ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಲುಗಿನ ಮೇಲಿನ ನಡೆ

Last Updated 21 ಏಪ್ರಿಲ್ 2022, 18:57 IST
ಅಕ್ಷರ ಗಾತ್ರ

ಕಾಷಾಯವೇಂ ತಪಸು? ಗೃಹಲೋಕನಿರ್ವಾಹ |
ವೇಷತಾಳದ ತಪಸು, ಕಠಿಣತರತಪಸು ||
ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ |
ಅಸಿಧಾರವ್ರತವೊ – ಮಂಕುತಿಮ್ಮ

ಪದ-ಅರ್ಥ: ಕಾಷಾಯ=ಕಾವಿಬಟ್ಟೆ, ಗೃಹಲೋಕನಿರ್ವಾಹ=ಗೃಹಲೋಕ(ಗೃಹಸ್ಥ ಜೀವನ)+ನಿರ್ವಾಹ(ನಿಭಾಯಿಸುವಿಕೆ), ಲೇಸಿನಿಂದದು=ಲೇಸಿನಿಂದ+ಅದು, ಶಮ=ಮನಸ್ಸಿನ ಶಾಂತತೆ, ದಮ=ಸಂಯಮ, ಇಂದ್ರಿಯ ನಿಗ್ರಹ, ಸಮತೆ=ಸಮಾನತೆ, ಅಸಿಧಾರವೃತ=ಅಸಿ(ಖಡ್ಗ)+ಧಾರ(ಖಡ್ಗದ ಹರಿತವಾದ ಅಂಚು)=ಖಡ್ಗದ ಹರಿತವಾದ ಅಲಗಿನ ಮೇಲೆ ನಡೆಯುವ ವ್ರತ.

ವಾಚ್ಯಾರ್ಥ: ತಪಸ್ಸು ಎಂದರೆ ಕಾವಿಬಟ್ಟೆ ಧರಿಸುವುದೇ? ಗೃಹಸ್ಥ ಜೀವನದ ಉಸ್ತುವಾರಿ ವೇಷಹಾಕದ ತಪಸ್ಸಿದ್ದಂತೆ. ಅದು ಕಠಿಣವಾದ ತಪಸ್ಸು. ಅದು ಸರಿಯಾಗಿ ನಡೆಯಬೇಕಾದರೆ ಶಾಂತಿ, ಸಂಯಮ ಮತ್ತು ಸಮಾನತೆಗಳು ಬೇಕು. ಇದೊಂದು ಹರಿತವಾದ ಕತ್ತಿಯ ಅಲುಗಿನ ಮೇಲೆ ನಡೆಯುವ ವೃತ.

ವಿವರಣೆ: ಸಂನ್ಯಾಸವೆಂದರೆ ಎಲ್ಲವನ್ನೂ ಬಿಡುವುದು. ಎಲ್ಲ ಮೋಹಗಳನ್ನು, ಅಹಂಕಾರ-ಅಸೂಯೆಗಳನ್ನು ತ್ಯಾಗ ಮಾಡಿದವನು ಸಂನ್ಯಾಸಿ. ಕಾಷಾಯವೇಷವನ್ನು ಹಾಕಿಕೊಂಡು ಶಿರೋಮುಂಡನ ಮಾಡಿಸಿಕೊಂಡವನು ಎಲ್ಲರೂ ಸಂನ್ಯಾಸಿಗಳೇ? ತಪಸ್ವಿಗಳೇ? ಅವಸರದಲ್ಲಿ, ಯಾವುದೋ ಆವೇಶದಲ್ಲಿ ಕಾವಿ ಧರಿಸಿ ಸಂನ್ಯಾಸಿಯಾದರೆ, ಕರ್ಮಾಧಿಕಾರ ಹೋಗುತ್ತದೆ, ಜ್ಞಾನಾಧಿಕಾರಿ ಬರುವ ಸಂಭವವಿಲ್ಲ.

ಆದರೆ ಸಂಸಾರದ ನಿರ್ವಹಣೆ ನಿಜವಾಗಿಯೂ ಒಂದು ತಪಸ್ಸು. ಅದು ಕಾವಿಬಟ್ಟೆಯನ್ನು ಹಾಕದೆ ಮಾಡುವ ತಪಸ್ಸು. ಅದು ಸುಲಭವಲ್ಲ, ಕಷ್ಟಸಾಧ್ಯವಾದದ್ದು. ಅದಕ್ಕೇ ಬಸವಣ್ಣನವರು ಅದನ್ನು ಕರ್ತಾರನ ಕಮ್ಮಟವೆಂದು ಕರೆದರು. ಸಂಸಾರ ಒಂದು ಕಮ್ಮಾರನ ಕಾರ್ಯಕ್ಷೇತ್ರ. ಕಮ್ಮಾರನು ಕಬ್ಬಿಣವನ್ನು ಕಾಸಿ, ಹೊಡೆದು, ಮೆದುವಾಗಿ ಮಾಡುವಂತೆ ಸಂಸಾರತಾಪವು ಮನುಷ್ಯ ಸ್ವಭಾವವನ್ನು ಮೆದುಮಾಡುತ್ತದೆ. ಮಡದಿ ಮಕ್ಕಳ ಪೇಚಾಟ, ಬಂಧುಬಳಗದವರ ಕಚ್ಚಾಟ, ಅಂಗಡಿಯವರ ಕೂಡ ಗುದ್ದಾಟ, ಬ್ಯಾಂಕುಗಳಲ್ಲಿ ಒದ್ದಾಟ, ಆಫೀಸುಗಳಲ್ಲಿ ಹೊಡೆದಾಟ, ಈ ಎಲ್ಲ ಆಟಗಳು ಸೇರಿ ಜೀವದ ಗಟ್ಟಿಗಂಟುಗಳನ್ನು ಹಿಸುಕಿ, ಬೇಯಿಸಿ ಹಣ್ಣು ಮಾಡುತ್ತವೆ. ಬದುಕಿನ ಸೊಟ್ಟಗಳನ್ನು ಸರಿಮಾಡುತ್ತವೆ.

ಮಹಾರಾಷ್ಟ್ರದ ಸಿದ್ಧಿಗಿರಿ ಮಠದ ಸಂಪ್ರದಾಯದ, ಸುಮಾರು 1725ರಲ್ಲಿ ಇದ್ದ ಕಾಡಸಿದ್ಧೇಶ್ವರರ ವಚನ ಇದನ್ನು ತುಂಬ ಮನಮುಟ್ಟುವಂತೆ ಹೇಳುತ್ತದೆ.

‘ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ.ಹೊನ್ನಿನ ವ್ಯಾಪಾರವ ಮಾಡಿ, ಧಾವತಿಯಿಂದ ಗಳಿಸುವುದು ದುಃಖಆ ಹೊನ್ನು ಜೋಕೆ ಮಾಡುವುದು ದುಃಖ, ಹೊನ್ನು ಹೋದ ಮೇಲೆ ಅನೇಕ ದುಃಖ,
ಹೆಣ್ಣು ತರುವುದು ದುಃಖ, ಆ ಹೆಣ್ಣು ಅಳುವುದು ದುಃಖಹೆಣ್ಣು ಸತ್ತು ಹೋದ ಮೇಲೆ ಅನೇಕ ದುಃಖ...’

ಹೀಗೆ ಅನೇಕ ಸಂಸಾರದುಃಖಗಳನ್ನು ವಿವರಿಸುತ್ತ ಹೋಗುತ್ತದೆ ವಚನ. ಈ ದುಃಖಗಳನ್ನೆಲ್ಲ ಪರಿಹರಿಸಿಕೊಂಡು, ಸಂತೋಷ, ಸಮಾಧಾನಗಳನ್ನು ಪಡೆಯುವುದು ನಿಜವಾದ ತಪಸ್ಸು. ಅದು ಸರಿಯಾಗಿ ನಡೆಯಬೇಕಾದರೆ ನಮಗೆ ಮೂರು ಪೂರ್ವ ಸಿದ್ಧತೆಗಳಿರಬೇಕು. ಮೊದಲನೆಯದು ಶಮ. ಶಮವೆಂದರೆ ಚಿಂತೆಗಳನ್ನು ಕಡಿಮೆ ಮಾಡಿಕೊಂಡು, ಮನಸ್ಸನ್ನು ಸ್ವಸ್ಥವಾಗಿರಿಸಿಕೊಳ್ಳುವುದು. ಎರಡನೆಯದು ದಮ. ದಮವೆಂದರೆ ಬಾಹ್ಯ ಇಂದ್ರಿಯಗಳನ್ನು ಹದ್ದಿನಲ್ಲಿ ಇಟ್ಟುಕೊಳ್ಳುವುದು. ಮೂರನೆಯದು ಸಮತೆ. ಸಮತೆಗೆ ಎರಡು ಅರ್ಥಗಳು. ಒಂದು, ಸುಖ-ದುಃಖ, ಲಾಭ-ನಷ್ಟ, ಪ್ರಿಯ-ಅಪ್ರಿಯ, ಶತ್ರು-ಸ್ನೇಹಿತ ಮುಂತಾದ ದ್ವಂದ್ವಗಳಲ್ಲಿ ವಿಕಾರವನ್ನು ಹೊಂದದೆ ಇರತಕ್ಕ ಸ್ಥಿತಿ. ಎರಡು, ಆತ್ಮವಸ್ತು ಸರ್ವಪ್ರಾಣಿಗಳಲ್ಲೂ ಇದೆ ಎಂದು ನಂಬಿ ನಡೆಯುವುದು. ಈ ಮೂರನ್ನೂ ಸಾಧಿಸಿ ನಡೆಯುವುದು, ಹರಿತವಾದ ಖಡ್ಗದ ಅಲುಗಿನ ಮೇಲೆ ನಡೆಯುವಷ್ಟೇ ಕಷ್ಟದ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT