದರೆ ಸಂದರ್ಭವನ್ನು ಗಮನಿಸಿದರೆ ಮೊದಲನೆಯದು ಸಂತೋಷವನ್ನು ತರುವುದು ಮತ್ತು ಎರಡನೆಯದು ಅನಾಹುತವನ್ನು ಸೂಚಿಸುವುದು.

ಕಗ್ಗ ಒಂದು ಸುಂದರ ಉಪಮೆಯನ್ನು ನೀಡುತ್ತದೆ. ಸಮುದ್ರದಲ್ಲಿ ಹೊರಟ ನಾವೆಗೆ ಎರಡು ಉಪಕರಣಗಳು. ಗಾಳಿಯನ್ನು ಬಳಸಿಕೊಳ್ಳಲು ಹಾಯಿ ಮತ್ತು ಸರಿಯಾದ ದಿಕ್ಕಿಗೆ ಹೋಗಲು ಹುಟ್ಟಿನ ಕೋಲು. ಬರೀ ಹಾಯಿಯಿಂದ ಪ್ರಯೋಜನವಿಲ್ಲ. ಯಾಕೆಂದರೆ ಅದು ಗಾಳಿಯ ದಿಕ್ಕಿಗೆ ನಾವೆಯನ್ನು ಎಳೆದುಕೊಂಡು ಹೋಗುತ್ತದೆಯೇ ವಿನಃ ಬೇಕಾದ ದಿಕ್ಕಿಗಲ್ಲ. ಬರೀ ಹುಟ್ಟು ಶ್ರಮದಾಯಕ. ಅದು ಗುರಿಯೆಡೆಗೆ ಕರೆದೊಯ್ದೀತು. ಆದರೆ ಗಾಳಿಯ ಬಲವಿದ್ದರೆ ವೇಗ ದೊರೆತೀತು. ಇದರಂತೆ ಪ್ರತಿಯೊಂದು ಮಾತಿನ ಎರಡರ್ಥಗಳನ್ನು ಗಮನಿಸುವುದು ನಿಜಾರ್ಥಕ್ಕೆ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT