ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸರ್ವಮತಗಳಿಗೂ ಸಾರವಸ್ತು

Last Updated 7 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಮೂರಿರಲಿ ವಾದ, ಮುನ್ನೂರಿರಲಿ, ಸಕಲರುಂ |
ಸಾರವಸ್ತುವನೊಂದನೊಪ್ಪಿಕೊಳುವವರೇ ||
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |
ಭಾರವಾಗದು ಜಗಕೆ – ಮಂಕುತಿಮ್ಮ || 772 || ಪದ-ಅರ್ಥ: ಮೂರಿರಲಿ=ಮೂರು+ಇರಲಿ,
ಸಾರವಸ್ತುವನೊಂದನೊಪ್ಪಿಕೊಳುವವರೇ=ಸಾರವಸ್ತುವ+ಒಂದನು+ಒಪ್ಪಿಕೊಳುವವರೇ,
ಪಾರಮಾರ್ಥಿಕವನಂತೆಣಿಸಿದ=ಪಾರಮಾರ್ಥಿಕವನು+ಅಂತೆ+ಎಣಿಸಿದ.
ವಾಚ್ಯಾರ್ಥ: ವಾದಗಳು ಮೂರರಿಲಿ ಅಥವಾ ಮುನ್ನೂರೇ ಇರಲಿ, ಎಲ್ಲರೂ ಒಂದು ಅತ್ಯಂತ ಮಿಗಿಲಾದ, ಎಲ್ಲದಕ್ಕೂ ಕಾರಣವಾದ
ಶಕ್ತಿಯೊಂದಿದೆ ಎಂದು ನಂಬುತ್ತಾರೆ. ಆ ಪರಮಶಕ್ತಿಯನ್ನು ನೆನೆದು ಮಾಡಿದ ಯಾವುದೇ ವ್ಯವಹಾರ ಜಗತ್ತಿಗೆ ಭಾರವಾಗುವುದಿಲ್ಲ.
ವಿವರಣೆ: ಪ್ರಪಂಚದಲ್ಲಿ ನೂರಾರು ಮತಗಳಿವೆ. ಮತ ಎಂದರೇನು? ಈ ಪದದ ಮೂಲ ಅರ್ಥ ‘ತಿಳಿದದ್ದು’, ‘ಅಭಿಪ್ರಾಯ’ ಅಥವಾ ‘ನಂಬಿಕೆ’. ಆದರೆ ಬಳಕೆಯಲ್ಲಿ ಮತವೆಂದರೆ ಧಾರ್ಮಿಕ ಅಭಿಪ್ರಾಯ. ಹೀಗಾಗಿ ಹಿಂದೂ ಮತ, ಇಸ್ಲಾಂ ಮತ, ಕ್ರೈಸ್ತ ಮತ, ಬೌದ್ಧ ಮತ, ಜೈನ ಮತ ಎಂಬೆಲ್ಲ ಮತಗಳು ಬಳಕೆಯಾಗಿವೆ. ಅಷ್ಟೇ ಏಕೆ, ಹಿಂದೂ ಮತದಲ್ಲಿಯೇ, ಶೈವ ಮತ, ವೈಷ್ಣವ ಮತ ಎಂದೂ, ಅದ್ವೈತ ಮತ, ವಿಶಿಷ್ಟಾದ್ವೈತ ಮತ, ದ್ವೈತ ಮತ ಎಂಬ ಉಪಭಾಗಗಳಿವೆ. ವಿಶೇಷವೆಂದರೆ ಈ ಎಲ್ಲ ಮತಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳುವಳಿಕೆಗಳನ್ನು ಮಾಡಿಕೊಂಡಿರುವುದು ‘ದೇವರು’ ಎಂಬ ಚೈತನ್ಯದ ಮೇಲೆ. ಇದು ಇಂದಿನ ಮಾತಲ್ಲ. ಮನುಷ್ಯನೆಂಬ ಪ್ರಾಣಿ ಭೂಮಿಯ ಮೇಲೆ ಹುಟ್ಟಿ ಬಂದಾಗಿನಿಂದ, ತನಗಿಂತ ದೊಡ್ಡದಾದ, ಅಸಾಮಾನ್ಯ ಶಕ್ತಿಯನ್ನು ಹೊಂದಿದ, ಎಲ್ಲವನ್ನೂ ನಿಗ್ರಹಿಸುವ, ಪೋಷಿಸುವ ಶಕ್ತಿಯೊಂದಿದೆ ಎಂದು ನಂಬಿದ್ದಾನೆ. ಅದೇ ಅವರ ಮತ. ಅವು ದೊಡ್ಡ ದೊಡ್ಡ ಅವತಾರಗಳಾಗಿರಬಹುದು, ಅಥವಾ ಚಿಕ್ಕ ಪುಟ್ಟ ದೇವತೆಗಳಾಗಿರಬಹುದು. ಅವೇ ಅವನ
ಶ್ರದ್ಧಾಕೇಂದ್ರಗಳಾಗಿವೆ. ಅದಕ್ಕಿಂತ ಮೊದಲು ಅವನಿಗೆ ಬೆಂಕಿ, ಆಕಾಶ, ಗಾಳಿ, ಭೂಮಿ, ನೀರು ಇವೇ ದೇವತೆಗಳಾಗಿದ್ದವು, ಇಂದೂ ಹಾಗೆಯೇ ಉಳಿದಿವೆ. ಈ ಎಲ್ಲ ವಸ್ತುಗಳಲ್ಲಿ ಮನುಷ್ಯ ದೈವಮಹಿಮೆಯನ್ನು ಎಂದರೆ ದೇವರು ಎಂಬ ಕಲ್ಪನೆಯನ್ನು ಮಾಡಿಕೊಂಡು ಪೂಜಿಸಿಕೊಂಡು ಬಂದಿದ್ದಾನೆ. ಅಂತೆಯೇ ಮಾನವ ನಾಗರಿಕತೆಯಲ್ಲಿ ಅತ್ಯಂತ ಪ್ರಭಾವವುಳ್ಳ ಸಂಗತಿ, ಮತ. ಹಾಗಾದರೆ ಪ್ರತಿಯೊಂದು ಮತವೂ ಒಂದು ಅನಂತವಾದ ಸಾರವಸ್ತುವಿದೆಯೆಂದು ನಂಬುತ್ತದೆ. ಆದರೆ ಅವರ
ಕಲ್ಪನೆಗಳು ಬೇರೆಯಾಗಿದ್ದಿರಬಹುದು. ಹಾಗೊಂದು ಪರಮವಸ್ತುವಿದೆಯೆಂದು ನಂಬುವುದರಿಂದ ಆಗುವ ಲಾಭವೇನು? ಮೊದಲನೆಯದು ಆ ಶಕ್ತಿ ನಮ್ಮನ್ನು ಕಾಪಾಡುತ್ತದೆ ಎಂಬ ಧೈರ್ಯ. ಮನುಷ್ಯ ಸೋಲಿನಲ್ಲಿ ಮೊಣಕಾಲೂರಿ ಕುಳಿತಾಗ, ಆ ಪ್ರಚಂಡ ಶಕ್ತಿ ಇದೆ ಎಂಬ ನೆನಪೇ ಮುಂದೆ ಸಾಗುವ ಧೈರ್ಯವನ್ನು ಕೊಡುತ್ತದೆ. ಎರಡನೆಯದು, ಆ ಶಕ್ತಿ ನಮ್ಮನ್ನು ಸದಾಕಾಲ ಗಮನಿಸುತ್ತ ನಾವು ಮಾಡುವ ಒಳ್ಳೆಯ ಕಾರ್ಯಗಳಿಗೆ ಶುಭ ಫಲಗಳನ್ನು, ಕೆಟ್ಟ ಕೆಲಸಗಳಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತದೆಂಬ ನಂಬಿಕೆ ನಮ್ಮನ್ನು ತಪ್ಪಿನ ದಾರಿಯಲ್ಲಿ ಹೋಗುವುದನ್ನು ತಪ್ಪಿಸುತ್ತದೆ. ಇದು ಬದುಕನ್ನು ಕೊಂಚ ಹಗುರಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT