ಸೋಮವಾರ, ನವೆಂಬರ್ 18, 2019
20 °C

ಸಂತೋಷ-ಆನಂದ

ಗುರುರಾಜ ಕರಜಗಿ
Published:
Updated:

ಇದೊಂದು ಅತ್ಯಂತ ಮಾರ್ಮಿಕವಾದ ಕಥೆ.

ಒಂದು ಬಾರಿ ಶಿಷ್ಯರೆಲ್ಲ ಸೇರಿ ಬುದ್ಧನಿಗೆ ಕೇಳಿದರು. ‘‘ಭಗವಾನ್, ಬದುಕಿನಲ್ಲಿ ಅತ್ಯಂತ ದೊಡ್ಡದಾದ ವಿಷಯ ಯಾವುದು? ಯಾವುದರಿಂದ ಮನುಷ್ಯನಿಗೆ ಸದಾಕಾಲದ ಶಾಂತಿ ಆನಂದ ದೊರೆತೀತು?” ಬುದ್ಧ ಹೇಳಿದ, “ಎಂದು ನಮಗೆ ಆನಂದ ಮತ್ತು ಸಂತೋಷಗಳ ನಡುವಿನ ವ್ಯತ್ಯಾಸ ಅರ್ಥವಾಗುತ್ತದೋ ಅಂದು ತೃಪ್ತಿ ದೊರಕೀತು. ನಮ್ಮ ಇಂದ್ರಿಯಗಳ ತೃಪ್ತಿಗಾಗಿ ಮಾಡುವುದು ಸಂತೋಷ. ಒಳ್ಳೆಯ ಊಟ ಮಾಡಿದಾಗ, ಒಳ್ಳೆಯದನ್ನು ಕಂಡಾಗ, ಪ್ರಿಯವಾದದ್ದನ್ನು ಕೇಳಿದಾಗ, ಹಿತವಾದದ್ದನ್ನು ಮುಟ್ಟಿದಾಗ, ಸುಮಧುರ ವಾಸನೆ ತಾಗಿದಾಗ ದೊರಕುವುದು ಸಂತೋಷ. ಆದರೆ ಇಂದ್ರಿಯಗಳನ್ನು ದಾಟಿ ಹೆಚ್ಚಿನ ಅನುಭವವನ್ನು ಪಡೆದಾಗ ದೊರಕುವುದು ಆನಂದ. ತಾಯಿಯ ಕಣ್ಣಲ್ಲಿ ಒಸರಿದ ಪ್ರೀತಿಯನ್ನು ಕಂಡಾಗ, ಭಗವಂತನ ಸೃಷ್ಟಿಯ ಅನಂತತೆಯನ್ನು ನೋಡಿದಾಗ, ಮತ್ತೊಬ್ಬರಿಗೆ ಸಹಾಯ ನೀಡಿದಾಗ, ಮತ್ತೊಬ್ಬರ ದು:ಖಕ್ಕೆ ಆಸರೆಯಾದಾಗ ದೊರಕುವುದು ಇಂದ್ರಿಯಾತೀತವಾದ ಸಂತೋಷ ಅದೇ ಆನಂದ. ನಮ್ಮ ಜೀವನವಿರುವುದೇ ಈ ಆನಂದದ ಅನ್ವೇಷಣೆಯಲ್ಲಿ”.

ಇದಕ್ಕೆ ಮುಖ್ಯ ಅಡೆತಡೆ ಆಸೆ. ಒಮ್ಮೆ ವಾರಾಣಸಿಯ ರಾಜನಿಗೆ ಪುರೋಹಿತನಾಗಿದ್ದವನು ಜ್ಞಾನಿ, ಸಮಾಜಕ್ಕೆ ತಿಳಿವಳಿಕೆ ಹೇಳುವಂಥವನು. ಆದರೆ, ಒಮ್ಮೆ ಬಂಗಾರದ ನಾಣ್ಯಗಳ ಮೋಹ ಬಂದು ಕಳ್ಳತನ ಮಾಡಿದ. ಯಾರೂ ಗಮನಿಸದೆ ಇದ್ದಾಗ ಅದು ಅಭ್ಯಾಸವೇ ಆಯಿತು. ಒಮ್ಮೆ ರಾಜಭಟರು ಅವನ ಕಳ್ಳತನವನ್ನು ಕಂಡು ರಾಜನ ಬಳಿಗೆ ಕರೆತಂದರು. ಪುರೋಹಿತ ಹೇಳಿದ, “ನನಗೆ ಹಣದ ಆಸೆ ಹೇಗೆ ಮತ್ತು ಏಕೆ ಬಂತೋ ತಿಳಿಯದು. ಸಾಕಿನ್ನು ನನಗೆ ಈ ಪುರೋಹಿತನ ಜವಾಬ್ದಾರಿ” ಎಂದು ಪ್ರವ್ರಜ್ಯವನ್ನು ಪಡೆದು ಹೋದ. ಆಸೆ ತೊಲಗಿದ ನಂತರ ನಿರಾಳನಾದ.

ಒಂದು ದಿನ ಕಟುಕನ ಅಂಗಡಿಯಿಂದ ಮಾಂಸದ ತುಂಡೊಂದನ್ನು ಕಚ್ಚಿಕೊಂಡು ಹಾರಿದ ಹದ್ದನ್ನು ಉಳಿದ ಪಕ್ಷಿಗಳು ಬೆಂಬತ್ತಿ ಕಚ್ಚಿ, ಕುಕ್ಕಿ ಗಾಯಮಾಡಿದವು. ನೋವನ್ನು ತಾಳಲಾರದೆ ಅದು ಮಾಂಸವನ್ನು ಬಿಟ್ಟಿತು. ಆ ತುಂಡನ್ನು ಮತ್ತೊಂದು ಪಕ್ಷಿ ತೆಗೆದುಕೊಂಡಿತು. ಆಗ ಉಳಿದ ಪಕ್ಷಿಗಳು ಈ ಹದ್ದನ್ನು ಬಿಟ್ಟು ಆ ಪಕ್ಷಿಯನ್ನು ಬೆನ್ನು ಹತ್ತಿ ಕಾಡತೊಡಗಿದವು. ಯಾವ ಪಕ್ಷಿಯ ಬಳಿ ಮಾಂಸವಿತ್ತೋ ಅದಕ್ಕೆ ಉಳಿದ ಪಕ್ಷಿಗಳ ಉಪಟಳ ತಪ್ಪಲಿಲ್ಲ. ಮಾಂಸದ ಚೂರನ್ನು ಬಿಟ್ಟ ಪಕ್ಷಿ ಸುಖಿಯಾಗುತ್ತಿತ್ತು. ಕಾಮ, ಭೋಗದ ಆಸೆ ಕೂಡ ಈ ಮಾಂಸದ ಚೂರಿನಂತೆಯೇ. ಅದನ್ನು ಹಿಡಿದುಕೊಂಡವನಿಗೆ ದು:ಖ ತಪ್ಪಿದ್ದಲ್ಲ, ಬಿಟ್ಟವನಿಗೆ ದು:ಖವಿಲ್ಲ, ಬುದ್ಧ ಹೇಳಿದ, “ಎಲ್ಲಿಯವರೆಗೆ ನಾವು ದೇಹತೃಪ್ತಿಗಾಗಿ ಹಂಬಲಿಸುತ್ತೇವೋ, ಒಂದಲ್ಲ ಒಂದು ರೀತಿ ಆಸೆ ನಮ್ಮನ್ನು ಕಾಡುತ್ತದೆ. ಎಲ್ಲಿ ಆಸೆ ಇದೆಯೋ ಅಲ್ಲಿ ನೋವಿದೆ, ದು:ಖವಿದೆ. ಆಸೆ ಅಳಿದ ಮರುಕ್ಷಣ ಆನಂದದ ಬುಗ್ಗೆ ಉಕ್ಕುತ್ತದೆ”.

ಎಷ್ಟು ಸುಂದರವಾದ ವಾಖ್ಯೆ! ಬರೀ ಸಂತೋಷಕ್ಕೆ ಮಾಡಿದ ಪ್ರತಿಯೊಂದು ಕಾರ್ಯ ನಮಗರಿವಿಲ್ಲದಂತೆ ದು:ಖಕ್ಕೆ ನೂಕುತ್ತದೆ ಯಾಕೆಂದರೆ ಅದು ಬೆನ್ನು ಹತ್ತಿದ್ದು ಆಸೆಯನ್ನು. ಆದರೆ ಆನಂದದ ಪ್ರಾಪ್ತಿಗಾಗಿ ಆಸೆಯ ಅವಶ್ಯಕತೆ ಇಲ್ಲ. ಅದು ಇಂದ್ರಿಯಾತೀತವಾದದ್ದು.

ಪ್ರತಿಕ್ರಿಯಿಸಿ (+)